ಪಾಕಿಸ್ತಾನಿ ಪ್ರಜೆಗಳಿಗಾಗಿ ಪೊಲೀಸರ ಹುಡುಕಾಟ

1 year ago

ಬೆಂಗಳೂರು: ಕಾಶ್ಮೀರದ ಪಹಲ್ಗಾಮ್ ನಲ್ಲಿ  ನಡೆದ ಉಗ್ರರ ಗುಂಡಿನ ದಾಳಿಯ ಬೆನ್ನಲ್ಲೇ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ನೆಲೆಸಿರುವ ಪಾಕಿಸ್ತಾನಿ ಪ್ರಜೆಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಉಗ್ರರ ದಾಳಿಯ ಹಿನ್ನೆಲೆಯಲ್ಲಿ ದೇಶದ ಹಲವಡೆ ಕೈಗೊಂಡಿರುವ ಭದ್ರತಾ ಕ್ರಮಗಳ ಕುರಿತಂತೆ ಎಲ್ಲ ರಾಜ್ಯಗಳ ಸಿಎಂಗಳ ಜೊತೆ ಮಾತನಾಡಿರುವ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ, ತಮ್ಮ ತಮ್ಮ ರಾಜ್ಯಗಳಲ್ಲಿ ನೆಲೆಸಿರುವ ಪಾಕಿಸ್ತಾನಿ ಪ್ರಜೆಗಳನ್ನು ಹುಡುಕಿ ದೇಶದಿಂದ ಹೊರ ಹಾಕುವಂತೆ ಸೂಚಸಿದ್ದಾರೆ.

ಭಾರತ ಸದ್ಯ ಪಾಕಿಸ್ತಾನದ ಪ್ರಜೆಗಳಿಗೆ ನೀಡಿರುವ ವೀಸಾಗಳ ಅವಧಿಯು ಏಪ್ರಿಲ್ 27ರಿಂದ ಜಾರಿಗೆ ಬರುವಂತೆ ಮುಕ್ತಾಯವಾಗಲಿದೆ. ವೀಸಾದ ಅವಧಿ ಮುಗಿಯುವುದರೊಳಗೆ ಸದ್ಯ ಭಾರತದಲ್ಲಿ ನೆಲೆಸಿರುವ ಎಲ್ಲ ಪಾಕಿಸ್ತಾನಿಯರು ದೇಶವನ್ನು ತೊರೆಯಬೇಕು ಎಂದು ಭಾರತ ತಾಕೀತು ಮಾಡಿದೆ.

ವೈದ್ಯಕೀಯ ವೀಸಾ ಏಪ್ರಿಲ್ 29ರವರೆಗೆ ಮಾತ್ರ ಊರ್ಜಿತವಾಗಿರಲಿದೆ ಎಂದು ವಿದೇಶಾಂಗ ಸಚಿವಾಲಯ ಘೋಸಿದೆ. ಇದರ ಬೆನ್ನಲ್ಲೇ ಎಲ್ಲಾ ರಾಜ್ಯಗಳ ಸಿಎಂಗಳಿಗೆ ವೈಯಕ್ತಿಕವಾಗಿ ಕರೆ ಮಾಡಿರುವ ಅಮಿತ್ ಶಾ, ಪಾಕಿಸ್ತಾನದ ಯಾವುದೇ ಪ್ರಜೆ ಗಡುವು ಮೀರಿ ಭಾರತದಲ್ಲಿ ಇರದಂತೆ ನೋಡಿಕೊಳ್ಳಬೇಕು. ಜತೆಗೆ ತಮ್ಮ ತಮ್ಮ ಪ್ರದೇಶಗಳಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಗಳನ್ನು ಗುರುತಿಸಿ ಅವರನ್ನು ಗಡೀಪಾರು ಮಾಡುವಂತೆಯೂ ಸೂಚನೆ ನೀಡಿದ್ದಾರೆ.

