171. ವಿಧಾನ ಪರಿಷತ್ತುಗಳ ಸಂರಚನೆ:- (1) ವಿಧಾನಪರಿಷತ್ತು ಇರುವ ರಾಜ್ಯದಲ್ಲಿ ವಿಧಾನ ಪರಿಷತ್ತಿನ ಸದಸ್ಯರ ಒಟ್ಟು ಸಂಖ್ಯೆಯು, ಆ ರಾಜ್ಯದ ವಿಧಾನಸಭೆಯ ಸದಸ್ಯರ ಒಟ್ಟು ಸಂಖ್ಯೆಯ [ಮೂರನೆಯ ಒಂದು ಭಾಗವನ್ನು] (1956ನೇ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 10ನೆಯ ಪ್ರಕರಣದ ಮೇರೆಗೆ “ಕಾಲು ಭಾಗಕ್ಕಿಂತಲೂ” ಎಂಬುದಕ್ಕೆ ಬದಲಾಗಿ (1-11-56ರಿಂದ ಜಾರಿಗೆ ಬರುವಂತೆ) ಪ್ರತ್ಯಾಯೋಜಿಸಲಾಗಿದೆ.) ಮೀರತಕ್ಕದ್ದಲ್ಲ:
ಪರಂತು, ಒಂದು ರಾಜ್ಯದ ವಿಧಾನಪರಿಷತ್ತಿನ ಸದಸ್ಯರ ಒಟ್ಟು ಸಂಖ್ಯೆಯು ಯಾವುದೇ ಸಂದರ್ಭದಲ್ಲಿ ನಲವತ್ತಕ್ಕಿಂತಲೂ ಕಡಿಮೆಯಾಗಿರತಕ್ಕದ್ದಲ್ಲ.
(2) ಸಂಸತ್ತು ಕಾನೂನಿನ ಮೂಲಕ ಅನ್ಯಥಾ ಉಪಬಂಧಿಸುವವರೆಗೆ, ಒಂದು ರಾಜ್ಯದ ವಿಧಾನಪರಿಷತ್ತಿನ ರಚನೆಯು (3)ನೆಯ ಖಂಡದಲ್ಲಿ ಉಪಬಂಧಿಸಿರುವಂತೆ ಇರತಕ್ಕದ್ದು.
(3) ಒಂದು ರಾಜ್ಯದ ವಿಧಾನಪರಿಷತ್ತಿನ ಸದಸ್ಯರ ಒಟ್ಟು ಸಂಖ್ಯೆಯಲ್ಲಿ,-
(ಎ) ಆದಷ್ಟು ಮಟ್ಟಿಗೆ ಮೂರನೆಯ ಒಂದು ಭಾಗದಷ್ಟು ಸದಸ್ಯರು ಆ ರಾಜ್ಯದಲ್ಲಿನ ಪೌರಸಭೆಗಳ, ಜಿಲ್ಲಾ ಮಂಡಳಿಗಳ ಮತ್ತು ಸಂಸತ್ತು ಕಾನೂನಿನ ಮೂಲಕ ನಿರ್ದಿಷ್ಟಪಡಿಸಬಹುದಾದಂಥ ಇತರ ಸ್ಥಳೀಯ ಪ್ರಾಧಿಕಾರಗಳ ಸದಸ್ಯರನ್ನು ಒಳಗೊಂಡಿರುವ ಮತದಾರರ ಗಣಗಳಿಂದ ಚುನಾಯಿತರಾಗತಕ್ಕದ್ದು;
(ಬಿ) ಆದಷ್ಟುಮಟ್ಟಿಗೆ ಹನ್ನೆರಡನೆಯ ಒಂದು ಭಾಗದಷ್ಟು ಸದಸ್ಯರು ಭಾರತದ ರಾಜ್ಯಕ್ಷೇತ್ರದಲ್ಲಿನ ಯಾವುದೇ ವಿಶ್ವವಿದ್ಯಾನಿಲಯದ ಪದವೀಧರರಾಗಿ ಕನಿಷ್ಠ ಪಕ್ಷ ಮೂರು ವರ್ಷಗಳಾದರೂ ಆಗಿರುವ ಅಥವಾ ಅಂಥ ಯಾವುದೇ ವಿಶ್ವವಿದ್ಯಾನಿಲಯದ ಪದವೀಧರನಿಗೆ ಸಮಾನವಾದ ಅರ್ಹತೆಗಳೆಂದು ಸಂಸತ್ತು ಯಾವುದೇ ಕಾನೂನಿನ ಮೂಲಕ ಅಥವಾ ಅದರ ಮೇರೆಗೆ ನಿಯಮಿಸಿದ ಅರ್ಹತೆಗಳನ್ನು ಪಡೆದು ಕನಿಷ್ಠಪಕ್ಷ ಮೂರು ವರ್ಷಗಳಾದರೂ ಆಗಿರುವ ಮತ್ತು ಆ ರಾಜ್ಯದಲ್ಲಿ ವಾಸಿಸುತ್ತಿರುವ ವ್ಯಕ್ತಿಗಳನ್ನು ಒಳಗೊಂಡಿರುವ ಮತದಾರರ ಗಣಗಳಿಂದ ಚುನಾಯಿತರಾಗತಕ್ಕದ್ದು;
