ಮನೆ ಮತ್ತು ಮನಗಳನ್ನು ಗೆದ್ದಿದ್ದ ಮಾಜಿ ಸಚಿವ ಅಬ್ದುಲ್ ನಜೀರ್ ಸಾಬ್‌ ನೆನಪು

2 years ago

ರಾಜ್ಯದಲ್ಲಿ ಅನೇಕ ಮಾಜಿ ಮುಖ್ಯಮಂತ್ರಿಗಳ ಹೆಸರನ್ನು ರಾಜ್ಯದ ಜನರು ನೆನಪಿನಲ್ಲಿಟ್ಟುಕೊಂಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಬೆರಳೆಣಿಕೆಯಷ್ಟು ಮಾಜಿ ಮಂತ್ರಿಗಳ ಹೆಸರುಗಳು ಎಷ್ಟೇ ದಶಕಗಳು ಕಳೆದರು ಜನರ ಮನಸ್ಸಿನಲ್ಲಿ ಅಚ್ಚಹಸಿರಾಗಿದೆ. ಇದಕ್ಕೆ ಕಾರಣ ಆ ಸಚಿವರು ಮಾಡಿದ ಸಾಧನೆಗಳಿಂದಾಗಿ ಸರ್ಕಾರಕ್ಕೂ ಹೆಸರು ಬಂದಿತ್ತು, ಸಮಾಜದ ವ್ಯವಸ್ಥೆಯು ಬದಲಾಯಿತು. ಜೊತೆಗೆ ಅವರು ನೆನಪಿನಲ್ಲಿ ಉಳಿದುಕೊಂಡರು. ಇಂತಹ ಸದಾ ಕಾಲ ನೆನಪಿಸಿಕೊಳ್ಳುವ ರಾಜ್ಯದ ಜನರ ಮನವನ್ನು ಗೆದ್ದಿದ್ದ ನಾಯಕರಲ್ಲಿ ದಿವಂಗತ ಅಬ್ದುಲ್ ನಜೀರ್ ಸಾಬ್ ನಮಗೆ ಕಂಡುಬರುತ್ತಾರೆ.

ಕಡುಬಡತನದ ಕುಟುಂಬದಲ್ಲಿ ಹುಟ್ಟಿ ಸಾರ್ವಜನಿಕ ಬದುಕಿನಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡು ರಾಜ್ಯದ ವಿಧಾನಸಭೆಯ ಅಧ್ಯಕ್ಷರಾಗಿದ್ದ ಹಿರಿಯ ರಾಜಕಾರಣಿ ಕೆ.ಎಸ್. ನಾಗರತ್ನ ಮನೋಹರ ಮಾರ್ಗದರ್ಶನದಲ್ಲಿ ರಾಜಕೀಯ ಕ್ಷೇತ್ರಕ್ಕೆ ಪ್ರವೇಶ ಮಾಡಿ ಸರಳತೆ, ಸಜ್ಜನಿಕೆ, ಸಂಯಮ, ಶುದ್ಧವಾದ ಪ್ರಾಮಾಣಿಕ ಬದುಕನ್ನು ಧ್ಯೇಯವನ್ನಾಗಿಸಿಕೊಂಡು ಗಾಂಧಿ ವಿಚಾರಧಾರೆಗಳಿಗೆ ಅನುಗುಣವಾಗಿ ತಮ್ಮ ಬದುಕಿನ ಉದ್ದಕ್ಕೂ ಶ್ರಮಿಸಿದವರು ಅಬ್ದುಲ್ ನಜೀರ್ ಸಾಬ್.

