ಪರಿಸರ ಸ್ನೇಹಿಯಾದ ಮಣ್ಣಿನ ಗಣಪ ಮೂರ್ತಿಗಳನ್ನು ಪೂಜಿಸಿ: ಈಶ್ವರ್ ಖಂಡ್ರೆ

8 months ago

ನಾವು ಭಕ್ತಿಭಾವದಿಂದ ಆಚರಿಸುವ ಗಣೇಶೋತ್ಸವದಿಂದ ಜಲಚರ ಜೀವಿಗಳಿಗೆ ಹಾನಿಯಾಗಬಾರದು. ಆದ್ದರಿಂದ ಎಲ್ಲರೂ ಪಿಓಪಿ ಮೂರ್ತಿಗಳನ್ನು ಖರೀದಿಸದೆ, ಪರಿಸರ ಸ್ನೇಹಿಯಾದ ಮಣ್ಣಿನ ಗಣಪ ಮೂರ್ತಿಗಳನ್ನು ಪೂಜಿಸಿ ವಿಸರ್ಜಿಸಬೇಕು ಎಂದು ನಾನು ವಿನಂತಿಸುತ್ತೇನೆ.

ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಶೇ.90ರಷ್ಟು ಮಣ್ಣಿನ ಗಣಪತಿಯನ್ನೇ ಪೂಜಿಸಲಾಗುತ್ತಿದೆ. ಆ ಜಿಲ್ಲೆಗಳಲ್ಲಿ ಸಾಧ್ಯವಾಗುತ್ತಿರುವುದಾದರೆ ಉಳಿದ ಜಿಲ್ಲೆಗಳಲ್ಲಿ ಏಕೆ ಸಾಧ್ಯವಾಗಬಾರದು? ಈ ನಿಟ್ಟಿನಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾಡಳಿತ, ತಾಲೂಕು ಆಡಳಿತ ಮತ್ತು ಸ್ಥಳೀಯ ಸಂಸ್ಥೆಗಳು ಹೆಚ್ಚಿನ ಜಾಗೃತಿ ಮೂಡಿಸಬೇಕು.

POP ಗೌರಿ-ಗಣೇಶ ಮೂರ್ತಿಗಳು ನೀರಿನಲ್ಲಿ ಕರಗುವುದಿಲ್ಲ. ಜೊತೆಗೆ ವಿಷಕಾರಕ ಅಂಶಗಳನ್ನು ನೀರಿನಲ್ಲಿ ಸೇರಿಸುತ್ತವೆ. ಭಾರಲೋಹ ಮಿಶ್ರಿತ ರಾಸಾಯನಿಕ ಬಣ್ಣಗಳು ಜಲಚರಗಳ ಸಾವಿಗೆ ಕಾರಣವಾಗುತ್ತವೆ.

ಇಡೀ ಜಗತ್ತೇ ಇಂದು ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಸವಾಲನ್ನು ಎದುರಿಸುತ್ತಿದೆ. ಅತಿವೃಷ್ಟಿ, ಅನಾಹುತಗಳು ಹೆಚ್ಚುತ್ತಿರುವ ಈ ಸಮಯದಲ್ಲಿ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ.

ಗಣೇಶೋತ್ಸವವನ್ನು ಆಚರಿಸುವ ಎಲ್ಲರೂ ಪರಿಸರ ಸ್ನೇಹಿಯಾಗಿ ವರ್ತಿಸಿ ಮುಂದಿನ ಪೀಳಿಗೆಗೆ ಹಸಿರು ಭೂಮಿಯನ್ನು ಉಳಿಸೋಣ.

– ಈಶ್ವರ್ ಖಂಡ್ರೆ, ಪರಿಸರ ಸಚಿವ

Leave a Reply