(ಸಿ) ಆದಷ್ಟು ಮಟ್ಟಿಗೆ ಹನ್ನೆರಡನೆಯ ಒಂದು ಭಾಗದಷ್ಟು ಸದಸ್ಯರು ಸಂಸತ್ತು ಮಾಡಿದ ಯಾವುದೇ ಕಾನೂನಿನ ಮೂಲಕ ಅಥವಾ ಅದರ ಮೇರೆಗೆ ನಿಯಮಿಸಬಹುದಾದಂತೆ ರಾಜ್ಯದಲ್ಲಿನ ಪ್ರೌಢಶಾಲೆಯ ದರ್ಜೆಗೆ ಕಡಿಮೆ ಇಲ್ಲದಂತಹ ದರ್ಜೆಯ ಶಿಕ್ಷಣ ಸಂಸ್ಥೆಗಳಲ್ಲಿ ಕನಿಷ್ಠಪಕ್ಷ ಮೂರು ವರ್ಷಗಳಿಂದಾದರೂ ಬೋಧನೆಯಲ್ಲಿ ತೊಡಗಿರುವ ವ್ಯಕ್ತಿಗಳನ್ನೊಳಗೊಂಡಿರುವ ಮತದಾರರ ಸಮುದಾಯಗಳಿಂದ ಚುನಾಯಿತರಾಗತಕ್ಕದ್ದು;
(ಡಿ) ಆದಷ್ಟು ಮಟ್ಟಿಗೆ ಮೂರನೆಯ ಒಂದು ಭಾಗದಷ್ಟು ಸದಸ್ಯರನ್ನು, ಆ ರಾಜ್ಯದ ವಿಧಾನಸಭೆಯ ಸದಸ್ಯರು ಆ ಸಭೆಯ ಸದಸ್ಯರಲ್ಲದ ವ್ಯಕ್ತಿಗಳಿಂದ ಚುನಾಯಿಸತಕ್ಕದ್ದು;
(ಇ) ಉಳಿದ ಸದಸ್ಯರು (5)ನೆಯ ಖಂಡದ ಉಪಬಂಧಗಳಿಗೆ ಅನುಸಾರವಾಗಿ ಆ ರಾಜ್ಯದ ರಾಜ್ಯಪಾಲನಿಂದ ನಾಮನಿರ್ದೇಶಿತರಾಗತಕ್ಕದ್ದು.
(4) (3)ನೆಯ ಖಂಡದ (ಎ), (ಬಿ) ಮತ್ತು (ಸಿ) ಉಪಖಂಡಗಳ ಮೇರೆಗೆ ಚುನಾಯಿತರಾಗಬೇಕಾದ ಸದಸ್ಯರು ಸಂಸತ್ತು ಮಾಡಿದ ಯಾವುದೇ ಕಾನೂನಿನ ಮೂಲಕ ಅಥವಾ ಅದರ ಮೇರೆಗೆ ನಿಯಮಿಸಬಹುದಾದಂಥ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಿಂದ ಆಯ್ಕೆಯಾಗತಕ್ಕದ್ದು ಮತ್ತು ಸದರಿ ಉಪಖಂಡಗಳ ಮೇರೆಗೆ ಮತ್ತು ಸದರಿ ಖಂಡದ (ಡಿ) ಉಪಖಂಡದ ಮೇರೆಗೆ ನಡೆಯುವ ಚುನಾವಣೆಗಳು ಪ್ರಮಾಣಾನುಸಾರ ಪ್ರಾತಿನಿಧ್ಯ ಪದ್ಧತಿಗನುಸಾರ ಏಕವರ್ಗಾವಣೀಯ ಮತದ ಮೂಲಕ ನಡೆಯತಕ್ಕದ್ದು.
(5) ರಾಜ್ಯಪಾಲನಿಂದ (3)ನೆಯ ಖಂಡದ (ಇ) ಉಪಖಂಡದ ಮೇರೆಗೆ ನಾಮನಿರ್ದೇಶಿತರಾಗಬೇಕಾದ ಸದಸ್ಯರು ಕೆಳಕಂಡ ವಿಷಯಗಳಿಗೆ ಸಂಬಂಧಿಸಿದಂತೆ ಎಂದರೆ,-
ಸಾಹಿತ್ಯ, ವಿಜ್ಞಾನ, ಕಲೆ, ಸಹಕಾರ ಚಳವಳಿ ಮತ್ತು ಸಮಾಜ ಸೇವೆಗಳಲ್ಲಿ ವಿಶೇಷ ಜ್ಞಾನವನ್ನು ಅಥವಾ ವ್ಯಾವಹಾರಿಕ ಅನುಭವವನ್ನು ಪಡೆದವರಾಗಿರತಕ್ಕದ್ದು.
Source: The Constitution Of India (AS ON 14th JANUARY 2019), Government Of India, Ministry of Law and Justice, Legislative Department, Karnataka Official Language (Legislative) Commission and Directorate of Translations, Government of Karnataka, Page No. 67-68




