ಬಿಜೆಪಿ ಭಿನ್ನಮತೀಯರಿಂದ ಡಿನ್ನರ್ ಪಾಲಿಟಿಕ್ಸ್

1 year ago

ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್ ನಲ್ಲಿ ಸಂಚಲನ ಮೂಡಿಸಿರುವ ಔತಣಕೂಟ ರಾಜಕಾರಣ ಇದೀಗ ಪ್ರಮುಖ ವಿಪಕ್ಷ ಬಿಜೆಪಿಗೂ ವ್ಯಾಪಿಸಿದೆ. ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಕುರಿತು ಉಂಟಾಗಿರುವ ಅಸಮಾಧಾನದ ಬೆನ್ನಲ್ಲೇ ತಟಸ್ಥರು ಎನ್ನಲಾದ ಬಣದ ಶಾಸಕರು ಮತ್ತು ಹಿರಿಯ ನಾಯಕರು ಭೋಜನಕೂಟ ನಡೆಸಿ ಮಾತುಕತೆ ನಡೆಸಿದ್ದಾರೆ.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಆರ್ ಅಶೋಕ್ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ರಾಜ್ಯ ಬಿಜೆಪಿಯಲ್ಲಿ ಉಂಟಾಗಿರುವ ಬಣ ಬಡಿದಾಟಕ್ಕೆ ಬ್ರೇಕ್ ಹಾಕಬೇಕು, ಹೈಕಮಾಂಡ್ ಕೂಡಲೇ ಮಧ್ಯಪ್ರವೇಶಿಸಿ ಉಭಯ ಬಣಗಳ ಮುಖಂಡರೊಂದಿಗೆ ಮಾತುಕತೆ ನಡೆಸಿ ಗೊಂದಲ ಪರಿಹರಿಸಬೇಕು ಎಂದು ಆಗ್ರಹಿಸಲು ತೀರ್ಮಾನ ಕೈಗೊಳ್ಳಲಾಗಿದೆ.

ಪಕ್ಷದ ಅಧ್ಯಕ್ಷ ವಿಜಯೇಂದ್ರ ನಾಯಕತ್ವದ ವಿರುದ್ಧ ಬಂಡಾಯ ಸಾರಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತ್ತು ಅರವಿಂದ ಲಿಂಬಾವಳಿ ಬಣ ವಿಜಯೇಂದ್ರ ಪದಚ್ಯುತಿಗೆ ಪಟ್ಟು ಹಿಡಿದಿದೆ. ಇದರ ಬೆನ್ನಲ್ಲೇ ಮಾಜಿ ಸಚಿವರಾದ ರೇಣುಕಾಚಾರ್ಯ ಮತ್ತು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನೇತೃತ್ವದ ಬಣ ಭಿನ್ನರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ. ಭಿನ್ನಮತೀಯ ಚಟುವಟಿಕೆ ಪಕ್ಷ ಸಂಘಟನೆಯ ಮೇಲೆ ದೊಡ್ಡ ಪರಿಣಾಮ ಬೀರಿದ್ದು ಗೊಂದಲ ಉಂಟಾಗಿದೆ. ಇದನ್ನು ಬಗೆಹರಿಸಲು ಹೈಕಮಾಂಡ್ ಮಧ್ಯಪ್ರವೇಶಿಸಲು ಒತ್ತಾಯಿಸಬೇಕು ಎನ್ನುವ ತೀರ್ಮಾನಕ್ಕೆ ಸಭೆಯಲ್ಲಿ ಬರಲಾಗಿದೆ.

ಇದರ  ಬೆನ್ನಲ್ಲೇ ಅಧ್ಯಕ್ಷ ವಿಜಯೇಂದ್ರ ಅವರು ಮಾಜಿ ಶಾಸಕರು ಮತ್ತು ಸಚಿವರ ಔತಣಕೂಟ ಕರೆದಿದ್ದಾರೆ. ಇಂದು ಮಧ್ಯಾಹ್ನ ಕ್ಯಾಪಿಟಲ್ ಹೋಟೆಲ್ನಲ್ಲಿ ಮಾಜಿ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರಿಗೆ ವಿಜಯೇಂದ್ರ ಭೋಜನ ಕೂಟ ಏರ್ಪಡಿಸಿದ್ದು, ಸಭೆಗೆ ಕಡ್ಡಾಯವಾಗಿ ಎಲ್ಲರೂ ಆಗಮಿಸಬೇಕೆಂದು ಸೂಚಿಸಿದ್ದಾರೆ.

ಮೇಲ್ನೋಟಕ್ಕೆ ಇದು ಪಕ್ಷದ ಸಂಘಟನೆ ಕುರಿತು ನಡೆಯಲಿರುವ ಸಭೆ ಎಂದೇ ಹೇಳಲಾಗುತ್ತಿದೆ. ಆದರೂ ಬಿಜೆಪಿ ಒಳಗೆ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಯಲಿದೆ. ಸದ್ಯದಲ್ಲಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸಾಂಸ್ಥಿಕ ಚುನಾವಣೆ ನಡೆಯಲಿದ್ದು ಇದರಲ್ಲಿ ವಿಜಯೇಂದ್ರ ಅವರ ಬೆಂಬಲಕ್ಕೆ ಎಲ್ಲರೂ ನಿಲ್ಲುವಂತೆ ಮನವಿ ಮಾಡಲು ಈ ಸಭೆ ಆಯೋಜಿಸಲಾಗಿದೆ ಎಂದು ಹೇಳಲಾಗುತ್ತಿದೆ. ಯಡಿಯೂರಪ್ಪ ಅವರು ಪಾಲ್ಗೊಳ್ಳಲಿರುವ ಈ ಸಭೆಯಲ್ಲಿ ಪಕ್ಷದ ಅಧ್ಯಕ್ಷರಾಗಿ ವಿಜಯೇಂದ್ರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲು ಮನವಿ ಮಾಡಲಿದ್ದಾರೆ ಎಂದು ಗೊತ್ತಾಗಿದೆ.

Leave a Reply