ಹಳೆಯ ಜಾಡಿನಲ್ಲಿ ಸಾಗಿದ್ದ ಕರ್ನಾಟಕದ ರಾಜಕೀಯ ಮತ್ತು ಆಡಳಿತ ಎಪ್ಪತ್ತರ ದಶಕದಲ್ಲಿ ಪಡೆದ ಹೊಸ ತಿರುವು ರಾಜ್ಯದ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಗೆ ನಾಂದಿ ಹಾಡಿತು. ಇಂತಹದ್ದೊಂದು ಪರಿವರ್ತನೆಯ ಹರಿಕಾರರಾಗಿದ್ದವರು ಕರ್ನಾಟಕವನ್ನು ಎಂಟು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುನ್ನಡೆಸಿದ್ದ ಡಿ.ದೇವರಾಜ ಅರಸು ಅವರು.
ದೇವರಾಜ ಅರಸು ಅವರ ಹುಟ್ಟೂರು ಮೈಸೂರು. ಕರ್ನಾಟಕದಲ್ಲಿ ಮೊದಲ ಬಾರಿಗೆ ಸಾಮಾಜಿಕನ್ಯಾಯದ ಬಗ್ಗೆ ಮಾತನಾಡಿದ್ದು ಮಾತ್ರವಲ್ಲ ಆಡಿದ್ದನ್ನು ಮಾಡಿ ತೋರಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಕೂಡಾ ಇದೇ ಮೈಸೂರಿನವರು. ಇಂತಹ ಮೈಸೂರಿಗೆ ನಾನು ಕೂಡಾ ಸೇರಿದವನು ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇನೆ.
ನಮ್ಮನ್ನು ಅಗಲಿಹೋದವರನ್ನೆಲ್ಲ ನೆನಪು ಮಾಡಿಕೊಂಡು ನಾವು ಅವರ ಹುಟ್ಟುಹಬ್ಬ ಆಚರಿಸುವುದಿಲ್ಲ. ಅಂತಹವರ ನೆನಪನ್ನು ಅವರವರ ಕುಟುಂಬದ ಸದಸ್ಯರು ಮಾಡಿಕೊಳ್ಳುತ್ತಾರೆ. ದೇವರಾಜ ಅರಸು ಅವರನ್ನು ಇಡೀ ರಾಜ್ಯದ ಜನತೆ ಅಭಿಮಾನ ಮತ್ತು ಕೃತಜ್ಞತೆಯಿಂದ ಸ್ಮರಿಸುತ್ತಿದ್ದರೆ ಅದಕ್ಕೆ ಕಾರಣ ಒಬ್ಬ ಮುಖ್ಯಮಂತ್ರಿಯಾಗಿ ತನ್ನ ಕೈಗೆ ಬಂದ ರಾಜಕೀಯ ಅಧಿಕಾರವನ್ನು ಬಳಸಿಕೊಂಡು ಅವರು ರಾಜ್ಯಕ್ಕೆ ನೀಡಿದ ಕೊಡುಗೆ. ಅರಸು ಅವರು ಭೌತಿಕವಾಗಿ ನಮ್ಮ ನಡುವೆ ಇಲ್ಲವಾದರೂ ಅವರು ನಮ್ಮ ನಡುವೆ ಇಲ್ಲ ಎಂದು ನಮಗನಿಸದೆ ಇರುವುದಕ್ಕೆ ಕಾರಣ ಅವರ ನೀತಿ-ನಿರ್ಧಾರ, ಯೋಜನೆ-ಕಾರ್ಯಕ್ರಮಗಳು. ಭೂಸುಧಾರಣೆ ಮತ್ತು ಮೀಸಲಾತಿಯೂ ಸೇರಿದಂತೆ ಅವರ ಎಲ್ಲ ಯೋಜನೆಗಳ ಫಲಾನುಭವಿಗಳಲ್ಲಿಯೂ ದೇವರಾಜ ಅರಸು ಇರುತ್ತಾರೆ. ಇಲ
ಆದರೆ ಯಾರು ಇಡೀ ಸಮಾಜವನ್ನು ತಮ್ಮ ಕುಟುಂಬವೆಂದು ತಿಳಿದುಕೊಂಡು ಸಮಾಜದ ಸರ್ವಜನರ ದು:ಖ ದುಮ್ಮಾನ, ಕಷ್ಟ-ಸುಖ, ನೋವು-ನಲಿವುಗಳಿಗೆ ಸ್ಪಂದಿಸುತ್ತಾ ಬದುಕಿರುತ್ತಾರೋ ಅಂತಹವರನ್ನು ಸಾವಿನ ನಂತರವೂ ನೂರಾರು ವರ್ಷ ನೆನಪುಮಾಡಿಕೊಳ್ಳುತ್ತಾ ಇರುತ್ತದೆ. ಇಂತಹ ಪ್ರಾಂತಸ್ಮರಣೀಯರ ಸಾಲಿಗೆ ಸೇರಿದವರು ದೇವರಾಜ ಅರಸು.
