ಬಹುಶಃ ಗಾಲಿ ಜನಾರ್ದನ ರೆಡ್ಡಿ ಮನಃಸ್ಥಿತಿ ಇನ್ನೂ ಬದಲಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಅದರ ಪ್ರೇರಣೆಯಿಂದಲೇ ಇಂದಿನ ವಿಧಾನಸಭಾ ಜಂಟಿ ಕಲಾಪದಲ್ಲಿ ರಾಜ್ಯಪಾಲರು ಹಿಡಿದ ಅಡ್ಡ ದಾರಿಯನ್ನು ಖಂಡಿಸಿದ ಕಾಂಗ್ರೆಸ್ಸಿಗರ ಕುರಿತು ಅದರಲ್ಲೂ ಮೇಧಾವಿ ನಾಯಕ ಬಿ.ಕೆ.ಹರಿಪ್ರಸಾದ್ ರವರನ್ನು ಕೇಂದ್ರೀಕರಿಸಿ ‘ಕರ್ನಾಟಕದಲ್ಲಿ ರೌಡಿಗಳ ದರ್ಬಾರ್’ ಎಂಬರ್ಥದಲ್ಲಿ ಗಾಲಿ ಜನಾರ್ಧನ ರೆಡ್ಡಿ ತನ್ನ ವಿಕೃತಿ ಕಾರಿಕೊಂಡಿದ್ದಾನೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಹಿಂದೊಮ್ಮೆ ಜನಾರ್ಧನ ರೆಡ್ಡಿ ಕೇಂದ್ರಿತ ‘ರಿಪಬ್ಲಿಕ್ ಬಳ್ಳಾರಿ’ ಕುರಿತು ಎಂ.ಪಿ.ಪ್ರಕಾಶರು ಗುಡುಗಿದ್ದಾಗ, ಅನಾರೋಗ್ಯ ಪೀಡಿತರಾಗಿದ್ದ ಅವರ ಕುರಿತು ‘ಸ್ಮಶಾನಕ್ಕೆ ಕಾಲು ಚಾಚಿದವರಿಂದ ಬುದ್ದಿ ಹೇಳಿಸಿಕೊಳ್ಳುವ ಅಗತ್ಯವಿಲ್ಲ’ ಎಂದು ಗಾಲಿ ರೆಡ್ಡಿ ನೀಚತನ ಪ್ರದರ್ಶಿಸಿದ್ದನ್ನು ಇನ್ನೂ ಅಖಂಡ ಬಳ್ಳಾರಿ ಜಿಲ್ಲೆಯ ಜನ ಮರೆತಿಲ್ಲ. ಅದಕ್ಕೆ ಎಂ.ಪಿ.ಪ್ರಕಾಶರು ‘ಹುಟ್ಟಿದವರ್ಯಾರು ಇಲ್ಲಿ ಶಾಶ್ವತವಾಗಿ ಉಳಿದ ಇತಿಹಾಸವಿಲ್ಲ’ ಎಂದು ತಣ್ಣಗೆಯೇ ಪ್ರತಿಕ್ರಿಯಿಸಿದ್ದರು! ರಾಜಕೀಯ ವಿರಸ ಬಂದಾಗ ಗೆಳೆಯ ಶ್ರೀರಾಮುಲು ಕುರಿತಾಗಿಯೂ ಜನಾರ್ಧನ ರೆಡ್ಡಿ ಬಳಸಿದ ಪದಬಳಕೆ ಎಷ್ಟು ಕೀಳು ಮಟ್ಟದ್ದಾಗಿತ್ತು ಎಂಬುದನ್ನು ನಾನಿಲ್ಲಿ ಒತ್ತಿ ಹೇಳುವ ಅಗತ್ಯವಿಲ್ಲ!
ಅದೂ ಸಾಲದೆಂಬಂತೆ ವಿಧಾನಸಭಾ ಕಲಾಪದಲ್ಲಿ ಅಕ್ರಮ ಗಣಿಗಾರಿಕೆಯ ವಿಷಯ ಪ್ರಸ್ತಾಪವಾದಾಗ ಗಾಲಿ ಜನಾರ್ಧನ ರೆಡ್ಡಿ ತೊಡೆ ತಟ್ಟಿದ್ದು ಆತನಲ್ಲಿಯ ‘ಗೂಂಡಾ’ ಪ್ರವೃತ್ತಿಯನ್ನು ಜಗಜ್ಜಾಹೀರು ಮಾಡಿತ್ತು. ನಂತರ ಅದೇ ನೆಪದಲ್ಲಿ ಬಳ್ಳಾರಿ ಪಾದಯಾತ್ರೆ ಆರಂಭವಾಗಿ ಗಾಲಿ ಜನಾರ್ದನ ರೆಡ್ಡಿಯ ಅಕ್ರಮ ಸಿಂಡಿಕೇಟ್ ಧೂಳಿಪಟವಾಗಿ ಇನ್ನೂ ಮೇಲೇಳದ ಸ್ಥಿತಿ ತಲುಪಿರುವ ವಿಚಾರ ನಾಡಿನ ಜನತೆಗೆ ಗೊತ್ತು! ಅದನ್ನು ನಾನಿಲ್ಲಿ ವಿಸ್ತಾರವಾಗಿ ಹೇಳುವ ಅಗತ್ಯವಿಲ್ಲ!
