ಬೆಂಗಳೂರು: ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ನಾಗಪುರ ವಾರ್ಡ್ ನಲ್ಲಿ ಮಾಜಿ ಮೇಯರ್ ಎಸ್.ಹರೀಶ್ ಸಾರ್ವಜನಿಕರಿಗೆ ಉಚಿತವಾಗಿ 1000 ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನು ವಿತರಿಸಿದರು
ಇದೇ ಸಂದರ್ಭದಲ್ಲಿ ಮಾತನಾಡಿದ ಎಸ್.ಹರೀಶ್, ಪ್ರಕೃತಿ ಮನುಷ್ಯನಿಗೆ ನೀರು, ಆಹಾರ ಮತ್ತು ಉಸಿರಾಡಲು ಉತ್ತಮ ಗಾಳಿ ನೀಡಿದೆ. ಆದರೆ ಮನುಷ್ಯನ ಅತಿಯಾದ ಆಸೆಯಿಂದ ಅಭಿವೃದ್ಧಿ ಹೆಸರಿನಲ್ಲಿ ಗಿಡಮರಗಳು ನಾಶವಾಗಿ, ಕಾಂಕ್ರೀಟ್ ನಾಡಾಗಿ ಪರಿವರ್ತನೆಯಾಗಿದೆ ಎಂದರು.
ಪರಿಸರ ಉಳಿದರೆ ಎಲ್ಲ ಜೀವರಾಶಿಗಳು ಉಳಿಯುತ್ತದೆ.
ಪ್ರತಿಯೊಬ್ಬ ನಾಗರಿಕರು ಪರಿಸರ ಬೆಳಸಲು, ರಕ್ಷಣೆ ಮಾಡಲು ಪಣ ತೊಡಬೇಕು. ಗಣೇಶ ಹಬ್ಬದ ಪ್ರಯುಕ್ತ ನಾಗಪುರ ವಾರ್ಡ್ ನಲ್ಲಿ ಪರಿಸರ ಜಾಗೃತಿ ಮೂಡಿಸಲು ಪರಿಸರ ಸ್ನೇಹಿ ಗಣೇಶ ಹಬ್ಬ ಅಚರಿಸಲು ಸಾರ್ವಜನಿಕರಿಗೆ 1 ಸಾವಿರ ಮಣ್ಣಿನ ಗಣೇಶ ಮೂರ್ತಿಗಳನ್ನು ವಿತರಿಸಲಾಗುತ್ತಿದೆ ಎಂದರು.
ರಾಸಾಯನಿಕ ಬಣ್ಣದ ಗಣೇಶಮೂರ್ತಿಗಳು ನೀರಿನಲ್ಲಿ ಕರಗುವುದಿಲ್ಲ, ನೀರು ಕಲುಷಿತವಾಗಿ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇದೆ. ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳು ನೀರಿನಲ್ಲಿ ಕರಗುತ್ತದೆ, ಯಾವುದೇ ಅಪಾಯವಿಲ್ಲ ಎಂದರು.
ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ಬೆಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ಮೊಬೈಲ್ ನೀರಿನ ಟ್ಯಾಂಕರ್ ನಲ್ಲಿ ಗಣೇಶ ವಿಸರ್ಜನೆ ಮಾಡುವ ಕಾರ್ಯಕ್ರಮ 2010ರಲ್ಲಿ ನನ್ನ ನೇತೃತ್ವದಲ್ಲಿ ಯಶ್ವಸಿಯಾಗಿ ಜರುಗಿತು. ಇಂದು ಮಹಾನಗರ ಪಾಲಿಕೆ ಮೊಬೈಲ್ ವಾಟರ್ ಟ್ಯಾಂಕರ್ ಗಳನ್ನು ವಾರ್ಡ್ ಗಳಲ್ಲಿ ಸ್ಥಾಪಿಸಿ ಗಣೇಶ ವಿಸರ್ಜನೆ ಅವಕಾಶ ಮಾಡಿಕೊಡಲಾಗುತ್ತಿದೆ ಎಂದರು.
ಸಾರ್ವಜನಿಕರು ಸ್ವಚ್ಛ ಪರಿಸರ ನಿರ್ಮಾಣಕ್ಕೆ ಕೈ ಜೋಡಿಸಬೇಕು, ಪರಿಸರ ಸ್ನೇಹಿ ಗಣೇಶ ಹಬ್ಬ ಅಚರಿಸಬೇಕು ಎಂದರು.




