ಕಿಚ್ಚ ಸುದೀಪ್‌ರಿಂದ ಅಭಿಮಾನಿಗಳಿಗೆ ಭಾವುಕ ಪತ್ರ

14 hours ago

30 ವರ್ಷಗಳ ಪಯಣ, ಸಿಂಹದ ಹೆಜ್ಜೆ ಹಾಗೂ ಹುಟ್ಟುಹಬ್ಬದ ಮಹತ್ವದ ನಿರ್ಧಾರ!

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ತಮ್ಮ ಮೂವತ್ತು ವರ್ಷಗಳ ಸಿನಿಪಯಣದ ಸಂಭ್ರಮದ ನಡುವೆ, ಅಭಿಮಾನಿಗಳಿಗೆ ವಿಶೇಷವಾದ ಹಾಗೂ ಭಾವನಾತ್ಮಕವಾದ ಪತ್ರವೊಂದನ್ನು ಬರೆದಿದ್ದಾರೆ. ತಮ್ಮ ಹುಟ್ಟುಹಬ್ಬ, ಮುಂದಿನ ಸಿನಿಮಾಗಳ ತಯಾರಿಕೆ ಹಾಗೂ ಅಭಿಮಾನಿಗಳ ಅಪಾರ ಪ್ರೀತಿಯ ಕುರಿತು ಸುದೀಪ್ ಈ ಪತ್ರದಲ್ಲಿ ಹಲವು ಮಹತ್ವದ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

30 ವರ್ಷಗಳ ಪ್ರೀತಿಯ ಸುರಿಮಳೆ: ಪತ್ರದ ಆರಂಭದಲ್ಲಿ ಅಭಿಮಾನಿಗಳನ್ನು ಆತ್ಮೀಯವಾಗಿ ಸ್ವಾಗತಿಸಿರುವ ಸುದೀಪ್, “ಸೆಪ್ಟೆಂಬರ್ 2 ಕೇವಲ ಒಂದು ದಿನಾಂಕ ಅಷ್ಟೇ, ಆದರೆ ಅದನ್ನು ಸಂಭ್ರಮವನ್ನಾಗಿ 30 ವರ್ಷಗಳಿಂದ ಬದಲಿಸಿದ ಅಪಾರ ಪ್ರೀತಿ ನಿಮ್ಮದು” ಎಂದು ಕೃತಜ್ಞತೆ ಸಲ್ಲಿಸಿದ್ದಾರೆ. ಪ್ರತಿ ಸಿನಿಮಾ, ‘ಬಿಗ್ ಬಾಸ್’ (Bigg Boss) ರಿಯಾಲಿಟಿ ಶೋ ಹಾಗೂ ಯಾವುದೇ ಕಾರ್ಯಕ್ರಮವಿರಲಿ, ಅಭಿಮಾನಿಗಳು ತೋರಿಸಿದ ಚಪ್ಪಾಳೆ, ಸಿಳ್ಳೆ ಮತ್ತು ಪ್ರೋತ್ಸಾಹವೇ ತನಗೆ ಶ್ರೀರಕ್ಷೆ ಎಂದು ಬಣ್ಣಿಸಿದ್ದಾರೆ.

ಈ ಬಾರಿಯ ಹುಟ್ಟುಹಬ್ಬ ಸರಳ – ಕಾರಣವೇನು?: ಈ ವರ್ಷದ ಹುಟ್ಟುಹಬ್ಬವನ್ನು ತಾನು ಆಚರಿಸಿಕೊಳ್ಳುತ್ತಿಲ್ಲ ಎಂದು ಸ್ಪಷ್ಟಪಡಿಸಿರುವ ನಟ ಸುದೀಪ್, ಅದಕ್ಕೆ ಕೆಲವು ಬಲವಾದ ಹಾಗೂ ವೈಯಕ್ತಿಕ ಕಾರಣಗಳಿವೆ ಎಂದಿದ್ದಾರೆ. “ಸಂಭ್ರಮಗಳನ್ನು ತೆರೆದ ಹೃದಯದಿಂದ ಆಚರಿಸಲು ಸಾಧ್ಯವಾಗದಿದ್ದರೆ ಅದು ಸಂಭ್ರಮವೇ ಅಲ್ಲ ನನಗೆ” ಎಂದು ಬರೆಯುವ ಮೂಲಕ ತಮ್ಮ ಮನದ ಮಾತನ್ನು ಬಿಚ್ಚಿಟ್ಟಿದ್ದಾರೆ. ಅಲ್ಲದೆ, ಅಂದು ಮನೆಯ ಬಳಿ ಯಾರಿಗೂ ಲಭ್ಯವಾಗುವುದಿಲ್ಲವೆಂದೂ, ಸತ್ಕಾರಗಳು ಗದ್ದಲವಾಗಬಾರದು ಎಂದು ವಿನಂತಿಸಿಕೊಂಡಿದ್ದಾರೆ. ಅಭಿಮಾನಿಗಳು ನೀಡುವ ಉಡುಗೊರೆಗಳು ಸಮಾಜಕ್ಕೆ ಸದ್ಬಿನಿಯೋಗವಾಗಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.

