ರಾಜ್ಯಪಾಲರು ರಾಜಕಾರಣ ಮಾಡಿದರೆ ಸುಪ್ರೀಂಕೋರ್ಟ್ ಮಧ್ಯಪ್ರವೇಶ ಮಾಡಲೇಬೇಕಲ್ಲವೇ?

1 year ago

ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ಮಸೂದೆಗಳನ್ನು ಮೂರು ತಿಂಗಳ ಅವಧಿಯಲ್ಲಿ ಇತ್ಯರ್ಥ ಪಡಿಸಬೇಕೆಂಬ ಸುಪ್ರೀಂಕೋರ್ಟಿನ ಆದೇಶಕ್ಕೆ ಉಪರಾಷ್ಟ್ರಪತಿಗಳು ವಿರೋಧವನ್ನು ವ್ಯಕ್ತಪಡಿಸಿ ಮಾತನಾಡಿರುವುದನ್ನ ಗಮನಿಸಿದಾಗ ಸುಪ್ರೀಂಕೋರ್ಟಿನ ತೀರ್ಮಾನ ಈ ರೀತಿ ಬರಲು ಇದರ ಹಿನ್ನೆಲೆ ಏನು ಎನ್ನುವುದನ್ನು ಗಮನಿಸಬೇಕಾಗಿದೆ.

ರಾಜ್ಯಪಾಲರು ರಾಷ್ಟ್ರಪತಿಗಳ ಆದೇಶದ ಮೇರೆಗೆ ರಾಜ್ಯಗಳಿಗೆ ನಿಯೋಜನೆಗೊಂಡಿರುತ್ತಾರೆ. ಅವರು ರಾಜ್ಯಪಾಲರ ಕೆಲಸವನ್ನಷ್ಟೇ ಮಾಡಬೇಕು. ರಾಜಕಾರಣಿಗಳಂತೆ ವರ್ತಿಸಬಾರದು. ತಮ್ಮನ್ನು ಇಂತಹ ಗೌರವಾನ್ವಿತ ಹುದ್ದೆಗೆ ನೇಮಿಸಿದಂತಹ ಪಕ್ಷಕ್ಕೆ ವಿಶೇಷವಾಗಿ ಕೇಂದ್ರ ಸರ್ಕಾರದ ವಕ್ತಾರರ ರೀತಿಯಲ್ಲಿ ನಡೆದುಕೊಳ್ಳಬಾರದು.

ರಾಜ್ಯದ ಸದನಗಳು ಅನುಮೋದನೆ ಮಾಡಿದ ಬಿಲ್ ಗಳನ್ನು ಆದಷ್ಟು ಬೇಗನೆ ಇತ್ಯರ್ಥಪಡಿಸಿ ಚುನಾಯಿತ ಸರ್ಕಾರಗಳು ತಮ್ಮ ಉದ್ದೇಶದಂತೆ ಯೋಜನೆಗಳನ್ನು ರೂಪಿಸಲು ಅನುಕೂಲ ಮಾಡಿಕೊಡಬೇಕು. ಆದರೆ ಇತ್ತೀಚಿನ ದಶಕದಲ್ಲಿ ರಾಜ್ಯಪಾಲರು ರಾಜಕಾರಣಿಗಳಂತೆ ವರ್ತಿಸುತ್ತಾ ರಾಜ್ಯ ಸರ್ಕಾರಗಳ ವಿರುದ್ಧ ಅನವಶ್ಯಕವಾಗಿ ಕ್ರಮಗಳನ್ನು ಕೈಗೊಳ್ಳುವುದು, ಸದನದಲ್ಲಿ ಮಂಡಿಸಿ ಅನುಮೋಧನೆ ಪಡೆದುಕೊಂಡ ಬಿಲ್ ಗಳಿಗೆ ಸಹಿ ಮಾಡದೆ ಹಿಂತಿರುಗಿಸುವುದು, ಇಲ್ಲವೇ ಹಲವು ತಿಂಗಳುಗಳ ಕಾಲ ಯಾವುದೇ ರೀತಿಯ ಕ್ರಮವನ್ನು ಕೈಗೊಳ್ಳದೆ ಮೂಲೆಗೆ ಹಾಕುವುದು ಮುಂತಾದ ಕೆಲಸಗಳ ಜೊತೆಗೆ ರಾಜ್ಯ ಸರ್ಕಾರದ ಆಡಳಿತದಲ್ಲಿ ಅನಾವಶ್ಯಕವಾಗಿ ಮೂಗು ತೂರಿಸುವುದು ಮುಂತಾದವುಗಳು ಸಾಮಾನ್ಯವಾಗುತ್ತಿವೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪ್ರಜಾಪ್ರಭುತ್ವದ ವಿರೋಧಿ ಧೋರಣೆಯನ್ನ ಅನುಸರಿಸುತ್ತ ತಾವು ನೇಮಿಸಿದ ರಾಜ್ಯಪಾಲರನ್ನು ತಮ್ಮ ಕೈಗೊಂಬೆಗಳನ್ನಾಗಿ ಮಾಡಿಕೊಂಡು ಅವರುಗಳ ಮೂಲಕ ವಿರೋಧ ಪಕ್ಷದ ಸರ್ಕಾರಗಳ ವಿರುದ್ಧ ಸಂವಿಧಾನ ವಿರೋಧಿ ಮಾರ್ಗವನ್ನು ಅನುಸರಿಸಿದರೆ ಬೇರೆ ದಾರಿ ಕಾಣದೆ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಸಂವಿಧಾನವನ್ನ ಉಳಿಸಬಲ್ಲಂತಹ ಶಕ್ತಿ ಸರ್ವೋಚ್ಛ ನ್ಯಾಯಾಲಯಕ್ಕೆ ಇರುವುದರಿಂದ ಅವರು ತಮಗಿರುವ ಅಧಿಕಾರವನ್ನು ಮತ್ತು ವಿವೇಚನೆಯನ್ನು ಬಳಸಿ ಸೂಕ್ತವಾದಂತಹ ಆದೇಶವನ್ನ ಕೊಡುವುದು ಅನಿವಾರ್ಯವಾಯಿತು.