ದೇವರಾಜ ಅರಸು ಅವರು ದಲಿತರು, ಹಿಂದುಳಿದ ಜಾತಿಯವರು ಇಲ್ಲವೆ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಶ್ರಮಿಸಿದ್ದರು ಎನ್ನುವ ಕಾರಣಕ್ಕೂ ಅವರನ್ನು ನಾವು ನೆನಪು ಮಾಡಿಕೊಳ್ಳಬೇಕಾಗಿಲ್ಲ. ಈ ರೀತಿ ದೇವರಾಜ ಅರಸು ಅವರನ್ನು ನಿರ್ದಿಷ್ಟ ವರ್ಗಕ್ಕೆ ಸೀಮಿತಗೊಳಿಸುವುದರಿಂದ ಅವರಿಗೆ ಗೌರವ ಸಲ್ಲಿಸಿದಂತಾಗುವುದಿಲ್ಲ. ದೇವರಾಜ ಅರಸು ಈ ರಾಜ್ಯದಲ್ಲಿ ಸಮಾನತೆಯ ಬುನಾದಿಯ ಮೇಲೆ ಸಮಾಜವನ್ನು ಕಟ್ಟುವ ಮೂಲಕ ಸರ್ವಜನರ ಕಲ್ಯಾಣವನ್ನು ಬಯಸಿದ್ದ ಮುತ್ಸದ್ದಿ ರಾಜಕಾರಣಿಯಾಗಿದ್ದರು. ಭವಿಷ್ಯದ ರಾಜಕಾರಣಕ್ಕೆ ಮಾದರಿಯನ್ನು ಹಾಕಿಕೊಟ್ಟ ಮಾರ್ಗದರ್ಶಕರಾಗಿದ್ದರು.
ಸಾಮಾನ್ಯವಾಗಿ ರಾಜಕೀಯದ ಬಗ್ಗೆ, ರಾಜಕಾರಣಿಗಳ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಇತ್ತೀಚಿನ ದಿನಗಳಲ್ಲಿ ನಾವು ಹೆಚ್ಚುಹೆಚ್ಚು ಕಾಣುತ್ತೇವೆ. ಸಜ್ಜನ, ಜನಪರವಾದ ರಾಜಕಾರಣಿಗಳ ಬಗ್ಗೆ ಹೆಚ್ಚಿನ ಚರ್ಚೆಯಾಗದೆ ಇರುವುದು ಕೂಡಾ ಇಂತಹ ಸಿನಿಕತನಕ್ಕೆ ಕಾರಣವೂ ಇರಬಹುದು. ಪಕ್ಷದ ಚೌಕಟ್ಟಿನೊಳಗೆ ಕೆಲಸಮಾಡಬೇಕಾದ ರಾಜಕಾರಣಿಗೂ ಒಬ್ಬ ಸಮಾಜ ಸೇವಕ ಇಲ್ಲವೇ ಸಾಮಾಜಿಕ ಕಾರ್ಯಕರ್ತನಿಗೂ ವ್ಯತ್ಯಾಸಗಳಿವೆ. ಪಕ್ಷದ ಚೌಕಟ್ಟಿನೊಳಗಿನ ಇತಿಮಿತಿ ನಡುವೆ ಕೆಲಸ ಮಾಡಬೇಕಾದ ರಾಜಕಾರಣಿಗೆ ಅಂದುಕೊಂಡದ್ದನ್ನೆಲ್ಲ ಮಾಡಿ ಮುಗಿಸಲು ಸಾಧ್ಯವಾಗುವುದಿಲ್ಲ. ಅವನು ಅನೇಕ ಬಗೆಯ ರಾಜಿಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಇಂತಹ ಹೊಂದಾಣಿಕೆ ಇಲ್ಲವೆ ರಾಜೀಯ ಉದ್ದೇಶದಲ್ಲಿ ಸ್ವಾರ್ಥ ಇರಬಾರದು. ರಾಷ್ಟ್ರೀಯ ಪಕ್ಷದ ಸದಸ್ಯನಾಗಿ ದೇವರಾಜ ಅರಸು ಅವರಿಗೆ ತಲುಪಬೇಕಾದ ಗುರಿಯ ಬಗ್ಗೆ ಸ್ಪಷ್ಟತೆ ಇತ್ತು, ಇದಕ್ಕಾಗಿ ಕೆಲವು ಬಾರಿ ಸಾಗುವ ಹಾದಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ ಎನ್ನುವ ಅರಿವು ಅವರಿಗಿತ್ತು. ಇದು ದೇವರಾಜ ಅರಸು ಅವರ ಜಾಣ್ಮೆಯ ರಾಜಕೀಯ.
