ಬೆಂಗಳೂರು: ಬಿಟ್‌ಕಾಯಿನ್ ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ರಾಜ್ಯ ಸರ್ಕಾರದ ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್ (ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಪೋರ್ಟಲ್) ಅನ್ನು ಹ್ಯಾಕ್ ಮಾಡಿ 11.5 ಕೋಟಿ ರೂಪಾಯಿ ಲಪಟಾಯಿಸಿದ ಪ್ರಕರಣವೊಂದನ್ನು ಪತ್ತೆ ಹಚ್ಚಿದ್ದಾರೆ. ಸರ್ಕಾರದ ಬೊಕ್ಕಸಕ್ಕೆ ಕನ್ನ ಹಾಕಿದ ಈ ಪ್ರಕರಣದ ಪ್ರಮುಖ ಆರೋಪಿಗಳು ಎನ್ನಲಾದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಿಟ್ ಕಾಯಿನ್ ಕರ್ಮಕಾಂಡದಲ್ಲಿ ಬಳಕೆಯಾದ ಹಣ ವರ್ಗಾವಣೆ ಜಾಡುಹಿಡಿದ ಸಿಐಡಿ ಎಸ್‌ಐಟಿ ಪೊಲೀಸರು ನಾಗಪುರದ ನಿತಿನ್ ಮೆಶ್ರಾಮ್ ಮತ್ತು ದರ್ಶಿತ್ ಪಟೇಲ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇವರು ಸರ್ಕಾರದ ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್ ಹ್ಯಾಕ್ ಮಾಡಿ ಹಣ ಲಪಟಾಯಿಸಿದ ಮಾಹಿತಿಯನ್ನು ತಿಳಿಸಿದ್ದಾರೆ. ಈ ಆರೋಪಿಗಳಿಗೆ ಹ್ಯಾಕರ್ ಶ್ರೀಕಿ ಜೊತೆ ನಂಟು ಇರುವುದು ಪತ್ತೆಯಾಗಿದೆ.
ಆರೋಪಿ ಶ್ರೀಕೃಷ್ಣ ಆಲಿಯಾಸ್ ಶ್ರೀಕಿ 2019ರಲ್ಲಿ ರಾಜ್ಯ ಸರ್ಕಾರದ ಇ-ಪ್ರೊಕ್ಯೂರ್‌ಮೆಂಟ್ ಜಾಲತಾಣ ಹ್ಯಾಕ್ ಮಾಡಿ 11.5 ಕೋಟಿ ರೂ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿತ್ತು. ಹಣ ಲಪಟಾಯಿಸಿದ ಆರೋಪಿ ಶ್ರೀಕಿ ಆ ಹಣವನ್ನು ಉತ್ತರ ಭಾರತದ ಕೆಲ ವ್ಯಕ್ತಿಗಳ ಖಾತೆಗೆ ಹಾಕಿದ್ದ. ಈ ಬಗ್ಗೆ ಪೊಲೀಸರಿಗೆ ಗೊತ್ತಾಗುವಷ್ಟರಲ್ಲೇ ಹವಾಲ ಮೂಲಕ ಹಣ ವರ್ಗಾವಣೆ ಮಾಡಲಾಗಿತ್ತು. ಆರೋಪಿಗಳು ಬೆಂಗಳೂರಿಗೆ ಹವಾಲ ರೂಪದಲ್ಲಿ ಹಣ ತಲುಪಿಸಿದ್ದರು.
ಪಂಜಾಬ್ ಮೂಲದ ಆರೋಪಿ ಹರ್ವಿಂದರ್ ಸಿಂಗ್, ಹವಾಲ ಮೂಲಕ ಹಣ ವರ್ಗಾವಣೆ ಮಾಡೊಕೆ ಸಹಾಯ ಮಾಡಿದ್ದ. ಆದರೆ ಎಸ್ಐಟಿ ತನಿಖೆ ವೇಳೆ ಬಿಟ್ ಕಾಯಿನ್ ಕೇಸ್ಗೂ ಹರ್ಮಿಂದರ್ ಸಿಂಗ್ ಗೂ ಸಂಬಂಧ ಇಲ್ಲ ಎಂಬುದು ಬೆಳಕಿಗೆ ಬಂದಿತ್ತು. ಸದ್ಯ ಪ್ರಕರಣದ ತನಿಖಾ ಹಂತದಲ್ಲಿ ಮತ್ತಿಬ್ಬರ ಬಂಧನವಾಗಿದೆ. ಪ್ರಕರಣದಲ್ಲಿ ಸದ್ಯ ಬಂಧಿಸಲ್ಪಟ್ಟ ಆರೋಪಿಗಳ ಪಾತ್ರದ ಬಗ್ಗೆ ಸಿಐಡಿ, ಎಸ್ಐಟಿಯಿಂದ ತನಿಖೆ ನಡೆಯುತ್ತಿದೆ.
ತೀವ್ರಗೊಂಡ ತನಿಖೆ: ಹಗರಣದ ತನಿಖೆಯನ್ನು ತೀವ್ರಗೊಳಿಸಿರುವ ವಿಶೇಷ ತನಿಖಾ ತಂಡ(ಎಸ್ಐಟಿ)ದ ಅಧಿಕಾರಿಗಳು ಇಂದು ಬೆಳಿಗ್ಗೆ ಹಗರಣದ ಸಿಸಿಬಿ ತನಿಖೆಯ ವೇಳೆ ಮುಂದಾಳತ್ವ ವಹಿಸಿದ್ದ ಪೊಲೀಸ್ ಇನ್ಸ್‌ಪೆಕ್ಟರ್‌ಗಳನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ.