ಮಾನ್ಯ ಉಪರಾಷ್ಟ್ರಪತಿಗಳು ಸರ್ವೋಚ್ಛ ನ್ಯಾಯಾಲಯದ ಆದೇಶದ ಬಗ್ಗೆ ಪ್ರಶ್ನಿಸುವುದಕ್ಕಿಂತ ರಾಜ್ಯಪಾಲರ ನಡೆಗಳ ಬಗ್ಗೆ ಪ್ರಶ್ನಿಸಿ ರಾಜ್ಯ ಸರ್ಕಾರಗಳ ವಿರುದ್ಧ ಪಕ್ಷದ ಪ್ರತಿನಿಧಿಯಂತೆ ಕೆಲಸ ಮಾಡಲು ಅವರಿಗೆ ಅಧಿಕಾರವಿದೆ ಎಂಬುದನ್ನು ಸಾರ್ವಜನಿಕವಾಗಿ ತಿಳಿಸಲಿ.

ಕಳೆದ ಹತ್ತು ವರ್ಷದಿಂದ ಕೇಂದ್ರ ಸರ್ಕಾರ ಹಲವು ರೀತಿಯ ಕಾನೂನುಗಳ ಮೂಲಕ ರಾಜ್ಯಗಳ ಅಧೀನದಲ್ಲಿದ್ದ ಅನೇಕ ಅಧಿಕಾರವನ್ನು ತನ್ನ ವ್ಯಾಪ್ತಿಗೆ ತೆಗೆದುಕೊಂಡು ರಾಜ್ಯಗಳ ಸ್ವಾಯತ್ತತೆಯನ್ನ ಮತ್ತು ರಾಜ್ಯಗಳಿಗೆ ಇರುವ ಸಂವಿಧಾನಾತ್ಮಕವಾದ ಹಕ್ಕುಗಳನ್ನ ಮೋಟಕುಗೊಳಿಸುವಂತಹ ಕ್ರಿಯೆಗಳು ನಿರಂತರವಾಗಿ ನಡೆಯುತ್ತಿವೆ.

ದುರಂತವೆಂದರೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರುಗಳಿಗೆ ಮತ್ತು ನಾಯಕರಿಗೆ ಅನೇಕ ಬಾರಿ ಚರ್ಚೆ ಮಾಡಲು ಮತ್ತು ಗಂಭೀರವಾದ ವಿಚಾರಗಳನ್ನ ಪ್ರಸ್ತಾಪ ಮಾಡಲು ಅವಕಾಶವನ್ನು ಕೊಡದೆ ಇರುವಂತಹ ಪ್ರಕರಣಗಳು ದಾಖಲಾಗಿವೆ. ಇಂತಹ ಸ್ಥಿತಿಯಲ್ಲಿ ಅಂತಿಮವಾಗಿ ನ್ಯಾಯವನ್ನು ನೀಡಬೇಕಾದದ್ದು ಸರ್ವೋಚ್ಛ ನ್ಯಾಯಾಲಯವೇ.

ಈ ಹಿನ್ನೆಲೆಯಲ್ಲಿ ಸರ್ವೋಚ್ಛ ನ್ಯಾಯಾಲಯದ ಮಾತು ಸತ್ಯವಾದದ್ದು. ರಾಜ್ಯಪಾಲರು ತಮ್ಮ ನಡೆಯನ್ನು ಮತ್ತು ನುಡಿಯನ್ನು ಬದಲಾಯಿಸಿಕೊಂಡು ಸಂವಿಧಾನಾತ್ಮಕವಾದಂತಹ ಪ್ರತಿನಿಧಿಯಾಗಿ ಕರ್ತವ್ಯವನ್ನ ಪಕ್ಷಭೇದ ಮರೆತು ಪೂರ್ವಾಶ್ರಮದ ಚಿಂತೆ ಇಲ್ಲದೆ ನಡೆಸಿದರೆ ಯಾರ ಅಭ್ಯಂತರವೂ ಇರುವುದಿಲ್ಲ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply