ಯು.ಪಿ.ಎಸ್.ಸಿ.ಗೆ ಆಯ್ಕೆಯಾದ ಸಾಧಕರಿಗೆ ಚುಂಚಶ್ರೀ ಬಳಗದ ವತಿಯಿಂದ ಅಭಿನಂದನೆ

11 months ago

ಬೆಂಗಳೂರು: ವಿಜಯನಗರದಲ್ಲಿರುವ  ಶ್ರೀ ಅದಿಚುಂಚನಗಿರಿ ಸಮುದಾಯ ಭವನದಲ್ಲಿ ಚುಂಚಶ್ರೀ ಬಳಗದ ವತಿಯಿಂದ ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ಆಯ್ಕೆಯಾದ ಸಮುದಾಯದ ಮತ್ತು ಐ.ಎ.ಎಸ್. ಐಪಿಎಸ್. ಮತ್ತು  ಐಎಫ್.ಎಸ್. ಹಾಗೂ ಐ.ಆರ್.ಎಸ್. ಮತ್ತಿತರ ನಾಗರಿಕ ಸೇವೆಗಳ ಸಾಧಕರಿಗೆ ಅಭಿನಂದನಾ ಸಮಾರಂಭ ನಡೆಯಿತು.

ದಿವ್ಯಸಾನಿಧ್ಯವನ್ನು ಆದಿಚುಂಚನಗಿರಿ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಕಾರ್ಯದರ್ಶಿ ಶ್ರೀ ಸೌಮ್ಯನಾಥ ಸ್ವಾಮಿಜಿ, ಉಪಲೋಕಾಯುಕ್ತ ಬಿ.ವೀರಪ್ಪ, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರಯ್ಯ, ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಆಯುಕ್ತ ಟಿ.ಜಿ.ಶಿವಶಂಕರೇಗೌಡ, ಆದಾಯ ತೆರಿಗೆ ಇಲಾಖೆಯ ಜಯರಾಮ್ ರಾಯಪುರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ  ಚೇತನ್ ಆರ್., ಇಂಗ್ಲೆಂಡ್ ದೇಶದ ಕೌನ್ಸಿಲರ್ ಸುರೇಶ್ ಮತ್ತು ಗಾ.ನಂ.ಶ್ರೀಕಂಠಯ್ಯ, ನಿವೃತ್ತ ಐ.ಎಫ್.ಎಸ್.ರವರು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು.

ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ವಿದ್ಯೆ ಯಾರೂ ಕದಿಯಲಾರದ ಅಮೂಲ್ಯ ಜ್ಞಾನ ಭಂಡಾರ. ವಿದ್ಯೆ ಕಲಿತ ವ್ಯಕ್ತಿ ಸಾಯುವ ತನಕ ವಿದ್ಯೆ ಅವನ ಜೊತೆಯಲ್ಲಿ ಇರುತ್ತದೆ. ಜ್ಞಾನದ ಬೆಳಕನ್ನು ಸಮಾಜದ ಮೇಲೆ ಚೆಲ್ಲಬೇಕು. ಸಮಾಜದ ಒಳಿತಿಗಾಗಿ ಮತ್ತು ನಮ್ಮ ಸಮುದಾಯದ ಒಳಿತಿಗಾಗಿ ಶ್ರಮವಹಿಸಿ ಎಂದರು.

ದೇಶ, ನೆಲ, ಜಲ ಪರಿಸರ ಮತ್ತು ರೈತರ ಜೊತೆಯಲ್ಲಿ ಸ್ನೇಹಿಯಾಗಿ ಮತ್ತು ಫಲವತ್ತತೆ ಭೂಮಿಯನ್ನು ಕಾಪಾಡುವ ರೈತ ಯಾವುದೇ ಪ್ರತಿಫಲ ಬಯಸುವುದಿಲ್ಲ. ಇಂದು ರೈತರು ಜಮೀನು ಕಳೆದುಕೊಳ್ಳುತ್ತಿದ್ದಾರೆ. ಇದು ಶೋಚನೀಯ ಸಂಗತಿ‌ ವ್ಯವಸಾಯ ಮಾಡುವವರು ಆರ್ಥಿಕವಾಗಿ ಸಬಲರಾಗಿಲ್ಲ. ರಸ್ತೆ ಹಾಗೂ ಉತ್ತಮ ವಾಹನ ಸಂಚಾರವನ್ನು ರೈತರಿಗೆ ಒದಗಿಸದಾಗ ರೈತರ ಜೀವನ ಹಸನಾಗುತ್ತದೆ. ಮನುಕುಲಕ್ಕೆ ತೊಂದರೆಯಾಗದಂತೆ ಅಭಿವೃದ್ದಿಯಾಗಬೇಕು. ಯುವ ಸಮುದಾಯ ದೇಶಕ್ಕೆ ಉತ್ತಮ ಸೇವೆ ಕೊಡುಗೆ ಕೊಡಬೇಕು ಎಂದರು.