ಪ್ರಮುಖವಾಗಿ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀಧರ್ ಪೂಜಾರ್ ಮನೆ ಮೇಲೆ ದಾಳಿ ನಡೆದಿದೆ. ಅವರೂ ಸೇರಿದಂತೆ ಒಟ್ಟು ಐವರು ಅಧಿಕಾರಿಗಳ ನಿವಾಸ ಸೇರಿ ಏಳು ಕಡೆಗಳಲ್ಲಿ ದಾಳಿ ನಡೆಸಿ ಮಾಹಿತಿಯನ್ನು ಕಲೆ ಹಾಕಿದ್ದಾರೆ.
ಇನ್ಸ್‌ಪೆಕ್ಟರ್ ಶ್ರೀಧರ್ ಪೂಜಾರ್ ಅವರು ವಾಸವಾಗಿರುವ ಅಪಾರ್ಟ್‌ಮೆಂಟ್, ಇನ್ಸ್‌ಪೆಕ್ಟರ್ ಶ್ರೀಧರ್ ಪೂಜಾರ್ ಅವರು ವಾಸವಾಗಿರುವ ತುಮಕೂರು ರಸ್ತೆಯ ಪ್ರೆಸ್ಟೀಜ್ ಜಿಂದಾಲ್ ಸಿಟಿ ಅಪಾರ್ಟ್ ಮೆಂಟ್ ಮೇಲೆ ದಾಳಿ ನಡೆಸಲಾಗಿದೆ.
ಬೊಮ್ಮನಹಳ್ಳಿ ಸೋಲಾಪುರಿಯ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿರುವ ಸೈಬರ್ ಎಕ್ಸ್‌ಪರ್ಟ್ ಸಂತೋಷ್ ಮನೆ ಮೇಲೆ ದಾಳಿ ನಡೆದಿದೆ. ರಾಮಮೂರ್ತಿ ನಗರದಲ್ಲಿ ವಾಸವಿರುವ ಇನ್ಸ್ ಪೆಕ್ಟರ್ ಚಂದ್ರಾಧರ್, ಲಕ್ಷ್ಮೀಕಾಂತ್ ಹೀಗೆ ಐವರು ಅಧಿಕಾರಿಗಳ ಮೇಲೆ ಗುರಿಯಾಗಿಸಿಕೊಳ್ಳಲಾಗಿದೆ. ಇವರೆಲ್ಲರೂ ಅಂದು ಸಿಸಿಬಿಯಲ್ಲಿ ಬಿಟ್ ಕಾಯಿನ್ ಕೇಸ್ ತನಿಖೆ ನಡೆಸಿದ್ದ ಇನ್ಸ್ ಪೆಕ್ಟರ್‌ಗಳಾಗಿರುವುದು ವಿಶೇಷವಾಗಿದೆ.
ಇನ್ಸ್‌ಪೆಕ್ಟರ್‌ಗಳ ಮನೆಗಳಿಗೆ ದಾಳಿ ನಡೆಸಿರುವ ವಿಶೇಷ ತನಿಖಾ ದಳದ ಅಧಿಕಾರಿಗಳು ಪರಿಶೀಲನೆ ನಡೆಸಿ ಮನೆಯಲ್ಲಿರುವ ಲ್ಯಾಪ್ ಟಾಪ್ ಹಾಗೂ ಇತರೆ ದಾಖಲೆಗಳನ್ನು ವಶಕ್ಕೆ ಪಡೆದು ತಪಾಸಣೆ ಕೈಗೊಂಡಿದ್ದಾರೆ. ಬಿಜೆಪಿ ಅಧಿಕಾರದಲ್ಲಿದ್ದಾಗ ನಡೆದಿದ್ದ ಬಿಟ್ ಕಾಯಿನ್ ಹಗರಣದ ಬಗ್ಗೆ ಇದೀಗ ಹೊಸ ತನಿಖೆ ನಡೆಸಲು ಕಾಂಗ್ರೆಸ್ ಸರ್ಕಾರ ಆದೇಶ ನೀಡಿದೆ. ತನಿಖೆ ನಡೆಸುತ್ತಿರುವ ಎಸ್‌ಐಟಿ ಈಗ ಈ ಹಿಂದೆ ತನಿಖೆ ನಡೆಸಿದ ಸಿಸಿಬಿ ಪೊಲೀಸರನ್ನೇ ವಿಚಾರಣೆಗೆ ಒಳಪಡಿಸಿರುವುದು ನೋಡಿದರೆ ಈ ಅಧಿಕಾರಿಗಳು ಏನಾದರೂ ದಾಖಲೆಗಳನ್ನು ತಿದ್ದುವ ಪ್ರಯತ್ನ ಮಾಡಿದ್ದಾರೆಯೇ ಎಂಬ ಗುಮಾನಿ ಮೇಲೆ ಇದು ನಡೆದಿದೆ ಎಂಬ ಸಂಶಯವಿದೆ.