1983ರಲ್ಲಿ ಕರ್ನಾಟಕ ರಾಜ್ಯದಲ್ಲಿ ಜನತಾಪಕ್ಷ ಅಧಿಕಾರಕ್ಕೆ ಬಂದು ರಾಮಕೃಷ್ಣಹೆಗಡೆರವರು ಮುಖ್ಯಮಂತ್ರಿಯಾದರು. ಅವರಿಗೆ ತಾವು 1962ರಲ್ಲಿ ಪಂಚಾಯತ್ ರಾಜ್ ಸಚಿವರಾಗಿ ಜಾರಿಗೊಳಿಸಲಾಗದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಮತ್ತೆ ಕನಸಾಗಿಸುವ ಬಯಕೆಯನ್ನು ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆಯನ್ನು ನಿರ್ವಹಿಸಬಲ್ಲ ಸಾಮರ್ಥ್ಯ, ಆಸಕ್ತಿ, ಶ್ರದ್ಧೆ ಇರುವುದು ಅಬ್ದುಲ್ ನಜೀರ್ ಸಾಬ್‌ ರವರಿಗೆ ಮಾತ್ರ ಎಂದು ಮನಗಂಡು ಇವರನ್ನು ತಮ್ಮ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಖಾತೆಯೊಂದಿಗೆ ಸೇರ್ಪಡೆ ಮಾಡಿಕೊಂಡರು. ಹೆಗಡೆ ಮತ್ತು ನಜೀರ್ ಸಾಬ್‌ರ ಜೋಡಿ ಕರ್ನಾಟಕದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತಂದು ಐವತ್ತೆರಡು ಸಾವಿರಕ್ಕೂ ಹೆಚ್ಚು ಗ್ರಾಮೀಣ ಪ್ರದೇಶದ ಜನರಿಗೆ ಅಧಿಕಾರವನ್ನು ನೀಡಿ, ಅಧಿಕಾರ ವೀಕೇಂದ್ರಿಕರಣದ ಕನಸ್ಸನ್ನು ನನಸಾಗಿಸಿದರು. ಈ ಕಾರ್ಯ ಸಾಧಿಸಲು ಇವರು ಪಟ್ಟ ಶ್ರಮ ಅಷ್ಟಿಷ್ಟಲ್ಲ; ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಎರಡು ಸದನದಲ್ಲಿ ಅನುಮೋದನೆಗೊಂಡಂತಹ ಮಸೂದೆ ರಾಷ್ಟ್ರಪತಿಯವರ ಅಂಕಿತವನ್ನು ಪಡೆಯುವ ತನಕ ಅಬ್ದುಲ್ ನಜೀರ್ ಸಾಬ್‌ ರವರು ಸಾಕಷ್ಟು ಶ್ರಮವನ್ನು ವಹಿಸಿದರು. ಇದಕ್ಕೆ ಪೂರಕವಾಗಿ ಮಸೂದೆಯನ್ನು ಸಿದ್ಧಪಡಿಸಲು ಪಶ್ಚಿಮ ಬಂಗಾಳ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಪ್ರವಾಸವನ್ನು ಮಾಡಿ ಅಲ್ಲಿನ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದುಕೊಂಡರು.

ಕರ್ನಾಟಕ ರಾಜ್ಯದಲ್ಲಿ ತಂದಂತಹ ಪಂಚಾಯತ್ ರಾಜ್ ವ್ಯವಸ್ಥೆ ದೇಶದ ಅತ್ಯುತ್ತಮ ವ್ಯವಸ್ಥೆಗಳಲ್ಲೊಂದಾಗಿತ್ತು. ಅಂದಿನ ಪ್ರಧಾನಿ ರಾಜೀವ್ ಗಾಂಧಿರವರು ಆಸಕ್ತಿಯನ್ನು ಹೊಂದಿ ಸಂವಿಧಾನದ 73 ಮತ್ತು 74ನೇ ಕಲಂಗಳಿಗೆ ತಿದ್ದುಪಡಿಯನ್ನು ತಂದು ಅಧಿಕಾರ ವೀಕೇಂದ್ರಿಕರಣವನ್ನು ರಾಷ್ಟ್ರದ ವಿಚಾರವನ್ನಾಗಿಸಿದರು.

ಪ್ರಥಮ ಬಾರಿಗೆ ಕರ್ನಾಟಕ ರಾಜ್ಯದಲ್ಲಿ ಚುನಾವಣೆ ನಡೆದು ಜಿಲ್ಲಾ ಪಂಚಾಯ್ತಿ ಮತ್ತು ಮಂಡಲ ಪಂಚಾಯ್ತಿ ಪ್ರತಿನಿಧಿಗಳಿಗೆ ಅಧಿಕಾರದ ನಿರ್ವಹಣೆ ಅವರಿಗಿರುವ ಹಕ್ಕುಗಳು, ಜವಾಬ್ದಾರಿ ಇವುಗಳ ಬಗ್ಗೆ ತಿಳುವಳಿಕೆಯನ್ನು ಕೊಡುವ ಸಲುವಾಗಿ ಒಬ್ಬ ಉಪಾಧ್ಯಾಯ ಮಕ್ಕಳಿಗೆ ಶಾಲೆಯಲ್ಲಿ ಪಾಠ ಮಾಡಿದಂತೆ. ಅಬ್ದುಲ್ ನಜೀರ್ ಸಾಬ್‌ ರವರು ಹತ್ತಾರು ತರಬೇತಿ ಶಿಬಿರಗಳನ್ನು ಏರ್ಪಡಿಸಿ ಅವರಲ್ಲಿ ವಿಶ್ವಾಸವನ್ನು ತುಂಬಿದರು. 1986ರಲ್ಲಿ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದಂತಹ ಬಹಳಷ್ಟು ಮಂದಿ ರಾಜ್ಯ ರಾಷ್ಟ್ರ ರಾಜಕಾರಣದಲ್ಲಿ ಉನ್ನತ ಹುದ್ದೆಗಳನ್ನು ಪಡೆದ ಉದಾಹರಣೆಗಳು ಸಾಕಷ್ಟಿವೆ. ಹಳ್ಳಿಯ ಆಡಳಿತ ಹಳ್ಳಿಯಿಂದಲೇ ಹೊರತು ವಿಧಾನಸೌಧದಿಂದಲ್ಲ ಎಂಬ ಮೂಲ ಮಂತ್ರವಾಗಿದ್ದ ವೀಕೇಂದ್ರಿಕರಣ ವ್ಯವಸ್ಥೆ ಕರ್ನಾಟಕ ರಾಜ್ಯದ ಹೆಮ್ಮೆಯ ಸಂಗತಿ. ಇದಕ್ಕೆ ಕಾರಣಕರ್ತರು ಅಬ್ದುಲ್ ನಜೀರ್ ಸಾಬ್ ಮತ್ತು ರಾಮಕೃಷ್ಣಹೆಗಡೆ ಎನ್ನುವುದು ಎಲ್ಲರೂ ಒಪ್ಪುವಂತದ್ದು.