ಸಮಾಜದಲ್ಲಿ ಬದಲಾವಣೆ ತರುವ ಪ್ರಯತ್ನವೆಂದರೆ ಪ್ರವಾಹದೆದುರು ಈಜುವುದೇ ಆಗಿದೆ. ಈ ರೀತಿ ಬದಲಾವಣೆಯನ್ನು ತರಲು ಹೊರಟವರು ಅವರು ಬದುಕಿದ್ದಾಗ ಬಹಳ ಜನಪ್ರಿಯರಾಗಿರುವುದಿಲ್ಲ. ಅವರ ಸಾಧನೆಗಳನ್ನು ಗುರುತಿಸಿ ಬೆನ್ನುತಟ್ಟುವವರಿಗಿಂತಲೂ, ಅಂತಹವರನ್ನು ಟೀಕಿಸಿ ಕಾಲೆಳೆಯುವವರ ಸಂಖ್ಯೆಯೇ ಹೆಚ್ಚು. ದೇವರಾಜ ಅರಸು ಅವರು ತಮ್ಮ ರಾಜಕೀಯ ಜೀವನದಲ್ಲಿ ಇಂತಹ ಹಲವಾರು ಅಗ್ನಿಪರೀಕ್ಷೆಗಳನ್ನು ಎದುರಿಸಿದ್ದಾರೆ. ಇಂತಹವರ ಬಗ್ಗೆ ವರ್ತಮಾನ ಬಹಳ ಕ್ರೂರವಾಗಿರುತ್ತದೆ. ಬುದ್ದ,ಬಸವ, ಅಂಬೇಡ್ಕರ್, ಲೋಹಿಯಾ ಅವರಿಂದ ಹಿಡಿದು ಇಂದಿರಾಗಾಂಧಿ, ರಾಜೀವ್ ಗಾಂಧಿಯವರ ವರೆಗೂ ಇದು ಸತ್ಯ.
ಹಲವಾರು ಸಂದರ್ಭಗಳಲ್ಲಿ ನನ್ನ ವಿರುದ್ಧ ಅನಗತ್ಯವಾದ ಟೀಕಾಪ್ರಹಾರಗಳು ನಡೆದಾಗ, ಹಿಂದೆ ಇದೇ ರೀತಿ ಅಪಪ್ರಚಾರಕ್ಕೆ ಈಡಾಗಿ ನೊಂದುಕೊಂಡವರನ್ನು ನೆನೆಸಿಕೊಂಡು ಸಮಾಧಾನಪಟ್ಟುಕೊಳ್ಳುತ್ತೇನೆ. ಆದರೆ ರಾಗ-ದ್ವೇಷಗಳಿಂದ ಮುಕ್ತವಾದ ಇತಿಹಾಸ ಮಾತ್ರ ಎಲ್ಲವನ್ನೂ ನಿಷ್ಪಕ್ಷಪಾತವಾಗಿ ದಾಖಲಿಸುತ್ತದೆ. ಇಂದು ಬುದ್ದ,ಬಸವ, ಅಂಬೇಡ್ಕರ್, ನಾಲ್ಪಡಿ ಕೃಷ್ಣರಾಜ ಒಡೆಯರ್ ಅವರನ್ನು ಎಲ್ಲರೂ ಕೂಡಿ ಸ್ಮರಿಸುತ್ತಾರೆ. ಅದೇ ರೀತಿ ದೇವರಾಜ ಅರಸು ಅವರನ್ನು ಪಶ್ಚಾತಾಪದ ದನಿಯಲ್ಲಿ ಎಲ್ಲರೂ ನೆನೆಸಿಕೊಳ್ಳುತ್ತಾರೆ. ಅರಸು ಬದುಕಿದ್ದಾಗ ಅವರನ್ನು ಅರ್ಥಮಾಡಿಕೊಳ್ಳಲಿಲ್ಲ, ಅವರಿಗೆ ಬೆಂಬಲ ನೀಡಿಲ್ಲ ಎಂದು ಕೊರಗುವವರು ಈಗಲೂ ಇದ್ದಾರೆ.
