ಸೊರಗುತ್ತಿರುವ ಪ್ರಜಾಪ್ರಭುತ್ವ: ಜಂತರ್ ಮಂತರ್ ನಂತರದ ಭಾರತ

10 hours ago

ಸೊರಗುತ್ತಿರುವ ಪ್ರಜಾಪ್ರಭುತ್ವ: ಜಂತರ್ ಮಂತರ್ ನಂತರದ ಭಾರತ

ಇಂಗ್ಲಿಷ್‌ ಮೂಲ: ಪ್ರೊ.ರಾಮ್‌ ಪುನಿಯಾನಿ ಕನ್ನಡಕ್ಕೆ: ಡಾ.ಪ್ರದೀಪ್‌ ಮಾಲ್ಗುಡಿ

ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಸರಣಿ ಪ್ರತಿಭಟನೆಗಳು ನಮ್ಮ ರಾಜಕೀಯ ವ್ಯವಸ್ಥೆಯನ್ನು ಬುಡಸಮೇತ ಅಲುಗಾಡಿಸಿಸಿಬಿಟ್ಟಿವೆ. ಆಡಳಿತಾರೂಢ ಪಕ್ಷದ ಧೋರಣೆಗಳು ಈ ಪ್ರತಿಭಟನೆಗಳಿಗೆ ಕಾರಣವಾಗಿದ್ದರೂ, ಸರ್ಕಾರದ ದಬ್ಬಾಳಿಕೆ ವಿರುದ್ಧ ಸಮಾಜದ ಒಳಗಿದ್ದ ಆಳವಾದ ಅಸಮಾಧಾನವೇ ಈ ಪ್ರತಿಭಟನೆಗಳ ಮೂಲ ಸ್ವರೂಪವಾಗಿತ್ತು. ಮೇಲ್ನೋಟಕ್ಕೆ ಇದು ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಹೋರಾಟದಂತೆ ಕಂಡರೂ, ನಮ್ಮ ಸಾಮಾಜಿಕ-ರಾಜಕೀಯ ವ್ಯವಸ್ಥೆಯಲ್ಲಿನ ಗಂಭೀರ ವೈಫಲ್ಯಗಳೇ ಈ ಪ್ರತಿಭಟನೆಗಳು ಈ ಮಟ್ಟಕ್ಕೆ ಬೆಳೆಯಲು ಕಾರಣವಾದವು. ಸರ್ಕಾರದ ಕಡೆಯಿಂದ ಪೆಲೆಟ್ ಗನ್ ಮತ್ತು ಬಂದೂಕುಗಳನ್ನು ಬಳಸುವಂತೆ ನೀಡಿದ ಆದೇಶಗಳು ಜನರಲ್ಲಿ ತೀವ್ರ ತಿರಸ್ಕಾರವನ್ನು ಹುಟ್ಟುಹಾಕಿದವು. ವಿಷಯ ಎಷ್ಟು ಗಂಭೀರವಾಗಿತ್ತೆಂದರೆ, ಆಡಳಿತ ಪಕ್ಷದ ಪ್ರಮುಖ ನಾಯಕರೂ, ಪ್ರಧಾನಿ ಮತ್ತು ಗೃಹಸಚಿವರು ಸಂಸತ್ ಅಧಿವೇಶನಕ್ಕೆ ಹಾಜರಾಗಲು ಸಹ ಧೈರ್ಯ ಮಾಡಲಿಲ್ಲ. ವಿಪಕ್ಷಗಳು ಸದನದಲ್ಲಿ ಚರ್ಚೆಗೆ ಅವಕಾಶ ನೀಡುತ್ತಿಲ್ಲ ಎಂಬ ಸುಳ್ಳು ಮರೆಮಾಚುವಿಕೆಯ ಹಿಂದೆ ಅವರು ಅಡಗಿಕೊಂಡರು.

