ಭಾರತ ದೇಶವನ್ನ ಇನ್ನೂರಕ್ಕೂ ಹೆಚ್ಚು ವರ್ಷಗಳ ಕಾಲ ಗುಲಾಮಗಿರಿಗೆ ದಬ್ಬಿ, ನಮ್ಮ ದೇಶದ ಅಪಾರ ಸಂಪತ್ತನ್ನು ಕೊಳ್ಳೆ ಹೊಡೆದ, ನಮ್ಮ ದೇಶದ ಸಾವಿರಾರು ಹೋರಾಟಗಾರರನ್ನ ಗಲ್ಲಿಗೇರಿಸಿದ, ಲಕ್ಷಾಂತರ ಜನರನ್ನ ಬಂಧಿಸಿದಂತಹ ದಬ್ಬಾಳಿಕೆ ನಡೆಸಿದ, ಇಂಗ್ಲೆಂಡಿನಲ್ಲಿ ಯಾವುದೋ ಕಾಲದಲ್ಲಿ ಇವರ ಪೂರ್ವಜರು ಭಾರತದಿಂದ ಹೋಗಿ ಇಂಗ್ಲೆಂಡಿನಲ್ಲಿ ನೆಲೆಸಿ, ಅಲ್ಲಿಯೇ ಆ ದೇಶದ ಸಂಸ್ಕೃತಿ ಮತ್ತು ವಿಚಾರಗಳನ್ನು ಒಪ್ಪಿಕೊಂಡು, ಅಲ್ಲಿಯ ನಾಗರೀಕರಾಗಿರುವ ಕುಟುಂಬದ ವ್ಯಕ್ತಿಯೊಬ್ಬರು, ನಮ್ಮ ದೇಶದ ಉದ್ಯಮಿಗಳ ಅಳಿಯ ಎನ್ನುವ ಕಾರಣಕ್ಕೆ ರಿಷಿ ಸುನಕ್ ಪ್ರಧಾನಿಯಾದಾಗ ಸಂಭ್ರಮಿಸುವ ಇಲ್ಲಿನ ಕೆಲವು ಮನಸ್ಥಿತಿಯವರಿಗೆ ಸೋನಿಯಾ ಗಾಂಧಿ ವಿದೇಶಿ ಮಹಿಳೆಯಾಗಿ ಕಾಣುತ್ತಾರೆ. ಯಾವುದೋ ಕಾಲದಲ್ಲಿ ಅಮೆರಿಕಕ್ಕೆ ಹೋಗಿ ಅಲ್ಲಿ ನೆಲೆಸಿ ಅಲ್ಲಿನ ಪ್ರಜೆಯಾಗಿ ಅಪ್ಪಿತಪ್ಪಿಯು ಭಾರತೀಯರು ಎಂದು ಹೇಳಿಕೊಳ್ಳದ, ಕುಟುಂಬದ ಕಮಲಾ ಹ್ಯಾರಿಸ್ ಅಮೆರಿಕದ ಉಪರಾಷ್ಟ್ರಪತಿಯಾದರೆ ಇಲ್ಲಿ ಸಂಭ್ರಮಿಸುವ ಜನರಿಗೆ ಸೋನಿಯಾ ಗಾಂಧಿ ವಿದೇಶಿ ಮಹಿಳೆಯಾಗಿ ಕಾಣುತ್ತಾರೆ.