ದೇವರಾಜ ಅರಸು ಕೇವಲ ಒಬ್ಬ ರಾಜಕಾರಣಿಯಾಗಿರಲಿಲ್ಲ. ತಕ್ಷಣದ ರಾಜಕೀಯದ ಲಾಭ ಕೂಡಾ ಅವರ ಉದ್ದೇಶವಾಗಿರಲಿಲ್ಲ. ಅವರಲ್ಲೊಬ್ಬ ದೂರಗಾಮಿಯಾಗಿ ಯೋಚನೆ ಮಾಡಬಲ್ಲ ದಾರ್ಶನಿಕ ಇದ್ದ, ಸಮಾಜ ಸುಧಾರಕ ಇದ್ದ. ಅವರು ಜಾರಿಗೆ ತಂದಿರುವ ಯೋಜನೆಗಳೆಲ್ಲವೂ ಭವಿಷ್ಯದ ಜನಾಂಗವನ್ನು ದೃಷ್ಟಿಯಲ್ಲಿಟ್ಟುಕೊಂಡು ಕೈಗೊಂಡಿರುವ ನಿರ್ಧಾರಗಳಾಗಿವೆ.
ಅಧಿಕಾರ, ಸಂಪತ್ತು ಮತ್ತು ಅವಕಾಶದ ಸಮಾನ ಹಂಚಿಕೆಯ ಹೊರತಾಗಿ ನಿಜವಾದ ಅಭಿವೃದ್ಧಿಯನ್ನು ಕಾಣಲು ಅಸಾಧ್ಯ ಎಂಬುದನ್ನು ಅರಸು ಅಚಲವಾಗಿ ನಂಬಿದ್ದರು. ಆರ್ಥಿಕ ಸ್ವಾತಂತ್ರ್ಯ ಇಲ್ಲದ ರಾಜಕೀಯ ಸ್ವಾತಂತ್ರ್ಯದಿಂದ ಸರ್ವರನ್ನೊಳಗೊಂಡ ಅಭಿವೃದ್ಧಿಯನ್ನು ಮಾಡಲು ಸಾಧ್ಯ ಇಲ್ಲ ಎನ್ನುವುದು ಅವರಿಗೆ ಗೊತ್ತಿತ್ತು. ಇದಕ್ಕಾಗಿಯೇ ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರುವ ನಾಯಕರನ್ನು ಗುರುತಿಸಿ ಅವಕಾಶ ಕೊಟ್ಟು ರಾಜಕೀಯವಾಗಿ ಬೆಳೆಸಿದರು. ಭೂ ಸುಧಾರಣೆಯ ಮೂಲಕ ಸಂಪತ್ತಿನ ಸಮಾನ ಹಂಚಿಕೆಗೆ ಕಾರಣರಾದರು. ಅದೇ ರೀತಿ ಮೀಸಲಾತಿಯ ಮೂಲಕ ಅವಕಾಶ ವಂಚಿತ ಸಮುದಾಯಕ್ಕೆ ಶಿಕ್ಷಣಮತ್ತು ಉದ್ಯೋಗದಲ್ಲಿ ಹೆಚ್ಚಿನ ಪ್ರಾತಿನಿಧ್ಯ ಕಲ್ಪಿಸಿ ಅಭಿವೃದ್ಧಿಯ ದಾರಿಯಲ್ಲಿ ಮುನ್ನಡೆಯುವಂತೆ ಮಾಡಿದರು.
ಪರಿಪೂರ್ಣವಾದ ಅಭಿವೃದ್ದಿ ಎಂದರೆ ರಸ್ತೆ-ಸೇತುವೆಗಳು, ನೀರಾವರಿ ಯೋಜನೆಗಳು, ಉದ್ಯಮಗಳ ಜತೆ ಮಾನವ ಸಂಪನ್ಮೂಲವನ್ನು ಅಭಿವೃದ್ಧಿ ಪಡಿಸುವುದು ಕೂಡಾ ಆಗಿದೆ. ಇಂತಹದ್ದೊಂದು ಅಭಿವೃದ್ದಿಯ ಮಾದರಿಯನ್ನು ಕರ್ನಾಟಕದಲ್ಲಿ ಮಾಡಿ ತೋರಿಸಿದವರು ದೇವರಾಜ ಅರಸು. ಅಭಿವೃದ್ದಿಯ ಹೊಸ ಮಾದರಿಯ ಭಾಗವಾಗಿಯೇ ಅರಸು ಅವರು ಭೂ ಸುಧಾರಣೆ ಕಾನೂನು, ಮೀಸಲಾತಿ ನೀತಿ, ಮಲಹೊರುವ ಪದ್ದತಿ ನಿಷೇಧ, ಜೀತಪದ್ದತಿಯ ನಿರ್ಮೂಲನೆ, ಋಣ ಪರಿಹಾರದಂತಹ ದಿಟ್ಟ ನಿರ್ಧಾರಗಳನ್ನು ಕೈಗೊಂಡು ಅನುಷ್ಠಾನಕ್ಕೆ ತರಲು ಸಾಧ್ಯವಾಯಿತು.
