ಮೇಧಾವಿ ನಾಯಕ ಪ್ರೊಫೆಸರ್ ಬಿ ಕೆ ಚಂದ್ರಶೇಖರ್

1 year ago

ಕರ್ನಾಟಕ ರಾಜ್ಯದ ರಾಜಕಾರಣದಲ್ಲಿ ಕೆಲವೇ ಕೆಲವು ವ್ಯಕ್ತಿಗಳು ಮೇಧಾವಿಗಳಾಗಿದ್ದಾರೆ. ತಮ್ಮ ಆಳವಾದ ಅಧ್ಯಯನ ಮತ್ತು ಪಾಂಡಿತ್ಯದಿಂದ ರಾಜಕಾರಣದಲ್ಲಿರುವ ಪ್ರಬುದ್ಧ ನಾಯಕರುಗಳ ಸಾಲಿನಲ್ಲಿ ನಿಲ್ಲುತ್ತಾರೆ. ಇವರು ಸಂಪನ್ಮೂಲದ ವ್ಯಕ್ತಿಗಳಾಗಿದ್ದಾರೆ. ಇವರ ವಿದ್ಯೆ ಮತ್ತು ಅನುಭವ ಹಲವಾರು ಸಂದರ್ಭಗಳಲ್ಲಿ ಸರ್ಕಾರ ನಡೆಸುವ ಜನರಿಗೆ ಮಾರ್ಗದರ್ಶಕರಾಗಿರುತ್ತಾರೆ. ಇಂತಹ ರಾಜಕಾರಣಿಗಳ ಸಾಲಿನಲ್ಲಿ ಪ್ರೊಫೆಸರ್ ಬಿ ಕೆ ಚಂದ್ರಶೇಖರ್ ರವರು ಗುರುತಿಸಲ್ಪಟ್ಟವರಾಗಿರುತ್ತಾರೆ.

ವಿಧಾನ ಪರಿಷತ್ತಿನಲ್ಲಿ ಸಭಾಪತಿಯಾಗಿ, ಎಸ್ ಎಂ ಕೃಷ್ಣ ರವರ ಸಂಪುಟದಲ್ಲಿ ಸಚಿವರಾಗಿ ಕಾರ್ಯವನ್ನು ನಿರ್ವಹಿಸಿರುವ ಇವರು, ವಿಧಾನ ಪರಿಷತ್ತಿನಲ್ಲಿ 12 ವರ್ಷಗಳ ಕಾಲ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ಪ್ರಗತಿಪರವಾದಂತಹ ವಿಚಾರಧಾರೆಗಳಿಗೆ ಬದ್ಧರಾಗಿರುವ ಇವರು ಕೋಮುವಾದ ಮತ್ತು ಜಾತಿವಾದದ ವಿರುದ್ಧ ಎಲ್ಲ ಸಂದರ್ಭಗಳಲ್ಲಿಯೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದರಲ್ಲಿ ಯಾವುದೇ ಹಿಂಜರಿಕೆಯನ್ನು ತೋರಿರುವುದಿಲ್ಲ.

ದೇಶದ ಅನೇಕ ಪ್ರಮುಖ ಸಾಹಿತಿಗಳು, ಕಲಾವಿದರು, ಸಂಗೀತಗಾರರು, ಹೋರಾಟಗಾರರು ಇವರುಗಳ ಜೊತೆಗೆ ಆತ್ಮೀಯತೆಯನ್ನು ಹೊಂದಿದ್ದಾರೆ.

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನಲ್ಲಿ ಪ್ರೊಫೆಸರ್ ಆಗಿ ಕರ್ತವ್ಯವನ್ನ ನಿರ್ವಹಿಸಿ ನಿವೃತ್ತರಾದ ಇವರು ಆರಂಭದಿಂದಲೂ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಯು ಆರ್ ಅನಂತಮೂರ್ತಿ ಮುಂತಾದವರ ಒಡನಾಟದಲ್ಲಿ ಬೆಳೆದವರು.

ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗವನ್ನು ಮಾಡಿ ಪಿ ಎಚ್ ಡಿ ಪದವಿಯನ್ನು ಪಡೆದಿರುತ್ತಾರೆ. ಕಾನೂನಿನ ಪದವಿ ಮತ್ತು ಮಾಸ್ಟರ್ ಪದವಿಯನ್ನು ಪಡೆದ ಇವರು ವಿದೇಶದ ಅನೇಕ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಮತ್ತು ಸೇವೆಯನ್ನು ಸಲ್ಲಿಸಿದ್ದಾರೆ.

ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಯಲ್ಲಿ ಅಪಾರವಾದ ಹಿಡಿತವನ್ನು ಹೊಂದಿರುವ ಇವರು ನಾಡಿನ ಅನೇಕ ಪ್ರಮುಖ ಪತ್ರಿಕೆಗಳಿಗೆ ಮತ್ತು ರಾಷ್ಟ್ರಮಟ್ಟದ ಪತ್ರಿಕೆಗಳಿಗೆ ಪ್ರಚಲಿತ ವಿಚಾರಗಳ ಕುರಿತ ಇವರು ಬರೆದಂತಹ ವಿಮರ್ಶಾತ್ಮಕ ವಾದಂತಹ ಲೇಖನಗಳು ಪ್ರಕಟಣೆಗೊಂಡಿವೆ.

ಕರ್ನಾಟಕ ರಾಜ್ಯದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೊಳಿಸುವ ಸಂದರ್ಭದಲ್ಲಿ ವಸೂದೆಯನ್ನು ಸಿದ್ಧಪಡಿಸುವ ಸಮಿತಿಯ ಸದಸ್ಯರು ಆಗಿ ಇದಕ್ಕಾಗಿ ಅನೇಕ ರಾಜ್ಯಗಳ ಪ್ರವಾಸವನ್ನು ಮಾಡಿ ಅಧ್ಯಯನ ನಡೆಸಿರುತ್ತಾರೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಸಹ ಅಧಿಕಾರ ವಿಕೇಂದ್ರೀಕರಣದ ವಿಚಾರದಲ್ಲಿ ಇವರ ಸಲಹೆ ಮತ್ತು ಮಾರ್ಗದರ್ಶನವನ್ನು ಪಡೆದಿರುತ್ತಾರೆ. ರಾಷ್ಟ್ರಮಟ್ಟದ ಪಂಚಾಯತ್ ರಾಜ್ ಸಂಸ್ಥೆಯಲ್ಲಿ ಪ್ರಮುಖ ರಾಗಿ ದುಡಿದಿದ್ದಾರೆ.

ಶಿಕ್ಷಣ ಸಚಿವರಾಗಿ ಮಧ್ಯಾಹ್ನದ ಬಿಸಿ ಊಟ ಯೋಜನೆಯ ಅನುಷ್ಠಾನದ ಹಿಂದೆ ಇವರ ಪಾತ್ರವೂ ಇದೆ. ಶಿಕ್ಷಕರ ವರ್ಗಾವಣೆಗೆ ಒಂದು ಸ್ಪಷ್ಟವಾದ ನೀತಿಯನ್ನು ಇವರು ಕೊಟ್ಟಿರುತ್ತಾರೆ. ಸರ್ವ ಶಿಕ್ಷಣ ಅಭಿಯಾನದ ಅಡಿಯಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ರಾಜ್ಯದಾದ್ಯಂತ ಜಾರಿಗೊಳಿಸಿದಂತಹ ಕೀರ್ತಿ ಇವರಿಗೆ ಸಲ್ಲುತ್ತದೆ.

ಅತ್ಯುತ್ತಮವಾದ ಸಂಸದೀಯ ಪಟುವಾದ ಇವರು ವಿಧಾನ ಪರಿಷತ್ತಿನಲ್ಲಿ ಮಹತ್ತರವಾದ ವಿಚಾರಗಳನ್ನು ಮಂಡಿಸಿರುತ್ತಾರೆ. ಖಾಸಗಿ ವಿಧೇಯಕವನ್ನು ಮಂಡಿಸಿ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ.

