ಹುಬ್ಬಳ್ಳಿ: ಕಳಸಾ ಬಂಡೂರಿ ನಾಲಾ ಯೋಜನೆಯನ್ನು ತೀವ್ರಗತಿಯಲ್ಲಿ ಸರ್ಕಾರ ಆರಂಭ ಮಾಡಬೇಕೆಂದು ಒತ್ತಾಯಿಸಲು ಹುಬ್ಬಳ್ಳಿಯಲ್ಲಿ ಸಭೆಯನ್ನು ಮಾಡಬೇಕು ಎಂದು ದೆಹಲಿಯಲ್ಲಿ ಪಕ್ಷದ ನಾಯಕರು ಸೇರಿ ತೀರ್ಮಾನ ಮಾಡಿದ್ದೆವು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಮಹದಾಯಿ ಜನಾಂದೋಲನ ಸಭೆಯಲ್ಲಿ ಪಾಲ್ಗೊಂಡು, ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆಯವರ ನೇತೃತ್ವದಲ್ಲಿ ಈ ಸಭೆ ನಡೆದಿತ್ತು. ನಾವು ಜನವರಿ 2ರಂದು ಸಭೆ ಮಾಡುತ್ತೇವೆ ಎಂದು ಘೋಷಣೆ ಮಾಡಿದ ಮೇಲೆ ಬಿಜೆಪಿಯವರು ಎಚ್ಚೆತ್ತುಕೊಂಡು, ಚುನಾವಣೆ ಹತ್ತಿರ ಇದೆ ಎಂಬ ಕಾರಣಕ್ಕೆ ಕಳಸಾ ಬಂಡೂರಿ ನಾಲಾ ( ಮಹದಾಯಿ)ಯ ವಿಸ್ತೃತ ಯೋಜನಾ ವರದಿಯನ್ನು ಅನುಮೋದನೆ ಮಾಡಿದ್ದೇವೆ ಎಂದು ನಿನ್ನೆ ವಿಜಯೋತ್ಸವ ಆಚರಣೆ ಮಾಡಿದರು. ಇದರ ಗೆಜೆಟ್ ನೋಟಿಫಿಕೇಷನ್ ಆದದ್ದು 27-02-2020 ರಲ್ಲಿ. ಕೇಂದ್ರದಲ್ಲಿ, ರಾಜ್ಯದಲ್ಲಿ, ಗೋವಾದಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ಎಲ್ಲಾ ಕಡೆ ಬಿಜೆಪಿಯದೇ ಸರ್ಕಾರ ಇದ್ದರೂ 2 ವರ್ಷ 10 ತಿಂಗಳಿಂದ ಯೋಜನೆಯ ಕಾಮಗಾರಿಯನ್ನು ಯಾಕೆ ಪ್ರಾರಂಭ ಮಾಡಿಲ್ಲ ಎಂಬ ಪ್ರಶ್ನೆಗೆ ಬಿಜೆಪಿ ನಾಯಕರು ಉತ್ತರ ನೀಡಬೇಕು ಎಂದರು.
ಬಸವರಾಜ ಬೊಮ್ಮಾಯಿ, ಪ್ರಹ್ಲಾದ್ ಜೋಶಿ ಅವರು ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ಪಂಚಾಲ್ ಅಧ್ಯಕ್ಷತೆಯ ನ್ಯಾಯಾಧೀಕರಣ ತೀರ್ಪು ನೀಡಿದ್ದು 14-08-2018ರಲ್ಲಿ. ತೀರ್ಪು ಬಂದ ನಂತರ ಗೋವಾ, ಮಹಾರಾಷ್ಟ್ರ, ಕರ್ನಾಟಕ ಎಲ್ಲಾ ರಾಜ್ಯಗಳು ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದವು. ಗೆಜೆಟ್ ನೋಟಿಫಿಕೇಶನ್ ಹೊರಡಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ರಾಜ್ಯವು ಸುಪ್ರೀಂ ಕೋರ್ಟ್ ನಲ್ಲಿ ಮನವಿ ಮಾಡಿತ್ತು. ಸುಪ್ರೀಂ ಕೋರ್ಟ್ ಕರ್ನಾಟಕದ ಮನವಿಯನ್ನು ಪುರಸ್ಕರಿಸಿತು. ತೀರ್ಪು ಬಂದ ವೇಳೆ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಅವರದೇ ಸರ್ಕಾರ ಇತ್ತು, ಆದರೂ ಎರಡು ವರ್ಷ ಹತ್ತು ತಿಂಗಳು ಈ ವಿಚಾರದಲ್ಲಿ ಸರ್ಕಾರ ನಿದ್ದೆ ಮಾಡಿ ಈಗ ವಿಜಯೋತ್ಸವ ಆಚರಣೆ ಮಾಡಲು ನಾಚಿಕೆಯಾಗಲ್ವಾ? ಎಂದು ಪ್ರಶ್ನಿಸಿದರು.