ಈ ಪ್ರತಿಭಟನೆಗಳು ಮೂರು ವಿಭಿನ್ನ ಧ್ರುವಗಳನ್ನು ಹೊಂದಿದ್ದವು. ಆಡಳಿತ ವಿರೋಧಿಗಳು, ಎಡಪಂಥೀಯ ಒಲವುಳ್ಳ ಯುವಕರು ಮತ್ತು ಕಾಂಗ್ರೆಸ್ ನೇತೃತ್ವದ ಪ್ರತಿಭಟನೆಗಳು. ಇದರ ಪರಿಣಾಮ ಅದ್ಭುತವಾಗಿತ್ತು. ಈಗಿನ ಆಡಳಿತ ಸೃಷ್ಟಿಸಿದ್ದ ಭಯದ ವಾತಾವರಣವನ್ನು; ಇದನ್ನು ‘ಚುನಾಯಿತ ಸರ್ವಾಧಿಕಾರ’ ಎಂದು ಅತ್ಯಂತ ಸರಿಯಾಗಿ ಕರೆಯಬಹುದು. ಈ ಪ್ರತಿಭಟನೆಗಳು ಮುರಿದುಹಾಕಿದವು. ಈ ಹಿಂದೆ ಸರ್ಕಾರಿ ನೀತಿಗಳನ್ನು ಟೀಕಿಸುವವರನ್ನು ‘ದೇಶದ್ರೋಹಿಗಳು’ ಎಂದು ಹಣೆಪಟ್ಟಿ ಕಟ್ಟಿ, ಮಾನವ ಹಕ್ಕುಗಳ ಕಾರ್ಯಕರ್ತರ ದನಿಯನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿತ್ತು. ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಅವರು ಯಾವುದೇ ವಿಚಾರಣೆಯಿಲ್ಲದೆ ಆರು ವರ್ಷಗಳಿಂದ ಜೈಲಿನಲ್ಲಿರುವುದು ಭಾರತದಲ್ಲಿ ಮಾನವ ಹಕ್ಕುಗಳ ಸ್ಥಿತಿಗೆ ಹಿಡಿದ ಕನ್ನಡಿ. ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಕಾರ್ಯಕರ್ತರು ಮತ್ತು ಬುದ್ಧಿಜೀವಿಗಳನ್ನು ಬಂಧಿಸಿರುವುದು ಕೂಡ ಇದರ ಮತ್ತೊಂದು ಪ್ರತಿಬಿಂಬ. ಫಾಧರ್ ಸ್ಟಾನ್ ಸ್ವಾಮಿ ಅವರ ಸಾಂಸ್ಥಿಕ ಹತ್ಯೆ ಈ ವ್ಯವಸ್ಥೆಯ ಕ್ರೌರ್ಯದ ಸ್ವರೂಪ ತೋರಿಸುತ್ತದೆ.

ಪ್ರತಿಭಟನೆಗಳ ನಂತರ, ಜನರ ಮೇಲಿದ್ದ ನಿಷೇಧದ ಪರದೆ ಅಥವಾ ಭಯದ ವಾತಾವರಣ ಸ್ವಲ್ಪಮಟ್ಟಿಗೆ ಸಡಿಲಗೊಂಡಂತೆ ಕಾಣುತ್ತಿದೆ. ‘ಜೆನ್ ಆಲ್ಫಾ’ ಎಂದು ಕರೆಯಲ್ಪಡುವ ಹೊಸ ಪೀಳಿಗೆಯವರು ವಿವಿಧೆಡೆ ಪ್ರತಿಭಟನೆಗಳನ್ನು ಆರಂಭಿಸುತ್ತಿದ್ದಾರೆ. ‘ಗೋದಿ ಮೀಡಿಯಾ’ ಎಂದಿನಂತೆ ಇದ್ದರೂ, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ವೀಡಿಯೊಗಳು, ಟ್ವಿಟರ್ ಮತ್ತು ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳು ಸಮಾಜದ ನಿಜವಾದ ಕನ್ನಡಿಯಾಗಿ ಹೊರಹೊಮ್ಮುತ್ತಿವೆ. ಆರಂಭದಲ್ಲಿ ಈ ಸಂಪೂರ್ಣ ಪ್ರತಿಭಟನೆಯನ್ನು ದೇಶದ್ರೋಹಿಗಳು, ಭಯೋತ್ಪಾದಕರು ಮತ್ತು ಸರ್ವಾಧಿಕಾರಿಗಳು ಬಳಸುವ ಎಲ್ಲಾ ಬೈಗುಳಗಳಿಂದ ಹೀಯಾಳಿಸಲು ಆಡಳಿತ ಪ್ರಯತ್ನಿಸಿತ್ತು. ಆದರೆ ಪ್ರತಿಭಟನೆಯ ತೀವ್ರತೆ ಎಷ್ಟಿತ್ತೆಂದರೆ, ಬಿಜೆಪಿಯ ಮಾತೃಸಂಸ್ಥೆಯಾದ ಆರೆಸ್ಸೆಸ್ ಮತ್ತು ಬಜರಂಗದಳದಂತಹ ಸಂಘಟನೆಗಳು ತಮ್ಮ ಭಾಷೆಯನ್ನು ಬದಲಾಯಿಸಿ, ತಾವೇ ಪ್ರತಿಭಟನೆಯ ಬೆಂಬಲಿಗರೆಂಬಂತೆ ಬಿಂಬಿಸಿಕೊಳ್ಳಲು ಪ್ರಯತ್ನಿಸಿದವು. ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸುಮಾರು 2000 ಜನ ‘ಜೆನ್ ಝೀ’ ಯುವಕರನ್ನು ಭೇಟಿ ಮಾಡಿ ಪ್ರಜಾಪ್ರಭುತ್ವದ ಪಾಠ ಮಾಡಲು ಮುಂದಾದರು.

