ಮಂಡ್ಯ: ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ, ಸ್ಥಳದಲ್ಲೇ ಪರಿಹಾರ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ರೂಪಿಸಿರುವ ಮಹತ್ವಾಕಾಂಕ್ಷಿ ‘ಪ್ರಜಾಸೇವಾ ಆಂದೋಲನ’ದ ಪೂರ್ವಭಾವಿ ಸಭೆಯನ್ನು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ನಡೆಸಿದರು.
- ಪ್ರಜಾಸೇವಾ ಆಂದೋಲನ ಪೂರ್ವಭಾವಿ ಸಭೆ ನಡೆಸಿದ ದರ್ಶನ್ ಪುಟ್ಟಣ್ಣಯ್ಯ
- ದಲಿತರು ಎಲ್ಲಿಗೇ ಭೇಟಿ ನೀಡಿದರೂ ಅಲ್ಲಿ ಶುದ್ಧೀಕರಣ ಮಾಡುವುದು ತಪ್ಪು: ಆರ್.ಅಶೋಕ
- ಕೆಪಿಎಸ್ಸಿ ಸದಸ್ಯರು ಮತ್ತು ಅಧ್ಯಕ್ಷರ ಆಯ್ಕೆಯಲ್ಲಿ ಬೇಕಿದೆ ಪಾರದರ್ಶಕತೆ
- ವಿದೇಶಿ ವೇದಿಕೆಯಲ್ಲಿ ಕೇಳಿಸುವ ಭಾವೈಕ್ಯತೆಯ ಭಾಷೆ ಭಾರತದ ಬೀದಿಗಳಲ್ಲೂ ಕೇಳಿಸಬೇಕು: ಬಿ ಕೆ ಹರಿಪ್ರಸಾದ್
- ಅಮಾಯಕ ಮುಸ್ಲೀಮರು, ದಲಿತರು, ಆದಿವಾಸಿ ಸಮುದಾಯಗಳ ಪಾಡೇನು ಆಗಿರಬಹುದು?
ಪಾಂಡವಪುರ ತಾಲೂಕು ಕಚೇರಿಯಲ್ಲಿ ನಡೆದ ‘ಪ್ರಜಾಸೇವಾ ಆಂದೋಲನ’ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ದರ್ಶನ್ ಪುಟ್ಟಣ್ಣಯ್ಯ, ಸಾರ್ವಜನಿಕರಿಗೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನೂ ಒದಗಿಸಲು ನಾವೆಲ್ಲ ಸಿದ್ಧರಾಗಿರಬೇಕು. ಪ್ರತಿಯೊಂದು ಪ್ರಜಾಸೇವಾ ಆಂದೋಲನ ನಡೆಯುವ ಶನಿವಾರದಂದು ಸಂಬಂಧಪಟ್ಟ ಎಲ್ಲ ಇಲಾಖೆಗಳ ಅಧಿಕಾರಿಗಳೂ ಹಾಜರಿರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕರ್ನಾಟಕ ಸರ್ಕಾರದ ಸಾರ್ವಜನಿಕ ಕುಂದುಕೊರತೆಗಳ ನಿವಾರಣಾ ವ್ಯವಸ್ಥೆಯೇ iPGRS (Integrated Public Grievance Redressal System – ಸಂಯೋಜಿತ ಸಾರ್ವಜನಿಕ ಕುಂದುಕೊರತೆಗಳ ಪರಿಹಾರ ವ್ಯವಸ್ಥೆ) ಅಡಿಯಲ್ಲಿ ಸದ್ಯಕ್ಕೆ ಬರುತ್ತಿರುವ ದೂರುಗಳ ಸಂಖ್ಯೆ ಎಷ್ಟು ಎಂದು ಅಧಿಕಾರಿಗಳನ್ನು