2010ರಲ್ಲಿ ಟ್ರಿಬ್ಯುನಲ್ ರಚನೆ ಆಯಿತು, 2013ರಲ್ಲಿ ನಾವು ಅಧಿಕಾರಕ್ಕೆ ಬಂದ ಮೇಲೆ ಟ್ರಿಬ್ಯುನಲ್ ಮುಂದೆ ಸಮರ್ಥವಾಗಿ ವಾದ ಮಂಡಿಸಿದ ಮೇಲೆ ನಮಗೆ 13.42 ಟಿಎಂಸಿ ನೀರು ಸಿಕ್ಕಿತು, ಗೋವಾಗೆ 24 ಟಿಎಂಸಿ, ಮಹಾರಾಷ್ಟ್ರಕ್ಕೆ 1.3 ಟಿಎಂಸಿ ನೀರು ಸಿಕ್ಕಿತು. ನಮಗೆ ಈ ತೀರ್ಪು ಸಮಾಧಾನವಾಗದಿದ್ದರೂ ಅದನ್ನು ಒಪ್ಪಿಕೊಂಡು, ಮೇಲ್ಮನವಿ ಸಲ್ಲಿಸಿದೆವು. ನಾನು ಮುಖ್ಯಮಂತ್ರಿಯಾಗಿರುವಾಗ ಸರ್ವಪಕ್ಷಗಳ ನಿಯೋಗವನ್ನು ಕರೆದುಕೊಂಡು ಹೋಗಿದ್ದೆ, ಈ ನಿಯೋಗದಲ್ಲಿ ಯಡಿಯೂರಪ್ಪ, ಸದಾನಂದ ಗೌಡ, ಪ್ರಹ್ಲಾದ್ ಜೋಶಿ, ಅನಂತ ಕುಮಾರ್, ಶೋಭಾ ಕರಂದ್ಲಾಜೆ, ಕಳಸಾ ಬಂಡೂರಿ ನಾಲೆ ಆಗಬೇಕು ಎಂದು ಹೋರಾಟ ಮಾಡುತ್ತಿದ್ದ ಎಲ್ಲ ರೈತ ಮುಖಂಡರು, ಸಂಘ ಸಂಸ್ಥೆಗಳು, ಸ್ವಾಮೀಜಿಗಳು ಬಂದಿದ್ದರು. ಈ ಎಲ್ಲರ ಸಮ್ಮುಖದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೈಮುಗಿದು ಗೋವಾ ಮತ್ತು ಮಹಾರಾಷ್ಟ್ರದಲ್ಲಿ ನಿಮ್ಮದೇ ಸರ್ಕಾರ ಇದೆ. ಈ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆಯಿರಿ ಸಭೆಗೆ ನಾನು ಬರುತ್ತೇನೆ, ನೀವು ಕೊಡುವ ತೀರ್ಪನ್ನು ನಾನು ಒಪ್ಪಿಕೊಳ್ತೇನೆ, ಸಂಧಾನ ನಡೆಸಿ ಇದನ್ನು ಇತ್ಯರ್ಥ ಮಾಡಿಕೊಡಿ ಎಂದು ಗೋಗರೆದರೂ ಮೋದಿ ಅವರು ಒಪ್ಪಲಿಲ್ಲ. ಅನಂತ ಕುಮಾರ್, ಯಡಿಯೂರಪ್ಪ, ಸದಾನಂದ ಗೌಡ, ಪ್ರಹ್ಲಾಜ್ ಜೋಶಿ ಅವರು ಒಳಗಡೆ ಹೋಗಿ ಸಿದ್ದರಾಮಯ್ಯ ಅವರ ಈ ಬೇಡಿಕೆಯನ್ನು ಒಪ್ಪಿಕೊಂಡು ವಿವಾದವನ್ನು ಇತ್ಯರ್ಥ ಮಾಡಬೇಡಿ ಎಂದು ಹೇಳಿ ಬಂದರು. ಇದಕ್ಕೆ ಸ್ವಾಮೀಜಿಗಳು, ರೈತ ಮುಖಂಡರು ಸಾಕ್ಷಿ ಎಂದರು.
