ಬೆಂಗಳೂರು: ಆಸ್ತಿ ನೋಂದಣಿಗಳ ವಿಧಾನಗಳನ್ನು ಮತ್ತಷ್ಟು ಸರಳೀಕರಣಗೊಳಿಸುವ ಹಾಗೂ ಬಹಳಷ್ಟು ಸಂದರ್ಭದಲ್ಲಿ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡುವ ಮಹತ್ವದ ವಿಧೇಯಕವನ್ನು ವಿಧಾನಸಭೆಯಲ್ಲಿಂದು ಅಂಗೀಕರಿಸಲಾಯಿತು. ನೋಂದಣಿ ಕರ್ನಾಟಕ ತಿದ್ದುಪಡಿ ವಿಧೇಯಕ 2025 ಅನ್ನು ಕಂದಾಯ ಸಚಿವ ಕೃಷ್ಣಭೈರೇಗೌಡ ಮಂಡಿಸಿ, ಪರ್ಯಾಲೋಚನೆಗೆ ಮನವಿ ಮಾಡಿದರು.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ವಿಧೇಯಕದ ಕುರಿತು ಸುದೀರ್ಘ ವಿವರಣೆ ನೀಡಿದ ಸಚಿವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನೋಂದಣಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹಾಗೂ ಸರಳೀಕರಣ ತರುವ ನಿಟ್ಟಿನಲ್ಲಿ ಪ್ರತಿ ಅಧಿವೇಶನದಲ್ಲೂ ಒಂದಲ್ಲ ಒಂದು ತಿದ್ದುಪಡಿಯನ್ನು ತರಲಾಗುತ್ತಿದೆ. ಈ ಬಾರಿ ಜನರ ಕಷ್ಟ ನಿವಾರಣೆಗೆ ತಾಂತ್ರಿಕತೆ ಅಳವಡಿಕೆ ಮಾಡಿಕೊಂಡು ಮನುಷ್ಯರ ಮಧ್ಯ ಪ್ರವೇಶವನ್ನು ಕಡಿಮೆ ಮಾಡುವ ನಿಯಮವನ್ನು ತರಲಾಗುತ್ತಿದೆ ಎಂದರು.
ನೋಂದಣಿ ಕಾಯ್ದೆ ಸೆಕ್ಷನ್ 9ಎ ತಿದ್ದುಪಡಿ ತಂದು ರಿಜಿಸ್ಟ್ರಾರ್ ಅಧಿಕಾರಿ, ಜೊತೆಗೆ ಸಿಸ್ಟಮ್ ಡಿಜಿಟಲ್ ಸಿಗ್ನೇಚರ್ ವ್ಯವಸ್ಥೆಯನ್ನು ದೃಢೀಕರಿಸಲಾಗುತ್ತಿದೆ ಎಂದರು.
ಉದಾಹರಣೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಮಂಜೂರು ಮಾಡಿದಾಗ, ಅದರ ನೋಂದಣಿಗೆ ಒಬ್ಬ ಅಧಿಕಾರಿ ದಾಖಲಾತಿಗಳನ್ನು ಪರಿಶೀಲಿಸುವ ಹಾಗೂ ಖುದ್ದು ಹಾಜರಾಗುವ ಅಗತ್ಯ ಇಲ್ಲ. ಅದೇ ರೀತಿ ಫಲಾನುಭವಿಯ ಖುದ್ದು ಹಾಜರಾತಿಯೂ ಅಗತ್ಯ ಇಲ್ಲ ಎಂದರು. 94 ಸಿ ಮತ್ತು 94 ಸಿ, ಸಿ ಅಡಿ ಭೂ ಮಂಜೂರಾತಿಯಾಗಿ ತಹಸೀಲ್ಹದಾರ್ ಹಕ್ಕು ಪತ್ರ ನೀಡಿದಾಗ ಅದರ ನೋಂದಣಿಗೆ ಡಿಜಿಟಲ್ ಸಿಗ್ನೇಚರ್ ಅನ್ನು ಅಂಗೀಕರಿಸಬಹುದಾಗಿದೆ ಎಂದರು.
ಉತ್ತರ ಕರ್ನಾಟಕ ಭಾಗದಲ್ಲಿ ತಾವು ಪ್ರವಾಸ ಕೈಗೊಂಡಾಗ ಹಲವಾರು ಮಂದಿ ನೋಂದಣಿ ಕಚೇರಿಯ ಮುಂದೆ ಸಾಲುಗಟ್ಟಿ ನಿಂತಿದ್ದರು. ಕಾರಣ ವಿಚಾರಿಸಿದಾಗ ಅವರು ಬ್ಯಾಂಕಿನಿಂದ ಪಡೆದಿದ್ದ ಸಾಲ ಮರುಪಾವತಿಸಿದ್ದು, ಆರ್ಟಿಸಿಯ ಕಲಂ 11ರಲ್ಲಿ ಸಾಲ ತಿರುವಳಿ ಎಂದು ತಿದ್ದುಪಡಿ ಮಾಡಿಸಲು ಕಾಯುತ್ತಿರುವುದಾಗಿ ಹೇಳಿದರು.
ಸಾಲ ತಿರುವಳಿಯಾಗಿರುವುದಕ್ಕೆ ಬ್ಯಾಂಕ್ ಅಥವಾ ಆರ್ಥಿಕ ಸಂಸ್ಥೆಗಳು ಎನ್ ಓ ಸಿ ನೀಡಿರುತ್ತವೆ. ಅದನ್ನು ಪಹಣಿಯಲ್ಲಿ ತಿದ್ದುಪಡಿ ಮಾಡಿಸಲು ಜಮೀನಿನ ಮಾಲೀಕರು ಕಚೇರಿಯ ಮುಂದೆ ಕಾಯ್ದು ನಿಲ್ಲುವುದು ಅಥವಾ ಮಧ್ಯವರ್ತಿಯ ಮೂಲಕ ಪ್ರಯತ್ನ ಮಾಡುವುದು ಸರಿಯಲ್ಲ. ಇದಕ್ಕಾಗಿ ಲಂಚ ನೀಡುವುದು ಅನಗತ್ಯವಾಗಿದೆ. ಕೆಐಎಡಿಬಿ, ಗೃಹ ಮಂಡಳಿ, ಬಿಡಿಎ ನಂತಹಸಂಸ್ಥೆಗಳು ಹಾಗೂ ತಹಸೀಲ್ದಾರ್ ಅವರಂತಹ ನಂಬಲಾರ್ಹ ಮೂಲಗಳಿಂದ ಭೂಮಿ ಮಂಜೂರಾಗಿದ್ದಾಗ ಅದರ ನೋಂದಣಿಗೆ ಡಿಜಿಟಲ್ ಸಿಗ್ನೇಚರ್ ಅನ್ನು ಬಳಕೆ ಮಾಡಬಹುದು ಎಂದರು.
ಇಲ್ಲಿ ಪ್ರಮುಖ ಅಂಶವೆಂದರೆ ಕಾಗದ ಪತ್ರಗಳನ್ನು ಭೌತಿಕವಾಗಿ ಬಳಸುವಂತಿಲ್ಲ. ನಂಬಿಕಾರ್ಹ ಮೂಲಗಳಿಂದಲೇ ದೃಢೀಕೃತವಾದ ಡಿಜಿಟಲ್ ದಾಖಲಾತಿಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ತಂತ್ರಜ್ಞಾನ ಬಳಸಿ ಡಿಜಿಟಲ್ ಸಿಗ್ನೇಚರ್ ಮೂಲಕ ನೋಂದಣಿ ಪ್ರಕ್ರಿಯೆ ನಡೆಯಲಿದೆ ಎಂದರು.
ಇಬ್ಬರು ವ್ಯಕ್ತಿಗಳ ನಡುವೆ ಖಾಸಗಿ ಕರಾರು ಒಪ್ಪಂದ ಏರ್ಪಡುವ ವೇಳೆ ಡಿಜಿಟಲ್ ಸಿಗ್ನೇಚರ್ ಬಳಕೆಗೆ ಮತ್ತು ಅಧಿಕಾರಿಗಳ ಖುದ್ದು ಹಾಜರಾತಿಗೆ ವಿನಾಯಿತಿ ನೀಡುವುದಿಲ್ಲ. ಬದಲಾಗಿ ನಿಯಮಾವಳಿಗಳನ್ನು ಮತ್ತಷ್ಟು ಕಠಿಣ ಗೊಳಿಸಲಾಗುತ್ತಿದೆ ಎಂದರು.
ಈ ಮೊದಲು ಜಿಪಿಎ ಪತ್ರವನ್ನು ಬಳಕೆ ಮಾಡಿ ಆಸ್ತಿಗಳ ನೋಂದಣಿ ಹಾಗೂ ಪರಭಾರೆಯಾಗಿದೆ. ಇಂತಹ ಆಸ್ತಿಗಳನ್ನು ಖರೀದಿಸಿದವರು ತೊಂದರೆಗೆ ಸಿಲುಕಿದ್ದಾರೆ. ಇನ್ನು ಮುಂದೆ ಖಾಸಗಿ ಖರೀದಿ ಒಪ್ಪಂದದ ಸಂದರ್ಭದಲ್ಲಿ ನೊಂದಣಿ ಯಾಗದ ಜಿಪಿಎ ಮಾತ್ರ ಪರಿಗಣಿಸಲಾಗುತ್ತದೆ ಎಂದರು.
ಸಿಸ್ಟಮ್ ಡಿಜಿಟಲ್ ಸಿಗ್ನೇಚರ್ ಆಧರಿಸಿ ನೋಂದಣಿಯಾಗುವ ಸಂದರ್ಭದಲ್ಲಿ ಡಿಜಿಟಲ್ ದಾಖಲಾತಿಗಳು ಗ್ರಾಮ ಪಂಚಾಯಿತಿ ಅಥವಾ ನಗರ ಸ್ಥಳೀಯ ಸಂಸ್ಥೆಗಳಿಂದ ಕಾವೇರಿ ತಂತ್ರಾಂಶದಲ್ಲಿ ಇಂಟಿಗ್ರೇಟೆಡ್ ಆಗಿರಬೇಕು. ಎಲ್ಲಾ ದಾಖಲಾತಿಗಳು ಎಲೆಕ್ಟ್ರಾನಿಕ್ ಮಾದರಿಯಲ್ಲೇ ನೊಂದಣಿ ಪ್ರಕ್ರಿಯೆಗೆ ಜೋಡಣೆಗೊಳ್ಳಬೇಕು. ಈ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊರಡಿಸುವ ನಿಯಮಾವಳಿಗಳನ್ನು ಅಳವಡಿಕೆ ಮಾಡಿಕೊಳ್ಳಲಾಗುವುದು ಎಂದರು.
ಒಂದೇ ಸರ್ವೇ ನಂಬರ್ ನ ಭಾಗಶಃ ಭೂಮಿಯನ್ನು ಮಾರಾಟ ಮಾಡುವ ಸಂದರ್ಭದಲ್ಲಿ 11ಇ ಸ್ಕೆಚ್ ಅನ್ನು ಮುಂದೆ ಕಾಗದದ ಮಾದರಿಯ ಬಳಕೆ ಮಾಡಲಾಗುವುದಿಲ್ಲ. ಡಿಜಿಟಲ್ ಸ್ಕೆಚ್ ಮಾತ್ರ ಪರಿಗಣಿಸಲಾಗುತ್ತದೆ ಎಂದರು. ಬಿಜೆಪಿಯ ಸುರೇಶ್ ಕುಮಾರ್, ಅರವಿಂದ ಬೆಲ್ಲದ್, ಚನ್ನಬಸಪ್ಪ, ಕಾಂಗ್ರೆಸ್ಸಿನ ಕೆ.ಎಂ. ಶಿವಲಿಂಗಗೌಡ, ತನ್ವೀರ್ ಶೇಠ್ ಮುಂತಾದವರು ಹಲವು ಸಲಹೆ ಸೂಚನೆಗಳನ್ನು ನೀಡಿ, ವಿಧೇಯಕವನ್ನು ಸ್ವಾಗತಿಸಿದರು.ಧ್ವನಿ ಮತದ ಮೂಲಕ ವಿಧೇಯಕ ಅಂಗೀಕಾರವಾಗಿದೆ ಎಂದು ಸಭಾಧ್ಯಕ್ಷರು ಪ್ರಕಟಿಸಿದರು.