ಅರಸು ಅವರ ಅನೇಕ ಕಾರ್ಯಕ್ರಮಗಳನ್ನು ನಂತರದ ದಿನಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಮತ್ತು ಬೇರೆಬೇರೆ ರಾಜ್ಯಗಳಲ್ಲಿ ಅನುಷ್ಠಾನಕ್ಕೆ ತಂದಿರುವುದನ್ನು ಕಾಣಬಹುದು. ಉದಾಹರಣೆಗೆ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೊಳಿಸಿದ್ದ ಬಹಳ ಮುಖ್ಯವಾದ ಕಾರ್ಯಕ್ರಮ- ‘ಉದ್ಯೋಗ ಭರವಸೆ ಯೋಜನೆ’. ಇದು ಇಂದು ರಾಷ್ಟ್ರಮಟ್ಟದ ಯೋಜನೆಯಾಗಿದೆ.
ಇದೇ ರೀತಿ ಜನತಾ ಮನೆಗಳ ನಿರ್ಮಾಣ, ಕೊಳಗೇರಿ ಅಭಿವೃದ್ಧಿ ಮಂಡಳಿ ಸ್ಥಾಪನೆ, ಮಹಿಳೆಯರು ಮತ್ತು ಮಕ್ಕಳಿಗೆ ಪೌಷ್ಠಿಕಾಂಶಯುಕ್ತ ಆಹಾರ ವಿತರಣೆ, ನಿರುದ್ಯೋಗಿಗಳಿಗೆ ಸ್ಟೈಪೆಂಡರಿ, ಲಿಡ್ಕರ್ ಸಂಸ್ಥೆ ಸ್ಥಾಪನೆ, ಭಿಕ್ಷುಕರ ಪುನರ್ವಸತಿ ಕೇಂದ್ರ, ಅಂಗವಿಕಲರಿಗೆ ಮಾಸಾಶನ ಇತ್ಯಾದಿ ಅನೇಕ ಯೋಜನೆಗಳನ್ನು ಅರಸು ಜಾರಿಗೆ ತಂದಿರುವುದನ್ನು ನೋಡಿದರೆ ಅವರಿಗಿದ್ದ ದೂರದೃಷ್ಟಿ ಮತ್ತು ಸಾಮಾಜಿಕ ಕಾಳಜಿಯ ಅರಿವಾಗುತ್ತದೆ.
ಬೆಂಗಳೂರು ನಗರ ಇಂದು ಭಾರತದ ಸಿಲಿಕಾನ್ ವ್ಯಾಲಿ ಎಂದೇ ಖ್ಯಾತಿ ಪಡೆದಿದೆ. ಮೊದಲಿಗೆ ಇಂತಹದ್ದೊಂದು ಕನಸು ಕಂಡವರು ದೇವರಾಜ ಅರಸು. ಬೆಂಗಳೂರಿನ ‘ಎಲೆಕ್ಟ್ರಾನಿಕ್ ಸಿಟಿ’ ನಿರ್ಮಾಣಗೊಂಡಿರುವುದು ದೇವರಾಜ ಅರಸು ಅವರ ಕಾಲದಲ್ಲಿ ಎನ್ನುವುದು ಇಂದಿನ ಪೀಳಿಗೆಯ ಬಹಳ ಮಂದಿಗೆ ತಿಳಿದಿಲ್ಲ.