ಗೃಹ ಮಂತ್ರಿ ಸೂಚನೆಯ ಹಿನ್ನೆಲೆಯಲ್ಲಿ ಗೃಹ ಇಲಾಖೆಯ ವಿದೇಶಿ ವಿಭಾಗದ ಪೊಲೀಸರು ಬೆಂಗಳೂರು ಸೇರಿದಂತೆ ರಾಜ್ಯದ ಇತರ ಕಡೆ ನೆಲೆಸಿರುವ ಪಾಕಿಸ್ತಾನಿ ಪ್ರಜೆಗಳು ಪ್ರವಾಸಿ ವೀಸಾ, ವಾಣಿಜ್ಯ ವೀಸಾ ಮತ್ತು ವೈದ್ಯಕೀಯ ವೀಸಾದಲ್ಲಿ ಬಂದಿರುವ ಪಾಕಿಸ್ತಾನಿ ಪ್ರಜೆಗಳಿಗಾಗಿ ಶೋಧನೆ ಆರಂಭಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಗೃಹಸಚಿವ ಡಾ. ಜಿ ಪರಮೇಶ್ವರ್, ರಾಜ್ಯದಲ್ಲಿ ಅಧಿಕೃತವಾಗಿ ನೆಲೆಸಿರುವ ಪಾಕಿಸ್ತಾನೀಯರನ್ನು ಪರಿಶೀಲಿಸಲಾಗುತ್ತಿದೆ. ಅವರ ವೀಸಾಗಳನ್ನು ರದ್ದು ಮಾಡಿ ವಾಪಸ್ ಕಳುಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಕೇಂದ್ರ ವಿದೇಶಾಂಗ ಸಚಿವಾಲಯ ತೆಗೆದುಕೊಳ್ಳುವ ಕ್ರಮಗಳಿಗೆ ರಾಜ್ಯದ ಪೊಲೀಸರು ಸಹಕಾರ ನೀಡಲಿದ್ದಾರೆ. ಸದ್ಯಕ್ಕೆ ಪಾಕಿಸ್ತಾನಿ ಪ್ರಜೆಗಳ ವಿರುದ್ಧಮಾತ್ರ ಈ ನಿರ್ಧಾರ ಕೈಗೊಳ್ಳಲಾಗಿದೆ. ಅನಧಿಕೃತವಾಗಿ ನೆಲೆಸಿರುವವರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಅದನ್ನು ಪರಿಶೀಲಿಸಬೇಕಿದೆ. ಒಂದು ವೇಳೆ ಆ ರೀತಿ ಅಕ್ರಮವಾಗಿ ನೆಲೆಸಿದರೆ ಅವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದರು.

ಕಾಶ್ಮೀರದಲ್ಲಿನ ದಾಳಿಯಲ್ಲಿ ಕೇಂದ್ರ ಗುಪ್ತಚರ ವೈಫಲ್ಯ ಇದೆ ಎಂಬುದು ಸ್ಪಷ್ಟವಾಗಿದೆ. ಅವರು ಅನೇಕ ಬಾರಿ ನಮ್ಮ ರಾಜ್ಯದ ಪೊಲೀಸರಿಗೆ ಮಾಹಿತಿ ನೀಡುತ್ತಾರೆ. ನಮ್ಮಿಂದಲೂ ಮಾಹಿತಿ ತೆಗೆದುಕೊಳ್ಳುತ್ತಾರೆ. ಇದು ರಾಷ್ಟ್ರೀಯ ಭದ್ರತಾ ವಿಚಾರವಾಗಿರುವುದರಿಂದ ಕರ್ನಾಟಕವೂ ಸೇರಿದಂತೆ ಬೇರೆಲ್ಲಾ ಕಡೆ ಇರುವ ಸ್ವೀಪರ್ ಸೆಲ್ಗಳ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ಇರುತ್ತದೆ. ನಮ್ಮ ರಾಜ್ಯಕ್ಕೆ ತಿಳಿಯದೇ ಇರುವ ಬಹಳಷ್ಟು ವಿಚಾರಗಳು ಕೇಂದ್ರ ಸರ್ಕಾರದ ಅರಿವಿಗಿರುತ್ತದೆ ಎಂದರು.

ರಾಜ್ಯದ ಪೊಲೀಸರಿಗೆ ಮಾಹಿತಿ ಸಿಕ್ಕರೆ ಕೇಂದ್ರ ಗುಪ್ತಚರ ಹಾಗೂ ರಾಷ್ಟ್ರೀಯ ತನಿಖಾ ದಳಕ್ಕೆ ಮಾಹಿತಿ ನೀಡಲಾಗುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯತೆಯಿಂದ ಕೆಲಸ ಮಾಡುತ್ತವೆ. ಇಸ್ರೋ, ಡಿಆರ್ಡಿಒ ಎಲ್ಲಾ ಕಡೆ ವಿಶೇಷ ಭದ್ರತಾ ವ್ಯವಸ್ಥೆಗಳಿವೆ. ರಾಜ್ಯದ ಪೊಲೀಸರು ಅದಕ್ಕೆ ಅಗತ್ಯ ಬೆಂಬಲ ನೀಡಿರುತ್ತಾರೆ ಎಂದರು.

ಭದ್ರತಾ ದೃಷ್ಟಿಯಿಂದ ಕೇಂದ್ರ ಸರ್ಕಾರ ರಾಜತಾಂತ್ರಿಕವಾಗಿ ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದೆ. ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದೇವೆ. ಉಗ್ರರ ನೆಲೆಗಳನ್ನು ಧ್ವಂಸಪಡಿಸಲು ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುವುದಾಗಿ ಹೇಳಿದರು. ಕಲಬುರಗಿಯಲ್ಲಿ ರಸ್ತೆಯುದ್ದಕ್ಕೂ ಪಾಕಿಸ್ತಾನದ ಧ್ವಜ ಹಾಕಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ ಎಂದರು.

Leave a Reply