ಶ್ರೀಮತಿ ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ತೆಲುಗು ಗಂಗಾ ಯೋಜನೆ ವಿವಾದದಲ್ಲಿ ಆಂದ್ರ, ಕರ್ನಾಟಕ, ತಮಿಳುನಾಡು ಮುಖ್ಯಮಂತ್ರಿಗಳನ್ನು ಕರೆದು ಇತ್ಯರ್ಥ ಮಾಡಿದ್ದಾರೆ, ನೀವು ಮಾಡಿ ಎಂದು ಮೋದಿ ಅವರೆದುರು ಗೋಗರೆದರೂ ಅವರು ಮಾಡಿಲ್ಲ. ಗೋವಾದ ಕಾಂಗ್ರೆಸ್ ನವರನ್ನು ಒಪ್ಪಿಸಿಕೊಂಡು ಬನ್ನಿ ಎಂದು ನನಗೆ ಹೇಳಿದರು. ಆದರೆ ಈ ಎರಡೂ ಕಡೆ ಸರ್ಕಾರ ಇದ್ದದ್ದು ಬಿಜೆಪಿಯದು. ಕಾಂಗ್ರೆಸ್ ಗೂ ಇದಕ್ಕೂ ಏನು ಸಂಬಂಧ? ತೆಲುಗು ಗಂಗಾ ನೀರಿನ ವಿವಾದವನ್ನು ಬಗೆಹರಿಸಲು ಶ್ರೀಮತಿ ಇಂದಿರಾ ಗಾಂಧಿ ಅವರಿಗೆ ಸಾಧ್ಯವಾಗುವುದಾದರೆ ಮಹದಾಯಿ ವಿವಾದವನ್ನು ಬಗೆಹರಿಸಲು ಮೋದಿ ಅವರಿಗೆ ಏಕೆ ಸಾಧ್ಯವಾಗಿಲ್ಲ? ಕಾರಣ ಏನೆಂದರೆ ಮೋದಿ ಅವರು ಪ್ರಯತ್ನವನ್ನೇ ಮಾಡಿಲ್ಲ. 2018ರಲ್ಲಿ ಇದೇ ಮೈದಾನದಲ್ಲಿ ಯಡಿಯೂರಪ್ಪ ಅವರು ತಾವು ಅಧಿಕಾರಕ್ಕೆ ಬಂದ 24 ಗಂಟೆ ಒಳಗೆ ಮಹದಾಯಿ ವಿವಾದವನ್ನು ಇತ್ಯರ್ಥ ಮಾಡುತ್ತೇವೆ, ಇದನ್ನು ರಕ್ತದಲ್ಲಿ ಬರೆದುಕೊಡ್ತೀನಿ ಎಂದು ಹೇಳಿದ್ದರು. ಬಗೆಹರಿಸಿದ್ದಾರ? ಇಂಥಾ ಢೋಂಗಿತನವನ್ನು ಬಿಜೆಪಿ ಅವರು ಬಿಡಬೇಕು ಎಂದರು.
