ಬೆಂಗಳೂರು: ರಾಜ್ಯ ವಿಧಾನ ಮಂಡಲದ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದು ನಿರ್ಮಾಣವಾಗಿದೆ. ಇದೇ ಮೊದಲ ಬಾರಿಗೆ ರಾಜ್ಯಪಾಲರೊಬ್ಬರು ವಿಧಾನ ಮಂಡಲದ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡದೆ ಸಂಪ್ರದಾಯ ಮುರಿದು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ ಘಟನೆಗೆ ಇಂದು ಬೆಂಗಳೂರಿನ ವಿಧಾನಸೌಧ ಮತ್ತು ನಾಡಿನ ಜನ ಸಾಕ್ಷಿಯಾದರು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ವರ್ಷದ ಮೊದಲ ಅಧಿವೇಶನವನ್ನು ರಾಜ್ಯಪಾಲರು ವಿಧಾನಮಂಡಲದ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡುವ ಮೂಲಕ ಆರಂಭಿಸುವುದು ಸಂಪ್ರದಾಯ. ಆದರೆ ರಾಜ್ಯ ಸರ್ಕಾರ ಕೇಂದ್ರದ ವಿಬಿಜಿ ರಾಮ್ ಜಿ ಕಾನೂನನ್ನು ವಿರೋಧಿಸಲು ವಿಶೇಷ ಅಧಿವೇಶನ ಕರೆಯಲಾಗಿದೆ. ಇದರ ಮೊದಲ ದಿನ ರಾಜ್ಯಪಾಲರು ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ ಎಂದು ಹೇಳಿ, ಭಾಷಣದ ಪ್ರತಿಯನ್ನು ಭಾಷಣದ ಪ್ರತಿಯನ್ನು ರಾಜ್ಯಪಾಲರಿಗೆ ರವಾನಿಸಿತ್ತು.
ಆದರೆ ಸರ್ಕಾರ ಸಿದ್ಧಪಡಿಸಿ ರವಾನಿಸಿರುವ ಭಾಷಣ ಓದಲು ನಿರಾಕರಿಸಿದ ರಾಜ್ಯಪಾಲರು ಭಾಷಣದಲ್ಲಿ ಇರುವ ವಿವಿಜಿ ರಾಮ್ ಜಿ ಯೋಜನೆಯ ಟೀಕೆ ಸೇರಿದಂತೆ ಒಟ್ಟು 11 ಪ್ಯಾರಾಗಳನ್ನು ಕೈಬಿಡಬೇಕು ಅಥವಾ ಮಾರ್ಪಡಿಸಬೇಕು ಇಲ್ಲವಾದರೆ ತಾವು ಸದನಕ್ಕೆ ಬರುವುದಿಲ್ಲ ಎಂಬ ಸಂದೇಶ ರವಾನಿಸಿದ್ದರು.
ಇದರಿಂದ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗಲಿದೆ ಎಂದು ಹೇಳಲಾಗಿತ್ತು. ಅಂತಿಮವಾಗಿ ಹಲವು ಸುತ್ತಿನ ಚರ್ಚೆಯ ಬಳಿಕ ರಾಜ್ಯಪಾಲರು ಸದನಕ್ಕೆ ಆಗಮಿಸಲು ಸಮ್ಮತಿಸಿದರಾದರೂ ಸರ್ಕಾರದ ಭಾಷಣ ಓದಲು ನಿರಾಕರಿಸಿದರು.
ಸಂಪ್ರದಾಯದಂತೆ ಲೋಕಭವನದಿಂದ ವಿಧಾನಸೌಧಕ್ಕೆ ಆಗಮಿಸಿದ ರಾಜ್ಯಪಾಲರನ್ನು ಸಿಎಂ ಸಿದ್ದರಾಮಯ್ಯ ಮಂಡಲದ ಉಭಯ ಸದನಗಳ ಅಧ್ಯಕ್ಷರು ಪ್ರತಿಪಕ್ಷ ನಾಯಕರು ಮತ್ತು ಕಾನೂನು ಸಂಸದೀಯ ವ್ಯವಹಾರಗಳ ಸಚಿವರು ಸ್ವಾಗತಿಸಿದರು.
ಸದನದೊಳಗೆ ಆಗಮಿಸಿದ ರಾಜ್ಯಪಾಲರು ಎಲ್ಲರಿಗೂ ಸ್ವಾಗತ ಕೋರಿ ರಾಜ್ಯ ಸರ್ಕಾರ ಆರ್ಥಿಕ ಬಿಕ್ಕಟ್ಟುಗಳನ್ನು ನಿಭಾಯಿಸಲು ಬದ್ಧವಾಗಿದೆ ಎಂದು ಹೇಳಿ, ಸರ್ಕಾರ ಸಿದ್ಧಪಡಿಸಿದ ಭಾಷಣ ಓದದೆ ಸದನದಿಂದ ನಿರ್ಗಮಿಸಲು ಮುಂದಾದರು. ಈ ವೇಳೆ ತಕ್ಷಣ ಎದ್ದು ನಿಂತ ಕಾಂಗ್ರೆಸ್ ಸದಸ್ಯರು ಭಾಷಣವನ್ನು ಓದುವಂತೆ ರಾಜ್ಯಪಾಲರನ್ನು ಆಗ್ರಹಿಸಿ ಘೋಷಣೆ ಕೂಗಿದರು.