- ಸ್ಟಿಂಗ್ ಆಪರೇಶನ್ ಮಾಡಿಸಿದ್ದು ಕಾಂಗ್ರೆಸ್ಸೇ ಎಂದು ಖಚಿತವಾಗುತ್ತದೆ: ಆರ್.ಅಶೋಕ
- ಸಿದ್ದು ವಿರುದ್ಧದ ವೈರಲ್ ಸ್ಟಿಂಗ್ ಆಪರೇಷನ್ ವಿಡಿಯೋ
- ಗ್ಯಾಸ್ ಗೀಸರ್ ಬಳಕೆಯನ್ನು ನಿಷೇಧಿಸಿ
- ಬರಗಾಲದ ತೀವ್ರತೆ ಅರ್ಥ ಮಾಡಿಕೊಳ್ಳಲು ಕರ್ನಾಟಕಕ್ಕೆ ಭೇಟಿ ನೀಡಿ: ಆರ್.ಅಶೋಕ
- ದೆಹಲಿ ದೌರ್ಜನ್ಯ ಖಂಡಿಸಿ ಬೆಂಗಳೂರಿನಲ್ಲಿ ಜಾಗೃತರ ಆಕ್ರೋಶ
ಭಾರತ ದೇಶದ ಸ್ವತಂತ್ರ್ಯ ಚಳುವಳಿಯಲ್ಲಿ ವಿದೇಶಿ ನಾಗರಿಕರು ಅನೇಕರು ಪ್ರಮುಖ ಪಾತ್ರ ವಹಿಸಿದ್ದಾರೆ. ಇದರಲ್ಲಿ ಅನಿಬೆಸೆಂಟ್ ರವರ ಹೆಸರನ್ನು ಯಾರು ಮರೆಯುವ ಹಾಗಿಲ್ಲ. ಹೋಂ ರೂಲ್ ಚಳವಳಿಯ ಮೂಲಕ ದೇಶದಲ್ಲಿ ಹಲವಾರು ಸಾಮಾಜಿಕ ಬದಲಾವಣೆಗಳನ್ನು ತಂದು ಕೊಟ್ಟವರು. ಥಿಯೋಸಫಿಕಲ್ ಸೊಸೈಟಿಯನ್ನು ಸ್ಥಾಪಿಸಿ ಸಾಮಾಜಿಕ ಜಾಗೃತಿಯನ್ನ ಉಂಟು ಮಾಡಿದವರು. 1917ರಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ, ಮಹಾತ್ಮ ಗಾಂಧೀಜಿರವರ ವಿಚಾರಧಾರೆಗಳನ್ನ ಒಪ್ಪಿ ಭಾರತೀಯರಾದ, ವಿದೇಶದಿಂದ ಬಂದು ಇಲ್ಲಿ ನೆಲೆಸಿ ಇಲ್ಲಿನ ವಿಚಾರಧಾರೆಗಳನ್ನು ಒಪ್ಪಿ ಮಾನಸಿಕವಾಗಿ ನಮ್ಮವರಲ್ಲಿ ಒಬ್ಬರಾಗಿ ಬದುಕಿದ ಅನಿಬೆಸೆಂಟ್ ಅವರ ಸೇವೆಯನ್ನು ವಿದೇಶದ ಕಣ್ಣಿನಿಂದ ನೋಡಲು ಸಾಧ್ಯವಿದೆಯೇ?
ವಿದೇಶದಿಂದ ಬಂದು ಭಾರತದಲ್ಲಿ ನೆಲೆಸಿ ಇಲ್ಲಿನ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಚಿಂತನೆಗಳಿಗೆ ಆಕರ್ಷಿತರಾಗಿ ಅನೇಕ ಸತ್ಯಾಗ್ರಹಗಳಲ್ಲಿ ಭಾಗವಹಿಸಿ ಭಾರತೀಯರಾಗಿ ಬದುಕಿದ, ಸಿಸ್ಟರ್ ನಿವೇದಿತಾರವರ ವಿಚಾರದಲ್ಲಿ ಅವರನ್ನು ವಿದೇಶಿ ಮಹಿಳೆ ಎಂದು ಕರೆಯಲು ಸಾಧ್ಯವಿದೆಯೇ?
ಭಾರತ ದೇಶಕ್ಕೆ ಬ್ರಿಟಿಷರ ವಿರುದ್ಧ ಹೋರಾಟವನ್ನು ಮಾಡಲು, ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು, ಬ್ರಿಟಿಷ್ ಅಧಿಕಾರಿಯಾಗಿದ್ದ ಕಾಂಗ್ರೆಸ್ ಪಕ್ಷದ ಸ್ಥಾಪಕರಾದ ಎ ಒ ಹ್ಯೂಮ್ ಅವರ ಸೇವೆಯನ್ನು ಮತ್ತು ಮಹತ್ವವನ್ನು ವಿದೇಶಿ ದೃಷ್ಟಿಕೋನದಿಂದ ನೋಡಲು ಸಾಧ್ಯವಿದೆಯೇ?