ಈ ರೀತಿ ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ನ್ಯಾಯವನ್ನು ಒಟ್ಟೊಟ್ಟಿಗೆ ಸಾಧಿಸಿದ್ದು ದೇವರಾಜ ಅರಸು ಅವರ ಹಿರಿಮೆಯಾಗಿದೆ.ದೂರದೃಷ್ಟಿ, ದಕ್ಷತೆ, ಸಂಕಲ್ಪ ಶಕ್ತಿಗಳೊಂದಿಗೆ ಒಟ್ಟು ಜನಸ್ತೋಮದ ಬದುಕಿನ ದಿಕ್ಕು-ದೆಸೆಯನ್ನೇ ಬದಲಿಸಿದ ದ್ರಷ್ಟಾರ ಅರಸು. ಅವರು ಕರ್ನಾಟಕಕ್ಕೆ ದಕ್ಕಿದಂತೆ ಭಾರತದ ಬೇರೆ ಯಾವ ರಾಜ್ಯಕ್ಕೂ ದಕ್ಕಿಲ್ಲ. ಅರಸು ಆದೃಷ್ಟವಂತರಲ್ಲ, ಯಾಕೆಂದರೆ ಅವರು ಕೈಗೊಂಡ ಐತಿಹಾಸಿಕ ನಿರ್ಧಾರಗಳ ಬಗ್ಗೆ ವಸ್ತುನಿಷ್ಠ ಮೌಲ್ಯಮಾಪನ ಇಲ್ಲಿಯ ವರೆಗೆ ನಡೆದಿಲ್ಲ. ಯಾವ ಸಮಾಜವಿಜ್ಞಾನಿಯೂ ಅರಸು ಆಡಳಿತವನ್ನು ಸರಿಯಾಗಿ ಮತ್ತು ಸಮಗ್ರವಾಗಿ ಅರ್ಥೈಸುವ ಪ್ರಯತ್ನವನ್ನು ಮಾಡಲಿಲ್ಲ.
ಕೊನೆಯ ದಿನಗಳಲ್ಲಿ ಹುಟ್ಟಿಕೊಂಡ ಭಿನ್ನಾಭಿಪ್ರಾಯಗಳಿಂದಾಗಿ ಕಾಂಗ್ರೆಸ್ ಪಕ್ಷದಿಂದ, ನೆಚ್ಚಿನ ನಾಯಕಿಯಾಗಿದ್ದ ಮಾಜಿ ಪ್ರಧಾನಿ ಇಂದಿರಾಗಾಂಧಿಯವರಿಂದ ಅವರು ದೂರವಾದರೂ ಅರಸು ಆಡಳಿತದಲ್ಲಿ ಗುಪ್ತಗಾಮಿನಿಯಾಗಿದ್ದದ್ದು ಕಾಂಗ್ರೆಸ್ ಪಕ್ಷದ ಆಶಯಗಳೇ ಎಂಬುದನ್ನು ಮರೆಯಬಾರದು. ಇಂದಿರಾಗಾಂಧಿಯವರ ಜನಪ್ರಿಯ ಕರೆಯಾದ ಗರೀಬಿ ಹಟಾವೋ ಕರೆಯನ್ನು ಬಹುಬೇಗ ಅರ್ಥಮಾಡಿಕೊಂಡು ಆ ಘೋಷಣೆಗೆ ಸಾಧನೆಯ ರೂಪ ನೀಡಿದ ಅರಸು. ಬಹುಷ: ದೇವರಾಜ ಅರಸು ಅವರಂತೆಯೇ ಆ ಕಾಲದ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಗಳೆಲ್ಲರೂ ನಡೆದುಕೊಂಡಿದ್ದರೆ ಭಾರತದ ಚಿತ್ರವೇ ಬದಲಾಗಿಬಿಡುತ್ತಿತ್ತು.
ದೇವರಾಜ ಅರಸು ಅವರ ಚಿಂತನೆಗಳದ್ದು ಗಟ್ಟಿಕಾಳು. ಈ ಚಿಂತನೆಯ ಕಾಳುಗಳು ಮೊಳಕೆಯೊಡೆದು ಬೆಳೆಯುವುದನ್ನು ನೋಡಿ ಆನಂದಿಸಲು ಅರಸು ಉಳಿಯಲಿಲ್ಲ ಎನ್ನುವುದು ವಿಷಾದನೀಯ. ಅವರು ಪ್ರಾರಂಭಿಸಿದ ಪರಿವರ್ತನೆಯ ಪ್ರಯತ್ನವೇ ನಂತರದ ದಿನಗಳಲ್ಲಿ ರೈತ, ದಲಿತ ಮತ್ತು ಭಾಷಾ ಚಳುವಳಿಗಳಿಗೆ ಪ್ರೇರಣೆ ಮತ್ತು ಶಕ್ತಿಯಾಗಿತ್ತು ಎನ್ನುವುದನ್ನು ಮರೆಯಬಾರದು. ಬಹುಷ: ಅರಸು ಅವರು ಇನ್ನಷ್ಟು ಕಾಲ ಬದುಕಿದ್ದರೆ ರಾಜ್ಯದ ರಾಜಕಾರಣ ಬೇರೆಯೇ ದಾರಿ ಹಿಡಿಯುತ್ತಿತ್ತೋ ಏನೋ?