ಇದಕ್ಕೆ ಪ್ರತಿಯಾಗಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರುಗಳು ರಾಜ್ಯಪಾಲರ ನಡೆಯನ್ನು ಸಮರ್ಥಿಸಿಕೊಂಡು ಅವರ ಪರವಾಗಿ ಘೋಷಣೆ ಕೂಗಿದ್ದು ಸದನದಲ್ಲಿ ಗದ್ದಲ-ಕೋಲಾಹಲದ ವಾತಾವರಣಕ್ಕೆ ಕಾರಣವಾಯಿತು. ಈ ವೇಳೆ ರಾಜ್ಯಪಾಲರು ಸದನದಿಂದ ನಿರ್ಗಮಿಸಿದರು.
ರಾಜ್ಯಪಾಲರು ಸದನದಿಂದ ಹೊರ ನಡೆಯುತ್ತಿದ್ದ ವೇಳೆ ಕಾಂಗ್ರೆಸ್ ಸದಸ್ಯರು ಭಾಷಣ ಓದಿ, ಭಾಷಣ ಓದಿ ಎಂದು ನಿರಂತರವಾಗಿ ಘೋಷಣೆಗಳನ್ನು ಕೂಗುತ್ತಿದ್ದರು. ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಸೇರಿದಂತೆ ಕೆಲ ಸದಸ್ಯರು ರಾಜ್ಯಪಾಲರನ್ನು ಹಿಂಬಾಲಿಸಿ ಭಾಷಣ ಓದುವಂತೆ ಒತ್ತಾಯಿಸಿದರು.
ಈ ಹಂತದಲ್ಲಿ ಸದನದಲ್ಲೇ ರಾಜ್ಯಪಾಲರನ್ನು ಅಡ್ಡ ಹಾಕಿದ ಕಾಂಗ್ರೆಸ್‌ನ ವಿಧಾನಪರಿಷತ್‌ನ ಸದಸ್ಯರಾದ ಎಸ್.ರವಿ.ಹರಿಪ್ರಸಾದ್, ವಿಧಾನಸಭಾ ಸದಸ್ಯ ಬಾಲಕೃಷ್ಣ ಇವರುಗಳು ಭಾಷಣ ಓದಿ ಎಂದು ರಾಜ್ಯಪಾಲರಿಗೆ ನೇರವಾಗಿ ಆಗ್ರಹಿಸಿದರು. ಆಗ ರಾಜ್ಯಪಾಲರನ್ನು ಅಡ್ಡಗಟ್ಟಿದ ಸದಸ್ಯರನ್ನು ಬದಿಗೆ ಸರಿಸಿ ರಾಜ್ಯಪಾಲರು ಹೊರಗೆ ಹೋಗಲು ಮಾರ್ಷಲ್‌ಗಳು ಅನುವು ಮಾಡಿಕೊಟ್ಟರು. ಇಷ್ಟೆಲ್ಲಾ ನಡೆದರೂ ರಾಜ್ಯಪಾಲರು ಮಾತ್ರ ಯಾವುದಕ್ಕೂ ಕಿವಿಗೊಡದೆ ಸದನದಿಂದ ಹೊರಟುಹೋದರು.
ರಾಜ್ಯಪಾಲರನ್ನು ಕಾಂಗ್ರೆಸ್ ಸದಸ್ಯರು ಅಡ್ಡಹಾಕಿ ಅವರನ್ನು ಹಿಂಬಾಲಿಸುತ್ತಿದ್ದಂತೆಯೇ ಎಚ್ಚೆತ್ತ ಮಾರ್ಷಲ್‌ಗಳು ರಾಜ್ಯಪಾಲರನ್ನು ಸುತ್ತುವರೆದು ಅಡ್ಡ ನಿಂತಿದ್ದ ಕಾಂಗ್ರೆಸ್ ಸದಸ್ಯರನ್ನು ಪಕ್ಕಕ್ಕೆಸ ರಿಸಿ ರಾಜ್ಯಪಾಲರನ್ನು ಪೂರ್ಣ ಭದ್ರತೆಯಲ್ಲಿ ಸದನದಿಂದ ಹೊರಕ್ಕೆ ಕರೆದೊಯ್ದರು.
ರಾಜ್ಯಪಾಲರು ಸದನದಿಂದ ಹೊರ ನಡೆದು ವಿಧಾನಸಭೆಯ ಪೂರ್ವ ದ್ವಾರದ ಕಡೆ ಹೋಗುತ್ತಿದ್ದಾಗ ಅವರನ್ನು ಹಿಂಬಾಲಿಸಿದ ಕೆಲ ಕಾಂಗ್ರೆಸ್ ಸದಸ್ಯರು ಘೋಷಣೆಗಳನ್ನು ಕೂಗುತ್ತಲೆ ಇದ್ದರು. ಇಷ್ಟೆಲ್ಲಾ ಆದರೂ ರಾಜ್ಯಪಾಲರು ಮಾತ್ರ ಪೂರ್ವ ದ್ವಾರದಿಂದ ಕೆಳಗಿಳಿದು ತಮ್ಮ ಕಾರು ಹತ್ತಿ ಲೋಕಭವನದ ಕಡೆಗೆ ತೆರಳಿದರು.
ಸಿದ್ಧರಾಮಯ್ಯ, ಸಭಾಪತಿ ಬಸವರಾಜಹೊರಟ್ಟಿ, ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಇವರು ರಾಜ್ಯಪಾಲರನ್ನು ಬೀಳ್ಕೊಟ್ಟರು. ರಾಜ್ಯಪಾಲರು ಸದನದಿಂದ ನಿರ್ಗಮಿಸಿದ ನಂತರವೂ ಸದನದ ಒಳಗೆ ಕಾಂಗ್ರೆಸ್ ಸದಸ್ಯರು ರಾಜ್ಯಪಾಲರ ವಿರುದ್ಧ ಘೋಷಣೆಗಳನ್ನು ಕೂಗುತ್ತಲೆ ಇದ್ದರು.




