ಪ್ರಸಾದ್‌ ಯೋಜನೆಯಡಿ 18.37 ಕೋಟಿ ವೆಚ್ಚದಲ್ಲಿ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ

1 year ago

ಬೆಂಗಳೂರು: ಕೇಂದ್ರ ಸರ್ಕಾರದ ಪ್ರಸಾದ್‌  ಯೋಜನೆಯಡಿಯಲ್ಲಿ ಬೆಳಗಾವಿಯ ಸವದತ್ತಿಯಲ್ಲಿರುವ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿ ಯೋಜನೆಗೆ ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ಅನುಮೋದನೆ ನೀಡಿದೆ.

ಈ ಯೋಜನೆ ಅಡಿಯಲ್ಲಿ ರೇಣುಕಾ ಯಲ್ಲಮ್ಮ ದೇವಸ್ಥಾನದ ಆವರಣದಲ್ಲಿ 18.37 ಕೋಟಿ ವೆಚ್ಚದಲ್ಲಿ ಯಾತ್ರಿಕರ ಆಗಮನ ಕೇಂದ್ರ, ಕೆಫೆಟೇರಿಯಾ, ಪ್ರಥಮ ಚಿಕಿತ್ಸಾ ಕೇಂದ್ರ ಮತ್ತು ಇತರ ಆಧುನಿಕ ಸೌಲಭ್ಯಗಳನ್ನು ದೇವಸ್ಥಾನದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದೆ.

ಇದರಿಂದಾಗಿ ದೇವಸ್ಥಾನಕ್ಕೆ ಭೇಟಿ ನೀಡುವ ಹೆಚ್ಚಿನ ಸಂಖ್ಯೆಯ ಭಕ್ತರಿಗೆ ಅನುಕೂಲವಾಗಲಿದೆ ಎಂದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಗಜೇಂದ್ರ ಸಿಂಗ್‌ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ,‌ ಕೇಂದ್ರ ಸರ್ಕಾರದ ಪ್ರಸಾದ್‌ ಯೋಜನೆ ಅಡಿಯಲ್ಲಿ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿ ಯೋಜನೆಗೆ ಅನುಮೋದನೆ ನೀಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗಜೇಂದ್ರ ಸಿಂಗ್‌ ಶೇಖಾವತ್‌ ಅವರಿಗೆ ಧನ್ಯವಾದಗಳು ಎಂದಿದ್ದಾರೆ.

ಈ ಉಪಕ್ರಮವು ತೀರ್ಥಯಾತ್ರೆಯ ಅನುಭವವನ್ನು ಹೆಚ್ಚಿಸುತ್ತದೆ ಮತ್ತು ಸಾವಿರಾರು ಭಕ್ತರಿಗೆ ಆಧುನಿಕ ಸೌಲಭ್ಯಗಳನ್ನು ಒದಗಿಸುತ್ತದೆ ಎಂದಿದ್ದಾರೆ.

Leave a Reply