ರೈತರ ಮಕ್ಕಳ ಶಿಕ್ಷಣಕ್ಕೆ ಬೊಮ್ಮಾಯಿ ಸರ್ಕಾರ ಆದ್ಯತೆ ನೀಡಿದೆ: ಡಾ. ಕೆ. ಸುಧಾಕರ್
ಮೊಟ್ಟೆ ಎಸೆತ ಪ್ರಕರಣಕ್ಕೆ ತೆರೆ ಎಳೆಯದಿದ್ದರೆ ಜನರೇ ತಿರುಗೇಟು ನೀಡಲಿದ್ದಾರೆ ಎಂದು ಎಚ್ಚರಿಕೆ ನೀಡಿದ ಸಚಿವ ಸುಧಾಕರ್
ನೆಲಮಂಗಲ: ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ರಾಜ್ಯದ 9 ಸಾವಿರ ಸರ್ಕಾರಿ ಶಾಲೆಗಳಲ್ಲಿ ಕೊಠಡಿ ನಿರ್ಮಾಣಕ್ಕೆ 500 ಕೋಟಿ ಅನುದಾನ ಮೀಸಲಿರಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದರು.
ಬೆಂಗಳೂರುಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಮಣ್ಣೆ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ”ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದ ಅವರು ಶಿಕ್ಷಣದಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಶಿಕ್ಷಣದ ಅಬಿವೃದ್ಧಿಗಾಗಿ ರಾಜ್ಯ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಡವರಿಗೆ 75 ಯೂನಿಟ್ ವಿದ್ಯುತ್ ಉಚಿತವಾಗಿ ಸರ್ಕಾರ ನೀಡುತ್ತಿದೆ. ಭೂಮಿ ಹೊಂದಿರುವ ಪ್ರತಿ ರೈತನಿಗೆ ವಾರ್ಷಿಕವಾಗಿ ಕೇಂದ್ರ ಸರ್ಕಾರ 6 ಸಾವಿರ ಮತ್ತು ರಾಜ್ಯ ಸರ್ಕಾರ 4 ಸಾವಿರ ಸೇರಿ ಒಟ್ಟು ಹತ್ತು ಸಾವಿರ ರೂಪಾಯಿಗಳನ್ನು ಅವರ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತಿದೆ ಎಂದರು.
ರೈತರ ಮಕ್ಕಳು ಉನ್ನತ ವಿದ್ಯಾಭ್ಯಾಸ ಮಾಡುವ ಉದ್ದೇಶದಿಂದ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಮೊದಲು ಪ್ರಕಟಿಸಿದ ಯೋಜನೆ ವಿದ್ಯಾನಿಧಿ. ಇದರಿಂದಾಗಿ ರಾಜ್ಯದ 10 ಲಕ್ಷ ಮಂದಿ ರೈತರ ಮಕ್ಕಳು ಇದರ ಫಲಾನುಭವಿಗಳಾಗಿದ್ದಾರೆ. ಶಿಕ್ಷಣ ಪ್ರೋತ್ಸಾಹದಿಂದ ಯುವಪೀಳಿಗೆ ಸ್ವಾವಲಂಬಿಯಾಗಲಿದೆ. ಹಾಗಾಗಿ ರಾಜ್ಯ ಸರ್ಕಾರ ಶಿಕ್ಷಣಕ್ಕೆ ವಿಶೇಷ ಒತ್ತು ನೀಡುತ್ತಿದೆ ಎಂದರು.
ನೆಲಮಂಗಲ ಬೆಂಗಳೂರಿಗೆ ಹೊಂದಿಕೊಂಡಿದೆ. ಈ ಭಾಗದ ರೈತರ ಸ್ವಾಭಿಮಾನ ಹೆಚ್ಚಾಗಬೇಕು, ರೈತರ ಜಮೀನುಗಳಿಗೆ ಬೆಲೆ ಬಂದ ರೀತಿಯಲ್ಲಿ ರೈತರ ಮಕ್ಕಳಿಗೆ ಉದ್ಯೋಗ ಸಿಗುವಂತಾಗಬೇಕು. ಸ್ಯಾಟಿಲೈಟ್ ನಗರವಾಗಿ ನೆಲಮಂಗಲ ಅಭಿವೃದ್ಧಿಯಾಗಬೇಕು ಎಂಬ ಕನಸು ರಾಜ್ಯ ಸರ್ಕಾರಕ್ಕಿದ್ದು, ಇದಕ್ಕಾಗಿ ಪ್ರಾಮಾಣಿಕ ಸಹಕಾರ ನೀಡುವ ಮೂಲಕ ನೆಲಮಂಗಲವನ್ನು ಮಾದರಿ ಕ್ಷೇತ್ರವಾಗಿ ಮುಂದಿನ ದಿನಗಳಲ್ಲಿ ನೋಡಲಿದ್ದೀರಿ ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಕೇಂದ್ರ ಘೋಷಣೆಯಲ್ಲಿ ಯಾವುದೇ ಗೊಂದಲವಿಲ್ಲ. ಜಿಲ್ಲಾ ಕಚೇರಿ ನಿರ್ಮಾಣವಾಗಿ ಯಾವ ಕಾಲವಾಯಿತು. ಜಿಲ್ಲಾ ಕಚೇರಿ ಒಂದು ಕಡೆ ಜಿಲ್ಲಾಕೇಂದ್ರ ಮತ್ತೊಂದು ಕಡೆ ಮಾಡಲು ಸಾಧ್ಯವೇ ಎಂದು ಸಚಿವರು ಪ್ರಶ್ನಿಸಿದರು. ಜಿಲ್ಲಾಕೇಂದ್ರ ಗೊಂದಲದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲಿ ಜಿಲ್ಲಾಕಚೇರಿ ಇದೆಯೋ ಅಲ್ಲಿಯೇ ಜಿಲ್ಲಾಕೇಂದ್ರ ಇರಬೇಕು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಸರು ಮುಂದುವರಿಸಲು ನಿರ್ಧರಿಸಲಾಗಿದೆ. ಇದಕ್ಕೆ ಗೊಂದಲ ಅನಗತ್ಯ, ದೇವನಹಳ್ಳಿ ಜಿಲ್ಲಾಕೇಂದ್ರವಾಗಿ ಘೋಷಣೆಯಾಗಲಿದೆ ಎಂದರು.
