ಪ್ರಯಾಣಿಕರ ಸಮೇತ ಬಸ್‌ ಜಪ್ತಿ ಮಾಡಿ ಠಾಣೆಗೆ ಕರೆದೊಯ್ದ ಪೊಲೀಸರು

8 months ago

ಬೆಂಗಳೂರು: ಸಂಚಾರ ನಿಯಮ ಪಾಲಿಸುವುದು ಕಡ್ಡಾಯ. ಈ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸುತ್ತಾರೆ. ಕೆಲವೊಮ್ಮೆ ಚಾಲಕರನ್ನು ಕೋರ್ಟ್ ಮುಂದೆ ಕೂಡ ಹಾಜರುಪಡಿಸುವ ಸಾಧ್ಯತೆಯೂ ಇರುತ್ತದೆ.

ಆದರೆ ಮಹಾನಗರ ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಸಂಚಾರ ಪೊಲೀಸರು ಪ್ರಯಾಣಿಕರ ಸಮೇತ ಬಸ್‌ ಜಪ್ತಿ ಮಾಡಿ ಠಾಣೆಗೆ ಕರೆದೊಯ್ದಿದ್ದಾರೆ.

ಈ ಘಟನೆ ಸಂಜಯನಗರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಯಾಣಿಕರು ತುಂಬಿದ ಬಸ್ ಅನ್ನು ಪೊಲೀಸರು ಠಾಣೆಗೆ ಕೊಂಡೊಯ್ಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಸಂಚಾರ ಪೊಲೀಸರ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ.

ಹೊಸಪೇಟೆಯಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಚಾಲಕ ಎಸ್ಟೀಮ್ಸ್ ಮಾಲ್ ಮುಂದೆ ಸ್ಟಾಪ್‌ ನೀಡಿದ ಎಂಬ ಕಾರಣಕ್ಕೆ ಬಸ್‌ ಒಳಗೆ ಹೋದ ಸಂಚಾರ ಠಾಣೆಯ ಕಾನ್‌ಸ್ಟೇಬಲ್ ಕುಮಾರ್‌, ಎಸ್ಟೀಮ್ ಮಾಲ್ ಮುಂದೆ ಸ್ಟಾಪ್‌ ಕೊಡುವಂತಿಲ್ಲ ಎಂದು ಆಕ್ಷೇಪಿಸಿದ್ದಾರೆ. ಈ ವೇಳೆ ಚಾಲಕನಿಗೆ ಬೈದಿದ್ದಾರೆ.

ಈ ವೇಳೆ ಬಸ್ಸಿನ ಚಾಲಕ ಮತ್ತು  ಕಾನ್‌ಸ್ಟೇಬಲ್ ಕುಮಾರ್‌, ನಡುವೆ ತೀವ್ರ ಮಾತಿನ ಚಕಮಕಿ, ವಾಗ್ವಾದ ನಡೆದಿದೆ. ಬಳಿಕ ಕಾನ್‌ಸ್ಟೇಬಲ್ ಕುಮಾರ್‌,  ಬಸ್‌ನ್ನು ಪ್ರಯಾಣಿಕರ ಸಮೇತ ಸುಮಾರು 30 ನಿಮಿಷಗಳ ಟ್ರಾಫಿಕ್‌ನಲ್ಲಿ ಸುತ್ತಾಡಿಸಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

ಈ ವೇಳೆ ಬಸ್ಸಿನಲ್ಲಿದ್ದ ಪ್ರಯಾಣಿಕರು ತಾವು ಕಚೇರಿಗಳಿಗೆ ಶಾಲಾ-ಕಾಲೇಜುಗಳಿಗೆ ತೆರಳಬೇಕಿದ್ದು, ಬಸ್‌ ಜಪ್ತಿ ಮಾಡದೇ ಬಿಟ್ಟುಬಿಡಿ ಎಂದು  ಎಷ್ಟೇ ಮನವಿ ಮಾಡಿದರೂ ಅದಕ್ಕೆ  ಪೊಲೀಸರು ಪ್ರತಿಕ್ರಿಯೆ ನೀಡಿಲ್ಲ. ಅಷ್ಟೇ ಅಲ್ಲದೆ ಪೊಲೀಸ್ ನಿಯಮಗಳ ಪ್ರಕಾರ ಪರ್ಯಾಯ ವ್ಯವಸ್ಥೆ ಮಾಡಬೇಕಿದೆ. ಆದರೆ ಪೊಲೀಸರು ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಮಾಡದೆ ಠಾಣೆಯಲ್ಲಿ ಇರಿಸಿದ್ದಾರೆ.

ಇದನ್ನು ಕೆಲವು ಪ್ರಯಾಣಿಕರು ಪ್ರಶ್ನಿಸಿದ್ದಾರೆ. ಅದಕ್ಕೆ ಪೊಲೀಸರು ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲೀ  ನಿಮ್ಮ ಮೇಲೆ ಎಫ್‌ಐಆರ್‌ ದಾಖಲಿಸುವುದಾಗಿ ಬೆದರಿಕೆ ಒಡ್ಡಿದ್ದಾರೆ. ಅಲ್ಲದೆ, ಬಸ್‌ ಚಾಲಕ ಮತ್ತು ನಿರ್ವಾಹಕನ ಜತೆಗೆ ಕೂಡ ಸಂಚಾರ ಪೊಲೀಸರು ವಾಗ್ವಾದ ನಡೆಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಸಂಜಯನಗರ ಸಂಚಾರ ಪೊಲೀಸರ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

Leave a Reply