ಚಿಕ್ಕಬಳ್ಳಾಪುರ : ಜನಪರ ವೈದ್ಯ ಡಾ. ಅನಿಲ್ ಕುಮಾರ್ ಆವುಲಪ್ಪ, ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು. ಬಸವರಾಜು ಅಭ್ಯರ್ಥಿ ಆಯ್ಕೆಯನ್ನು ಘೋಷಿಸಿದರು.
ಮಾಧ್ಯಮದವರ ಜೊತೆ ಮಾತನಾಡಿದ ಅನಿಲ್ ಕುಮಾರ್ ಅವರು, ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರ ಜನರಿಗೆ ಸಂಕಷ್ಟ ಉಂಟುಮಾಡುವ ಜನವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಿವೆ. ವಿಧಾನಸಭೆಯಲ್ಲಿ ಜನರ ಪರವಾಗಿ ಧ್ವನಿ ಎತ್ತುವವರಿಲ್ಲ. ಸಿಪಿಐಎಂ ಗೆಲುವು ಕಂಡರೆ ಮಾತ್ರ ದುಡಿಯುವ ವರ್ಗಗಳ ಪರವಾಗಿ ವಿಧಾನಸೌಧದಲ್ಲಿ ಧ್ವನಿ ಮೊಳಗಲಿದೆ. ಬಾಗೇಪಲ್ಲಿ ಕ್ಷೇತ್ರದಲ್ಲಿ ಈ ಬಾರಿ ನಮ್ಮ ಪಕ್ಷ ಗೆಲವು ಸಾಧಿಸಲಿದೆ ಎಂದರು.
ಬಾಗೇಪಲ್ಲಿ ಕ್ಷೇತ್ರದ ಜನರು ಈ ಹಿಂದಿನಿಂದಲೂ ಸಿಪಿಎಂ ಬಗ್ಗೆ ಅಪಾರ ಪ್ರೀತಿ ತೋರುತ್ತಿದ್ದಾರೆ. ರಾಜ್ಯದಲ್ಲಿ ಜನರ ಪರವಾಗಿ ಧ್ವನಿಮೊಳಗಿಸಲು ಬಾಗೇಪಲ್ಲಿ ಜನರು ತೀರ್ಮಾನ ಕೈಗೊಳ್ಳಬೇಕು. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದವರಿಗೆ ಅಧಿಕಾರವಿದೆ. ಆದರೆ ಅಭಿವೃದ್ಧಿ ಇಲ್ಲ. ಜನರು ಭ್ರಮನಿರಸನಗೊಂಡಿದ್ದಾರೆ. ಜಿ.ವಿ.ಶ್ರೀರಾಮರೆಡ್ಡಿ ಅವರು ಬಾಗೇಪಲ್ಲಿ ಕ್ಷೇತ್ರದಲ್ಲಿ ಪಕ್ಷಕ್ಕೆ ಬುನಾದಿ ಹಾಕಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಬಗ್ಗೆ ಇರುವ ಅತೃಪ್ತಿ ಸಿಪಿಎಂ ಬಗ್ಗೆ ಇರುವ ಒಲವು ಪಕ್ಷದ ಗೆಲುವಿಗೆ ಕಾರಣವಾಗಲಿದೆ. ರಾಜ್ಯದ ಅಭಿವೃದ್ಧಿಗೆ ಮತ್ತು ಸೌಹಾರ್ದಕ್ಕೆ ಬಿಜೆಪಿ ಮಾರಕವಾಗಿದೆ ಎಂದು ಹೇಳಿದರು.
