ವಿಪಕ್ಷ ಬಿಜೆಪಿಯಲ್ಲಿ ವಿದ್ಯಮಾನಗಳು ಚುರುಕು

5 months ago

ಬೆಂಗಳೂರು: ಅಧಿಕಾರ ಹಸ್ತಾಂತರ ವಿಚಾರವಾಗಿ ರಾಜ್ಯ ಕಾಂಗ್ರೆಸ್ಸಿನಲ್ಲಿ ಉಂಟಾಗಿದ್ದ ಗೊಂದಲಗಳು ಒಂದು ಹಂತಕ್ಕೆ ಬರುತ್ತಿದ್ದಂತೆ ಇದೀಗ ವಿಪಕ್ಷ ಬಿಜೆಪಿಯಲ್ಲಿ ವಿದ್ಯಮಾನಗಳು ಚುರುಕು ಪಡೆದುಕೊಂಡಿವೆ.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾವಣೆಗೆ ಪಟ್ಟು ಹಿಡಿದಿದ್ದ ಭಿನ್ನಮತೀಯ ನಾಯಕರು ಇದೀಗ ತಮ್ಮ ವರಸೆ ಬದಲಾಯಿಸಿದ್ದು, ಪಕ್ಷದ ಅಧ್ಯಕ್ಷರಾಗಿರುವ ವಿಜಯೇಂದ್ರ ಅವರನ್ನು ತಮ್ಮ ಅವಧಿ ಪೂರ್ಣಗೊಳಿಸಲು ಬಿಡುವಂತೆ ವರಿಷ್ಠರಿಗೆ ಮನವಿ ಮಾಡಿದ್ದಾರೆ.

ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ವಿಜಯೇಂದ್ರ ಅವರನ್ನು ಮುಂದುವರಿಸುವ ಬಗ್ಗೆ ಯಾವುದೇ ಘೋಷಣೆ ಮಾಡಬಾರದು. ಈಗಾಗಲೇ ಎರಡು ವರ್ಷ ಅವಧಿ ಪೂರ್ಣಗೊಳಿಸಿರುವ ವಿಜಯೇಂದ್ರ ಇನ್ನೊಂದು ವರ್ಷ ಅಧಿಕಾರ ಅವಧಿ ಪೂರ್ಣಗೊಳಿಸಿ ಹುದ್ದೆಯಿಂದ ನಿರ್ಗಮಿಸಲಿ. ವಿಧಾನಸಭೆ ಚುನಾವಣೆಯ ವರ್ಷಕ್ಕೆ ಬೇರೆಯವರಿಗೆ ಅಧ್ಯಕ್ಷ ಪಟ್ಟ ಕಟ್ಟುವಂತೆ ಮನವಿ ಮಾಡಿದ್ದಾರೆ.

ದೆಹಲಿಯಲ್ಲಿರುವ ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಅರವಿಂದ ಲಿಂಬಾವಳಿ ಮೊದಲಾದವರು ಪಕ್ಷದ ರಾಜ್ಯ ಘಟಕದ ಉಸ್ತುವಾರಿ ರಾಧಾ ಮೋಹನ್ ಅಗರ್ವಾಲ್ ಸೇರಿದಂತೆ ಹಲವರನ್ನು ಭೇಟಿ ಮಾಡಿ ತಮ್ಮ ಹೊಸ ಬೇಡಿಕೆಯನ್ನು ಮಂಡಿಸಿದ್ದಾರೆ.

ವಿಜಯೇಂದ್ರ ಅವರನ್ನು ಪಕ್ಷದ ಅಧ್ಯಕ್ಷ ಎಂದು ಹೊಸದಾಗಿ ಘೋಷಣೆ ಮಾಡಿದರೆ ಮುಂದಿನ ಮೂರು ವರ್ಷದ ಅವಧಿವರೆಗೆ ಅವರು ಅಧ್ಯಕ್ಷರಾಗಿರುತ್ತಾರೆ. ಈ ಮೂರು ವರ್ಷದ ಅವಧಿಯಲ್ಲಿ ವಿಧಾನಸಭೆ ಚುನಾವಣೆ ಕೂಡ ನಡೆಯಲಿದೆ. ಈ ಅವಧಿಯಲ್ಲಿ ಅವರ ನಾಯಕತ್ವದಲ್ಲಿ ಪಕ್ಷ ಚುನಾವಣೆ ಎದುರಿಸಿದರೆ ದೊಡ್ಡ ಮಟ್ಟದ ಹಿನ್ನಡೆ ಅನುಭವಿಸಲಿದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

ವಿಜಯೇಂದ್ರ ಪಕ್ಷದ ಅಧ್ಯಕ್ಷರಾಗಿ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಿಎಂ ಮತ್ತು ಡಿಸಿಎಂ ಕುರ್ಚಿ ಕಾಳಗದಲ್ಲಿ ನಿರತರಾಗಿದ್ದಾರೆ. ಇಂತಹ ಪಕ್ಷದ ವಿರುದ್ಧ ಯಾವುದೇ ಹೋರಾಟ ನಡೆಸಿಲ್ಲ ಎಂದು ದೂರಿದ್ದಾರೆ.

ಕಬ್ಬು ಬೆಳೆಗಾರರು ಮೆಕ್ಕೆಜೋಳ ಬೆಳೆಗಾರರು ತೀವ್ರ ಸ್ವರೂಪದ ಸಂಕಷ್ಟ ಎದುರಿಸುತ್ತಿದ್ದಾರೆ. ವಿಪಕ್ಷವಾಗಿ ಅವರ ನೆರವಿಗೆ ಬರಬೇಕಿತ್ತು. ಅದನ್ನು ಬಿಟ್ಟು ಕೇವಲ ಪತ್ರಿಕಾ ಹೇಳಿಕೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಇಂಥವರ ನಾಯಕತ್ವದಲ್ಲಿ ಪಕ್ಷ ಸಮರ್ಥವಾಗಿ ಚುನಾವಣೆ ಎದುರಿಸಲು ಸಾಧ್ಯವಿಲ್ಲ ಎಂದು ದೂರು ನೀಡಿದ್ದಾರೆ.

Leave a Reply