ಕುತೂಹಲಕಾರಿಯಾಗಿ, ಈ ಸಭೆಯಲ್ಲಿ ಒಬ್ಬರು “ಸ್ವಾತಂತ್ರ್ಯ ಬಂದು 52 ವರ್ಷಗಳಾದರೂ ಆರೆಸ್ಸೆಸ್ ಯಾಕೆ ತ್ರಿವರ್ಣ ಧ್ವಜವನ್ನು ಹಾರಿಸಿರಲಿಲ್ಲ?” ಎಂದು ಪ್ರಶ್ನಿಸಿದರು. ಅದಕ್ಕೆ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನಕ್ಕೆ ಸಂಬಂಧಿಸಿದ ಯಾವುದೋ ಒಂದು ಘಟನೆಯ ಕತೆಯನ್ನು ಹೇಳಿ ಆ ಮುಜುಗರದ ಪರಿಸ್ಥಿತಿಯಿಂದ ನುಣುಚಿಕೊಂಡರು. ಅದೃಷ್ಟವಶಾತ್, ಆರೆಸ್ಸೆಸ್ ಕಾರ್ಯಕರ್ತರು ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಕೃತಿಯನ್ನು ಯಾಕೆ ದಹಿಸಿದ್ದರು ಎಂದು ಕೇಳಲು ಅಲ್ಲಿ ಯಾರೂ ಇರಲಿಲ್ಲ! ಹೇಗಾದರೂ ಮಾಡಿ, ಅವರ ಅನುಯಾಯಿಗಳು ಇದನ್ನು ಪ್ರಜಾಪ್ರಭುತ್ವದ ದೊಡ್ಡ ಉದಾಹರಣೆ ಎಂದು ಸಂಭ್ರಮಿಸುತ್ತಿದ್ದಾರೆ. ಪ್ರತಿಭಟನೆಗಳು ಮಿತಿಮೀರಿದರೆ ಅದು ‘ಅರಾಜಕತೆಯ ವ್ಯಾಕರಣ’ಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಅವರ ಅನುಯಾಯಿಗಳು ಹೇಳುತ್ತಿದ್ದಾರೆ (ಆಡಳಿತಾರೂಢ ವ್ಯವಸ್ಥೆಯ ಲೆಕ್ಕಾಚಾರವನ್ನೇ ಬುಡಮೇಲು ಮಾಡಬಲ್ಲ ಪ್ರತಿಭಟನೆಗಳು). ಇಲ್ಲಿಯವರೆಗೆ ಸರ್ಕಾರದ ನೀತಿಗಳ ವಿರುದ್ಧದ ಪ್ರಮುಖ ಪ್ರತಿಭಟನೆಗಳನ್ನೆಲ್ಲಾ ಆರೆಸ್ಸೆಸ್ ಮತ್ತು ಅದರ ಬಾಲಸಂಘಟನೆಗಳು ಹತ್ತಿಕ್ಕಿವೆ ಅಥವಾ ಕಡೆಗಣಿಸಿವೆ ಎಂಬುದನ್ನು ನೆನಪಿಸಿಕೊಳ್ಳಬೇಕು.