25-12-1932ರಲ್ಲಿ ತಮಿಳುನಾಡಿನ ಹಳ್ಳಿಯೊಂದರಲ್ಲಿ ಹುಟ್ಟಿದಂತಹ ಇವರು ಮುಂದೆ ಚಾಮರಾಜನಗರದಲ್ಲಿ ನೆಲೆಸಿ ಗುಂಡ್ಲುಪೇಟೆ ಪುರಸಭೆಯ ಅಧ್ಯಕ್ಷರಾಗಿ ತಮ್ಮ ಸೇವೆ ಕಾರ್ಯವೈಖರಿಯ ಮೂಲಕ ಗಮನವನ್ನು ಸೆಳೆಯುತ್ತಾರೆ. ಎರಡು ಬಾರಿ ವಿಧಾನಪರಿಷತ್ತಿನ ಸದಸ್ಯರಾಗಿದ್ದ ಇವರು ಕ್ರಾಂತಿರಂಗದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುತ್ತಾರೆ. ಮಂತ್ರಿಯಾಗಿದ್ದು, ಕೆಲವೇ ಕೆಲವು ವರ್ಷಗಳು, ಆದರೆ ಸಾಧಿಸಿದ್ದು ಮಾತ್ರ ಅಪಾರವಾದದ್ದು.

1983ರಲ್ಲಿ ಕರ್ನಾಟಕದಲ್ಲಿ ಭೀಕರವಾದ ಬರಗಾಲ ಬಂದಿತ್ತು. ಹಳ್ಳಿಗಳಲ್ಲಿ ಜನ ಕುಡಿಯುವ ನೀರಿಗಾಗಿ ತಲೆಯ ಮೇಲೆ ಬಿಂದಿಗೆ ಹೊತ್ತು ಹಲವಾರು ಮೈಲಿಗಳ ದೂರ ನಡೆಯಬೇಕಾಗಿತ್ತು. ನೀರಿಗೆ ಹಾಹಾಕಾರವಿತ್ತು. ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಖಾತೆಯನ್ನು ಹೊಂದಿದ್ದ ನಜೀರ್ ಸಾಬ್‌ ರವರು ಹಗಲು, ರಾತ್ರಿ ಎನ್ನದೆ ಕಾಲಿಗೆ ಚಕ್ರವನ್ನು ಕಟ್ಟಿಕೊಂಡು ರಾಜ್ಯದಾದ್ಯಂತ ಸಂಚರಿಸಿ ಅರವತ್ತೈದು ಸಾವಿರಕ್ಕೂ ಹೆಚ್ಚು ಕೊಳವೆ ಬಾವಿಗಳನ್ನು ತೆಗೆಸಿಕೊಟ್ಟರು. ಬೆಟ್ಟ, ಗುಡ್ಡಗಳ ಮೇಲೆ ಇರುವ ಹಳ್ಳಿಗಳಿಗೂ ಬೋರ್‌ವೆಲ್ ಸೌಲಭ್ಯವನ್ನು ಕಲ್ಪಿಸಿಕೊಟ್ಟರು. ಅವರ ಈ ಒಂದು ಸಾಧನೆಗಾಗಿ ಇವರ ಹೆಸರನ್ನು “ನೀರ್ ಸಾಬ್” ಎಂದು ಜನ ಅಭಿಮಾನದಿಂದ ಕರೆಯುವಂತೆ ಇವರ ವ್ಯಕ್ತಿತ್ವವೇ ಬದಲಾಯಿತು.

ಬಡತನವನ್ನು ತಮ್ಮ ಜೊತೆಯಲ್ಲೇ ಇಟ್ಟುಕೊಂಡು ಸಾಗುತ್ತಿದ್ದ ಇವರು ಆರ್ಥಿಕವಾಗಿ ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದ್ದರು. ಸರ್ಕಾರದಿಂದ ಮಂಜೂರಾದ ನಿವೇಶನಕ್ಕೆ ಹಣ ಪಾವತಿಸಲು ಇವರಿಗೆ ಗೆಳೆಯರು ನೆರವು ಕೊಟ್ಟಿರುತ್ತಾರೆ. ಓದುವ ಹವ್ಯಾಸವನ್ನು ರೂಢಿಸಿಕೊಂಡಿದ್ದ ಇವರು ಎಲ್ಲಿಯೇ ಹೋದರು ಕಾಣುವ ಹೊಸ ಹೊಸ ಪುಸ್ತಕಗಳನ್ನು ಖರೀದಿಸುತ್ತಿದ್ದರು. ಪುಸ್ತಕ ಖರೀದಿಗೆ ತಮ್ಮ ಜೇಬಿನಲ್ಲಿ ಕೆಲವೇ ಕೆಲವು ನೂರು ರೂಪಾಯಿಗಳು ಇಲ್ಲದಿದ್ದ ಸಂದರ್ಭದಲ್ಲಿ ಮಂತ್ರಿ ಎಂಬ ಯಾವ ಅಹಂ ಇಲ್ಲದೆ ಜೊತೆಯಲ್ಲಿದ್ದವರ ಬಳಿಯಲ್ಲಿ ಸಾಲವನ್ನು ಪಡೆಯುತ್ತಿದ್ದರು.

1984ರಲ್ಲಿ ರಾಜ್ಯದ ವಿಧಾನಸಭೆ ವಿಸರ್ಜನೆಯಾಗಿ ಹೊಸದಾಗಿ ಜನಾದೇಶಕ್ಕೆ ಹೆಗಡೆರವರು ತೀರ್ಮಾನಿಸಿದಾಗ 1985ರಲ್ಲಿ ಮತ್ತೆ ಜನತಾಪಕ್ಷದ ಸರ್ಕಾರ ರಚನೆಯಾಗಬೇಕಾದರೆ ಅದರ ಹಿಂದೆ ಅಬ್ದುಲ್ ನಜೀರ್ ಸಾಬ್‌ ರವರ ಶ್ರಮವೂ ಇದೆ. ಅವರು ಆ ಇಲಾಖೆಯಲ್ಲಿ ತೋರಿದ ಸಾಧನೆ ಸರ್ಕಾರಕ್ಕೆ ವರದಾನವಾಯಿತು.

1998ರ ಅಕ್ಟೋಬರ್ 24ರಂದು ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ಇವರನ್ನು ಬೊಮ್ಮಾಯಿರವರು ತಮ್ಮ ಸರ್ಕಾರದಲ್ಲಿ ಇವರ ಮೇಲಿನ ಪ್ರೀತಿಯಿಂದಾಗಿ ಮತ್ತೆ ಮಂತ್ರಿಯನ್ನಾಗಿಸುತ್ತಾರೆ.

ಇವರ ಆರೋಗ್ಯವನ್ನು ವಿಚಾರಿಸಲು ನಾಯಕರುಗಳು ಆಸ್ಪತ್ರೆಗೆ ಬಂದಾಗ ಇವರು ಸರ್ಕಾರದ ಮುಂದೆ ಇಟ್ಟ ಬೇಡಿಕೆಯನ್ನು ಕೇಳಿ ಎಲ್ಲರ ಕಣ್ಣುಗಳಲ್ಲಿ ನೀರು ಬರುತ್ತದೆ. ಸಾವು, ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ ವೈಯಕ್ತಿಕವಾಗಿ ಏನ್ನನಾದರು ಕೇಳಬಹುದೆಂದು ನಿರೀಕ್ಷಿಸಿದವರಿಗೆ ಇವರು ಬಡವರಿಗೆ ಮನೆಗಳನ್ನು ಕಟ್ಟಿಕೊಡುವ ಕಡತವನ್ನು ಸರ್ಕಾರದಲ್ಲಿ ಅನುಮೋದನೆಯಾಗದೆ ಉಳಿದುಕೊಂಡಿದೆ ದಯಮಾಡಿ ಆ ಕಡತವನ್ನು ವಿಲೇವಾರಿ ಮಾಡಿ ಬಡವರಿಗೆ ಮನೆಗಳನ್ನು ಕಟ್ಟಿಕೊಡಿ ಎಂದು ಹೇಳಿದ ಮಾತು ಇವರ ನಿಸ್ವಾರ್ಥ, ಪ್ರಾಮಾಣಿಕ ಬದುಕಿಗೆ ಸಾಕ್ಷಿಯಾಗಿದೆ.

  • ಕೆ.ಎಸ್. ನಾಗರಾಜ್, ಬೆಂಗಳೂರು

Leave a Reply