ಉಪಲೋಕಾಯುಕ್ತ ಬಿ.ವೀರಪ್ಪ ಮಾತನಾಡಿ, ದೇಶದಲ್ಲಿ ಒಳ್ಳೆಯ ಅವಕಾಶವಿದೆ. ಮನಸ್ಸು ಮಾಡಿದರೆ ಸಾಧನೆ ಮಾಡಲು ಸಾಧ್ಯ. ಸರ್ಕಾರಿ ಸೇವೆಯಲ್ಲಿ ಇರುವ ಯುವಕರು ಯಾವುದಕ್ಕೂ ಅಂಜದೇ ಕೆಲಸ ಮಾಡಿ. ಭ್ರಷ್ಟಾಚಾರ ಮಾಡಿದ ಅಧಿಕಾರಿಗಳ ನಿವೃತ್ತಿ ನಂತರ ಹೀನಾಯ ಸ್ಥಿತಿಯಲ್ಲಿ ಬದುಕುವುದನ್ನ ನಾವು ನೋಡಿದ್ದೇವೆ. ಭ್ರಷ್ಟಾಚಾರ ದೇಶದ ಪೀಡುಗಾಗಿದೆ. ಕ್ಯಾನ್ಸರ್ ನಂತೆ ಹರಡಿದೆ. ಅದನ್ನ ತಡೆಗಟ್ಟಬೇಕು‌ ಎಂದರು.

ಹೆಂಡತಿ, ಸಂಬಂಧಿಕರು, ತಂದೆ, ಮಗನಾದರು ಸರಿಯೆ ತಪ್ಪು ಮಾಡಿದರೆ ಸಹಕಾರ ಕೊಡಬಾರದು. ನೊಂದವರ ಬಾಳಿಗೆ ಬೆಳಕಾಗಿ ಸರ್ಕಾರಿ ಸೇವೆ ಮಾಡಿ, ಮಕ್ಕಳಿಗೆ ಆಸ್ತಿ ಮಾಡಬೇಡಿ, ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಿ. ನಮ್ಮ ಶಕ್ತಿ, ಯುಕ್ತಿ ದೇಶಕ್ಕಾಗಿ, ಸಿಂಹದಂತೆ ಘರ್ಜಿಸಿ ಬದುಕಿ ಎಂದರು.

ಯು.ಪಿ.ಎಸ್.ಸಿ.ಸಾಧನೆ ಮಾಡಿದ ಡಾ.ಮಾಧವಿ ಆರ್, ಮಧು.ಎ. ಮತ್ತು ಡಾ.ವರುಣ್ ಕೆ.ಗೌಡ, ಚೇತನ್ ಕೆ., ನಿಖಿಲ್ ಎಂ.ಆರ್, ನಮ್ರತಾ  ಎನ್, ಉಲ್ಲಾಸ್ ಎಂ.ಎಸ್.ವಿಷ್ಣು ಬಿ.ಎಸ್.ಗೌಡರವರಿಗೆ ಅಭಿನಂದನೆ ಸಲ್ಲಿಸಲಾಯಿತು.

ವಿಶೇಷ ಸನ್ಮಾನಿತರಾಗಿ ನಿವೃತ್ತ ಅಪರ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ಮತ್ತು ನಿವೃತ್ತ ಇಂಜಿನಿಯರ್ ಎಂ.ನಾಗರಾಜ್ ಅವರನ್ನು ಸನ್ಮಾನಿಸಲಾಯಿತು.

Leave a Reply