ಸಿಂಹ ಸುಮ್ಮನೆ ಕುಳಿತಿದೆ ಅಂದರೆ ಸುಸ್ತಾಗಿದೆ ಅಂತಲ್ಲ, ಮುಂದಿನ ಬೇಟೆಗೆ ರೆಡಿಯಾಗಿದೆ ಎಂದರ್ಥ: ಕನ್ನಡ ಚಿತ್ರರಂಗಕ್ಕೆ ಬರೋಬ್ಬರಿ ಮೂವತ್ತು ವರ್ಷಗಳನ್ನು ಅರ್ಪಿಸಿಕೊಂಡಿರುವ ಸುದೀಪ್, ಸಿನಿಮಾ ತನ್ನ ಪರಮ ಕಾಯಕ ಎಂದು ಹೇಳಿಕೊಂಡಿದ್ದಾರೆ. ಕೆಲಸದಲ್ಲಿ ಕೆಲವೊಮ್ಮೆ ತಡವಾಗಬಹುದು, ಅದಕ್ಕೂ ಕಾರಣಗಳಿರುತ್ತವೆ ಎಂದಿರುವ ಅವರು, ತಮ್ಮದೇ ಸಿನಿಮಾದ ಜನಪ್ರಿಯ ಸಂಭಾಷಣೆಯನ್ನು ಉಲ್ಲೇಖಿಸಿ ಅಭಿಮಾನಿಗಳಲ್ಲಿ ಹೊಸ ಉತ್ಸಾಹ ತುಂಬಿದ್ದಾರೆ: “ಸಿಂಹ ಸುಮ್ಮನೆ ಕುಳಿತಿದೆ ಅಂದರೆ ಸುಸ್ತಾಗಿದೆ ಅಂತಲ್ಲ, ಮುಂದಿನ ಬೇಟೆಗೆ ರೆಡಿಯಾಗಿದೆ ಎಂದರ್ಥ” ಎಂದಿದ್ದಾರೆ.

ಕನ್ನಡವೇ ನನ್ನ ಸತ್ಯ: ಯಾವ ವೇದಿಕೆಗೆ ಹೋದರೂ ಕನ್ನಡಿಗರನ್ನು ರಂಜಿಸಲು ಮತ್ತು ಕನ್ನಡವನ್ನು ಕುಣಿಸಲು ತಾವು ಸದಾ ಬದ್ಧಳಾಗಿರುವುದಾಗಿ ತಿಳಿಸಿರುವ ಸುದೀಪ್, “ಕನ್ನಡ ನನ್ನ ಸತ್ಯ.. ಕನ್ನಡದಿಂದ ನಾನು ನಿತ್ಯ” ಎನ್ನುವ ಸಾಲುಗಳ ಮೂಲಕ ಕನ್ನಡ ಭಾಷೆ ಹಾಗೂ ನಾಡಿನ ಮೇಲಿರುವ ತಮ್ಮ ಅಚಲ ಭಕ್ತಿಯನ್ನು ಸಾರಿದ್ದಾರೆ. ಜೀವನದಲ್ಲಿ ಏನೇ ನೋವು-ಮುಳ್ಳುಗಳಿರಲಿ, ಅಭಿಮಾನಿಗಳ ಪ್ರೀತಿಯೇ ತನಗೆ ದಾರಿದೀಪದ ಮೈಲಿಗಲ್ಲು ಎಂದು ಸ್ಮರಿಸಿದ್ದಾರೆ.

ಕೊನೆಯಲ್ಲಿ “Luv u all always…” ಎಂದು ಬರೆಯುವ ಮೂಲಕ ಸಮಸ್ತ ಕನ್ನಡಿಗರಿಗೆ ಮತ್ತು ತಮ್ಮ ನೆಚ್ಚಿನ ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

Leave a Reply