ಜನಸಾಮಾನ್ಯರ ಬದುಕಿನ ಬಗ್ಗೆ ಕಾಳಜಿ ಇರುವ ಇವರು ಸಾಕಷ್ಟು ಸಂದರ್ಭದಲ್ಲಿ ಪರಿಸರದ ಮೇಲೆ ಅಡ್ಡ ಪರಿಣಾಮಗಳಾಗುವಂತಹ ಯೋಜನೆಗಳ ವಿರುದ್ಧ ಹೋರಾಟವನ್ನು ನಡೆಸಿದ್ದಾರೆ. ನ್ಯಾಯಾಲಯಗಳಲ್ಲಿ ಮೊಕದ್ದಮೆಯನ್ನು ದಾಖಲಿಸಿ ರಾಜ್ಯದ ಪರವಾಗಿ ಧ್ವನಿ ತೆಗೆದಿದ್ದಾರೆ. ಸಾರ್ವಜನಿಕ ಹಿತಾಸಕ್ತಿಯ ಅನೇಕ ಮೊಕದ್ದಮೆಗಳನ್ನು ಹೂಡಿ ಅದರಲ್ಲಿ ಜಯಶೀಲರಾಗಿ ನ್ಯಾಯಾಲಯದಲ್ಲಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ವಿಧಾನಪರಿಷತ್ತಿನ ಸಮಪತಿಯಾಗಿಯೂ ಸಹ ವಿಧಾನ ಪರಿಷತ್ತಿನಲ್ಲಿ ಗಂಭೀರವಾದಂತಹ ಚರ್ಚೆ ಮತ್ತು ಆರೋಗ್ಯ ಪೂರ್ಣವಾದ ವಿಚಾರ ಮಂಡನೆಗಳಿಗೆ ಅವಕಾಶವನ್ನು ಕಲ್ಪಿಸಿ ಕೊಟ್ಟು ಅಲ್ಲಿಯೂ ಸಹ ತಮ್ಮದೇ ಆದ ಹೆಜ್ಜೆ ಗುರುತುಗಳನ್ನು ಬಿಟ್ಟಿದ್ದಾರೆ.

ಸಾಹಿತ್ಯ, ಸಂಸ್ಕೃತಿ, ಕಲೆ ಇದರ ಬಗ್ಗೆ ಅಪಾರವಾದಂತಹ ಆಸಕ್ತಿಯನ್ನು ಹೊಂದಿರುವ ಇವರು ಈ ನಿಟ್ಟಿನಲ್ಲಿ ಕಾರ್ಯಕ್ರಮಗಳ ಸಂಘಟನೆ ಮಾಡಿದ್ದಾರೆ. ಜೊತೆಗೆ ಪ್ರೋತ್ಸಾಹವನ್ನು ನೀಡಿದ್ದಾರೆ.

ವಾಯು ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಹಲವಾರು ವಿಚಾರ ಸಂಕೀರ್ಣಗಳನ್ನು ನಡೆಸಿ ಅನೇಕ ಪ್ರಮುಖರ ಸಂವಾದಗಳ ಮೂಲಕ ರಾಷ್ಟ್ರದ ಗಮನವನ್ನು ಸೆಳೆದು ಪರಿಸರದ ಮಾಲಿನ್ಯದ ತಡೆಗಟ್ಟುವ ನಿಟ್ಟಿನಲ್ಲಿ ಪ್ರಾಮಾಣಿಕವಾದಂತಹ ಪ್ರಯತ್ನ ನಡೆಸುತ್ತಿದ್ದಾರೆ.

