ಬೆಂಗಳೂರು: ಗಾಲಿಯಾಟದಲ್ಲೇ ಸೋಲನ್ನು ಒಪ್ಪದ ನಾನು ರಾಜಕೀಯದಲ್ಲಿ ಸೋಲೊಪ್ಪಲ್ಲ. ನಮಗೆ ಜನರ ಆಶೀರ್ವಾದ ಸಿಗಲಿದೆ. ಕರ್ನಾಟಕ ಕಲ್ಯಾಣವಾಗಲಿದೆ. ಪ್ರಗತಿ ಕಾಣಲಿದೆ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ಈ ಮೂಲಕ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷ ಹೆಸರಿನ ಹೊಸ ಪಕ್ಷ ಘೋಷಿಸಿದರು.
ಬೆಂಗಳೂರಿನ ತಮ್ಮ ಪಾರಿಜಾತ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು, 12 ವರ್ಷದ ನಂತರ ಬಳ್ಳಾರಿಗೆ ಬರಲು ಕೋರ್ಟ್ ಆದೇಶ ಕೊಟ್ಟರೂ ಮತ್ತೆ ನಮ್ಮನ್ನು ಬಳ್ಳಾರಿಯಿಂದ ಸಿಬಿಐ ಬಳಸಿ ಹೊರಹಾಕಿದ್ದಾರೆ ಎಂದು ಬಿಜೆಪಿ ವಿರುದ್ಧ ಆರೋಪಿಸಿದರು.
ಇಷ್ಟೆಲ್ಲಾ ಆದ ಮೇಲೆ ಹಿತೈಷಿಗಳು ನಾವೆಲ್ಲಾ ನಿಮ್ಮ ಜೊತೆ ಇರಲಿದ್ದೇವೆ. ನಿಮ್ಮ ಶಕ್ತಿಯಾಗಿ ಕೆಲಸ ಮಾಡುತ್ತೇವೆ, ನಿಮ್ಮ ಬೆನ್ನೆಲುವಾಗಿ ಇರಲಿದ್ದೇವೆ. ಧಮ್ಯ, ಸತ್ಯ, ಮಾನವೀಯ ಮೌಲ್ಯ ಸತ್ತುಹೋಗಿವೆ. ಈ ಕ್ಷಣದಲ್ಲಿಯೂ ಬಿಜೆಪಿಯಿಂದ ಹೊರಗೆ ಬಂದಿಲ್ಲ ಎಂದರೆ ಹೇಗೆ? 12 ವರ್ಷ ವನವಾಸ ಅನುಭವಿಸಿದ್ದೀಯ. ನಿಮ್ಮ ಜೊತೆ ನಾವಿದ್ದು ಕೆಲಸ ಮಾಡುತ್ತೇವೆ ಎಂದು ಬಳ್ಳಾರಿಯ ಜನ ಹೇಳಿದಾಗ ನಾನು ಹೊಸ ಪಕ್ಷ ಆರಂಭಿಸುವ ನಿರ್ಧಾರ ಮಾಡಿದೆ ಎಂದರು.
ಬಸವಣ್ಣ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎನ್ನುವ ರೀತಿ, ಇವನಾರವ ಇವನಾರವ ಇವ ನಮ್ಮವ ಇವ ನಮ್ಮವ ಕೂಡಲ ಸಂಗಮ ದೇವ ನಾನಿನ್ನ ಮನೆಯ ಮಗನೆನಿಸಯ್ಯ ಎನ್ನುವಂತೆ ಜಾತಿ, ಮತ, ಲಿಂಗ ಬೇಧ, ಮೇಲುಕೀಳು ಇಲ್ಲದಂತೆ ರಾಜ್ಯದ ಅಭಿವೃದ್ಧಿಗೆ ನಾನು ಕಂಡ ಕನಸು, ನಾನು ಏನು ಎಂದು ತೋರಿಸಲು ಪಕ್ಷ ಕಟ್ಟುವುದಾಗಿ ಘೋಷಿಸಿದರು.
ಜನರ ಬೆಂಬಲ ಕೊಡುತ್ತಿರುವ ಈ ಸಂದರ್ಭದಲ್ಲಿ ವಾಜಪೇಯಿ ಸಿದ್ದಾಂತ ನಂಬಿದ್ದ ನಾನು ಇವತ್ತಿಗೆ ಬಿಜೆಪಿ ಜೊತೆಗಿನ ಸಂಬಂಧ ಬಿಡುತ್ತಿದ್ದೇನೆ. ಆ ಪಕ್ಷದ ಸದಸ್ಯ ಅಲ್ಲ ಎಂದರೂ ನಾನು ಆ ಪಕ್ಷದವನೇ ಎಂದು ಜನ ಅಂದುಕೊಂಡಿದ್ದರು. ಅದಕ್ಕೆ ಇಂದು ತೆರೆ ಎಳೆಯುತ್ತಿದ್ದೇನೆ ಎಂದರು.
ಇನ್ನು ಮುಂದೆ ಬಿಜೆಪಿ ಜೊತೆಗೆ ಸಂಬಂಧ ಇಲ್ಲ. ಪ್ರತಿ ಹಳ್ಳಿ ಮನೆಮನೆಗೂ ಬರುತ್ತೇನೆ. ಹೊಸ ಕೆಲಸದಲ್ಲಿ ನನಗೆ ಸೋಲಾಗಲ್ಲ. ಚಿಕ್ಕವನಿದ್ದಾಗ ಗೋಲಿಯಾಟದಲ್ಲಿಯೂ ಸೋಲು ಒಪ್ಪಲು ಸಿದ್ಧನಿರಲಿಲ್ಲ. ಇಂದು ಪಕ್ಷ ಕಟ್ಟಿ ಜನರ ಮುಂದೆ ಹೋಗುತ್ತಿದ್ದೇನೆ. ಜನರ ಆಶೀರ್ವಾದ ಸಿಕ್ಕೇ ಸಿಗಲಿದೆ. ಕಲ್ಯಾಣ ಕರ್ನಾಟಕವಾಗಲಿದೆ, ಪ್ರಗತಿ ಕಾಣಲಿದೆ ಎಂದರು.
ಯಡಿಯೂರಪ್ಪ ನಾವು ಒಟ್ಟಿಗೆ ಪ್ರಯಾಣ ಬೆಳೆಸಿದ್ದೆವು, ಎಂದೂ ಬೇರೆಯಾಗಿಲ್ಲ. ಯಡಿಯೂರಪ್ಪ ಅವರಿಗೆ ತಂದೆ ಸ್ಥಾನದ ಗೌರವ ಕೊಟ್ಟಿದ್ದೇವೆ. ಅದೇ ರೀತಿ ಕಾಣುತ್ತೇವೆ. ಆ ಪ್ರೀತಿ ವಿಶ್ವಾಸ ನಂಬಿಕೆ ಹಾಗೆಯೇ ಇರಲಿದೆ. ಆದರೆ ಹೊಸ ಪಕ್ಷದ ಕುರಿತು ಅವರ ಜೊತೆ ಚರ್ಚಿಸಿಲ್ಲ. ಅಲ್ಲದೆ ನಾನು ರಾಮುಲು ಮತ್ತು ಸಹೋದರರಿಗೆ ಬಿಜೆಪಿ ತೊರೆದು ನನ್ನ ಜೊತೆ ಬರುವಂತೆ ಒತ್ತಡ ಹಾಕುವುದಿಲ್ಲ ಎಂದು ಹೇಳಿದರು.




