ಚಿಕ್ಕಬಳ್ಳಾಪುರ ಕ್ಷೇತ್ರ ಜಾಗತಿಕ ಮಟ್ಟದಲ್ಲಿ ಖ್ಯಾತಿ ಪಡೆಯಬೇಕು ಎಂಬುದು ನನ್ನ ಕನಸು: ಡಾ.ಕೆ.ಸುಧಾಕರ್

4 years ago

ಚಿಕ್ಕಬಳ್ಳಾಪುರ ಕ್ಷೇತ್ರ ಜಾಗತಿಕ ಮಟ್ಟದಲ್ಲಿ ಖ್ಯಾತಿ ಪಡೆಯಬೇಕು ಎಂಬುದು ನನ್ನ ಕನಸು

ನಂದಿ ಸಮುದಾಯ ಆರೋಗ್ಯ ಕೇಂದ್ರದ ಉನ್ನತೀಕರಣ ಕಾಮಗಾರಿಗೆ ಚಾಲನೆ ನೀಡಿದ ಸಚಿವ ಸುಧಾಕರ್

ಚಿಕ್ಕಬಳ್ಳಾಪುರ: ಕ್ಷೇತ್ರದ ಎಲ್ಲ ಹೋಬಳಿಗಳನ್ನೂ ತಲಾ ಒಂದು ಕ್ಷೇತ್ರದ ಅಭಿವೃದ್ಧಿಯ ಕಾರಿಡಾರ್ ಆಗಿ ಅಭಿವೃದ್ಧಿಪಡಿಸುವ ದೂರದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿರುವುದಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.

ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡುವುದು ತಮ್ಮ ಆಶಯ. ಅದಕ್ಕಾಗಿ ನೀಲನಕ್ಷೆ ಸಿದ್ಧಪಡಿಸಿ ಶ್ರಮಿಸಲಾಗುತ್ತಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕಿನ ನಂದಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಉನ್ನತೀಕರಣ ಕಾಮಗಾರಿಗೆ ಭೂಮಿಪೂಜೆ ಹಾಗೂ ಸ್ತ್ರೀಶಕ್ತಿ ಸಂಘಗಳಿಗೆ ಬಡ್ಡಿ ರಹಿತ ಸಾಲದ ಚೆಕ್ ವಿತರಣೆ ಕಾರ್ಯ ನೆರವೇರಿಸಿದ ನಂತರ ಮಾತನಾಡಿದ ಅವರು, ಇದರ ಭಾಗವಾಗಿ ನಂದಿ ಹೋಬಳಿಯನ್ನು ಶೈಕ್ಷಣಿಕ ಕಾರಿಡಾರ್ ಆಗಿ ರೂಪಿಸಲಾಗುವುದು ಎಂದರು.

ಮಂಚೇನಹಳ್ಳಿ ಹೋಬಳಿಯನ್ನು ಕೈಗಾರಿಕಾ ಕಾರಿಡಾರ್ ಆಗಿ ರೂಪಿಸಲಾಗುವುದು. ಇದರಿಂದ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಲಭ್ಯವಾಗಲಿವೆ. ಶೈಕ್ಷಣಿಕ ಕಾರಿಡಾರ್ ನಿಂದ ಎಲ್ಲರಿಗೂ ಉನ್ನತ ಶಿಕ್ಷಣ ವ್ಯಾಸಂಗ ಮಾಡಲು ಸಹಕಾರಿಯಾಗಲಿದೆ. ಹಂತ ಹಂತವಾಗಿ ಕ್ಷೇತ್ರವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಲು ನಿರಂತರ ಶ್ರಮಿಸಲಾಗುತ್ತಿದೆ ಎಂದರು.