ಕಾಂಗ್ರೆಸ್ ಪಕ್ಷ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿ ನುಡಿದಂತೆ ನಡೆದಿದೆ. 2013ರಲ್ಲಿ ನಾವು ಜನರಿಗೆ 165 ಭರವಸೆಗಳನ್ನು ನೀಡಿ ಅವುಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ, ಇದರ ಜೊತೆಗೆ ಹೆಚ್ಚುವರಿಯಾಗಿ 30 ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದೇವೆ. ನುಡಿದಂತೆ ನಡೆದ ಸರ್ಕಾರ ನಮ್ಮದು. ಹೊಸಪೇಟೆಯಿಂದ ಕೂಡಲ ಸಂಗಮದ ವರೆಗೆ ಪಾದಯಾತ್ರೆ ಮಾಡಿ, ನಾವು ಅಧಿಕಾರಕ್ಕೆ ಬಂದರೆ ಮುಂದಿನ 5 ವರ್ಷಗಳಲ್ಲಿ ನೀರಾವರಿ ಯೋಜನೆಗಳಿಗೆ 50,000 ಕೋಟಿ ಖರ್ಚು ಮಾಡುವುದಾಗಿ ಭರವಸೆ ನೀಡಿ, ಅಧಿಕಾರಕ್ಕೆ ಬಂದ ಮೇಲೆ 50,000 ಕೋಟಿಗೂ ಅಧಿಕ ಹಣ ಖರ್ಚು ಮಾಡಿದ್ದೇವೆ. ಈಗಿನ ಬಿಜೆಪಿಯು ತನ್ನ 2018ರ ಪ್ರಣಾಳಿಕೆಯಲ್ಲಿ 5 ವರ್ಷಗಳಲ್ಲಿ ನೀರಾವರಿ ಯೋಜನೆಗಳಿಗಾಗಿ 1,50,000 ಕೋಟಿ ಖರ್ಚು ಮಾಡುವ ಭರವಸೆ ನೀಡಿತ್ತು, ಈ ವರೆಗೆ ಖರ್ಚು ಮಾಡಿರುವುದು 45,000 ಕೋಟಿ ಮಾತ್ರ. ಇನ್ನು ಒಂದು ಲಕ್ಷ ಕೋಟಿ ಏನಾಯಿತು ಬಸವರಾಜ ಬೊಮ್ಮಾಯಿ ಅವರೇ? ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ 600 ಭರವಸೆಗಳನ್ನು ನೀಡಿತ್ತು, ಅವುಗಳಲ್ಲಿ 10% ಅನ್ನೂ ಕೂಡ ಈಡೇರಿಸಿಲ್ಲ. ಇದು ನಾಡಿನ ಜನರಿಗೆ ಮಾಡಿರುವ ದ್ರೋಹ ಎಂದರು.
