ಮಂಗಳೂರು: ಕುಕ್ಕರ್ ಬಾಂಬರ್ ಶಾರೀಕ್ ಹತ್ಯೆಗೆ ಸಂಚು ನಡೆಯುತ್ತಿದೆ ಎನ್ನುವ ಅನುಮಾನದ ಹಿನ್ನೆಲೆಯಲ್ಲಿ ಆತ ಚಿಕಿತ್ಸೆ ಪಡೆಯಿತ್ತಿರುವ ಆಸ್ಪತ್ರೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಐಸಿಆರ್ ಮಾಡಿದ ಪೋಸ್ಟ್ ನಲ್ಲೇ ಉಗ್ರರು ಶಾರೀಕ್ ಹತ್ಯೆಯ ಸುಳಿವು ನೀಡಿರುವ ಬೆನ್ನಲ್ಲೇ ಚಿಕಿತ್ಸೆ ಪಡೆಯಿತ್ತಿರುವ ಹಗಲು ರಾತ್ರಿ ಅತಿ ಹೆಚ್ಚಿನ ಶಸ್ತ್ರ ಸಜ್ಜಿತ ಪೊಲೀಸರನ್ನು ನಿಯೋಜಿಸಿ ಭಾರೀ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಹ್ಯಾಂಡ್ಲರ್ ಗಳು ಸ್ಲೀಪರ್ ಸೆಲ್‍ಗಳನ್ನು ಆಕ್ಟೀವ್ ಮಾಡಿಸಿ ದಾಳಿ ನಡೆಸುವ ಸಾಧ್ಯತೆ ಇದೆ. ಶಾರೀಕ್‍ನೊಂದಿಗೆ ಬ್ಯಾಗ್ ಹಾಕಿಕೊಂಡು ಬಂದವನೂ ನಾಪತ್ತೆ ಆಗಿರುವುದರಿಂದ ಆತಂಕ ಹೆಚ್ಚಿದೆ. ಹೀಗಾಗಿ ಶಾರೀಕ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ. ಶಾರೀಕ್ ಕೊಠಡಿ ಪ್ರವೇಶದ ಬಳಿ ಮೆಟಲ್ ಡಿಟೆಕ್ಟರ್ ಅಳವಡಿಸಿದ್ದು, ಉಗ್ರ ಶಾರೀಕ್ ಚಿಕಿತ್ಸೆಗೆ ಸ್ಪಂದಿಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಅಲ್ಲದೇ ಶಾರಿಕ್ ಮೊಬೈಲ್ ನಲ್ಲಿ ಪತ್ತೆಯಾದ 1,200 ವಿಡಿಯೋಗಳು, ಬಾಂಬ್ ತಯಾರಿಕೆ, ಪ್ರಚೋದನೆ, ಐಸಿಸ್, ಅಲ್‍ಖೈದಾ ವಿಡಿಯೋ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಹುತೇಕ ನಗದು ವ್ಯವಹಾರವನ್ನೇ ಮಾಡುತ್ತಿದ್ದ ಶಾರೀಕ್ ದಿನವಿಡೀ ಮೊಬೈಲ್‍ನಲ್ಲೇ ವಿಡಿಯೋಗಳನ್ನು ನೋಡುತ್ತಿದ್ದ. ಮನೆಯವರಿಗೆ ಟಿವಿ ನೋಡಲೂ ಬಿಡುತ್ತಿರಲಿಲ್ಲ. 4 ವರ್ಷಗಳಿಂದ ಈ ರೀತಿ ವಿಚಿತ್ರವಾಗಿ ವರ್ತಿಸುತ್ತಿದ್ದ ಎಂದು ಶಾರೀಕ್ ಕುಟುಂಬಸ್ಥರು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.
ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ಅತೀ ಮುಖ್ಯ ಸಾಕ್ಷಿ ಶಾರೀಕ್‍ನನ್ನು ಜೀವಂತವಾಗಿ ಉಳಿಸಲು ಪೊಲೀಸರು ಮತ್ತು ವೈದ್ಯರು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ.



