ಸಂವಿಧಾನದ ಮೂಲ ತತ್ವ ಅರಿತುಕೊಳ್ಳಿ: ಎಕ್ಕಾರು

3 years ago

#Understand #BasicPrinciple #Constitution #motherteresa

ಮಂಗಳೂರು: ಹಲವು ಜಾತಿ ,ಧರ್ಮ, ಸಂಸ್ಕೃತಿ, ಭಾಷೆ ಹೀಗೆ ಹಲವುಗಳನ್ನು ಒಪ್ಪಿಕೊಂಡು ಬದುಕುವುದೇ ಬಹುತ್ವ , ಈ ವೈವಿಧ್ಯತೆಯನ್ನು ಮತ್ತು ಭಾರತೀಯ ಸಂವಿಧಾನದ ಮೂಲ ತತ್ವಗಳನ್ನು ಅರ್ಥಮಾಡಿಕೊಂಡರೆ ನಾವು ಪ್ರೀತಿಯ ಸೆಲೆಯಲ್ಲಿ ಮುಳಗುವುದಕ್ಕೆ ಸಾಧ್ಯವಾಗುತ್ತದೆ ಎಂದು ಜನಪದ ವಿದ್ವಾಂಸ, ನಿವೃತ್ತ ಎನ್‌ಎಸ್‌ಎಸ್ ಅಧಿಕಾರಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಹೇಳಿದರು.

ನಗರದ ಪುರಭವನದಲ್ಲಿ ಗುರುವಾರ ಸಂತ ಮದರ್ ತೆರೆಸಾರ 26ನೇ ಸಂಸ್ಮರಣಾ ದಿನದ ಪ್ರಯುಕ್ತ ಸಂತ ಮದರ್ ತೆರೆಸಾ ವಿಚಾರ ವೇದಿಕೆಯ ಆಶ್ರಯದಲ್ಲಿ ವೈವಿದ್ಯ ಭಾರತದಲ್ಲಿ ಪ್ರೀತಿಯ ಸೆಲೆಗಳು’ ಎಂಬ ತತ್ವದಡಿ ನಡೆದ ವಿಚಾರ ಸಂಕಿರಣದಲ್ಲಿ ವಿಷಯ ಮಂಡನೆ ಮಾಡಿ ಮಾತನಾಡಿದ ಅವರು, ಗಾಂಧೀಜಿ ನಿಜವಾದ ಕ್ರಾಂತಿ ಎಂಬುವುದು ನಮ್ಮ ಅಂತರಂಗದಿಂದ ಆರಂಭವಾಗುತ್ತದೆ ಎನ್ನುತ್ತಾರೆ. ನೈಜತೆಯನ್ನು ಅರ್ಥಮಾಡಿಕೊಂಡಾಗ ಅಂತರಂಗದ ಕ್ರಾಂತಿಯಾಗಲು ಸಾಧ್ಯವಾಗುತ್ತದೆ. ಇದರಿಂದಾಗಿ ನಮ್ಮ ಯೋಚನಾ ಕ್ರಮ, ನಮ್ಮ  ಮತ್ತು ನಾಡಿನ ಬೆಳವಣಿಗೆ ಮಾತ್ರವಲ್ಲ ದೇಶದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.

‘ಭಾರತ ಸಂವಿಧಾನದ ಮೂಲ ತಿರುಳುಗಳಾದ ಸಮಾನತೆ, ಸ್ವಾತಂತ್ರ್ಯ, ಬ್ರಾತೃತ್ವ ಹಾಗೂ ಸಾಮಾಜಿಕ ನ್ಯಾಯವನ್ನು ಅರ್ಥಮಾಡಿಕೊಳ್ಳಬೇಕು. ನನಗೆ ಸಮಾನತೆ, ಸ್ವಾತಂತ್ರ್ಯ ಇರುವಾಗ ಇನ್ನೊಬ್ಬರಿಗೂ ಸಮಾನತೆ, ಸ್ವಾತಂತ್ರ್ಯ ಇದೆ ಎಂಬುದ್ದನ್ನು ಅರಿತುಕೊಂಡು ಪರಸ್ಪರ ಗೌರವದಿಂದ ಬದುಕುವ ಅನಿವಾರ್ಯತೆ ಮತ್ತು ಅಗತ್ಯವಿದೆ. ಸಮಾನತೆಗೆ ತೊಂದರೆ ಆದಾಗ ಮದರ್ ತೆರೆಸಾರಂತಹ ಮಹನೀಯರು ಪ್ರತಿಕ್ರಿಯೆ ನೀಡಿದ್ದಾರೆ ಎಂದರು.