ದರ್ಶನ್ ಪುಟ್ಟಣ್ಣಯ್ಯ ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಅಧಿಕಾರಿಗಳು ಕನಿಷ್ಠ ಸಂಖ್ಯೆಯಲ್ಲಿ ದೂರುಗಳು ದಾಖಲಾಗುತ್ತಿವೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಕಡಿಮೆ ಸಂಖ್ಯೆಯಲ್ಲಿ ದೂರು ದಾಖಲಾಗಲು ಕಾರಣವೇನು ಎಂದು ಪ್ರಶ್ನಿಸಿದರು. ಜೊತೆಗೆ, ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಜಾಸೇವಾ ಆಂದೋಲನ ಯೋಜನೆ ಕುರಿತು ಸರ್ಕಾರದ ಕಾರ್ಯದರ್ಶಿಗಳೊಂದಿಗೆ ಬಹಳ ಹೊತ್ತು ಚರ್ಚೆ ನಡೆಸಿದ್ದೇನೆ. ಈ ಯೋಜನೆ ಕಾರ್ಯರೂಪಕ್ಕೆ ಬರುವುದು ತುಂಬಾ ಕಷ್ಟ. ಏಕೆಂದರೆ, ಅರ್ಜಿಗಳನ್ನು ಕೊಡುತ್ತೇವೆ, ಅರ್ಜಿಗಳನ್ನು ಪಡೆದುಕೊಳ್ಳುತ್ತೇವೆ. ನಾವು ಕೆಲಸ ಮಾಡಬೇಕು, ನೀವು ಕೆಲಸ ಮಾಡಬೇಕು ಎಂದರೆ ಆಗುವುದಿಲ್ಲ ಎಂದರು.
ಸರ್ಕಾರ ರೂಪಿಸುವ ಯೋಜನೆಯನ್ನು ಜನರಿಗೆ ತಲುಪಿಸುವುದು ಅಧಿಕಾರಿಗಳಾದ ನಿಮ್ಮ ಕರ್ತವ್ಯ. ಈ ಯೋಜನೆಯ ಯಶಸ್ಸಿಗೆ ನೀವೆಲ್ಲ ವಿವಿಧ ಇಲಾಖೆಗಳೊಂದಿಗೆ ಒಟ್ಟಿಗೆ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಕೆಲವು ಕೆಲಸಗಳಿಗೆ ವಿವಿಧ ಇಲಾಖೆಗಳೊಂದಿಗೆ ಅವಲಂಬನೆ ಇದೆ. ಒಂದೇ ಇಲಾಖೆಯಲ್ಲಿ ಕೆಲಸ ಮಾಡುವುದು ಸುಲಭ. ವಿವಿಧ ಇಲಾಖೆಗಳ ಮೇಲೆ ಅವಲಂಬನೆ ಇರುವುದರಿಂದ ಅದನ್ನು ಪರಿಹರಿಸುವುದು ಹೇಗೆ ಎಂದು ನೀವೆಲ್ಲ ಯೋಚಿಸಿ ಎಂದು ಸಲಹೆ ನೀಡಿದರು.
iPGRSನಲ್ಲಿ ಬಂದ ದೂರುಗಳಿಗೆ ನೀವು ಬೇರೆ ಇಲಾಖೆಗಳ ಮೇಲೆ ಅವಲಂಬಿತರಾಗಬೇಕಾಗಿದೆ ಎಂದು ಹೇಳುತ್ತೀರಿ. ಆದರೆ ಇಷ್ಟೆಲ್ಲ ಹಣ ಕರ್ಚು ಮಾಡಿ ಜಾರಿಗೆ ತರಲು ಯತ್ನಿಸುತ್ತಿರುವ ಯೋಜನೆ ವ್ಯರ್ಥವಾಗುತ್ತದೆ. ಆದ್ದರಿಂದ ಈ ಸಮಸ್ಯೆಗಳನ್ನು ಪರಿಹರಿಸಲು ನಿಮ್ಮ ಸಲಹೆಗಳನ್ನು ಕೊಡಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು.