ಸಿ ಎಫ್ ಆಂಡ್ರ್ಯೂಸ್, ಬಿ ಜಿ ಹಾರಿಮನ್ ಇವರು ವಿದೇಶೀಯ ಪ್ರಜೆಗಳಾಗಿದ್ದು, ಭಾರತದಲ್ಲಿ ಬಂದು ನೆಲೆಸಿ ಮಹಾತ್ಮಾ ಗಾಂಧೀಜಿರವರ ಅನೇಕ ಹೋರಾಟಗಳಲ್ಲಿ ಭಾಗವಹಿಸಿ, ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ತೊಡಗಿಸಿಕೊಂಡರು. ಬಿ ಜಿ ಹಾರಿಮನ್ ರವರು ಜಲಿಯನ್ ವಾಲಾಬಾಗ್ ಘಟನೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದರು. ಭಾರತದ ಪರವಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.
ಮಹಾತ್ಮ ಗಾಂಧೀಜಿರವರ ಜೊತೆ ಮೀರಾ ಬೆನ್ ಎಂಬ ಹೆಸರಿನೊಂದಿಗೆ ಗುರುತಿಸಿಕೊಂಡಿದ್ದ ವಿದೇಶಿ ಮಹಿಳೆಯು ಸಹ ಉಪ್ಪಿನ ಸತ್ಯಾಗ್ರಹ, ಅಸಹಕಾರ ಚಳುವಳಿ, ಹೀಗೆ ಅನೇಕ ಹೋರಾಟಗಳಲ್ಲಿ ಭಾಗವಹಿಸಿ ದೇಶದ ಸ್ವಾತಂತ್ರದ ಚಳುವಳಿಗೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಇವರನ್ನು ವಿದೇಶಿ ಕಣ್ಣಿನಿಂದ ನೋಡಲು ಸಾಧ್ಯವಿದೆಯೇ?
ಭಾರತ ದೇಶಕ್ಕೆ ವಿದೇಶದಿಂದ ಬಂದು ಇಲ್ಲಿನ ಕುಷ್ಟರೋಗಿಗಳ ಮತ್ತು ಬಡವರ ಸೇವೆಯನ್ನ ಮಾಡುವುದರ ಮೂಲಕ ಜಗತ್ತಿನಲ್ಲೇ ಹೆಸರು ಮಾಡಿದ ಮದರ್ ತೆರೇಸಾ ಅವರ ಸೇವೆಯಲ್ಲಿ ವಿದೇಶದ ಲೇಪನವ ಕಾಣಲು ಸಾಧ್ಯವಿದೆಯೇ?
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ವಿದೇಶಿ ನಾಗರಿಕರಾದ ಕಿಟ್ಟೆಲ್, ರೈಸ್ ಮುಂತಾದವರ ಕೊಡುಗೆ ವಿದೇಶಿ ಕಣ್ಣಿನಿಂದ ನೋಡಲು ಸಾಧ್ಯವಿದೆಯೇ?
ಶ್ರೀಮತಿ ಸೋನಿಯಾ ಗಾಂಧಿರವರು ಐದು ದಶಕದ ಹಿಂದೆ ಭಾರತ ದೇಶಕ್ಕೆ ರಾಜೀವ್ ಗಾಂಧಿರವರ ಧರ್ಮಪತ್ನಿಯಾಗಿ, ಶ್ರೀಮತಿ ಇಂದಿರಾ ಗಾಂಧಿ ಮನೆಯ ಸೊಸೆಯಾಗಿ ಬಂದು, ತನ್ನ ಪತಿಯ ದುರಂತಮಯ ಅಂತ್ಯದ ನಂತರವೂ, ಈ ದೇಶದಲ್ಲಿಯೇ ಉಳಿದುಕೊಂಡು, ದೇಶದ ನಾಗರಿಕರಾಗಿ ಚುನಾವಣೆಗಳಲ್ಲಿ ನಿಂತು ಪ್ರತಿನಿಧಿಯಾಗಿ, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಅನೇಕ ಬದಲಾವಣೆಗಳಿಗೆ ಕಾರಣಕರ್ತರಾಗಿ ತಾವು ಪ್ರತಿನಿಧಿಸುವ ಕ್ಷೇತ್ರವನ್ನು ಅತ್ಯಂತ ಪ್ರೀತಿಯಿಂದ ಕಂಡು ಅಭಿವೃದ್ಧಿಪಡಿಸಿ ಈ ದೇಶದ ಸಂಸ್ಕಾರ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಭಾರತೀಯರಾಗಿ ಬದುಕುತ್ತಿರುವ ಸಂದರ್ಭದಲ್ಲಿಯೂ ಅವರ ವಿಚಾರದಲ್ಲಿ ಅಸಹನೆ, ಅಸೂಯೆ ತುಂಬಿದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುವುದು ಕೆಲವರ ಮನಸ್ಥಿತಿಯನ್ನ ತೋರಿಸುತ್ತದೆ. 2004 ಮತ್ತು 2009ರಲ್ಲಿ ಅವರು ಮನಸ್ಸು ಮಾಡಿದರೆ ದೇಶದ ಪ್ರಧಾನಿಯಾಗಬಹುದಾಗಿತ್ತು. ಆದರೆ ಅವರು ದೇಶದ ಹಿತ ಷ್ಟಿಯಿಂದ, ಆರ್ಥಿಕ ಬದಲಾವಣೆಗಳ ಕಾರಣಕ್ಕಾಗಿ, ಡಾ.ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಲು ಮುಂಚೂಣಿಯಲ್ಲಿ ನಿಂತರು.
ಈ ದೇಶದ ಪ್ರೇಮಿಯಾಗಿ ಉಳಿಯಬೇಕಾದರೆ ಸಂಸ್ಕಾರವಂತಿಕೆ, ಸಂಸ್ಕೃತಿ, ನಾಗರಿಕತೆ, ಮಾನವೀಯತೆಯು ಸಹ ಅತ್ಯಂತ ಪ್ರಮುಖವಾಗಿರುತ್ತದೆ ಎಂಬುದನ್ನ ಕೆಲವರು ಅರಿತರೆ ಒಳ್ಳೆಯದು. ಸರ್ವೋಚ್ಚ ನ್ಯಾಯಾಲಯ ವಂದೇ ಮಾತರಂ ಗೀತೆಯ ವಿಚಾರದಲ್ಲಿ ಮಧ್ಯಪ್ರವೇಶಿಸಿ ಹಿರಿಯ ನಾಗರಿಕರು, ಅಸಹಾಯಕರು ಮತ್ತು ಕೆಲವರಿಗೆ ಸಂಪೂರ್ಣವಾಗಿ ಗೀತೆ ಮುಗಿಯುವ ತನಕ ಎದ್ದು ನಿಂತು ಗೌರವ ಅರ್ಪಿಸುವ ಸಂಪ್ರದಾಯದ ವಿಚಾರದಲ್ಲಿ ವೈದ್ಯಕೀಯ ಕ್ಷೇತ್ರದ ಪರಿಣಿತರ ಅಭಿಪ್ರಾಯವನ್ನು ಪಡೆದು ಆದೇಶವನ್ನು ಹೊರಡಿಸಬೇಕಾದದ್ದು ಅಗತ್ಯವಾಗಿದೆ. ವಂದೇ ಮಾತರಂ ಗೀತೆಯ ವಿಚಾರದಲ್ಲಿ 1937ರಲ್ಲಿ ರವೀಂದ್ರನಾಥ್ ಠಾಗೂರ್ ಅವರು ಒಳಗೊಂಡಂತಹ ಸಮಿತಿಯಲ್ಲಿ, ನೆಹರು, ಸರ್ದಾರ್ ವಲ್ಲಬಾಯ್ ಪಟೇಲ್, ಮೌಲಾನ ಅಬ್ದುಲ್ ಕಲಾಂ ಮುಂತಾದವರ ಸದಸ್ಯತ್ವದ ಸಮಿತಿಯಲ್ಲಿ ಎಷ್ಟು ಚರಣಗಳನ್ನು ಹಾಡಬೇಕು ಎನ್ನುವ ಅಭಿಪ್ರಾಯವನ್ನು ನೀಡಿರುತ್ತಾರೆ. ಈ ವಿಚಾರವನ್ನು ಸಹ ಗಮನಿಸಬೇಕಿದೆ.