ನಾವು ಇಂದು ಪ್ರೀತಿಯ ಬೋಧನೆಗಳಿಗಿಂತ ಆಚರಣೆಗಳಿಗೆ ಹೆಚ್ಚು ಮಹತ್ವ ನೀಡುತ್ತಿದ್ದೇವೆ. ಮಾನವೀಯತೆ ಎಂದರೆ ಪ್ರೀತಿಯ ಸೆಲೆ ಇದರ ಅಗತ್ಯ ಬಹಳಷ್ಟಿದೆ. ಮದರ್ ತೆರೆಸಾ ಅವರು ತನ್ನನ್ನು ತಾನು ಸೇವೆಗಾಗಿ ಸಮರ್ಪಿಸಿಕೊಂಡು ಬದುಕಿದರು. ಹೊಟ್ಟೆ ಬಟ್ಟೆಗೆ ಇಲ್ಲದವರು, ಸೂರಿಲ್ಲದವರು, ಅಂಗವಿಕಲರು, ಕುರುಡರು, ಕುಷ್ಠರೋಗಿಗಳು, ಸಮಾಜಕ್ಕೆ ಬೇಡವಾದವರು, ಪ್ರೀತಿವಂಚಿತರು ಇವರೆಲ್ಲರ ಸೇವೆ ಮಾಡುವ ಮೂಲಕ ಅವರಲ್ಲಿ ದೇವರನ್ನು ಕಂಡವರು ಹಾಗೂ ತನ್ನನ್ನು ಟೀಕೆ ಮಾಡಿದವರಿಗೆ ಕೂಡ ಜನಸೇವೆಯನ್ನು ಮಾಡಿದ ಮಹಾನೀಯರು ಮದರ್ ತೆರೇಸಾ ಎಂದರು. 

ಆಸೆಯೇ ದುಃಖಕ್ಕೆ ಕಾರಣ ಆದರೆ ಆಸೆಯೆಂದರೆ ಯಾವುದೋ ವಸ್ತುವಿನ ಮೇಲಿನ ಆಸೆಯಲ್ಲ ನಮ್ಮ ಮನಸ್ಸಿನಲ್ಲಿರುವ ಸ್ವಾರ್ಥ, ದ್ವೇಷ, ಕೋಪ, ಕೋಮುವಾದ ಇವೆಲ್ಲವೂ ಆಸೆಗಳು. ಅದನ್ನು ಬಿಟ್ಟು ನಾವು ಹೊರಬಂದಾಗ ನಾವು ಕುವೆಂಪುರವರು ಹೇಳಿದಂತೆ ನಾವು ವಿಶ್ವ ಮಾನವರಾಗುತ್ತೇವೆ ಎಂದರು.

ಖ್ಯಾತ ಸಾಹಿತಿ, ವಿಮರ್ಶಕ ಪ್ರೊ. ಕೆ. ಫಣಿರಾಜ್ ಮಾತನಾಡಿ, ದ್ವೇಷ ಎನ್ನುವುದು ಬಹಳ ಸರಳವಾದ ವಿಷಯ, ಪ್ರೀತಿಯೆಂಬುವುದು ಸರಳವಲ್ಲ. ಅಧಿಕಾರಕ್ಕಾಗಿ, ಹಣಕ್ಕಾಗಿ ವೇಷ ಮಾಡುವುದು ಸುಲಭ, ಅದಕ್ಕೆ ಪ್ರಚೋದನೆ ನೀಡಲು ಹಲವರಿದ್ದಾರೆ. ಅಂತಹ ಸಂದರ್ಭಲ್ಲಿ ಪ್ರೀತಿಸುವ ಗುಣವಿದೆಯಲ್ವ ಅದು ನಿಜವಾದ ಒಂದು ಆಧ್ಯಾತ್ಮವಾಗಿದೆ ಎಂದು ಹೇಳಿದರು.

