ಬೆಂಗಳೂರು: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಶಂಕಿತ ಉಗ್ರ ಮೊಹಮ್ಮದ್ ಶಾರೀಕ್ ತನಗೆ ಹ್ಯಾಂಡ್ಲರ್ ಇರುವುದನ್ನು ರಾಷ್ಟ್ರೀಯ ತನಿಖಾ ದಳ(ಎನ್ ಐಎ)ಅಧಿಕಾರಿಗಳ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.
ತನಗಿರುವ ಹ್ಯಾಂಡ್ಲರ್ ಹಾಗೂ ಉಗ್ರ ಚಟುವಟಿಕೆಗಳಲ್ಲಿ ತೊಡಗಿರುವವರ ಕೆಲವರ ಹೆಸರನ್ನು ಷರತ್ತುಗಳ ಮೇಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾರೀಕ್(24) ಬಾಯ್ಬಿಟ್ಟಿದ್ದಾನೆ.
ನನ್ನ ರೀತಿಯಲ್ಲಿ ಇನ್ನೂ ಹಲವು ಯುವಕರು ಉಗ್ರಗಾಮಿ ಚಟುವಟಿಕೆಗಳಲ್ಲಿ ತೊಡಗಿದ್ದು, ಅವರು ಹೆಚ್ಚು ಮೂಲಭೂತವಾದಿಗಳಾಗಿದ್ದು ಭಾರತದಲ್ಲಿ ಶರಿಯತ್ ಆಡಳಿತವನ್ನು ಸ್ಥಾಪಿಸಲು ಯಾವುದೇ ಹಂತಕ್ಕೆ ಬೇಕಾದರೂ ಅವರು ಹೋಗುತ್ತಾರೆ ಎನ್ನುವ ಮಾಹಿತಿಯನ್ನು ಶಾರೀಕ್ ನೀಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಮಂಗಳೂರಿನ ಪ್ರಸಿದ್ಧ ಕದ್ರಿ ಮಂಜುನಾಥ್ ದೇವಸ್ಥಾನದಲ್ಲಿ ಐಇಡಿ ಸ್ಫೋಟಗೊಳಿಸಲು ಸಂಚು ರೂಪಿಸಲಾಗಿತ್ತು. ಆದರೆ, ಆಟೋದಲ್ಲಿಯೇ ಅದು ಸ್ಫೋಟಗೊಂಡಿತ್ತು ಎಂದು ಶಾರೀಕ್ ತಪ್ಪೊಪ್ಪಿಕೊಂಡಿದ್ದಾನೆ.
ಈ ಹಿಂದೆ, ಭಯೋತ್ಪಾದಕ ಶಂಕಿತ ಆರೋಪಿಗಳಾದ ಶಿವಮೊಗ್ಗದ ಅರಾಫತ್ ಅಲಿ, ಮುಸ್ಸಾಬಿರ್ ಹುಸೇನ್ ಮತ್ತು ಅಬ್ದುಲ್ ಮಥೀನ್ ತಾಹಾ ಎಂಬ ಹ್ಯಾಂಡ್ಲರ್‌ಗಳ ಹೆಸರನ್ನು ಪೊಲೀಸರು ಬಹಿರಂಗಪಡಿಸಿದ್ದರು. ಆದರೆ ಶಾರೀಕ್ ಅನ್ನು ನಿರ್ವಹಿಸುತ್ತಿರುವ ವ್ಯಕ್ತಿ ಬೇರೊಬ್ಬರು ಇದ್ದಾನೆಂದು ಶಂಕಿಸಿದ್ದರು.
ಈ ವ್ಯಕ್ತಿ ಶಾರೀಕ್ ಜೊತೆ ನಿರಂತರ ಸಂಪರ್ಕದಲ್ಲಿದ್ದಾನೆ. ಆತ ರಹಸ್ಯವಾಗಿ ವಿಪಿಎನ್-ಸಕ್ರಿಯಗೊಳಿಸಿದ ಅಪ್ಲಿಕೇಶನ್‌ಗಳಲ್ಲಿ ಇತರರೊಂದಿಗೆ ಸಂವಹನ ನಡೆಸುತ್ತಿದ್ದಾನೆ.
