ಜನಸ್ನೇಹಿ ಆಗಬೇಕಾಗಿದ್ದ ಇಲಾಖೆಗಳು ಜನರ ಕತ್ತು ಹಿಸುಕುವ ಕಚೇರಿಗಳಾಗಿವೆ

1 year ago

ರಾಜ್ಯ ಸರ್ಕಾರ ತನ್ನ ಖಜಾನೆಯನ್ನು ತುಂಬಿಸಿಕೊಳ್ಳುವುದು ಅಬಕಾರಿ ಇಲಾಖೆ ಮತ್ತು ಕಮರ್ಷಿಯಲ್ ಟ್ಯಾಕ್ಸ್ , ಪರವಾನಿಗೆ ನವೀಕರಿಸುವ ವಿಭಾಗಗಳು, ಆಸ್ತಿ ತೆರಿಗೆ  ಪಾವತಿಸುವ ಆಸ್ತಿ ಮಾಲೀಕರು ಇವರುಗಳಿಂದ ಮಾತ್ರವೇ. ಹಾಗಾಗಿ ಅಬಕಾರಿ ಇಲಾಖೆ ಕಮರ್ಷಿಯಲ್ ಟ್ಯಾಕ್ಸ್ ಇಲಾಖೆ ಬಿಬಿಎಂಪಿ ಮುಂತಾದವು ಜನಸ್ನೇಹಿರಬೇಕು. ಆದರೆ ಈ ಎಲ್ಲ ಇಲಾಖೆಗಳು ಸಾರ್ವಜನಿಕರ ಕತ್ತುಹಿಸುಕುವ ಕಚೇರಿಗಳಾಗಿವೆ.

ಸಾರ್ವಜನಿಕರು ತಮ್ಮ ಆಸ್ತಿಗಳಿಗೆ ತೆರಿಗೆಯನ್ನ ಪಾವತಿಸುವ ಮೂಲಕ ಬಿಬಿಎಂಪಿ ಖಜಾನೆಯನ್ನು ತುಂಬಿಸುತ್ತಾರೆ. ಆಸ್ತಿ ತೆರಿಗೆ ಪಾವತಿಸುವ ನಾಗರಿಕರ ಜೊತೆಯಲ್ಲಿ ಇವರು ಉತ್ತಮವಾದ ಸ್ನೇಹಮಯವಾದ ಬಾಂಧವ್ಯವನ್ನ ಹೊಂದಿರಬೇಕು. ಇದರ ಬದಲಿಗೆ ಅವರನ್ನು ಪದೇಪದೇ ಅಲೆದಾಡಿಸುವುದು ಅವರನ್ನು ಶೋಷಣೆ ಮಾಡುವುದು ಸಾಮಾನ್ಯವಾಗಿದೆ. ಆದುದರಿಂದ ತೆರಿಗೆ ಕಟ್ಟುವ ನಾಗರಿಕರಿಗೆ ಹಿಂಸೆಯಾಗದ ರೀತಿಯಲ್ಲಿ ಅವರ ವ್ಯವಸ್ಥೆಗಳನ್ನು ಮಾಡಿಕೊಡುವ ಪದ್ಧತಿ ಬಿಬಿಎಂಪಿಯಲ್ಲಿ ಜಾರಿಯಾಗಬೇಕು.