ಭಾರತ ಬಹಳ ದೊಡ್ಡ ಕೋಮು ಹಿಂಸೆಯನ್ನು ಅನುಭವಿಸಿದೆ, ಮತೀಯ ದ್ವೇಷದಿಂದ ಒಬ್ಬರನ್ನು ಒಬ್ಬರು ಕೊಂದಿದ್ದಾರೆ, ಅತ್ಯಾಚಾರ ಎಸಗಿದ್ದಾರೆ. ‘ಭಾರತದಲ್ಲಿ ಸಹೋದರತ್ವ ಎನ್ನುವ ಭಾವನೆ ದಿನನಿತ್ಯ ಮಾಡುವ ಊಟ, ನಿದ್ದೆಯ, ಉಸಿರಾಡುವ ಗಾಳಿಯ ಹಾಗೇ ದಿನನಿತ್ಯದ ಮೌಲ್ಯವಾಗದೆ ಹೋದರೆ ಸಾಮಾಜಿಕ ಪ್ರಜಾಪ್ರಭುತ್ವ ಇರಲು ಸಾಧ್ಯಯವಿಲ್ಲ. ಕಾನೂನಿನ ಆಸರೆಯಲ್ಲಿ ಸಮಾನತೆಯನ್ನು ರಕ್ಷಿಸಲು ಸಾಧ್ಯವಿಲ್ಲ ಮತ್ತು ಬಹಳ ದಿವಸ ಉಳಿಯುವುದಿಲ್ಲ. ಸಮಾನತೆ, ಭ್ರಾತೃತ್ವ ಬಹಳ ದಿನ ಉಳಿಯಬೇಕಾದರೆ ಸಮಾನ ಸಂಪನ್ಮೂಲ ಹಂಚಿಕೆಯಾಗುವ ಕ್ರಮವಾಗಬೇಕು. ಸ್ನೇಹದ ಭಾವನೆ ಅಂದರೆ ಮೈತ್ರಿಯ ಭಾವವನ್ನು ಕೆಡಿಸುವವರಿಂದ ಸಂಘರ್ಷ ಉಂಟಾಗುತ್ತಿದೆ ಎಂದರು.

ಮಂಗಳೂರಿನ ಮಾಜಿ ಮೇಯರ್ ಕೆ. ಅಶ್ರಫ್ ಹಾಗೂ ನಿವ್ರತ್ತ ಪ್ರಾಂಶುಪಾಲರಾದ ಡಾ.ವಸಂತ ಕುಮಾರ್ ಪ್ರತಿಕ್ರಿಯೆ ನೀಡಿದರು.

ಮಂಗಳೂರು ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಅಧ್ಯಕ್ಷ ರೊಯ್ ಕ್ಯಾಸ್ಟೆಲಿನೊ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಮಂಗಳೂರು ಧರ್ಮಪ್ರಾಂತ್ಯದ ಪಿಆರ್ ಒ ಫಾ. ಜೆ.ಬಿ. ಸಲ್ದಾನ, ಸಿಸ್ಟರ್ ಶಾಂತಿಧನ್, ಸಿಸ್ಟರ್ ರೋನಾ, ಫಾ. ರೂಪೇಶ್ ಮಾಡ್ತಾ, ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ, ಮಾಜಿ ಸಚಿವ ರಮಾನಾಥ ರೈ, ಕುದ್ರೋಳಿ ಕ್ಷೇತ್ರ ಕೋಶಾಧಿಕಾರಿ ಪದ್ಮರಾಜ್ ಆರ್,ವೇದಿಕೆಯ ಪ್ರಮುಖರಾದ ಎಂ.ದೇವದಾಸ್,ಆಲ್ವಿನ್ ಡಿಸೋಜ, ಸ್ಟಾನಿ ಲೋಬೋ, ಮರ್ಲಿನ್ ರೇಗೋ ,ಪ್ಲೇವಿ ಕ್ರಾಸ್ತಾ, ಫಾ.ಅನಿಲ್ ಐವನ್ ಫೆರ್ನಾಂಡೀಸ್, ಜೋನ್ ಡಿಸಿಲ್ವಾ ಮುಂತಾದವರು ಉಪಸ್ಥಿತರಿದ್ದರು.

ವೇದಿಕೆಯ ಜಂಟಿ ಕಾರ್ಯದರ್ಶಿ ಮಂಜುಳಾ ನಾಯಕ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ಏಕತಾರಿ ಹಾಡುಗಾರ ನಾದ ಮಣಿನಾಲ್ಕೂರು ಬಳಗ ಹಾಗೂ ಜನಪ್ರೀತಿ ಬಳಗದವರಿಂದ ಪ್ರೀತಿಯ ಸಿಂಚನ ಸೌಹಾರ್ದ ಗಾಯನ ಕಾರ್ಯಕ್ರಮ ನಡೆಯಿತು.

Leave a Reply