ಈ ವೇಳೆ ಕೆಲವು ಇಲಾಖೆಗಳ ಅಧಿಕಾರಿಗಳು ನೀಡಿದ ಸಲಹೆಗಳ ಸಾಧಕ ಮತ್ತು ಬಾಧಕಗಳನ್ನು ಕುರಿತು ವಿವರವಾಗಿ ಚರ್ಚಿಸಿದರು. ಯೋಜನೆಗಳಿಗೆ ಚಾಲನೆ ನೀಡಲಾಗುತ್ತದೆ. ಆದರೆ ಅದನ್ನು ಸಂಪೂರ್ಣಗೊಳಿಸಲು ವ್ಯವಸ್ಥೆ ಬೆಂಬಲಿಸುವುದಿಲ್ಲ. ಇದೇ ಸಮಸ್ಯೆ. ನಿಮ್ಮ ನಿಮ್ಮ ಇಲಾಖೆಗಳಲ್ಲಿ ಸಮಸ್ಯೆ ಪರಿಹರಿಸಲು ಮಾಡಬೇಕಾದ ಕೆಲಸಗಳನ್ನು ಚರ್ಚಿಸಿ. ಸರ್ಕಾರದ ಯೋಜನೆಯನ್ನು ನೆಲಮಟ್ಟದಲ್ಲಿ ತಲುಪಿಸಲು ಇರುವ ಸಮಸ್ಯೆಗಳನ್ನು ಪರಿಹರಿಸಿ. ಹೇಗಾದರೂ ಯೋಜನೆಯನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡಿ ಎಂದು ಸೂಚನೆ ನೀಡಿದರು.
ಶನಿವಾರ ನಡೆಯುವ ಪ್ರಜಾಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಯಾವೆಲ್ಲ ಇಲಾಖೆಗಳಿಗೆ ಸಂಬಂಧಿಸಿದ ಎಷ್ಟೆಲ್ಲ ಮನವಿಗಳು ಬಂದಿವೆ ಎಂಬ ಮಾಹಿತಿಯನ್ನು ನನಗೆ ಕೊಡಿ. ಈ ಬಾರಿ ಜನರ ಸಾಮಾನ್ಯ ಸಮಸ್ಯೆಗಳೇನು ಎಂಬುದರ ಕುರಿತು ನಿಗಾ ವಹಿಸಿ. ಪ್ರತಿಯೊಂದು ವಿಭಾಗಕ್ಕೂ ಸಂಬಂಧಿಸಿದಂತೆ ಬಂದ ಮನವಿಗಳ ಕುರಿತು ಮಾಹಿತಿ ಸಿಕ್ಕರೆ ಆಟೋಮೇಟ್ ಮಾಡಿ ಸೇವೆಯನ್ನು ಬೇಗ ಒದಗಿಸಲು ಸಾಧ್ಯವಾಗುತ್ತದೆ ಎಂದರು.
ರಾಜ್ಯ ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನು ನೋಡಿದ್ದೇನೆ. ನಾವು ಈಗಾಗಲೇ ಮೇಲುಕೋಟೆ ವಿಧಾನಸಭೆ ವ್ಯಾಪ್ತಿಯಲ್ಲಿ ನಡೆಸಿರುವ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಯೋಜನೆಯಂತೆ ಇದೆ. ಎಷ್ಟೋ ಜನರಿಗೆ ಬರೆಯಲು ಬರುವುದಿಲ್ಲ. ಆದ್ದರಿಂದ ಅಗತ್ಯ ಸಿಬ್ಬಂದಿಯನ್ನು ಬಳಸಿಕೊಳ್ಳಿ ಎಂದರು.
ಏನಿದು ಪ್ರಜಾಸೇವಾ ಆಂದೋಲನ?: ಉದ್ದೇಶ ರಾಜ್ಯದ ಜನತೆಯ ಅಹವಾಲುಗಳನ್ನು ಆಲಿಸಿ, ಅವರ ಮನೆ ಬಾಗಿಲಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ಮೂಲಕ ತಾಲೂಕು ಮತ್ತು ಹೋಬಳಿ ಮಟ್ಟದಲ್ಲೇ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದು ಈ ಆಂದೋಲನದ ಮುಖ್ಯ ಉದ್ದೇಶವಾಗಿದೆ. ಇದರೊಂದಿಗೆ ಸಾರ್ವಜನಿಕರು ತಮ್ಮ ಸಮಸ್ಯೆಗಳ ನಿವಾರಣೆಗಾಗಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಿ ಸ್ಥಳದಲ್ಲೇ ಸೇವೆ ಒದಗಿಸುವುದಾಗಿದೆ.
