ಭೋಪಾಲ್: ಗಂಡುಮಗು ಹುಟ್ಟಿದ ಖುಷಿಗೆ ವ್ಯಕ್ತಿಯೊಬ್ಬ ಯುವಕನ ಬಲಿ ಕೊಟ್ಟಿರುವ ಬೆಚ್ಚಿಬೀಳಿಸುವ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯ ಬೇಧೋವಾ ಗ್ರಾಮದಲ್ಲಿ ನಡೆದಿದೆ. ಜುಲೈ 6 ರಂದು ಸ್ಥಳೀಯ ನಿವಾಸಿ ರಾಮ್‌ಲಾಲ್ ಈ ಕೃತ್ಯ ಎಸಗಿದ್ದಾನೆ.
ಗಂಡುಮಗು ಹುಟ್ಟಬೇಕು ಎನ್ನುವ ತನ್ನ ಇಚ್ಛೆಯನ್ನು ದೇವಿ ಈಡೇರಿಸಿದ್ದಾಳೆ ಎಂಬ ಕಾರಣಕ್ಕೆ 18 ವರ್ಷದ ಯುವಕನನ್ನು ಈತ ಬಲಿ ಕೊಟ್ಟಿದ್ದಾನೆ.
ರಾಮ್‌ಲಾಲ್ ದಂಪತಿಗೆ ಮೂವರು ಹೆಣ್ಣುಮಕ್ಕಳು. ಗಂಡುಮಗುವಿಗಾಗಿ ಹಾತೊರೆಯುತ್ತಿದ್ದ ಈತ ಗ್ರಾಮದ ದೇವಿಯ ಬಳಿ ಹರಕೆ ಹೊತ್ತುಕೊಂಡಿದ್ದನಂತೆ. ನಾಲ್ಕನೆಯ ಮಗು ಗಂಡಾಗಿ ಹುಟ್ಟಿತು. ಇದು ದೇವಿಯ ಕೊಡುಗೆ ಎಂದು ಮೂಢನಂಬಿಕೆಯಲ್ಲಿದ್ದ ರಾಮಲಾಲ್ ನರ ಬಲಿ ಕೊಡಲು ಹುಡುಕುತ್ತಿದ್ದ. ಆಗ ಆತನ ಕಣ್ಣಿಗೆ ಬಿದ್ದದ್ದು, ಮೇಕೆಗಳನ್ನು ಮೇಯಿಸುತ್ತಿದ್ದ 18 ವರ್ಷದ ಅಮಾಯಕ ಯುವಕ ದಿವ್ಯಾಂಶು.
ಆತನನ್ನು ಪುಸಲಾಯಿಸಿ ಕರೆದುಕೊಂಡು ಹೋಗಿರುವ ರಾಮ್‌ಲಾಲ್ ದೇವಿಗೆ ಆತನನ್ನು ಬಲಿ ಕೊಟ್ಟಿದ್ದಾನೆ. ದೇವಿಯ ವಿಗ್ರಹದ ಕೆಳಗಡೆಯೇ ಶವವನ್ನು ಹೂತು ಹಾಕಿ ಬಂದಿದ್ದಾನೆ. ಮೃತದೇಹವು ಗ್ರಾಮಸ್ಥರಿಗೆ ಕಾಣಿಸುತ್ತಲೇ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ನಂತರ ಪೊಲೀಸರು ಬಂದು ಶವವನ್ನು ಹೊರಕ್ಕೆ ತೆಗೆದು ತನಿಖೆ ಕೈಗೊಂಡಾಗ ಈ ಕೃತ್ಯ ಬಯಲಿದೆ ಬಂದಿದೆ. ತಾನೇ ಕೊಲೆ ಮಾಡಿರುವುದು ಎಂದು ರಾಮ್‌ಲಾಲ್ ಒಪ್ಪಿಕೊಂಡಿದ್ದಾನೆ.
ಗಂಡು ಮಗು ಬೇಕೆಂದರೆ ಯುವಕನೊಬ್ಬನನ್ನು ಬಲಿಕೊಡಬೇಕೆಂದು ಶಾಸ್ತ್ರದಲ್ಲಿ ಹೇಳಿತ್ತು. ಅದರಂತೆ ತಾನು ನಡೆದುಕೊಂಡೆ ಎಂದಿದ್ದಾನೆ. ರಾಮಲಾಲ್ ಮಾಟಮಂತ್ರದಲ್ಲಿ ತೊಡಗಿದ್ದ ಎಂದು ಗ್ರಾಮಸ್ಥರು ಕೂಡ ಪೊಲೀಸರಿಗೆ ಮಾಹಿತಿ ನೀಡಿದ್ದು ಆತನನ್ನು ಬಂಧಿಸಲಾಗಿದೆ.