ವ್ಯಾಪಾರ ಮತ್ತು ವಹಿವಾಟು ಮಾಡುವ ಅಂಗಡಿ ಮಾಲೀಕರುಗಳು ಸಾಕಷ್ಟು ಪ್ರಮಾಣದಲ್ಲಿ ತೆರಿಗೆಯನ್ನು ಕಟ್ಟುತ್ತಾರೆ. ಇದರಿಂದಲೂ ಖಜಾನೆ ತುಂಬುತ್ತದೆ. ಜೊತೆಗೆ ಇವರ ಲೈಸೆನ್ಸ್ ಗಳು ನವೀಕರಣವನ್ನ ಮಾಡಿಸಿಕೊಳ್ಳಲು ಸಹ ಹಣವನ್ನು ಪಾವತಿಸುತ್ತಾರೆ. ಇವರೆಲ್ಲರೂ ಸರ್ಕಾರದ ಆದಾಯದ ಆಧಾರ ಸ್ತಂಭಗಳು. ಇವರ ವಿಚಾರದಲ್ಲೂ ಸಹ ಇಲಾಖೆ ಸರಿಯಾಗಿ ನಡೆದುಕೊಳ್ಳಬೇಕು. ಅಲೆದಾಡಿಸುವ ಹಿಂಸಿಸುವ ಪ್ರವೃತ್ತಿ ಇರಬಾರದು.

ಅದೇ ರೀತಿಯಲ್ಲಿ ಅಬಕಾರಿ ಇಲಾಖೆಯಿಂದ ಕರ್ನಾಟಕ ರಾಜ್ಯದ ಖಜನೆ ಹೆಚ್ಚಿನ ಪಾಲು ತುಂಬುತ್ತಿದೆ. ಇಲ್ಲಿ ಲೈಸೆನ್ಸ್ ಗಳನ್ನು ಪಡೆದು ವ್ಯಾಪಾರ ಮಾಡುವ ಅಂಗಡಿ ಮಾಲೀಕರುಗಳು ಮತ್ತು ಇದರ ವಾರ್ಷಿಕದಾರರು ಸರ್ಕಾರ ನಿಗದಿಪಡಿಸುವ ಶುಲ್ಕವನ್ನು ಪ್ರತಿ ವರ್ಷವೂ ಪಾವತಿಸುತ್ತಾರೆ. ಶುಲ್ಕವನ್ನ ಹೆಚ್ಚಿಸಿದರು ಪಾವತಿಸುತ್ತಾರೆ. ಪ್ರತಿವರ್ಷವೂ ಲೈಸೆನ್ಸ್ ಗಳ ರಿನಿವಲ್ ಗಾಗಿ ಇವರು ಸರ್ಕಾರದ ಖಜಾನೆಗೆ ಬರುವ ಮೊತ್ತವಲ್ಲದೆ ಅಲ್ಲಿನ ಅಧಿಕಾರಿಗಳು ಕಡತಗಳನ್ನು ಸಿದ್ಧಪಡಿಸಿ ಮುಂದಿನ ಆದೇಶಗಳಿಗೆ ಕಳುಹಿಸಿಕೊಡಲು ಅವರುಗಳು ಕೇಳಿದಷ್ಟು ಕೊಡಬೇಕು ಕೊಡದಿದ್ದರೆ ಇವರ ಲೈಸೆನ್ಸ್ ಗಳು ನವೀಕರಣವಾಗುವುದಿಲ್ಲ.

ಇಂತಹ ವ್ಯಾಪಾರ ಮಾಡುವ ಅನೇಕರು ಇಲಾಖೆಯ ಅಧಿಕಾರಿಗಳ ದಬ್ಬಾಳಿಕೆ ದೌರ್ಜನ್ಯ ಮತ್ತು ಕಚೇರಿಯನ್ನು ಸುತ್ತಿಸುವ ಪ್ರವೃತ್ತಿಯಿಂದ ಸಾಕಷ್ಟು ನೊಂದಿದ್ದಾರೆ, ಸರ್ಕಾರಗಳು ಈ ವಿಚಾರದಲ್ಲಿ ಸರಿಯಾಗಿ ನಡೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಈ ಇಲಾಖೆ ಲಾಭ ತರುವ ಇಲಾಖೆಯ ಬದಲಿಗೆ ಮುಚ್ಚುವ ಹಂತಕ್ಕೆ ಬರುತ್ತದೆ.