ಸ್ವರೂಪ ಮತ್ತು ಕಾರ್ಯನಿರ್ವಹಣೆ ಸಭೆಗಳ ಆಯೋಜನೆ: ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಯಾವುದೇ ವಿಧಾನಸಭಾ ಕ್ಷೇತ್ರದ ಶಾಸಕರ ನೇತೃತ್ವದಲ್ಲಿ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ನಿಗದಿತ ಶನಿವಾರಗಳಂದು ಪ್ರಜಾಸೇವಾ ಆಂದೋಲನ ಸಭೆಗಳನ್ನು ಆಯೋಜಿಸಲಾಗುತ್ತದೆ.
ಒಳಗೊಂಡಿರುವ ಇಲಾಖೆಗಳು ಹಾಗೂ ಸೌಲಭ್ಯಗಳು: ಪಿಂಚಣಿ ಯೋಜನೆಗಳು (ವಿಧವಾ ವೇತನ, ಅಂಗವಿಕಲರ ಮಾಸಾಶನ, ಸಂಧ್ಯಾ ಸುರಕ್ಷಾ), ಪಹಣಿ ತಿದ್ದುಪಡಿ, ಪೋಡಿ, ಖಾತೆ ಬದಲಾವಣೆ, ವಸತಿ/ಮನೆ ಹಂಚಿಕೆ, ಗ್ಯಾರಂಟಿ ಯೋಜನೆಗಳು (ಗೃಹ ಲಕ್ಷ್ಮಿ, ಗೃಹ ಜ್ಯೋತಿ, ಶಕ್ತಿ, ಅನ್ನಭಾಗ್ಯ, ಯುವನಿಧಿ), ಹಾಗೂ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಕುಂದುಕೊರತೆಗಳ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ.
ಅರ್ಜಿ ಸಲ್ಲಿಕೆ ಮತ್ತು ಸ್ವೀಕೃತಿ: ಸಾರ್ವಜನಿಕರು ನಿಗದಿತ ಅರ್ಜಿ ನಮೂನೆಯ ಮೂಲಕ ತಮ್ಮ ಅಗತ್ಯ ದಾಖಲೆಗಳೊಂದಿಗೆ ಸಭೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು, ಆನ್ಲೈನ್ ಸ್ವೀಕೃತಿ ಪತ್ರವನ್ನು ನೀಡಲಾಗುತ್ತದೆ.
ವಿಲೇವಾರಿ ಮತ್ತು ಮೇಲ್ವಿಚಾರಣೆ: ಸಭೆಗಳಲ್ಲಿ ಸ್ವೀಕರಿಸಲಾದ ಅರ್ಜಿಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಲು ಆನ್ಲೈನ್ ಪೋರ್ಟಲ್ ವ್ಯವಸ್ಥೆಯನ್ನು ಹಾಗೂ ಸ್ವಯಂಚಾಲಿತ ಮೇಲ್ವಿಚಾರಣಾ ವ್ಯವಸ್ಥೆಯನ್ನು (Escalation Matrix) ಕಲ್ಪಿಸಲಾಗಿದೆ.
ಅನುದಾನ ಮತ್ತು ಪ್ರಚಾರ: ಸಭೆಯ ಯಶಸ್ವಿ ನಿರ್ವಹಣೆಗಾಗಿ ತಾಲೂಕು ಮತ್ತು ಹೋಬಳಿ ಮಟ್ಟದ ಸಭೆಗಳಿಗೆ ಜಿಲ್ಲಾಡಳಿತದಿಂದ ನಿರ್ದಿಷ್ಟ ಅನುದಾನವನ್ನು ಒದಗಿಸಲಾಗಿದ್ದು, ಸಾರ್ವಜನಿಕರಿಗೆ ಮಾಹಿತಿ ನೀಡಲು ಪ್ರಚಾರ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ.