ಆಧಿವಾಸಿ ಬುಡಕಟ್ಟು ಸಮುದಾಯಗಳ ಆರಾಧ್ಯ ದೇವತೆ ಸುಂಕಲಮ್ಮನ ದೇವಸ್ಥಾನವನ್ನು ಒಡೆದು ಹಾಕಿ, ಕರ್ನಾಟಕ-ಆಂಧ್ರಪ್ರದೇಶ ಗಡಿಯನ್ನೇ ಸ್ಥಾನಪಲ್ಲಟ ಮಾಡಿ ಈಗಲೂ ಕೋರ್ಟಿಗೆ ಅಂಡೆಲೆಯುತ್ತಿರುವ ಗಾಲಿ ಜನಾರ್ಧನ ರೆಡ್ಡಿಯಂತೆ, ಬಿ.ಕೆ.ಹರಿಪ್ರಸಾದ್ ನಾಡಿನ ಸಂಪತ್ತಿನ ಲೂಟಿಯ ಭಾಗವಾಗಿ ಯಾವ ಕೆಲಸವೂ ಮಾಡಿಲ್ಲ. ಸಾರ್ವಜನಿಕ ಹಿತಾಸಕ್ತಿಯ ವಿಚಾರಕ್ಕೆ ಬಂದಾಗ ಬಿ.ಕೆ.ಹರಿಪ್ರಸಾದ್, ಸ್ವತಃ ತಮ್ಮ ಪಕ್ಷದ ಅಧಿಕಾರದ ವಿರುದ್ದವೇ ಗುಡುಗಿರುವ ಸಾಕಷ್ಟು ಉದಾಹರಣೆಗಳಿವೆ. ನಾಡಿನ ಶುದ್ದ ಹಾಗೂ ಸುಸಂಸ್ಕೃತ ರಾಜಕಾರಣದ ಕೊಂಡಿಯಂತಿರುವ ಬಿ.ಕೆ.ಹರಿಪ್ರಸಾದ್ ನಡೆದು ಬಂದ ದಾರಿಗೂ, ಗಾಲಿ ಜನಾರ್ಧನ ರೆಡ್ಡಿ ಪ್ರವರ್ಧಮಾನಕ್ಕೆ ಬಂದ ದಾರಿಗಳಿಗೂ ಅಜಗಜಾಂತರ ವ್ಯತ್ಯಾಸಗಳಿವೆ!
ನಾಡಿನ ಮಣ್ಣನ್ನು ಅಕ್ರಮವಾಗಿ ಚಿನ್ನದ ದರಕ್ಕೆ ಮಾರಿದ ದೊಡ್ಡ ಇತಿಹಾಸ ಜನಾರ್ಧನ ರೆಡ್ಡಿ ಬೆನ್ನಿಗಿದೆ. ಗಣಿ ಅಕ್ರಮಗಳಿಗೆ ಕಾಂಗ್ರೆಸ್-ಬಿಜೆಪಿ-ಜೆ.ಡಿ.ಎಸ್ ಎಂಬ ಮಾನದಂಡಗಳು ಅನ್ವಯಿಸುವುದಿಲ್ಲ.ಅಖಂಡ ಬಳ್ಳಾರಿ ಜಿಲ್ಲೆಯ ಜನತೆ ಮೂರೂ ಆಯಾಮಗಳನ್ನು ನೋಡಿದ್ದಾರೆ. ಹಾಗಂತ ಜನಾರ್ಧನ ರೆಡ್ಡಿ ಅಧಿಕಾರಾವಧಿಯ ಲೂಟಿಯನ್ನೂ, ಇತರೆ ಪಕ್ಷಗಳ ಅಧಿಕಾರದ ಅವಧಿಯಲ್ಲಿನ ಲೂಟಿ ರಾಜಕಾರಣವನ್ನು ಅಳೆದು ತೂಗಿದರೆ, ಗಾಲಿ ಜನಾರ್ಧನ ರೆಡ್ಡಿ ತೂಕ ಎಲ್ಲರಿಗಿಂತಲೂ ಹೆಚ್ಚೇ ಆಗುತ್ತದೆ! ಇದನ್ನು ಸಾಬೀತುಪಡಿಸಲು ನನ್ನ ಬಳಿ ಸಾಕಷ್ಟು ಪುರಾವೆಗಳಿವೆ. ಪ್ರತಾಪ್ ಸಿಂಹ ಬರೆದ ‘ಮೈನಿಂಗ್ ಮಾಫೀಯಾ’ ಜೊತೆಗೆ ಲೋಕಾಯುಕ್ತರಾಗಿದ್ದ ಸಂತೋಷ್ ಹೆಗಡೆಯವರು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ವರದಿ ಇದಕ್ಕೆ ಪೂರಕವಾಗಿವೆ!
