ಬೆಂಗಳೂರಿನಲ್ಲಿ 11 ತಿಂಗಳಲ್ಲಿ 173 ಕೋಟಿ ದಂಡ ಸಂಗ್ರಹ!

4 years ago

ಬೆಂಗಳೂರು: ಸಂಚಾರ ನಿಯಮಗಳನ್ನು ಉಲ್ಲಂಘಿಸಿ ದಂಡ ಕಟ್ಟದೇ ಓಡಾಡುವ ವಾಹನ ಸವಾರರ ಕಡಿವಾಣ ಹಾಕಲು ನಗರದ ಸಂಚಾರ ಪೊಲೀಸರು ವಾಹನಗಳ ಮೇಲಿರುವ ಬಾಕಿ ದಂಡ ಪಾವತಿಸಿದರೆ ಮಾತ್ರ ಫಿಟ್​ನೆಸ್ ಸರ್ಟಿಫಿಕೇಟ್ ಹಾಗೂ ಇನ್ಶುರೆನ್ಸ್ ನವೀಕರಣ ಪ್ರಮಾಣಪತ್ರ ನೀಡಲು ಆರ್​ಟಿಒ ಹಾಗೂ ವಿಮಾ ಕಂಪನಿಗಳೊಂದಿಗೆ ಮಾತುಕತೆಗೆ ಮುಂದಾಗಿದ್ದಾರೆ.

ನಗರದಲ್ಲಿ ವಾಹನಗಳ‌ ಸಂಖ್ಯೆ ‌ದಿನೇ ದಿನೆ ಹೆಚ್ಚಾಗುತ್ತಿದ್ದಂತೆ ಸಂಚಾರ ನಿಯಮಗಳ ಉಲ್ಲಂಘನೆ ಪ್ರಕರಣಗಳ‌‌ ಸಂಖ್ಯೆಯು ಹೆಚ್ಚಾಗುತ್ತಿದೆ. ವರ್ಷಕ್ಕೆ ಲಕ್ಷಾಂತರ ಉಲ್ಲಂಘನೆ ಪ್ರಕರಣಗಳು ದಾಖಲಾಗುತ್ತಿವೆ. ಸಂಚಾರ ನಿಯಮಗಳ ಉಲ್ಲಂಘನೆಗಳಿಂದ ಅಪಘಾತ ಪ್ರಕರಣಗಳ ಸಂಖ್ಯೆ ಅಧಿಕಗೊಂಡಿವೆ.

ನಿಯಮ ಪಾಲನೆ ಜೊತೆಗೆ ಸವಾರರಿಂದ ದಂಡ ಪಾವತಿಗಾಗಿ ನೂತನ ಯೋಜನೆ ರೂಪಿಸಿರುವ ಪೊಲೀಸರು ಎಫ್​ಸಿ ನವೀಕರಣ ಹಾಗೂ ಇನ್ಯೂರೆನ್ಸ್​ಗಾಗಿ ಬರುವ ಎಲ್ಲ ರೀತಿಯ ವಾಹನಗಳು ಕಡ್ಡಾಯವಾಗಿ ದಂಡ ಪಾವತಿಸಿದಾಗ ಮಾತ್ರ ಆರ್​ಟಿಒ ಹಾಗೂ ಟ್ರಾಫಿಕ್ ಪೊಲೀಸರು ಪ್ರಮಾಣಪತ್ರ ನೀಡಲಿದ್ದಾರೆ.

ದಂಡ ಪಾವತಿಸದೇ ಬಾಕಿಯಿದ್ದರೆ ಎಫ್​ಸಿ ಹಾಗೂ ಇನ್ಶೂರೆನ್ಸ್ ನವೀಕರಣ ಪತ್ರ ನೀಡದಂತೆ ಸಾರಿಗೆ ಇಲಾಖೆ ಹಾಗೂ ವಿಮಾ ಕಂಪೆನಿಗಳ ಪೊಲೀಸರು ಮಾತುಕತೆ ನಡೆಸುತ್ತಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಈ ಕಾರ್ಯ ಅನುಷ್ಠಾನಕ್ಕೆ ಬರಲಿದೆ.

96 ಲಕ್ಷ ಕೇಸ್ ದಾಖಲು: ತಂತ್ರಜ್ಞಾನಕ್ಕೆ ಒಗ್ಗಿಕೊಂಡಿರುವ ಪೊಲೀಸರು ಭೌತಿಕವಾಗಿ ಅಲ್ಲದೇ ಅತ್ಯಾಧುನಿಕ ಕ್ಯಾಮರಾಗಳ ನೆರವಿನಿಂದ ಕಳೆದ 11 ತಿಂಗಳಲ್ಲಿ 96 ಲಕ್ಷ ಸಂಚಾರ ನಿಯಮ ಉಲ್ಲಂಘನೆ ಕೇಸ್ ದಾಖಲಿಸಿದ್ದಾರೆ. ಕಳೆದ ವರ್ಷ 93 ಲಕ್ಷ ಕೇಸ್ ದಾಖಲಾಗಿತ್ತು‌. ದೇಶದ ಮಹಾನಗರಗಳಿಗೆ ಹೋಲಿಸಿದರೆ ದಾಖಲಾಗಿರುವ ಸಂಚಾರ ಉಲ್ಲಂಘನೆ ಪ್ರಕರಣಗಳು ಅಧಿಕವಾಗಿವೆ‌.

ದಂಡ ವಸೂಲಿಗೆ ವಿವಿಧ ರೀತಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ‌. ಮನೆ ಬಾಗಿಲಿಗೆ ರಶೀದಿ, ಮೊಬೈಲ್ ನಂಬರ್​ಗೆ ದಂಡ ಉಲ್ಲಂಘನಾ ಸಂದೇಶ ಕಳುಹಿಸಿ ತ್ವರಿತಗತಿಯಲ್ಲಿ ದಂಡ ಪಾವತಿಸುವಂತೆ ಮ‌ನವಿ ಮಾಡಿದರೂ ವಾಹನ ಸವಾರರು ತಲೆಕೆಡಿಸಿಕೊಳ್ಳುತ್ತಿಲ್ಲ. ಈ ನಡುವೆ ಕಳೆದ 11 ತಿಂಗಳಲ್ಲಿ 173 ಕೋಟಿ ದಂಡ ಪಾವತಿಸಿಕೊಳ್ಳಲಾಗಿದೆ.

600 ಕೋಟಿ ದಂಡ ಬಾಕಿ: ಆದ್ಯಾಗೂ ಇದುವರೆಗೂ ಸುಮಾರು 600 ಕೋಟಿಯಷ್ಟು ದಂಡ ಬಾಕಿ‌ ಉಳಿದಿದೆ. ದಂಡ ವಸೂಲಿ ಮಾಡಲು ಆನ್​ಲೈನ್​ನಲ್ಲೇ ದಂಡ ಕಟ್ಟುವ ಹಾಗೆ ವ್ಯವಸ್ಥೆ ಈಗಾಗಲೇ ಮಾಡಲಾಗಿದೆ.‌ ಇದರೊಂದಿಗೆ ಹಳದಿ ಹಾಗೂ ಬಿಳಿ ಬೋರ್ಡ್​ಗಳಿರುವ ವಾಹನಗಳ ಮೇಲಿರುವ ದಂಡ ವಸೂಲಿ ಮಾಡಲು ಸಂಚಾರಿ ಪೊಲೀಸರು ಹೊಸ ಯೋಜನೆ ರೂಪಿಸಿದ್ದಾರೆ.

Leave a Reply