ರೈತರ ಹೋರಾಟವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿತ್ತು. ಅಂತಿಮವಾಗಿ ಚುನಾವಣಾ ಕಾರಣಗಳಿಗಾಗಿ ಸರ್ಕಾರ ಮೂರು ಕೃಷಿ ಮಸೂದೆಗಳನ್ನು ಹಿಂಪಡೆಯುವವರೆಗೂ ಸುಮಾರು 600 ರೈತರು ತಮ್ಮ ಪ್ರಾಣ ಕಳೆದುಕೊಂಡಿದ್ದರು. ಶಾಹೀನ್ ಬಾಗ್ ಪ್ರತಿಭಟನೆಯಂತೂ ಹೆಚ್ಚು ನೋವಿನ ಸಂಗತಿ; ಅಲ್ಲಿ ಪ್ರತಿಭಟನೆಗಳನ್ನು ಕಡೆಗಣಿಸಲಾಯಿತು, ರಾಕ್ಷಸರಂತೆ ಬಿಂಬಿಸಲಾಯಿತು ಮತ್ತು ಆ ಪ್ರತಿಭಟನೆಯನ್ನು ಹತ್ತಿಕ್ಕಲು ಕೋಮು ಗಲಭೆಗಳನ್ನು ಸೃಷ್ಟಿಸಲಾಯಿತು. ಜೆಎನ್‌ಯು ಪ್ರತಿಭಟನೆಗಳನ್ನು ಹತ್ತಿಕ್ಕಲಾಯಿತು, ‘ತುಕ್ಡೆ ತುಕ್ಡೆ ಗ್ಯಾಂಗ್’ ಎಂದು ಬಿಂಬಿಸಲಾಯಿತು ಮತ್ತು ವಿಶ್ವವಿದ್ಯಾಲಯದ ಸ್ವರೂಪವನ್ನೇ ಬಲಪಂಥೀಯ ಅಡ್ಡೆಯಾಗಿ ಪರಿವರ್ತಿಸಲು ಪ್ರಯತ್ನಿಸಲಾಯಿತು.

ಹೀಗಾಗಿ, ಹಿಂದೂ ರಾಷ್ಟ್ರದ ಸಿದ್ಧಾಂತವನ್ನು ಹೊಂದಿರುವ ಆರೆಸ್ಸೆಸ್‌ಗೆ ಪ್ರಜಾಪ್ರಭುತ್ವದ ಮೌಲ್ಯಗಳಲ್ಲಿ ನಂಬಿಕೆಯಿಲ್ಲ. ಭಿನ್ನಮತೀಯರೊಂದಿಗೆ ಸಂವಾದ ನಡೆಸುವುದು ಅಲ್ಲಿನ ಸಾಮಾನ್ಯ ನಿಯಮವಲ್ಲ, ಬದಲಿಗೆ ಅನಿವಾರ್ಯ ಪರಿಸ್ಥಿತಿಯಲ್ಲಿ ಮಾತ್ರ ಮಾಡುವ ಕೆಲಸ (ಈ ಬಾರಿ ಭಾಗವತ್ ಅವರ ವರ್ತನೆಯಲ್ಲಿ ಇದು ಕಂಡುಬಂದಿದೆ). ಧರ್ಮದ ಹೆಸರಿನಲ್ಲಿ ರಾಷ್ಟ್ರೀಯತೆ ಪ್ರತಿಪಾದಿಸುವ ಪರಿಕಲ್ಪನೆಯೇ ಪ್ರಜಾಪ್ರಭುತ್ವದ ಮೂಲ ತತ್ವಗಳಿಗೆ ವಿರುದ್ಧವಾಗಿದೆ. ಆರೆಸ್ಸೆಸ್ ಆರಂಭದಿಂದಲೂ ಪ್ರಜಾಸತಾತ್ಮಕ ಸಂವಿಧಾನವನ್ನು ವಿರೋಧಿಸುತ್ತ ಬಂದಿದೆ. ಅದು ಎಲ್ಲಾ ಹಂತಗಳಲ್ಲೂ ಶ್ರೇಣೀಕೃತ ವ್ಯವಸ್ಥೆಯನ್ನು ನಂಬುತ್ತದೆ. ನಾವು ಈಗಾಗಲೇ ಜಾತಿ ಮತ್ತು ಲಿಂಗ ಶ್ರೇಣಿಯನ್ನು ಗುರುತಿಸುತ್ತಿದ್ದೇವೆ, ಆದರೆ ಕಳೆದ 12 ವರ್ಷಗಳಲ್ಲಿ ಆರ್ಥಿಕ ಶ್ರೇಣೀಕರಣ ತೀವ್ರಗೊಂಡಿದ್ದು, ಆರ್ಥಿಕ ಬಂಡವಾಳಶಾಹಿಗಳನ್ನು ಮತ್ತು ಸಮಾಜದ ಮೇಲ್ವರ್ಗದವರನ್ನು ಬಹಿರಂಗವಾಗಿ ಬೆಂಬಲಿಸಲಾಗುತ್ತಿದೆ. ಇಂತಹ ಸಿದ್ಧಾಂತಗಳಿಂದ ಮತ್ತು ರಾಷ್ಟ್ರೀಯತೆಯನ್ನು ಬಿಂಬಿಸುವವರಿಂದ ಪ್ರಜಾಪ್ರಭುತ್ವದ ಮೌಲ್ಯಗಳನ್ನು ನಿರೀಕ್ಷಿಸುವುದು ಸಂಪೂರ್ಣ ತಪ್ಪು.