ಸಧ್ಯಕ್ಕೆ ಈಗ ಚರ್ಚೆ ಆಗಬೇಕಿರುವುದು ಇಂದು ವಿಧಾನಸಭಾ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ನಡೆದುಕೊಂಡ ರೀತಿ ನೀತಿಗಳ ಕುರಿತಾಗಿಯೇ ಹೊರತು, ತಮ್ಮ-ತಮ್ಮ ಮೂಗಿನ ನೇರಕ್ಕೆ ನೋಡುವ, ಹೋಲಿಸುವ ಉಪಕತೆಗಳಲ್ಲ! ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪರ-ವಿರೋಧ ಚರ್ಚೆಗಳಿಗೆ ಮುಕ್ತ ಅವಕಾಶಗಳಿವೆ. ಗಾಲಿ ಜನಾರ್ದನ ರೆಡ್ಡಿ ಆ ಬಗ್ಗೆ ಸಾಂವಿಧಾನಿಕ ಹಾಗೂ ಮೌಲಿಕ ಭಾಷೆಯನ್ನು ಬಳಸಿ ಟೀಕೆ ಟಿಪ್ಪಣಿ ಮಾಡುವ ಬದಲು, ತನ್ನ ಹಳೆಯ ‘ದ್ವೇಷ ರಾಜಕಾರಣ’ದ ಪರಾಕಾಷ್ಠೆಯ ಪರಿಭಾಷೆಯಲ್ಲಿಯೇ ವಿಧಾನಸಭಾ ಕಲಾಪದಲ್ಲಾಗಿರುವ ಘಟನೆಯ ಕುರಿತು ಪ್ರತಿಕ್ರಿಯಿಸಿದ್ದಾರೆ. ಇದು ಅವರ ಹೊಸ ರಾಜಕೀಯ ಸಮೀಕರಣದ ಕನಸಿನ ಮಟ್ಟಿಗೆ ಒಳ್ಳೆಯ ನಿರೀಕ್ಷೆಗಳನ್ನು ಕಟ್ಟಿಕೊಡುವುದಿಲ್ಲ ಎಂಬುದು ವಾಸ್ತವ!
ಒಂದು ರೀತಿಯಲ್ಲಿ ಗಾಲಿ ಜನಾರ್ಧನ ರೆಡ್ಡಿಯ ಪ್ರತಿಕ್ರಿಯೆ ‘ಭೂತದ ಬಾಯಲ್ಲಿ ಭಗವದ್ಗೀತೆಯ ನುಡಿ’ ಎಂಬಂತೆ ಭಾಸವಾಗುತ್ತಿರುವುದು ಸುಳ್ಳೆನಲ್ಲ!
ಇದರ ಹೊರತಾಗಿ ಬಿ.ಕೆ.ಹರಿಪ್ರಸಾದ್ ತರಹದ ಸೈದ್ದಾಂತಿಕ ಬದ್ದತೆಯ ನಾಯಕತ್ವದ ಕೊಂಡಿಗಳು, ನಾಡಿನ ರಾಜಕೀಯ ಪರಿಸರದಲ್ಲಿ ತುಸು ಹೆಚ್ಚಾಗಲಿ ಎಂದು ಆಶಿಸುವೆ. ಅದು ನಾಡಿನ ಸುಸಂಕೃತ ರಾಜಕಾರಣದ ಮುಂದುವರಿಕೆಗೆ ದೊಡ್ಡ ಅಂತಃಶಕ್ತಿಯಾಗಿ ನಿಲ್ಲಬಲ್ಲ ವಿಶ್ವಾಸವಿದೆ!
– ಇರ್ಫಾನ್ ಮುದಗಲ್