ದೇವರಾಜ ಅರಸು ಕಾಲದಲ್ಲಿ ಪರಿವರ್ತನೆಗೆ ಒಳಗಾಗಿದ್ದು ಕೇವಲ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲ. ಸಾಂಸ್ಕøತಿಕ ಕ್ಷೇತ್ರವನ್ನು ಮುರಿದು ಕಟ್ಟುವ ಪ್ರಕ್ರಿಯೆಗೆ ಚಾಲನೆಗೆ ಸಿಕ್ಕಿದ್ದು ಕೂಡಾ ಅರಸು ಕಾಲದಲ್ಲಿ. ಮೊದಲ ಬಾರಿಗೆ ಸಾಹಿತ್ಯಕ್ಷೇತ್ರದಲ್ಲಿ ಎಲ್ಲ ಬಗೆಯ ಅನುಭವಲೋಕಗಳ ದನಿಗಳು ಕೇಳಿಬಂದದ್ದು ಅರಸು ಕಾಲದಲ್ಲಿ. ಸಾಂಸ್ಕøತಿಕವಾಗಿ ಅಲಕ್ಷ್ಯಕ್ಕೀಡಾಗಿದ್ದ ತಳಸಮುದಾಯ ತನ್ನ ಅನುಭವಗಳನ್ನು ಧೈರ್ಯ ಮತ್ತು ಆತ್ಮವಿಶ್ವಾಸದಿಂದ ದಾಖಲಿಸಲು ಮುಂದಾಗಿದ್ದು ಇದೇ ಕಾಲದಲ್ಲಿ. ಈ ಬದಲಾವಣೆಯೇ ನಂತರದ ದಿನಗಳಲ್ಲಿ ಬಂಡಾಯ ಸಾಹಿತ್ಯ ಪಂಥವಾಗಿ ಬೆಳೆಯಿತು. ಮೊದಲ ಬಾರಿಗೆ ಸಾಹಿತ್ಯಕ್ಷೇತ್ರದಲ್ಲಿ ಎಲ್ಲಜಾತಿ,ಧರ್ಮ ಮತ್ತು ವರ್ಗಗಳಿಗೆ ಸೇರಿದವರು ಬರವಣಿಗೆಯಲ್ಲಿ ತೊಡಗಿಸಿಕೊಂಡರು.
ನಾನು ಮುಖ್ಯಮಂತ್ರಿಯಾಗಿದ್ದಾಗಲೇ ಡಿ.ದೇವರಾಜ ಅರಸು ಅವರ ಜನ್ಮಶತಮಾನೋತ್ಸವನ್ನು ಆಚರಿಸುವ ಭಾಗ್ಯ ನನಗೆ ಬಂದಿತ್ತು. ಅವರ ಜನ್ಮ ಶತಮಾನೋತ್ಸವವನ್ನು ವರ್ಷವಿಡೀ ಅರ್ಥಪೂರ್ಣವಾಗಿ ಆಚರಿಸುವುದಕ್ಕಾಗಿ ನನ್ನ ಅಧ್ಯಕ್ಷತೆಯಲ್ಲಿ ಅರಸು ವಿಚಾರಧಾರೆಯ ಪ್ರತಿಪಾದಕರನ್ನೊಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ರಚಿಸಿ ಹಲವಾರು ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ಏರ್ಪಡಿಸಿದ್ದೆವು. ಅರಸು ಅವರ ವ್ಯಕ್ತಿತ್ವ ಮತ್ತು ಆಡಳಿತದ ವಿವಿಧ ಮಗ್ಗುಲಗಳನ್ನು ಪರಿಚಯಿಸುವ 20ಕ್ಕೂ ಹೆಚ್ಚು ಪುಸ್ತಕಗಳನ್ನು ಚಿಂತಕರಿಂದ ಬರೆಸಿ ಪ್ರಕಟಿಸಿದ್ದೆವು. ಇದರಿಂದ ಅರಸು ಆಡಳಿತದ ಬಗ್ಗೆ ಹೊಸದೊಂದು ಚರ್ಚೆಗೆ ಅವಕಾಶ ಸಾಧ್ಯವಾಗಬಹುದು ಎನ್ನುವದು ನಮ್ಮ ನಂಬಿಕೆ.