ಸರ್ವಾಧಿಕಾರದಿಂದ ಪ್ರಜಾಪ್ರಭುತ್ವದ ಕಡೆಗೆ, ಭಾರತೀಯ ಸಂವಿಧಾನ, ಜಾತ್ಯತೀತತೆ ಮತ್ತು ಅಂತರ್ಗತ ರಾಷ್ಟ್ರೀಯತೆಯನ್ನು ಎತ್ತಿಹಿಡಿಯುವ ಪ್ರಜಾಸತಾತ್ಮಕ ಪ್ರತಿರೋಧವನ್ನು ನಾವು ನಿರೀಕ್ಷಿಸಬಹುದೇ? ಸದ್ಯದ ಪರಿಸ್ಥಿತಿಯಲ್ಲಿ ಪ್ರಜಾಸತಾತ್ಮಕ ಸಂಸ್ಥೆಗಳ ಸವಕಳಿಯನ್ನು ತಡೆಗಟ್ಟುವುದು ಮತ್ತು ಸಮಾಜದಲ್ಲಿ ಪ್ರಜಾಸತಾತ್ಮಕ ರೂಢಿಗಳನ್ನು ಪುನಃಸ್ಥಾಪಿಸುವುದು ದೊಡ್ಡ ಸವಾಲಾಗಿದೆ. ಜಂತರ್ ಮಂತರ್‌ನಿಂದ ಆರಂಭವಾದ ಪ್ರತಿಭಟನೆಗಳು ಇಡೀ ದೇಶವನ್ನು ಆವರಿಸಿಕೊಂಡಿವೆ. ಏಕೆಂದರೆ, ಸಾಮಾನ್ಯ ಜನರ ಮೂಲಭೂತ ಸಮಸ್ಯೆಗಳನ್ನು ಹತ್ತಿಕ್ಕಲಾಗಿದೆ. ಹವಾಮಾನದಲ್ಲಿ ಹೊಸ ಬದಲಾವಣೆಯ ಮುನ್ಸೂಚನೆಗಳು ಕಾಣಿಸಿಕೊಳ್ಳುತ್ತಿರಬಹುದು. ಆದರೆ, ಹಿಂದೂ ರಾಷ್ಟ್ರೀಯವಾದಿಗಳು ಬಿತ್ತಿರುವ ಆಳವಾದ ಕೋಮುವಾದದ ಬೇರುಗಳು ತುಂಬಾ ಗಟ್ಟಿಯಾಗಿವೆ. ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ವಿರುದ್ಧದ ದ್ವೇಷ ಸಮಾಜದಲ್ಲಿ ಆಳವಾಗಿ ಬೇರೂರಿದೆ. ಚುನಾವಣಾ ಆಯೋಗ, ಜಾರಿ ನಿರ್ದೇಶನಾಲಯ, ಸಿಬಿಐ, ಅಧಿಕಾರಶಾಹಿ, ಪೊಲೀಸ್ ಮತ್ತು ನಮ್ಮ ವಿಶ್ವವಿದ್ಯಾಲಯಗಳಲ್ಲಿ ಆರೆಸ್ಸೆಸ್ ಪ್ರಚಾರಕರ ನುಸುಳುವಿಕೆ ಬಹಳ ಆಳವಾಗಿದೆ. ಇವೆಲ್ಲವನ್ನೂ ಸರಿಪಡಿಸಬಹುದು, ಆದರೆ ನಮ್ಮ ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಶಾಂತಿ ಮತ್ತು ವೈವಿಧ್ಯತೆಯಿಂದ ಬೆಳೆದುಬಂದ ಭಾರತೀಯ ಸಂಸ್ಕೃತಿಯ ಬೇರುಗಳನ್ನು ಮರುಸ್ಥಾಪಿಸುವುದು ಸುಲಭವಲ್ಲ. ಆರೆಸ್ಸೆಸ್ ಕಳೆದ 100 ವರ್ಷಗಳಿಂದ ನಡೆಸಿರುವ ಕೆಲಸದಿಂದಾಗಿ ಈ ಸಂಸ್ಕೃತಿಗೆ ಸಾಕಷ್ಟು ಧಕ್ಕೆಯಾಗಿದೆ.