ಬಾಗೇಪಲ್ಲಿಯಲ್ಲಿ ಸಿಪಿಐಎಂನ ಜಿ.ವಿ. ಶ್ರೀರಾಮರೆಡ್ಡಿ ಅವರು ಅಧಿಕಾರದಲ್ಲಿ ಇದ್ದಾಗ ಅಭಿವೃದ್ಧಿ ಕೆಲಸವಾಗಿವೆ. ಅದರ ಹೊರತಾಗಿ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲ್ಲೂಕಿನ 49 ಹಳ್ಳಿಗಳಲ್ಲಿ ಇಲ್ಲಿಯವರೆಗೂ ಒಬ್ಬರು ಪದವಿ ಪಡೆದಿಲ್ಲ. ಜನರ ಆರೋಗ್ಯ, ಶಿಕ್ಷಣದ ಪರವಾಗಿ ಕೆಲಸ, ದುಡಿಯುವ ವರ್ಗಗಳ ಆತ್ಮಗೌರವ ಹೆಚ್ಚಿಸುವ ಕೆಲಸ ಮಾಡಲಾಗುವುದು, ಜನ ಗೆಲ್ಲಿಸಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಪ್ರಜಾವೈದ್ಯ ಡಾ. ಅನಿಲ್ ಕುಮಾರ್
ಬಾಗೇಪಲ್ಲಿಯಲ್ಲಿ ಪೀಪಲ್ಸ್ ಆಸ್ಪತ್ರೆ ನಡೆಸುವ ಡಾ. ಅನಿಲ್ ಕುಮಾರ್ ಆವುಲಪ್ಪ ತಾಲ್ಲೂಕಿನಲ್ಲಿ ‘ಪ್ರಜಾವೈದ್ಯ’ ಎಂದೇ ಪರಿಚಿತರಾಗಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲ್ಲೂಕಿನ 200 ಗ್ರಾಮಗಳಲ್ಲಿ ಕೋವಿಡ್ ಪ್ರಥಮ ಚಿಕಿತ್ಸಾ ಕೇಂದ್ರಗಳನ್ನು ಆರಂಭಿಸಿದ್ದರು.
ಆರೋಗ್ಯ ವ್ಯವಸ್ಥೆಯತ್ತ ಜನ ಬರುವುದಕ್ಕೆ ಬದಲಾಗಿ ಜನರತ್ತ ಆರೋಗ್ಯ ವ್ಯವಸ್ಥೆ ತೆರಳಬೇಕು ಎನ್ನುವ ಮಹತ್ವದ ತಾತ್ವಿಕ ನಿಲುವನ್ನು ಆಧಾರವಾಗಿರಿಸಿಕೊಂಡು ಗ್ರಾಮಗಳಲ್ಲಿ ಸ್ವಯಂಸೇವಕರ ತಂಡಗಳನ್ನು ಕಟ್ಟಿ ಆ ಮೂಲಕ ಗುರುತರ ಸೇವೆ ಸಲ್ಲಿಸುತ್ತಿರುವ ಅನಿಲ್ ಕುಮಾರ್ ಅವರಿಗೆ ಈ ಮಹತ್ವದ ಕಾರ್ಯಕ್ಕೆ ಅನೇಕ ಸಾರ್ವಜನಿಕ ಸೇವಾ ಸಂಸ್ಥೆಗಳು ಮತ್ತು ಜನಪರ ಸಂಘಟನೆಗಳು ಬೆನ್ನೆಲುಬಾಗಿ ನಿಂತಿವೆ. ಈ ಅನುಭವವನ್ನು ರಾಜ್ಯದ ಇತರೆಡೆಯೂ ವಿಸ್ತರಿಸಿದ ಅವರು ವಿಶೇಷವಾಗಿ ಪಶ್ಚಿಮಘಟ್ಟದಲ್ಲಿರುವ ಕೊಡಗು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮುಂತಾದ ಜಿಲ್ಲೆಗಳ ಆದಿವಾಸಿ ಸಮುದಾಯಗಳ ನಡುವೆಯೂ ವೈದ್ಯಕೀಯ ಸೇವೆ ನೀಡಿದ್ದಾರೆ.
ಸಮಾಜದ ವಿವಿಧ ರಂಗಗಳಲ್ಲಿ ತಮ್ಮದೇ ಆದ ವಿಶಿಷ್ಟ ಸೇವೆ ಮತ್ತು ಕೊಡುಗೆಗಳನ್ನು ನೀಡಿರುವ ಸಾಧಕರಿಗೆ ಮಾಧ್ಯಮ ಸಂವಹನ ಕ್ಷೇತ್ರದ ಸಂಸ್ಥೆಯಾದ ಭಾರತದ ಸಾರ್ವಜನಿಕ ಸಂಬಂಧಗಳ ಮಂಡಳಿ- ಪಬ್ಲಿಕ್ ರಿಲೇಷನ್ಸ್ ಕೌನ್ಸಿಲ್ ಆಫ್ ಇಂಡಿಯಾ (ಪಿ.ಸಿ.ಆರ್.ಐ.) ಕೊಡುವ ಪ್ರತಿಷ್ಟಿತ ‘ಚಾಣಕ್ಯ ಪ್ರಶಸ್ತಿ’ ಇವರಿಗೆ ಲಭಿಸಿದೆ.