ಕ್ರಿಪ್ಟೋಕರೆನ್ಸಿ ಮೂಲಕ ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ಒದಗಿಸುತ್ತಿದ್ದಾನೆ. ಜಿಹಾದ್‌ಗಾಗಿ ದೊಡ್ಡ ಕಾರ್ಯಯೋಜನೆಗಾಗಿ ಸಣ್ಣ ಸಣ್ಣ ಕಾರ್ಯಗಳನ್ನು ಇಂತಹವರಿಗೆ ನೀಡುತ್ತಿದ್ದಾನೆಂದು ಮೂಲಗಳು ತಿಳಿಸಿವೆ.
ಶಾರೀಕ್ ಸಂಶೋಧನೆ: ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಶಾರಿಕ್, ಯೋಜಿತ ಕೃತ್ಯಕ್ಕೂ ಮುನ್ನ ದೇಶದ ಪ್ರಾಮುಖ್ಯತೆಯ ದಿನಗಳು ಮತ್ತು ಕರ್ನಾಟಕದ ಹಿಂದೂ ಧಾರ್ಮಿಕ ಸಭೆಗಳ ಕುರಿತು ಆನ್‌ಲೈನ್‌ನಲ್ಲಿ ಸಂಶೋಧನೆ ನಡೆಸಿದ್ದ ಎಂದು ವರದಿಗಳಿಂದ ತಿಳಿದುಬಂದಿದೆ.
ಉದ್ದೇಶಿತ ಸ್ಥಳಗಳಲ್ಲಿ ದೇಶದ ಪ್ರಮುಖ ದಿನಗಳಲ್ಲಿ ಸ್ಫೋಟ ನಡೆಸಲು ಯೋಜನೆ ನಡೆಸಿದ್ದ ಎಂದು ಮೂಲಗಳು ಮಾಹಿತಿ ನೀಡಿವೆ.
ಮುಂದುವರೆದ ಚಿಕಿತ್ಸೆ: ಅಲಿ, ಹುಸೇನ್ ಮತ್ತು ತಾಹಾ ಭಯೋತ್ಪಾದನೆ ಸಂಬಂಧಿತ ಪ್ರಕರಣಗಳಲ್ಲಿ ಬೇಕಾಗಿರುವ ವ್ಯಕ್ತಿಗಳಾಗಿದ್ದೂ, ಮೂವರು ತಲೆಮರೆಸಿಕೊಂಡಿದ್ದಾರೆ. ಅಲಿ ಸೌದಿ ಅರೇಬಿಯಾದಲ್ಲಿದ್ದಾನೆಂದು ತಿಳಿದುಬಂದಿದೆ.
ಸ್ಫೋಟ ಪ್ರಕರಣದಲ್ಲಿ ಗಾಯಗೊಂಡಿರುವ ಶಾರೀಕ್ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಆತನನ್ನು ಪೊಲೀಸರು ಇನ್ನೂ ವಶಕ್ಕೆ ಪಡೆದುಕೊಳ್ಳಲು ಸಾಧ್ಯವಾಗಿಲ್ಲ.
ಪ್ರಕರಣದ ತನಿಖೆಯನ್ನು ಅಧಿಕೃತವಾಗಿ ಈಗಾಗಲೇ ಸ್ವೀಕರಿಸಿರುವ ಎನ್ಐಎ ಅಧಿಕಾರಿಗಳು ಶಾರೀಕ್ ಸಂಪೂರ್ಣ ಚೇತರಿಸಿಕೊಳ್ಳುವುದಕ್ಕಾಗಿ ಕಾಯುತ್ತಿದ್ದಾರೆಂದು ತಿಳಿದುಬಂದಿದೆ.