ಥೀಮ್ಸ್ ಪಾರ್ಕ್ಸ ನಿರ್ಮಾಣದ ಕನಸು

ನಂದಿ ಭಾಗದಲ್ಲಿ ಜಾಗತಿಕ ಮಟ್ಟದ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವ ಪ್ರಯತ್ನ ನಡೆಯುತ್ತಿದ್ದು, ಇದು ಯಶಸ್ವಿಯಾದಲ್ಲಿ ಮುಂದಿನ ಐದಾರು ವರ್ಷದಲ್ಲಿ ಸುಮಾರು 1.5 ರಿಂದ 2 ಲಕ್ಷ ಕೋಟಿ ರೂಪಾಯಿ ಹೂಡಿಕೆಯಾಗಲಿದೆ. ಬೃಹತ್ ಯೋಜನೆ ಇದಾಗಿದ್ದು, ಐದಾರು ವರ್ಷಗಳಲ್ಲಿ ಹೂಡಿಕೆ ತರುವ ಪ್ರಯತ್ನದಲ್ಲಿದ್ದೇವೆ ಎಂದರು.

ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಇರಬೇಕು ಎಂಬುದು ನನ್ನ ಅಭಿಲಾಷೆ. ಕ್ಷೇತ್ರದ ಜನರಿಗೆ ತರುವ ಯೋಜನೆಗಳ ಬಗ್ಗೆ, ಜನರ ಪ್ರಗತಿಯ ಮೂಲಕ ಸಮೃದ್ಧಿಯ ಬದುಕು ಎಲ್ಲರಿಗೂ ಸಿಗುವಂತಾಗಬೇಕು. ಆಸ್ಪತ್ರೆಗಾಗಿ ಭೂಮಿ ದಾನ ಮಾಡಿದ ಅಪ್ಪಾಜಪ್ಪ ಅವರನ್ನು ಸ್ಮರಿಸಲೇಬೇಕು, ಸುಮಾರು 10 ಕೋಟಿಗೂ ಹೆಚ್ಚು ಮೌಲ್ಯದ ಭೂಮಿ ದಾನ ಮಾಡಿರುವುದು ಶ್ಲಾಘನೀಯ ಎಂದರು.

ಸಾರ್ಥಕತೆ ಬದುಕು ಅಗತ್ಯ

ಹುಟ್ಟು ಮತ್ತು ಸಾವಿನ ನಡುವೆ ಸಾರ್ಥಕತೆಯ ಬದುಕು ಬದುಕಿದರೆ ಜೀವನಕ್ಕೆ ಅರ್ಥ ಬರಲಿದೆ. ವ್ಯಕ್ತಿಯ ಖಾಸಗಿ ಬದುಕಿಗಿಂತ ಇತರರ ಜೀವನ ಸುಧಾರಣೆಗೆ ಶ್ರಮಿಸುವವರನ್ನು ಸಮಾಜ ಸ್ಮರಿಸುತ್ತದೆ. ಅಂತಹವರ ಸಾಲಿಗೆ ಅಪ್ಪಾಜಪ್ಪ ಅವರು ಸೇರುತ್ತಾರೆ. ಹಲವು ವರ್ಷಗಳಿಂದ ನಂದಿಯಲ್ಲಿ ಉತ್ತಮ ಆಸ್ಪತ್ರೆ ನಿರ್ಮಾಣದ ಕನಸು ಇತ್ತು, ರಾಜ್ಯದ ಜನರ ಆರೋಗ್ಯ ಕಾಪಾಡುವ ಹೊಣೆ ನನ್ನ ಹೆಗಲ ಮೇಲಿದೆ, ಅನೇಕರ ಜೀವ ಉಳಿಸುವ ಅವಕಾಶ ನೀವು ನೀಡಿದ್ದೀರಿ ಇದಕ್ಕೆ ಸದಾ ಋಣಿಯಾಗಿರುವುದಾಗಿ ಅವರು ಹೇಳಿದರು.