ದೇಶದ ಸೇವೆ ಮಾಡಲು ಯಾವ ದೇಶದವರಾದರೂ ಸರಿ, ಯಾವ ಬಣ್ಣದವರಾದರು ಸರಿ, ಯಾವ ಪಂಗಡದವರಾದರೂ ಸರಿ, ಯಾವ ಧರ್ಮದವರಾದರೂ ಸರಿ, ದೇಶಭಕ್ತಿ ಮತ್ತು ದೇಶಪ್ರೇಮ ಹೃದಯದ ಅಂತರಾಳವನ್ನು ಹೊಂದಿದ್ದರೆ ಸಾಕು.
ದೇಶದ ಚರಿತ್ರೆಯಲ್ಲಿ ಯಾರು ಎಷ್ಟನೇ ಇಸವಿಯಲ್ಲಿ ರಾಷ್ಟ್ರಗೀತೆಯನ್ನು ಹಾಡಿದ್ದಾರೆ, ಎಷ್ಟು ಸಂದರ್ಭದಲ್ಲಿ ಹಾಡಿದ್ದಾರೆ, ರಾಷ್ಟ್ರಧ್ವಜವನ್ನ ಯಾವ ವರ್ಷದಿಂದ ತಮ್ಮ ಸಂಸ್ಥೆಗಳ ಮೇಲೆ ಹಾರಿಸಿದ್ದಾರೆ, ದೇಶದ ಧ್ವಜಕ್ಕೆ ಎಷ್ಟು ಗೌರವ ನೀಡಿದ್ದಾರೆ ಎಂಬ ವಿಚಾರಗಳು ಮಾಹಿತಿಗಳೊಂದಿಗೆ ಚರಿತ್ರೆಯಲ್ಲಿ ದಾಖಲಾಗಿದೆ. ರಾಷ್ಟ್ರಗೀತೆ ರಾಷ್ಟ್ರದ ಧ್ವಜ ಇವುಗಳೆಲ್ಲವೂ ರಾಜಕೀಯ ಪ್ರೇರಿತವಲ್ಲದ ಸಂಗತಿಗಳಾಗಿರಬೇಕೇ ಹೊರತು, ರಾಜಕಾರಣದ ಅಸ್ತ್ರಗಳಾಗಬಾರದು.
ರಾಷ್ಟ್ರಭಕ್ತ ಮತ್ತು ರಾಷ್ಟ್ರ ಪ್ರೇಮಿ ಎಂದು ದೃಢೀಕರಿಸುವ ಅಧಿಕಾರವನ್ನು ದೇಶದ ಸಂವಿಧಾನ ಯಾವುದೇ ರಾಜಕೀಯ ಪಕ್ಷಕ್ಕೆ ಅಥವಾ ಸಂಘಟನೆಗಳಿಗೆ ನೀಡಿಲ್ಲ. ಯಾರೋ ಹೇಳಿದ ಮಾತ್ರಕ್ಕೆ ಯಾರೂ ದೇಶದ್ರೋಹಿಗಳಾಗುವುದಿಲ್ಲ. ಯಾರೋ ಹೇಳಿದ ಮಾತ್ರಕ್ಕೆ ತೆರಿಗೆ ಕಳ್ಳರು, ಭ್ರಷ್ಟರು, ಭೂಗಳ್ಳರು, ಕೀಳು ಮನಸ್ಸಿನವರು, ಅಸ್ಪೃಶ್ಯತೆಯನ್ನ ಆರಾಧಿಸುವರು, ಸಂವಿಧಾನ ವಿರೋಧಿಸುವವರು ಕಲಬೆರಕೆ ಆಹಾರ ತಯಾರಿಸುವವರು, ನಕಲಿ ಔಷಧಿಗಳನ್ನು ತಯಾರಿಸುವವರು, ಶಿಕ್ಷಣ ಮತ್ತು ಆರೋಗ್ಯವನ್ನು ಲಾಭದ ಉದ್ಯಮ ವನ್ನಾಗಿಸಿಕೊಂಡು ಬದುಕುತ್ತಿರುವವರು, ದೇಶಭಕ್ತರು ದೇಶಪ್ರೇಮಿಗಳು ಆಗುವುದಿಲ್ಲ.
- ಕೆ ಎಸ್ ನಾಗರಾಜ್, ಬೆಂಗಳೂರು