ಈ ಪ್ರತಿಭಟನೆಗಳು ಭಯದ ವಾತಾವರಣವನ್ನು ಸ್ವಲ್ಪ ಮಟ್ಟಿಗೆ ಕರಗಿಸಿರುವುದು ನಿಜಕ್ಕೂ ದೊಡ್ಡ ಸಮಾಧಾನದ ಸಂಗತಿಯಾಗಿದೆ. ಇದು ಸ್ವಾತಂತ್ರ್ಯ ಹೋರಾಟದಂತೆ ನಮ್ಮೆಲ್ಲ ಭಾರತೀಯರನ್ನು ಒಂದೇ ದಾರಿಯಲ್ಲಿ ಬಂಧಿಸುತ್ತದೆ. ಭಾರತೀಯ ಸಂವಿಧಾನಕ್ಕೆ ಬದ್ಧವಾಗಿರುವ ರಾಜಕೀಯ ಪಕ್ಷಗಳ ಅಧಿಕಾರವನ್ನು ಮರುಸ್ಥಾಪಿಸುವುದೇ ನಮ್ಮ ಮುಂದಿರುವ ಸವಾಲು. ಪ್ರಸ್ತುತ ಎಲ್ಲರೂ ಮುಕ್ತವಾಗಿ ಉಸಿರಾಡಬಹುದಾದ ವಾತಾವರಣ ನಿರ್ಮಾಣವಾಗಿರುವುದನ್ನು ಮೆಚ್ಚುತ್ತಲೇ, ಸರ್ಕಾರದ ಮೇಲಿನ ಕೋಮುವಾದಿ ಹಿಡಿತವನ್ನು ಎದುರಿಸುವ ದೊಡ್ಡ ಸವಾಲು ನಮ್ಮ ಮುಂದಿದೆ.

ಮುಂದಿನ ಹಾದಿ ಬಹಳ ಕಠಿಣವಾಗಿದೆ. ಆದರೆ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ರೂಪುಗೊಂಡ ‘ಭಾರತದ ಕಲ್ಪನೆ’ಯನ್ನು ಮರುಸ್ಥಾಪಿಸಲು ಇದು ಅತ್ಯಂತ ನಿರ್ಣಾಯಕವಾಗಿದೆ. ಭಯದ ಪರದೆಯನ್ನು ಸೀಳಿಬಂದ ಯುವಕರನ್ನು ನಾವು ಶ್ಲಾಘಿಸಬೇಕು ಮತ್ತು ಚುನಾವಣಾ ಹಂತದಲ್ಲಿ ಮಾಡಬೇಕಾದ ಕೆಲಸಗಳ ಬಗ್ಗೆಯೂ ಈಗಿನಿಂದಲೇ ಯೋಜನೆ ರೂಪಿಸಬೇಕು.

Leave a Reply