2 ಕೋಟಿ ವೆಚ್ಚದಲ್ಲಿ ಎಚ್ ಮಾದರಿಯ ಪ್ರಾಥಮಿಕ ಆರೋಗ್ಯಕೇಂದ್ರವಾಗಿ ಉನ್ನತೀಕರಣಗೊಳಿಸಲಾಗುತ್ತಿದೆ. ಜೊತೆಗೆ ಸಮುದಾಯ ಚಿಕಿತ್ಸಾ ಕೇಂದ್ರವಾಗಿ ಮೇಲ್ದರ್ಜೆಗೇರಿಸಲು ಶಿಫಾರಸ್ಸು ಮಾಡಲಾಗಿದೆ. ಇದರಿಂದ 30 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಂದಿ ಗ್ರಾಮಕ್ಕೆ ಬರಲಿದೆ. ಆರೋಗ್ಯಯುಕ್ತ ಸಮಾಜದಿಂದ ಸಂಪದ್ಬರಿತ ಸಮಾಜವಾಗಲು ಸಾಧ್ಯ. ಆರೋಗ್ಯಯುಕ್ತ ಸಮಾಜದಿಂದ ಸಂಪದ್ಬರಿತ ರಾಜ್ಯ ನಿರ್ಮಾಣ ಸಾಧ್ಯ ಎಂದು ಬಣ್ಣಿಸಿದರು.

15 ಲಕ್ಷ ವೆಚ್ಚದಲ್ಲಿ ಸುಂದರ ಉದ್ಯಾನ ನಿರ್ಮಾಣವಾಗಿದೆ, ಈ ಆಸ್ಪತ್ರೆಯಿಂದ ಅನೇಕರಿಗೆ ಸಹಾಯವಾಗಬೇಕು. ಸರ್ಕಾರಿ ವೈದ್ಯಕೀಯ ಕಾಲೇಜು ಜೊತೆಗೆ, ಸತ್ಯಸಾಯಿ ವೈದ್ಯಕೀಯ ಕಾಲೇಜು ಮಂಜೂರಾಗಿದೆ. ಇದು ಪವಾಡದ ರೀತಿಯಲ್ಲಿ ಕೇವಲ 48 ಗಂಟೆಗಳಲ್ಲಿ ಶಿಫಾರಸ್ಸು ಪಡೆದು ದೆಹಲಿ ತಲುಪಿದೆ ಎಂದರು.

ಈ ವೈದ್ಯಕೀಯ ಕಾಲೇಜು ಬಡ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತವಾಗಿ ಆರಂಭಿಸುತ್ತಿದ್ದಾರೆ. ನಂದಿ ಗ್ರಾಪಂ ವ್ಯಾಪ್ತಿಯ ಪ್ರತಿ ಹಳ್ಳಿಯಲ್ಲಿಯೂ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಇನ್ನೂ ಆಗಬೇಕಿದೆ, ಅಗತ್ಯಗಳು ಹೆಚ್ಚಾಗುತ್ತಲೇ ಇದೆ. ಅಭಿವೃದ್ಧಿ ಎಂಬುದು ನಿತ್ಯ ಹರಿಯುವ ನದಿಯಾಗಿದ್ದು, ನಿರಂತರವಾಗಿ ಅಭಿವೃದ್ಧಿ ಕಾರ್ಯಗಳು ಮುಂದುವರಿಯಬೇಕು ಎಂದು ಹೇಳಿದರು.

ಎತ್ತಿನಹೊಳೆ ನೀರು

ನಂದಿ ಭಾಗದ ಕೆರೆಗಳಿಗೆ ಎತ್ತಿನಹೊಳೆ ಮೂಲಕ ನೀರು ತುಂಬಿಸಲಾಗುವುದು. ಮುಂದಿನ ಒಂದು ವರ್ಷದಲ್ಲಿ ಶಾಶ್ವತವಾಗಿ ನೀರಿನ ಸಮಸ್ಯೆ ಪರಿಹಾರವಾಗಲಿದೆ. ತೆರೆದ ಬಾವಿಗಳಲ್ಲಿಯೂ ನೀರು ಬರುವ ಕಾಲ ಒಂದು ವರ್ಷದಲ್ಲಿ ನೋಡಲಿದ್ದೀರಿ, ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ನೀರಿನ ಸಮಸ್ಯೆ ಪರಿಹಾರವಾಗಲಿದೆ ಎಂದರು.

ಇಂದು ಔಷಧ ಉಗ್ರಾಣ ನಿರ್ಮಾಣಕ್ಕೆ ಭೂಮಿಪೂಜೆ ಸೇರಿದಂತೆ 5.5 ಕೋಟಿ ವೆಚ್ಚದ ನಾನಾ ರೀತಿಯ ಆರೋಗ್ಯ ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಲಾಗಿದೆ. ಇದು ಇನ್ನೂ ಮುಂದುವರಿಯಲಿದೆ. ಕ್ಷೇತ್ರವನ್ನು ಜಾಗತಿಕ ಮಟ್ಟದಲ್ಲಿ ಖ್ಯಾತಿ ಪಡೆಯುವ ಕನಸು ಹೊತ್ತು ಕೆಲಸ ಮಾಡುತ್ತಿರುವುದಾಗಿ ಹೇಳಿದರು.

ಜನರ ವಿಶ್ವಾಸ ಗಳಿಸುವಂತೆ ಕರ್ತವ್ಯ ನಿರ್ವಹಿಸಿ

ಆರೋಗ್ಯ ಕೇಂದ್ರಗಳು ಜನರ ವಿಶ್ವಾಸ ಗಳಿಸುವ ಕೇಂದ್ರಗಳಾಗಬೇಕು. ಜನರಲ್ಲಿ ನಂಬಿಕೆ ಮತ್ತು ವಿಶ್ವಾಸ ಮೂಡಿಸಬೇಕು, ಸಮಯಕ್ಕೆ ಸರಿಯಾಗಿ ಬಂದು ಕಾರ್ಯನಿರ್ವಹಿಸುವ ಮೂಲಕ ಜನಸೇವೆ ಮಾಡಬೇಕು. ಇದರಿಂದ ಜನರಿಗೆ ಸರ್ಕಾರಿ ಆಸ್ಪತ್ರೆಗಳ ಮೇಲೆ ನಂಬಿಕೆ ಮತ್ತು ವಿಶ್ವಾಸ ಮೂಡಲಿದೆ ಎಂದರು.

ಈ ವಿಶ್ವಾಸ ಗಳಿಸದ ಪಕ್ಷದಲ್ಲಿ ಜನ ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಾರೆ, ಖಾಸಗಿ ಆಸ್ಪತ್ರೆಗಳು ಹಣ ಮಾಡುವ ಉದ್ಧೇಶದಿಂದ ಕಾರ್ಯನಿರ್ವಹಿಸುತ್ತಿವೆ. ಹತ್ತು ಪಟ್ಟು ಹೆಚ್ಚು ಹಣ ವಸೂಲಿ ಮಾಡುತ್ತಿವೆ. ವಸೂಲಿಗೆ ಕಡಿವಾಣ ಹಾಕಲು ಕ್ರಮ ಜರುಗಿಸಲಾಗುತ್ತಿದೆ. ಆರೋಗ್ಯ ಸುಲಭ ಮತ್ತು ಉಚಿತವಾಗಿ ಸಿಗುವಂತಾಗಬೇಕು. ಖಾಸಗಿ ಆಸ್ಪತ್ರೆಗಳಲ್ಲಿಯೂ ಚಿಕಿತ್ಸೆಯ ಬೆಲೆ ಸಾಮಾನ್ಯರ ಕೈಗೆಟುಕುವ ದರದಲ್ಲಿ ಸಿಗುವಂತಾಗಬೇಕು ಎಂಬ ಕನಸು ಹೊಂದಿರುವುದಾಗಿ ಅವರು ಹೇಳಿದರು.

ನಿಮ್ಮ ಶ್ರೇಯಸ್ಸು ಬಯಸಿದವರನ್ನು ಬೆಂಬಲಿಸಿ

ನಂದಿ ಹೋಬಳಿಯ 12 ಸ್ತ್ರೀ ಶಕ್ತಿ ಸಂಘಗಳ 141 ಮಹಿಳೆಯರಿಗೆ 43.28 ಲಕ್ಷ ಸಾಲ ವಿತರಣೆ ಮಾಡಲಾಗುತ್ತಿದೆ. ಈ ಮಹಿಳೆಯರಲ್ಲಿ ಎಲ್ಲ ಧರ್ಮ, ಎಲ್ಲ ಸಮುದಾಯದವರೂ ಇದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ನಾನು ಯಾವುದೇ ಭಿನ್ನತೆ ತೋರಿಲ್ಲ. ಸೌಲಭ್ಯಗಳ ವಿತರಣೆಯಲ್ಲಿಯೂ ಜಾತಿ, ಧರ್ಮ ನೋಡಿಲ್ಲ. ನಿಜವಾದ ಬಡವರು ಫಲಾನುಭವಿಗಳಾಗಬೇಕು ಎಂಬುದು ನನ್ನ ಆಶಯ ಎಂದರು.

ಕ್ಷೇತ್ರದ ಪ್ರತಿಯೊಬ್ಬ ಪ್ರಜೆಯ ಶ್ರೇಯಸ್ಸು ಬಯಸಿದ್ದೇನೆ. ನಿಮ್ಮ ಪರವಾಗಿ ಕೆಲಸ ಮಾಡಿದವರಿಗೆ ನೀವು ಬೆಂಬಲಿಸಿ. ನಾನು ಆ ವಿಶ್ವಾಸ ಗಳಿಸಿದ್ದರೆ ಮಾತ್ರ ನನ್ನ ಮರು ಆಯ್ಕೆ ಮಾಡಬೇಕು. ಆರ್ಥಿಕವಾಗಿ ಎಲ್ಲರೂ ಸದೃಢರಾಗಬೇಕು. ಆಗ ಮಾತ್ರ ಸಮಾಜಕ್ಕೆ ಅರ್ಥ ಬರಲಿದೆ. ಶೇ.50 ರಷ್ಟು ಮಹಿಳೆಯರು ದೇಶದಲ್ಲಿದ್ದಾರೆ. ಮಹಿಳೆಯರೂ ಪುರಷರಿಗೆ ಸಮಾನವಾಗಿ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕು ಎಂಬ ಆಶಯ ಹೊಂದಿದ್ದೇನೆ ಎಂದರು.

ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರಿಗೆ ಅವಕಾಶ ಕಲ್ಪಿಸಬೇಕು, ಮಹಿಳೆಯರನ್ನು ಸಬಲೆಯರನ್ನಾಗಿ ಮಾಡಲು ಶ್ರಮಿಸಲಾಗುತ್ತಿದೆ. ಸ್ವಾಮಿ ವಿವೇಕಾನಂದರು ಹೇಳಿದಂತೆ ಪಕ್ಷಿಯ ರೆಕ್ಕಗಳಂತೆ ಪುರುಷ ಮತ್ತು ಮಹಿಳೆಯರು ಸಮಾನವಾಗಿ ಬೆಳೆಯಬೇಕು ಎಂದಿದ್ದಾರೆ, ನೀವು ತೊಡಗಿಸಿಕೊಳ್ಳುವ ಕ್ಷೇತ್ರದಲ್ಲಿ ನಿಮಗೆ ಯಶ ಸಿಗಲಿ ಎಂದರು.

ಕಾರ್ಯಕ್ರಮದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ. ನಾಗರಾಜ್, ಮಂಜುನಾಥ್, ರಾಮಸ್ವಾಮಿ, ಮುರಳಿ, ಶ್ರೀನಿವಾಸ್, ಸುಧಾವೆಂಕಟೇಶ್, ಮುನಿ ನಾರಾಯಣಪ್ಪ, ಮುನಿಸ್ವಾಮಿ, ನಾರಾಯಣಸ್ವಾಮಿ, ಸತ್ಯನಾರಾಯಣರೆಡ್ಡಿ, ಕುಮಾರ್, ಬುಲೆಟ್ ನಾರಾಯಣಸ್ವಾಮಿ ಸೇರಿದಂತೆ ಆರೋಗ್ಯ ಇಲಾಖೆ ಅಕಾರಿಗಳು ಉಪಸ್ಥಿತರಿದ್ದರು

Leave a Reply