ಮಡಿಕೇರಿಯಲ್ಲಿ ವಿರೋಧಪಕ್ಷದ ನಾಯಕರ ಕಾರಿನ ಮೇಲೆ ನಡೆದ ಮೊಟ್ಟೆ ದಾಳಿಗೆ ಸಂಬಂಧಿಸಿ ಡಿ.ಕೆ. ಶಿವಕುಮಾರ್ ಅವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಮುಖ್ಯಮಂತ್ರಿ ಸೇರಿದಂತೆ ಎಲ್ಲರೂ ಈ ಘಟನೆಯನ್ನು ಖಂಡಿಸಿದ್ದೇವೆ. ಇದಕ್ಕೆ ಸಂಬಂಧಿಸಿ ಕ್ರಮವನ್ನು ಕೈಗೊಳ್ಳಲಾಗಿದೆ, ಹೀಗಿರುವಾಗ ಇನ್ನೇನು ಮಾಡಬೇಕು ಎಂದು ಪ್ರಶ್ನಿಸಿದರು.
ಪ್ರಕರಣವನ್ನ ಇಲ್ಲಿಗೇ ಬಿಟ್ಟರೆ ಅವರಿಗೇ ಒಳ್ಳೆಯದು. ಅದು ಬಿಟ್ಟು ಇದನ್ನು ರಾಜಕೀಯವಾಗಿ ಬಳಸಿಕೊಳ್ಳುವ ಹುನ್ನಾರ ಮಾಡಿದರೆ ಅವರು ಮುಂದುವರಿಯಲಿ ಎಂದರು. ರಾಜ್ಯದಲ್ಲಿ ಅಶಾಂತಿ ಉಂಟು ಮಾಡುವ ದುರುದ್ಧೇಶ ಇದ್ದರೆ ನಾವೇನು ಮಾಡಲಾಗುತ್ತೆ ಎಂದು ತಿರುಗೇಟು ನೀಡಿದರು.
ಅವರ ಮುಂಚೂಣಿ ಘಟಕದ ಯುವ ಮುಖಂಡರು ಏನು ಮಾಡುತ್ತಿದ್ದಾರೆ ಎಂಬುದನ್ನು ನೋಡಲಿ, ಅವರನ್ನು ಹದ್ದುಬಸ್ತಿನಲ್ಲಿಡಲು ಅವರಿಂದ ಆಗಿದೆಯೇ ಎಂದು ಅವರನ್ನು ಕೇಳಿ, ಮಡಿಕೇರಿ ಘಟನೆಗೆ ಕಾರಣರಾದ ಕಾರ್ಯಕರ್ತ ಯಾರು ಎಂಬುದು ಸರಿಯಾಗಿ ಇನ್ನೂ ಗೊತ್ತಾಗಿಲ್ಲ. ಘಟನೆಯಲ್ಲಿ ಭಾಗಿಯಾದವರನ್ನು ಬಂಧಿಸಲಾಗಿದೆ. ಮುಖ್ಯಮಂತ್ರಿ ಆದಿಯಾಗಿ ಎಲ್ಲರೂ ಘಟನೆಯನ್ನು ಖಂಡಿಸಿದ್ದೇವೆ, ಜೊತೆಗೆ ಹೆಚ್ಚಿನ ಭದ್ರತೆ ನೀಡುವುದಾಗಿ ಹೇಳಿದ್ದೇವೆ, ಇಷ್ಟಾದರೂ ಮುಂದುವರಿಸುವುದಾದರೆ ಜನರಿಗೆ ಇವರ ನಿಜಬಣ್ಣ ಅರ್ಥವಾಗಲಿದೆ. ಜನರೇ ಇವರಿಗೆ ಉತ್ತರಿಸುತ್ತಾರೆ ಎಂದರು.