ಡಾ.ಮನಮೋಹನ್ ಸಿಂಗ್ ರವರು 1991ರಲ್ಲಿ ದೇಶದ ಅರ್ಥ ಸಚಿವರಾಗಿ ಮುಂಗಡ ಪತ್ರವನ್ನು ಮಂಡಿಸುವ ಸಂದರ್ಭದಲ್ಲಿ ಇದ್ದಂತಹ ಲೈಸೆನ್ಸ್ ರಾಜ್ ಪದ್ಧತಿಯನ್ನು ರದ್ದು ಮಾಡಿದ ಕಾರಣದಿಂದ ದೇಶದಲ್ಲಿ ಸಾಕಷ್ಟು ಉದ್ಯಮಿಗಳು ನಿಟ್ಟುಸಿರು ಬಿಟ್ಟು ತಮ್ಮ ವ್ಯಾಪಾರ ವ್ಯವಹಾರವನ್ನು ನಮ್ಮ ದೇಶದಲ್ಲಿ ಮುಂದುವರಿಸಿದರು ಇಂತಹ ಲೈಸೆನ್ಸ್ ರಾಜ್ ವ್ಯವಸ್ಥೆಯ ಶೋಷಣೆಯ ಪದ್ಧತಿಯ ವಿರುದ್ಧ ಸರ್ಕಾರಗಳು ಬೇರೆ ಬೇರೆ ಮಾರ್ಗೋಪಾಯಗಳನ್ನ ಹುಡುಕಬೇಕು ಇಲ್ಲದಿದ್ದರೆ ತೆರಿಗೆ ಕಟ್ಟುವ ಜನ ಕಣ್ಣೀರು ಸುರಿಸುತ್ತಾ ಹಣದ ಜೊತೆಗೆ ತಮ್ಮ ಕಣ್ಣೀರನ್ನು ತುಂಬಿಸುತ್ತಾರೆ.

ಹಲವಾರು ಇಲಾಖೆಗಳಲ್ಲಿ ಅಧಿಕಾರಿಗಳು ಶೋಷಣೆ ಮಾಡುವ ಸಲುವಾಗಿಯೇ ಕುಳಿತಿದ್ದಾರೆ ಎನ್ನುವಂತಿದೆ, ಪದೇಪದೇ ಆಡಳಿತ ಸುಧಾರಣೆ ಸಮಿತಿಗಳು ರಚನೆಯಾಗಿ ವರದಿಗಳನ್ನು ಕೊಡುತ್ತಲೇ ಇರುತ್ತಾರೆ ಆದರೆ ಹಲವಾರು ಇಲಾಖೆಗಳಲ್ಲಿ ಕೆಲಸವೇ ಇಲ್ಲದೆ ಕಚೇರಿಗಳಲ್ಲಿ ಕುಳಿತು ನೊಣ ಹೊಡೆಯುವ ಹಲವಾರು ಹಂತದ ಅಧಿಕಾರಿಗಳು ಇದ್ದಾರೆ ಇವರಿಗೆ ಕಡತಗಳಿಗೆ ಶಿಫಾರಸು ಮಾಡುವ ಅಧಿಕಾರ ಇಲ್ಲದಿದ್ದರೂ ಕೇವಲ ಸಹಿ ಮಾಡಿ ಮುಂದಕ್ಕೆ ಕಳಿಸುವ ಅಧಿಕಾರಿಗಳಾಗಿದ್ದಾರೆ ಇಂತಹ ಅಧಿಕಾರಿಗಳನ್ನು ಕಿತ್ತು ಹಾಕಬೇಕು.

ಒಟ್ಟಾರೆಯಾಗಿ ಸರ್ಕಾರಗಳು ಸರಿಯಾಗಿ ನಡೆಯಬೇಕಾದರೆ ಸರ್ಕಾರದ ಖಜಾನೆಯನ್ನ ತುಂಬಿಸುವ ಜನರಿಗೆ ಮತ್ತು ಉದ್ಯಮಿಗಳಿಗೆ ತೊಂದರೆಯನ್ನು ಕೊಡುವುದನ್ನು ಮೊದಲು ನಿಲ್ಲಿಸಬೇಕು.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply