ಉಪ ನೋಂದಣಿ ಕಚೇರಿಗಳಲ್ಲಿ ದಲ್ಲಾಳಿಗಳ ಲಂಚಾವತಾರಕ್ಕೆ ಕಡಿವಾಣ ಹಾಕಿ: ಕೃಷ್ಣ ಬೈರೇಗೌಡ

2 years ago

ಬುಧವಾರ ಮದ್ದೂರು ಉಪ ನೋಂದಣಿ ಕಚೇರಿಗೆ ಭೇಟಿ ನೀಡಿದ್ದ ಸಚಿವ

ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು

ಮದ್ದೂರು ಭೇಟಿಯ ಬೆನ್ನಿಗೆ ಗುರುವಾರ ಕಚೇರಿಯಲ್ಲಿ ಅಧಿಕಾರಿಗಳ ಸಭೆ

ಇಲಾಖೆ ಜಾರಿಗೆ ತರುವ ಯೋಜನೆಗಳು ಜನರಿಗೆ ತಲುಪುತ್ತಿಲ್ಲವೇಕೆ? ಸಚಿವರ ಅಸಮಾಧಾನ

ಬೆಂಗಳೂರು: ಉಪ ನೋಂದಣಿ (ಸಬ್ ರಿಜಿಸ್ಟ್ರಾರ್) ಕಚೇರಿಗಳ ಸುಧಾರಣೆಗೆ ಕಳೆದ ಆರು ತಿಂಗಳಿನಿಂದ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದರೂ ಫೀಲ್ಡ್ನಲ್ಲಿ ಏನೂ ಕಾಣಿಸುತ್ತಿಲ್ಲ. ದಲ್ಲಾಳಿಗಳ ಹಾವಳಿ ಲಂಚಾವತಾರ ಕೊನೆಯಾಗಿಲ್ಲ ಏಕೆ? ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳನ್ನು ಪ್ರಶ್ನಿಸಿದರು.

ಬುಧವಾರ ಮದ್ದೂರು ತಾಲೂಕಿನ ಉಪ ನೋಂದಣಿ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದ ಬೆನ್ನಿಗೆ ಗುರುವಾರ ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಅವರು ಸಂಬಂಧಿತ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದರು.

“ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಜನರನ್ನು ಅನಗತ್ಯವಾಗಿ ಕಾಯಿಸುವ ಮೂಲಕ ಶೋಷಣೆಗೊಳಪಡಿಸುವುದು ಹಾಗೂ ದಲ್ಲಾಳಿಗಳ ಮೂಲಕ ಲಂಚಕ್ಕೆ ಬೇಡಿಕೆ ಇಡುವ ಪ್ರಕರಣಗಳಿಗೆ ಇತಿಶ್ರೀ ಹಾಡುವ ಕಾರಣಕ್ಕೆ ಕಾವೇರಿ-2 ತಂತ್ರಾಂಶ ಅಭಿವೃದ್ಧಿಗೊಳಿಸಲಾಗಿತ್ತು. ಕಳೆದ ಆರು ತಿಂಗಳಿನಿಂದ ಸತತವಾಗಿ ಸಾಕಷ್ಟು ಸುಧಾರಣಾ ಕ್ರಮಗಳನ್ನೂ ಜಾರಿಗೆ ತರಲಾಗುತ್ತಿದೆ. ಆದರೆ, ನಾವಿಲ್ಲಿ ಕಚೇರಿಯಲ್ಲಿ ಚರ್ಚಿಸುವ-ಸೂಚಿಸುವ ಯಾವ ಯೋಜನೆಯೂ ವಾಸ್ತವದಲ್ಲಿ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳ್ಳುವುದಿಲ್ಲ. ಪರಿಣಾಮ ಜನರ ಬವಣೆಯೂ ತಪ್ಪಿದ್ದಲ್ಲ” ಎಂದು ಅವರು ಅಸಮಾಧಾನ ಹೊರಹಾಕಿದರು.

ಸಾರ್ವಜನಿಕರು ಆಸ್ತಿ ನೋಂದಣಿಗೆ ಕಾವೇರಿ ತಂತ್ರಾಂಶದಲ್ಲಿ ಸಮಯವನ್ನು ನಿಗದಿಪಡಿಸಿಕೊಳ್ಳಬಹುದು. ದಾಖಲೆ ಸರಿಯಾಗಿದ್ದರೆ ಗರಿಷ್ಠ 30 ನಿಮಿಷದಲ್ಲಿ ಆಸ್ತಿ ನೋಂದಣಿ ಮುಗಿಯುತ್ತದೆ. ಆದರೆ, ಈ ವ್ಯವಸ್ಥೆಯನ್ನು ಬಹುತೇಕ ಕಚೇರಿಗಳಲ್ಲಿ ಅಧಿಕಾರಿಗಳೇ ಬಳಸುತ್ತಿಲ್ಲ. ಪರಿಣಾಮ ಜನರ ಕಚೇರಿಗೆ ಬಂದು ಕಾಯುವುದು ತಪ್ಪುತ್ತಿಲ್ಲ. ಈ ನಡುವೆ ದಲ್ಲಾಳಿಗಳ ಮೂಲಕ ಲಂಚಕ್ಕೆ ಬೇಡಿಕೆ ಇಡುತ್ತಿರುವ ಪ್ರಕರಣಗಳನ್ನೂ ನಿಯಂತ್ರಿಸಲಾಗುತ್ತಿಲ್ಲ. ಮದ್ದೂರಿನ ಉಪ ನೋಂದಣಿ ಕಚೇರಿಯಲ್ಲಿ ಇಂತಹ ಘಟನೆಗೆ ಸ್ವತಃ ನಾನೇ ಸಾಕ್ಷಿಯಾಗಿದ್ದೇನೆ ಎಂದು ಆಕ್ರೋಶ ಹೊರಹಾಕಿದರು.

ಇಲ್ಲಿ ನಾವು ಮಾತಾಡ್ತಾ ಇರೋದೆ ಒಂದು ಫೀಲ್ಡ್ನಲ್ಲಿ ನಡೀತಾ ಇರೋದೆ ಮತ್ತೊಂದು. ಹೀಗಾದ್ರೆ ವ್ಯವಸ್ಥೆ ಬದಲಾಗಲ್ಲ. ನಾವು ಮಾಡುತ್ತಿರುವ ಸುಧಾರಣಾ ಕೆಲಸ ಜನರಿಗೆ ತಲುಪಲ್ಲ. ಜನರಲ್ಲಿ ಇಲಾಖೆ ಮೇಲೆ ಕಿಂಚಿತ್ತೂ ಭರವಸೆ ಮೂಡಿಸಲಾಗಲ್ಲ. ಹೀಗಾಗಿ ಇಲಾಖೆಯ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು ಎಂದು ತಿಳಿಸಿದರು.

ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕಚೇರಿಗೆ ಆಗಮಿಸುತ್ತಿಲ್ಲ. ಆಸ್ತಿ ನೋಂದಣಿ ತಡವಾಗಲು ಇದೂ ಒಂದು ಕಾರಣ. ಹೀಗಾಗಿ ಪ್ರತೀ ಉಪ ನೋಂದಣಿ ಕಚೇರಿಯಲ್ಲೂ ಬಯೋ ಮೆಟ್ರಿಕ್ ಹಾಜರಾತಿಯನ್ನು ಕಡ್ಡಾಯಗೊಳಿಸಬೇಕು. ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕಚೇರಿಗೆ ಆಗಮಿಸುವಂತೆ ನೋಡಿಕೊಳ್ಳಬೇಕು. ದಲ್ಲಾಳಿಗಳ ಹಾವಳಿಗೂ ಕಡಿವಾಣ ಹಾಕಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸಭೆಯಲ್ಲಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಸಭೆಯಲ್ಲಿ ಕರ್ನಾಟಕ ನೋಂದಣಿ ಮತ್ತು ಮುದ್ರಾಂಕ ಕಾಯ್ದೆಯನ್ನು ಮತ್ತಷ್ಟು ಜನಸ್ನೇಹಿಗೊಳಿಸಿ ಮುಂದಿನ ಅಧಿವೇಶನದಲ್ಲಿ ಮಂಡಿಸುವ ಬಗ್ಗೆಯೂ ಚರ್ಚಿಸಲಾಯಿತು.

ಪ್ರಧಾನ ಕಾರ್ಯದರ್ಶಿ ರಶ್ಮಿ ವಿ. ಮಹೇಶ್, ನೋಂದಣಿ ಮಹಾಪರಿವೀಕ್ಷಕಿ ಡಾ.ಬಿ.ಆರ್‌. ಮಮತಾ ಹಾಗೂ ಸಹಾಯಕ ನೋಂದಣಿ ಮಹಾಪರಿವೀಕ್ಷ ಹೆಚ್‌. ಎಲ್‌. ಪ್ರಭಾಕರ್‌ ಉಪಸ್ಥಿತರಿದ್ದರು.

Leave a Reply