2023ರಲ್ಲಿ ನಾವು ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಬಾಕಿ ಇರುವ ಕೃಷ್ಣಾ ಮೇಲ್ದಂಡೆ, ಮಹದಾಯಿ, ಭದ್ರಾ ಮೇಲ್ದಂಡೆ, ಮೇಕೆದಾಟು, ಎತ್ತಿನಹೊಳೆ ಈ ಎಲ್ಲ ಯೋಜನೆಗಳನ್ನು 5 ವರ್ಷಗಳಲ್ಲಿ ಪೂರೈಸಲು 2 ಲಕ್ಷ ಕೋಟಿ ರೂಪಾಯಿ ಅನುದಾನ ನೀಡುತ್ತೇವೆ, ಈ ಮಾತನ್ನು ಮೊನ್ನೆ ವಿಜಯಪುರದ ಸಮಾವೇಶದಲ್ಲಿಯೂ ಹೇಳಿದ್ದೇವೆ. ಮಹದಾಯಿ ಯೋಜನೆಯ ಯೋಜನಾ ವೆಚ್ಚ 93 ಕೋಟಿ ಇದ್ದದ್ದು 1677 ಕೋಟಿಗೆ ಹೆಚ್ಚಾಗಿದೆ, ಇದಕ್ಕೆ ಯಾರು ಹೊಣೆ? ಬಿಜೆಪಿ ಅವರ ವಿಳಂಬ ನೀತಿ, ಇಚ್ಛಾ ಶಕ್ತಿಯ ಕೊರತೆಯಿಂದ ಈ ನಷ್ಟ ಆಗುತ್ತಿದೆ. ಈಗದು 2000 ಕೋಟಿ ಆಗಬಹುದು ಅನ್ನಿಸುತ್ತದೆ. ಈ ನಷ್ಟದ ಹಣವನ್ನು ಕೇಂದ್ರ ಸರ್ಕಾರ ಕೊಡುತ್ತಾ? ಈಗ ಹೆಚ್ಚಾಗಿರುವ ಯೋಜನಾ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸಬೇಕು ಎಂದು ಪ್ರಧಾನಿ ಮೋದಿ ಹಾಗೂ ನಿರ್ಮಲಾ ಸೀತಾರಾಮನ್ ಅವರನ್ನು ಒತ್ತಾಯಿಸಿದರು.
ಬಿಜೆಪಿಯವರು ಎಷ್ಟೇ ದುಡ್ಡು ಖರ್ಚು ಮಾಡಲಿ, ಎಷ್ಟೇ ಅಪಪ್ರಚಾರ ಮಾಡಲಿ, ಎಷ್ಟೇ ಆಪರೇಷನ್ ಕಮಲ ಮಾಡಲಿ 2023ರಲ್ಲಿ ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ, ನಾವು ಅಧಿಕಾರಕ್ಕೆ ಬಂದ ಎರಡೇ ವರ್ಷದಲ್ಲಿ ಇಡೀ ಕಳಸಾ ಬಂಡೂರಿ ನಾಲಾ ಯೋಜನೆಯನ್ನು ಪೂರ್ಣಗೊಳಿಸುತ್ತೇವೆ. ಈ ಯೋಜನೆಗೆ ಎರಡಲ್ಲ, ಮೂರು ಸಾವಿರ ಕೋಟಿ ಆಗಲಿ, ನಾವು ಖರ್ಚು ಮಾಡಲು ಸಿದ್ಧರಿದ್ದೇವೆ. ಇದು ಸತ್ಯ. ನಮ್ಮ ಮೇಲೆ ವಿಶ್ವಾಸ ಇಡಿ, ನಾವು ನುಡಿದಂತೆ ನಡೆಯುತ್ತೇವೆ. ಜನರಿಗೆ ದ್ರೋಹ ಮಾಡುವವರು ಕಾಂಗ್ರೆಸ್ ನವರಲ್ಲ. ಜನದ್ರೋಹದ ಕೆಲಸ ಏನಿದ್ದರೂ ಬಿಜೆಪಿ ಅವರದ್ದು ಎಂದರು.
ಸರ್ಕಾರದ ಎಲ್ಲಾ ಇಲಾಖೆಗಳಲ್ಲೂ ಬಿಜೆಪಿಯವರು ಲೂಟಿ ಮಾಡುತ್ತಿದ್ದಾರೆ. ಇಂದು ವಿಧಾನಸೌಧದ ಗೋಡೆಗಳು ಲಂಚ, ಲಂಚ ಎಂದು ಪಿಸುಗುಟ್ಟಿತ್ತಿದೆ. ಇಂಥಾ ಸರ್ಕಾರ ಬೇಕಾ? ಈ ಸರ್ಕಾರ ಬೇಡ ಎನ್ನುವುದಾದರೆ ಬಿಜೆಪಿಯನ್ನು ಬೇರು ಸಹಿತ ಕಿತ್ತು ಹಾಕಿ, ಕಾಂಗ್ರೆಸ್ ಪಕ್ಷವನ್ನು ವಿಧಾನಸೌಧದ ಮೂರನೇ ಮಹಡಿಯಲ್ಲಿ ಕೂರಿಸುವ ಕೆಲಸ ಮಾಡಬೇಕು ಎಂದು ಜನರಲ್ಲಿ ಕೈಮುಗಿದು ಮನವಿ ಮಾಡಿದರು.
