ಆರೆಸ್ಸೆಸ್‌ ಕಚೇರಿ ಅಲೆಯುತ್ತಿದ್ದ ಸಿ.ಟಿ.ರವಿಯವರ ಈಗಿನ ಆಸ್ತಿ ಎಷ್ಟು?: ಮುಕುಂದ್‌ ಗೌಡ

4 years ago

ಬೆಂಗಳೂರು : ಪಾರದರ್ಶಕ ಆಡಳಿತದಲ್ಲಿ ದೃಢವಾದ ನಂಬಿಕೆ ಹೊಂದಿರುವ ಆಮ್‌ ಆದ್ಮಿ ಪಾರ್ಟಿ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿ ಶಾಸಕ ಸಿ.ಟಿ.ರವಿಯವರಿಗೆ ಇಲ್ಲ ಎಂದು ಎಎಪಿಯ ರಾಜ್ಯ ಯುವ ಘಟಕದ ಅಧ್ಯಕ್ಷ ಮುಕುಂದ್‌ ಗೌಡ ವಾಗ್ಹೇದಾಳಿ ನಡೆಸಿದರು.

ಆಪ್ ವಿರುದ್ಧ ಸಿ.ಟಿ.ರವಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಒಂದು ಕಾಲದಲ್ಲಿ ಒಂದು ಜೊತೆ ಬಟ್ಟೆಯೂ ಸರಿಯಾಗಿಲ್ಲದೇ, ಬಾಬಾ ಬುಡನ್‌ಗಿರಿ ಫೈಲುಗಳನ್ನು ಹೊತ್ತುಕೊಂಡು ಆರೆಸ್ಸೆಸ್‌ ಕಚೇರಿ ಅಲೆಯುತ್ತಿದ್ದ ಸಿ.ಟಿ.ರವಿಯವರ ಈಗಿನ ಆಸ್ತಿ ಎಷ್ಟು? ಕೋಟಿಗಟ್ಟಲೆ ಮೌಲ್ಯದ ಆಸ್ತಿಯನ್ನು ಹೇಗೆ ಸಂಪಾದಿಸಿದರೆಂದು ಅವರು ರಾಜ್ಯದ ಜನತೆಗೆ ತಿಳಿಸಲಿ ಎಂದು ಸವಾಲೆಸೆದರು.

ದೇವನಹಳ್ಳಿಯ ಭೂ ಹಗರಣದಿಂದ ತಪ್ಪಿಸಿಕೊಳ್ಳಲು ಸಿ.ಟಿ.ರವಿ ಕಾಂಗ್ರೆಸ್ ನಾಯಕರ ಬೂಟು ನೆಕ್ಕಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಕುಡಿದು ಪಾನಮತ್ತನಾಗಿ ಕಾರು ಓಡಿಸಿ ಅಮಾಯಕ ಯುವಕರನ್ನು ಬಲಿ ತೆಗೆದುಕೊಂಡ ರವಿ ಎಂತಹರವರು ಎಂಬುದು ಜನರಿಗೆ ತಿಳಿದಿದೆ ಎಂದು ಕಿಡಿಕಾರಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಹೆಚ್ಚು ಹಣ ಕೊಳ್ಳೆ ಹೊಡೆಯಲು ಸಾಧ್ಯವಿಲ್ಲವೆಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸ್ಥಾನವನ್ನೇ ಕಾಲಲ್ಲಿ ಒದ್ದವರು ಸಿ.ಟಿ.ರವಿ. ಪಾರದರ್ಶಕತೆಗೆ ಆದ್ಯತೆ ನೀಡುವ ಮೂಲಕ ದೇಶದ ರಾಜಕೀಯದಲ್ಲಿ ಹೊಸ ಅಲೆ ಸೃಷ್ಟಿಸುತ್ತಿರುವ ಆಪ್ ಹೆಸರು ಹೇಳುವ ಯೋಗ್ಯತೆ ಕೂಡ ಸಿ.ಟಿ.ರವಿಯವರಿಗೆ ಇಲ್ಲ. ರವಿಯವರು ಯಾವ್ಯಾವ ಕಾಂಗ್ರೆಸ್ ನಾಯಕರೊಂದಿಗೆ ಸೇರಿಕೊಂಡು ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ದಂಧೆ ನಡೆಸಿ ನೂರಾರು ಕೋಟಿ ಸಂಪಾದನೆ ಮಾಡಿದ್ದಾರೆಂಬುದನ್ನು ಜನತೆಯ ಮುಂದಿಡಲಿ ಎಂದರು.

ಸಿ.ಟಿ.ರವಿಯವರು ದೆಹಲಿಗೆ ತೆರಳಿ ಆಪ್ ಸರ್ಕಾರದ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಲು ಸಿದ್ಧರಿದ್ದರೆ ಅವರಿಗೆ ಅವಕಾಶ ಕಲ್ಪಿಸಿಕೊಡುತ್ತೇವೆ. ಭೇಟಿಗೆ ಅವರೇ ದಿನಾಂಕ ಹಾಗೂ ಸಮಯ ನಿಗದಿಪಡಿಸಲಿ. ಅತ್ಯಾಧುನಿಕ ಸೌಲಭ್ಯಗಳುಳ್ಳ ಸರ್ಕಾರಿ ಶಾಲೆಗಳು, ಮೊಹಲ್ಲಾ ಕ್ಲಿನಿಕ್‌ಗಳು ಸೇರಿದಂತೆ ದೆಹಲಿ ಸರ್ಕಾರ ತಂದ ನೂರಾರು ಕ್ರಾಂತಿಕಾರಿ ಬದಲಾವಣೆಗಳನ್ನು ಅವರು ಪರಿಶೀಲಿಸಿ,ನಂತರ ಬಗ್ಗೆ ಮಾತನಾಡಲಿ ಎಂದರು.

ಭ್ರಷ್ಟ ಬಿಜೆಪಿಯ 40% ಕಮಿಷನ್‌ ಸರ್ಕಾರದ ಕಳಪೆ ಕಾಮಗಾರಿಗಳಿಗೂ ಎಎಪಿ ಸರ್ಕಾರದ ಗುಣಮಟ್ಟದ ಕಾಮಗಾರಿಗಳಿಗೂ ಇರುವ ವ್ಯತ್ಯಾಸವು ಸಿ.ಟಿ.ರವಿಯವರಿಗೆ ಅರ್ಥವಾಗುತ್ತಿಲ್ಲ ಎಂದರು.

Leave a Reply