.
ಬಹಳ ಮುಖ್ಯವಾಗಿ ದೇವರಾಜ ಅರಸು ಅವರ ನೆನಪಲ್ಲಿ ಹಲವಾರು ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿದ್ದೆವು. ಹಿಂದುಳಿದ ವರ್ಗಗಳ 2408 ವಿದ್ಯಾರ್ಥಿನಿಲಯಗಳಿಗೆ ಡಿ.ದೇವರಾಜ ಅರಸು ವಿದ್ಯಾರ್ಥಿನಿಲಯವೆಂದು ನಾಮಕರಣ ಮಾಡಿದ್ದೆವು. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಗರಿಷ್ಠ ತಲಾ ರೂ.ಹತ್ತು ಲಕ್ಷದಂತೆ “ಡಿ.ದೇವರಾಜ ಅರಸು ವಿದೇಶಿ ವ್ಯಾಸಂಗ ವೇತನ”, 600 ಪಿ.ಹೆಚ್.ಡಿ ವಿದ್ಯಾರ್ಥಿಗಳಿಗೆ ಮಾಸಿಕ ತಲಾ ರೂ.5000-ದಂತೆ ಶಿಷ್ಯವೇತನ, 500 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಲಾ ರೂ.10,000ದಿಂದ ರೂ.25,000 ವರೆಗೆ ಡಿ.ದೇವರಾಜ ಅರಸು ಪ್ರತಿಭಾ ವೇತನ ನೀಡುತ್ತಿದ್ದೆವು. ದೇವರಾಜ ಅರಸು ಹುಟ್ಟೂರಾದ ಬೆಟ್ಟದತುಂಗಾ ಮತ್ತು ಕಲ್ಲಹಳ್ಳಿಯನ್ನು ರಾಜ್ಯ ಸರ್ಕಾರವು ದತ್ತು ಸ್ವೀಕರಿಸಿ, ಈ ಎರಡು ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ತಲಾ ಹತ್ತು ಕೋಟಿಯಂತೆ ಒಟ್ಟು20 ಕೋಟಿ ರೂಪಾಯಿಗಳ ಅನುದಾನವನ್ನು ನೀಡಿದ್ದೆವು.ಹೀಗೆ ಅರ್ಥಪೂರ್ಣವಾಗಿ ಅರಸು ಶತಮಾನೋತ್ಸವವನ್ನು ವರ್ಷಪೂರ್ತಿ ಆಚರಿಸುವ ಮೂಲಕ ಮಹಾನ್ ಚೇತನಕ್ಕೆ ಗೌರವ ಸಮರ್ಪಿಸಿದ್ದೆವು..
ಬೇರೆ ರಾಜ್ಯಗಳ ಆಡಳಿತದ ಮಾದರಿಯನ್ನು ಉಲ್ಲೇಖಿಸಿ ಆ ಮಾದರಿಗಳನ್ನು ಇಲ್ಲಿ ಜಾರಿಗೆ ತರುತ್ತೇವೆ ಎಂದು ಇಂದಿನ ಚುನಾಯಿತ ಸರ್ಕಾರವೇ ಹೇಳುತ್ತಿದೆ. ಇಂತಹವರು ಮೊದಲು ನಮ್ಮವರೇ ಆಗಿರುವ ದೇವರಾಜ ಅರಸು ಅವರ ಆಡಳಿತದ ಅಧ್ಯಯನ ಮಾಡಬೇಕು. ಕರ್ನಾಟಕಕ್ಕೆ ಇಂದು ತುರ್ತಾಗಿ ಬೇಕಾಗಿರುವುದು ಸರ್ವರಿಗೂ ಸಮಪಾಲು ಮತ್ತು ಸಮ ಬಾಳು ನೀಡುವ ಗುರಿಯ ದೇವರಾಜ ಅರಸು ಆಡಳಿತದ ಮಾದರಿ. ಈ ಆಡಳಿತದ ಮಾದರಿಯಲ್ಲಿ ಬುದ್ದ,ಬಸವ,ಗಾಂಧಿ, ಅಂಬೇಡ್ಕರ್ ಸೇರಿದಂತೆ ಎಲ್ಲ ಮಹಾಪುರುಷರ ಚಿಂತನೆಗಳ ಸಾರ ಇದೆ.
– ಸಿದ್ದರಾಮಯ್ಯ, ಮಾಜಿ ಸಿಎಂ




