ಪಾಟ್ನಾ: ಎಲ್ಲ ವಿರೋಧ ಪಕ್ಷಗಳು ಒಟ್ಟಾಗಿ ಹೋರಾಡಿದಲ್ಲಿ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 50 ಸ್ಥಾನಗಳಿಗೆ ಕುಸಿಯಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಭವಿಷ್ಯ ನುಡಿದಿದ್ದಾರೆ.
ಬಿಜೆಪಿ ಜೊತೆಗೆ ಸಖ್ಯ ತೊರೆದು ಆರ್.ಜೆ.ಡಿ, ಕಾಂಗ್ರೆಸ್ ಮಹಾಮೈತ್ರಿ ಕೂಟದ ತೆಕ್ಕೆಗೆ ಮರಳಿರುವ ನಿತೀಶ್ ಕುಮಾರ್ ವಿಪಕ್ಷಗಳನ್ನು ಒಗ್ಗೂಡಿಸುವ ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಅವರ ಜೊತೆಗೆ ಹೆಜ್ಜೆ ಹಾಕುತ್ತಿದ್ದು, ಮುಂದಿನ ಹಂತದ ಕಾರ್ಯಸೂಚಿಗಳ ಕುರಿತು ಚರ್ಚೆ ನಡೆಸಲು ದೆಹಲಿಗೆ ತೆರಳಲಿದ್ದಾರೆ. ಸೆಪ್ಟೆಂಬರ್ 5ರಂದು ದೆಹಲಿಯಲ್ಲಿ ಬಿಜೆಪಿಯೇತರ ನಾಯಕರ ಭೇಟಿಗೆ ವೇದಿಕೆ ಕೂಡ ಸಿದ್ಧವಾಗಿದೆ.
ಇದಕ್ಕೂ ಮುನ್ನ ಪಾಟ್ನಾದಲ್ಲಿ ನಡೆದ ಜೆಡಿಯು ಕಾರ್ಯಕಾರಿ ಸಭೆಯಲ್ಲಿ ಎರಡು ನಿರ್ಣಯಗಳನ್ನು ಅಂಗೀಕರಿಸಲಾಗಿದ್ದು, 1. ನಿತೀಶ್ ಕುಮಾರ್ ಅವರಿಗೆ ವಿಪಕ್ಷಗಳ ಏಕತೆಗಾಗಿ ಕೆಲಸ ಮಾಡುವ ಅಧಿಕಾರ ನೀಡುವುದು 2. ದೇಶದಲ್ಲಿ ಬಿಜೆಪಿಯಡಿ ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂಬ ನಿರ್ಣಯ ಅಂಗೀಕರಿಸಲಾಗಿದೆ.
ಈ ನಿರ್ಣಯಗಳ ಅಂಗೀಕಾರದ ನಂತರ ಪ್ರತಿಕ್ರಿಯಿಸಿದ ನಿತೀಶ್ ಕುಮಾರ್, ಬಿಜೆಪಿ ವಿರುದ್ಧ ಹೋರಾಟಕ್ಕಾಗಿ ಇತರ ಪಕ್ಷಗಳ ಉನ್ನತ ನಾಯಕರನ್ನು ಭೇಟಿ ಮಾಡಲು ಮುಂದಿನ ಕೆಲವು ದಿನಗಳಲ್ಲಿ ದೆಹಲಿಗೆ ಭೇಟಿ ನೀಡುತ್ತೇನೆ ಎಂದರು.
ಜೊತೆಗೆ, ರಾಜ್ಯದಲ್ಲಿ ಬಿಜೆಪಿ ಕೋಮು ಸೌಹಾರ್ದ ಕದಡಲು ಯತ್ನಿಸುತ್ತದೆ. ನಾವು ಪಂಚಾಯತ್ ಮಟ್ಟದಲ್ಲೇ ಜಾಗೃತರಾಗುವ ಮೂಲಕ ಅವರಿಗೆ ಪಾಠ ಕಲಿಸಬೇಕು ಎಂದು ಪಕ್ಷದ ಕಾರ್ಯಕರ್ಯತರು ಮತ್ತು ನಾಯಕರುಗಳಿಗೆ ಅವರು ಕರೆ ನೀಡಿದರು.
ವಿಪಕ್ಷಗಳು ಒಗ್ಗೂಡಿ ಬಿಜೆಪಿ ವಿರುದ್ಧ ಕಣಕ್ಕಿಳಿದರೆ 2024ರ ಲೋಕಸಭೆ ಚುನಾವಣೆಯಲ್ಲಿ ಆಡಳಿತಾರೂಢ ಪಕ್ಷದ ಲೋಕಸಭ ಸದಸ್ಯರ ಸಂಖ್ಯೆ 50ಕ್ಕೆ ಕುಸಿಯಲಿದೆ ಎಂದು ಅವರು ಭವಿಷ್ಯ ನುಡಿದರು. ರಾಷ್ಟ್ರ ರಾಜಕೀಯಕ್ಕೆ ಮರಳುವ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿರುವ ಅವರು, ನಾನು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದರು.
ಸೋಮವಾರದಿಂದ ಮೂರು ದಿನಗಳ ಕಾಲ ದೆಹಲಿಯಲ್ಲಿ ಇರುವುದಾಗಿ ಹೇಳಿದ ಅವರು, ಒಟ್ಟಿನಲ್ಲಿ ಬಿಜೆಪಿಯೇತರ ರಾಜಕೀಯ ಪಕ್ಷಗಳ ಸಂಘಟನೆಯ ನಿಟ್ಟಿನಲ್ಲಿ ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಅವರ ಜೊತೆಗೆ ಕೈಜೋಡಿಸಿದಂತಾಗಿದೆ.
ಮಣಿಪುರದ ಜೆಡಿಯು ಶಾಸಕರು ಬಿಜೆಪಿ ಸೇರಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿ ಬೇರೆ ಪಕ್ಷಗಳಿಂದ ಗೆದ್ದ ಶಾಸಕರನ್ನು ಹೇಗೆ ಒಡೆಯುತ್ತಿದೆ ಎಂಬುದನ್ನ ನೋಡಿ ಎಂದು ಪತ್ರಕರ್ತರಿಗೆ ಹೇಳಿದರು.



