ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ನಟ ಕಿಚ್ಚ ಸುದೀಪ್ ಬೆಂಬಲ ವಿಚಾರ ಇದೀಗ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನವನ್ನೇ ಸೃಷ್ಟಿಸಿದೆ ಸುದೀಪ್ ಬೆಂಬಲದಿಂದ ಬಿಜೆಪಿ ಬೀರುತ್ತಿದ್ದರೆ ಸೋಲುವ ಭೀತಿಯಿಂದ ನಟನನ್ನು ಪ್ರಚಾರಕ್ಕೆ ಬಳಸುವ ಮೂಲಕ ಬಿಜೆಪಿ ದಿವಾಳಿತನ ತಲುಪಿದೆ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಬಿಜೆಪಿಗೆ ನಟ ಸುದೀಪ್ ಬೆಂಬಲ ನೀಡುತ್ತಿರುವ ವಿಚಾರ ಪ್ರಕಟವಾಗುತ್ತಿದ್ದಂತೆ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲ ರಾಜ್ಯದ ಭವಿಷ್ಯ ನಿರ್ಧರಿಸುವವರು ಸಿನಿಮಾ ನಟರಲ್ಲ ಬದಲಿಗೆ ಬುದ್ಧಿವಂತ ಮತದಾರರು ಎಂದು ಹೇಳಿದ್ದಾರೆ.
ಬಿಜೆಪಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಿಬಿಐ ಐಟಿ ಇಡಿ ಸೇರಿದಂತೆ ಎಲ್ಲ ಸ್ವಯತ ಸಂಸ್ಥೆಗಳನ್ನು ಬಳಕೆ ಮಾಡಿದೆ ಆದರೂ ಗೆಲುವು ಸಾಧ್ಯವಿಲ್ಲ ಎಂಬ ವರದಿಗಳ ಹಿನ್ನೆಲೆಯಲ್ಲಿ ಇದೀಗ ಪ್ರಚಾರಕ್ಕೆ ಸಿನಿಮಾ ನಟರನ್ನು ಬಳಸಲು ಮುಂದಾಗಿದೆ ಎಂದು ಲೇವಡಿ ಮಾಡಿದ್ದಾರೆ.
ಮತ್ತೊಂದೆಡೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಟ ಸುದೀಪ್ ಬಿಜೆಪಿಗೆ ಬೆಂಬಲ ನೀಡಲು ನಮ್ಮ ಅಭ್ಯಂತರವೇನಿಲ್ಲ. ಸಿನಿಮಾ ನಟರು ಸಂಪೂರ್ಣ ಸ್ವತಂತ್ರರಿದ್ದು ಅವರು ಯಾರಿಗೆ ಬೇಕಾದರೂ ಬೆಂಬಲ ನೀಡಬಹುದಾಗಿದೆ ಎಂದು ಹೇಳಿದ್ದಾರೆ.
ನಟ ಸುದೀಪ್ ಜೊತೆಗೆ ತಾವು ಉತ್ತಮ ಬಾಂಧವ್ಯ ಹೊಂದಿದ್ದೇನೆ ಅವರು ನನ್ನ ಬಗ್ಗೆ ಗೌರವ ಹೊಂದಿದ್ದಾರೆ ಅದೇ ರೀತಿ ಬಿಜೆಪಿ ನಾಯಕರ ಬಗ್ಗೆಯೂ ಗೌರವ ಹೊಂದಿದ್ದು ಪ್ರಚಾರಕ್ಕೆ ಮುಂದಾಗಿರಬಹುದು ಇದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ ಎಂದು ಹೇಳಿದ್ದಾರೆ.
ಇದರ ಬೆನ್ನಲ್ಲೇ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ರಾಜ್ಯದಲ್ಲಿ ಮತದಾರರು ಬಿಜೆಪಿಯ ನಾಯಕರು ಮತ್ತು ಪ್ರಧಾನಿ ಮೋದಿ ಅವರ ಮುಖ ನೋಡಿ ಮತ ಹಾಕುವುದಿಲ್ಲ ಎನ್ನುವುದು ಇದೀಗ ಸಾಬೀತಾಗಿದೆ ಹೀಗಾಗಿ ಬಿಜೆಪಿ ನಾಯಕರು ಗೆಲುವು ಸಾಧಿಸುವ ದೃಷ್ಟಿಯಿಂದ ಪ್ರಚಾರಕ್ಕಾಗಿ ನಟ ಕಿಚ್ಚ ಸುದೀಪ್ ಅವರನ್ನು ಬಳಸುತ್ತಿದೆ ಎಂದು ಟೀಕಿಸಿದೆ.