ಬಸವರಾಜ ಬೊಮ್ಮಾಯಿ ಅವರು ರಾಜ್ಯ ಕಂಡ ಅತ್ಯಂತ ದುರ್ಬಲ ಮುಖ್ಯಮಂತ್ರಿ. ಬೇರೆಯವರಿಗೆ ಧಮ್ ಇದ್ರೆ, ತಾಕತ್ ಇದ್ರೆ ಎನ್ನುತ್ತಾರೆ ಆದರೆ ಅವರಿಗೇ ಈ ಧಮ್, ತಾಕತ್ ಯಾಕೆ ಇಲ್ಲ? ನರೇಂದ್ರ ಮೋದಿ ಎದುರು ಗಡಗಡ ಗಡಗಡ ಎಂದು ನಡುಗುತ್ತಾರೆ. ಆರ್,ಎಸ್,ಎಸ್ ನವರು ಕೂತ್ಕೋ ಅಂದ್ರೆ ಕೂತ್ಕೋತಾರೆ, ನಿಂತ್ಕೊ ಎಂದರೆ ನಿಂತ್ಕೋತಾರೆ. ಇವರು ಬೇಕಾ? ಎಂದು ಪ್ರಶ್ನಿಸಿದರು.
ಹುಬ್ಬಳಿ ಹೈವೇ ಬಳಿ ಸೈಯದ್ ಮಹಮ್ಮದ್ ಖಾದ್ರಿ ದರ್ಗಾ ಇದೆ, ಅಲ್ಲಿ ಸಮೀಪದಲ್ಲಿ ದೇವಾಲಯಗಳು ಇದಾವೆ. ರಸ್ತೆ ಅಗಲೀಕರಣ ಮಾಡುವಾಗ ಆ ದರ್ಗಾವನ್ನು ಮುಟ್ಟಲು ನಮ್ಮ ಸರ್ಕಾರದ ಅವಧಿಯಲ್ಲಿ ನಾನು ಬಿಟ್ಟಿರಲಿಲ್ಲ. ಮೊನ್ನೆ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಮುಸ್ಲಿಂ ಮುಖಂಡರು ನನ್ನನ್ನು ಭೇಟಿ ಮಾಡಿ ದರ್ಗಾವನ್ನು ಒಡೆಯದಂತೆ ತಡೆಯಬೇಕು ಎಂದು ಮನವಿ ಮಾಡಿದರು. ನಾನು ತಕ್ಷಣ ಬಸವರಾಜ ಬೊಮ್ಮಾಯಿ ಅವರಿಗೆ ಕರೆ ಮಾಡಿ ದರ್ಗಾವನ್ನು ದ್ವಂಸ ಮಾಡಬೇಡಿ ಎಂದೆ, ಅದಕ್ಕವರು ಕೋರ್ಟ್ ಆದೇಶ ಇದೆ ಎಂದರು. ಕೋರ್ಟ್ ನವರು ದ್ವಂಸ ಮಾಡಿ ಎಂದು ನಿರ್ದೇಶನ ನೀಡಿಲ್ಲ, ಮುಸ್ಲೀಂ ಬಾಂಧವರು ಹಾಕಿರುವ ಅರ್ಜಿ ಮಾತ್ರ ವಜಾ ಆಗಿದೆ ಎಂದೆ. ಸರಿ ಸರ್ ಪೊಲೀಸರಿಗೆ, ಡಿಸಿ ಗೆ, ಕಮಿಷನರ್ ಗೆ ಹೇಳುತ್ತೇನೆ ಎಂದವರು ನಂತರ ಪ್ರಹ್ಲಾದ್ ಜೋಶಿ ಅವರ ಒತ್ತಡಕ್ಕೆ ಮಣಿದು ದರ್ಗಾವನ್ನು ದ್ವಂಸ ಮಾಡಿದರು. ಈ ದರ್ಗಾಕ್ಕೆ ಹಿಂದೂ, ಮುಸ್ಲೀಂ, ಕ್ರಿಶ್ಚಿಯನ್ ಎಲ್ಲ ಧರ್ಮದವರು ಧರ್ಮಾತೀತವಾಗಿ ನಡೆದುಕೊಳ್ಳುತ್ತಿದ್ದರು. ಇಂಥಾ ದರ್ಗಾವನ್ನು ರಾತ್ರೋರಾತ್ರಿ ಒಡೆದುಹಾಕುವ ಅಗತ್ಯ ಏನಿತ್ತು? ಅದಕ್ಕಿಂತ ಕಿರಿದಾದ ರಸ್ತೆಗಳು ಸಾಕಷ್ಟು ಇದಾವೆ, ನಾನೇ ಹೋಗಿ ನೋಡಿಕೊಂಡು ಬಂದಿದ್ದೇನೆ. ಇದನ್ನು ದ್ವಂಸ ಮಾಡುವ ಬದಲು ಅವರಿಗೆ ಸಮಯಾವಕಾಶ ಕೊಟ್ಟಿದ್ದರೆ ಸಾಕಿತ್ತು ಎಂದರು.
ಬಿಜೆಪಿ ಇಂಥಾ ದ್ವೇಷ ರಾಜಕೀಯವನ್ನು ಹೆಚ್ಚೆಂದರೆ ಇನ್ನೂ ಮೂರು ತಿಂಗಳು ಮಾಡಬಹುದು. ಬಿಜೆಪಿ ಅವರು ಜಾತಿ, ಧರ್ಮಗಳ ಆಧಾರದ ಮೇಲೆ ಜನರ ಮನಸುಗಳನ್ನು ಒಡೆದು ಹಾಕಿದ್ದಾರೆ. ಇದೇ ಕಾರಣಕ್ಕಾಗಿ ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಭಾರತ ಐಕ್ಯತಾ ಯಾತ್ರೆಯನ್ನು ಮಾಡುತ್ತಿದ್ದಾರೆ. ಒಡೆದಿರುವ ಜನರ ಮನಸುಗಳನ್ನು ಒಂದುಗೂಡಿಸುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಮನಸುಗಳನ್ನು ಒಂದುಗೂಡಿಸುವ ಬದ್ಧತೆ ಇರುವ ಪಕ್ಷ. ಬಿಜೆಪಿ ಅವರು ಸಮಾಜ ಒಡೆಯುವವರು. ದೇಶವನ್ನು ಜೋಡಿಸುವವರು ಬೇಕಾ? ದೇಶ ಒಡೆಯುವವರು ಬೇಕಾ ಎಂದು ಜನ ತೀರ್ಮಾನ ಮಾಡಬೇಕು ಎಂದರು.
ಬಿಜೆಪಿ ಅಧಿಕಾರದಲ್ಲಿ ಇರುವವರೆಗೆ ಬಡವರು, ರೈತರು, ಅಲ್ಪಸಂಖ್ಯಾತರು, ಮಹಿಳೆಯರು, ಮಕ್ಕಳು ಯಾರೂ ಕೂಡ ನೆಮ್ಮದಿಯಾಗಿ ಬದುಕಲು ಸಾಧ್ಯವಿಲ್ಲ. ರಾಜ್ಯದಲ್ಲಿನ ಭ್ರಷ್ಟಾಚಾರ, ದ್ವೇಷ ರಾಜಕೀಯ ಇವೆಲ್ಲವೂ ಕೊನೆಯಾಗಬೇಕಾದರೆ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆದು 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರವನ್ನು ತರಬೇಕು. ಈ ಕೆಲಸ ಮಾಡುವ ಸಂಕಲ್ಪ ಇಂದೇ ಮಾಡಿ ಎಂದು ಮನವಿ ಮಾಡಿದರು.