ವಿಧಾನಸಭೆ ಅಥವಾ ವಿಧಾನ ಪರಿಷತ್ತಿನ ಯಾವುದೇ ಸದಸ್ಯರಲ್ಲದೇ ಇದ್ದರೂ ಇವರ ಅನುಭವ ಮತ್ತು ವಿದ್ಯೆಯನ್ನು ಮಾನದಂಡವನ್ನಾಗಿಸಿಕೊಂಡು ಎಸ್ ಎಂ ಕೃಷ್ಣರವರ ಸಂಪುಟದಲ್ಲಿ ಇವರಿಗೆ ಮಂತ್ರಿ ಸ್ಥಾನವನ್ನು ಕಲ್ಪಿಸಿ ಕೊಟ್ಟು ಇವರ ವಿದ್ವತ್ತಿಗೆ ಮನ್ನಣೆಯನ್ನ ನೀಡಿರುತ್ತಾರೆ. ಈ ರೀತಿಯಲ್ಲಿ ಯಾವುದೇ ಸದನದ ಸದಸ್ಯರಲ್ಲದವರು ಮಂತ್ರಿಯಾಗಿ ತದನಂತರ ಸದನದ ಸದಸ್ಯರಾಗುವುದು ಅಪರೂಪದ ಪ್ರಸಂಗವೇ ಸರಿ.

ಕಾಂಗ್ರೆಸ್ ಪಕ್ಷದ ಅನೇಕ ರಾಷ್ಟ್ರ ನಾಯಕರೊಂದಿಗೆ ನೇರವಾಗಿ ಮಾತನಾಡಬಲ್ಲಂತಹ ಸಾಮರ್ಥ್ಯವಿರುವ ಕೆಲವೇ ಕೆಲವು ನಾಯಕರಲ್ಲಿ ಇವರು ಒಬ್ಬರು. ಶ್ರೀಮತಿ ಸೋನಿಯಾ ಗಾಂಧಿಯವರು ಸಹ ಇವರ ಬಗ್ಗೆ ಹೆಚ್ಚಿನ ಗೌರವವನ್ನು ಹೊಂದಿದ್ದಾರೆ. ಈ ಕಾರಣದಿಂದಾಗಿ ಇವರು ಎಸ್ ಎಂ ಕೃಷ್ಣರವರ ಸಂಪುಟದಲ್ಲಿ ಸಚಿವರಾಗಿ ತದನಂತರ ವಿಧಾನ ಪರಿಷತ್ತಿನ ಸಭಾಪತಿಯಾಗಿ ಜವಾಬ್ದಾರಿ ನಿರ್ವಹಿಸಲು ಸಾಧ್ಯವಾಯಿತು.

ದೇಶದಲ್ಲಿ ಯಾವುದೇ ರೀತಿಯ ಜನ ವಿರೋಧಿ ನಿರ್ಧಾರಗಳನ್ನು ಕೇಂದ್ರ ಸರ್ಕಾರ ತೆಗೆದುಕೊಂಡ ಸಂದರ್ಭದಲ್ಲಿ ಕೂಡಲೇ ಪ್ರತಿಕ್ರಿಯಿಸಿ ನಿರ್ದಾಕ್ಷಿಣ್ಯವಾಗಿ ತಮ್ಮ ಅನಿಸಿಕೆಗಳನ್ನ ವ್ಯಕ್ತಪಡಿಸುತ್ತಾರೆ.

ಮಾನವೀಯ ಮೌಲ್ಯಗಳು ಮತ್ತು ಪ್ರಜಾಪ್ರಭುತ್ವದ ಆಶಯಗಳ ವಿಚಾರದಲ್ಲಿ ಸದಾ ಕಾಲ ಜಾಗೃತರಾಗಿರುವ ಇವರು ಈ ಸಂಬಂಧದಲ್ಲಿ ನೂರಾರು ಲೇಖನಗಳನ್ನು ಬರೆದಿದ್ದಾರೆ.

ರಾಜ್ಯದ ರಾಜಕಾರಣದಲ್ಲಿ ತಮ್ಮದೇ ಆದಂತಹ ವ್ಯಕ್ತಿತ್ವವನ್ನು ಹೊಂದಿರುವ ಇವರು ಶುದ್ಧವಾದ ಸಾರ್ವಜನಿಕ ಜೀವನವನ್ನು ಸದಾ ಕಾಲ ಬಯಸುತ್ತಾ ಆ ನಿಟ್ಟಿನಲ್ಲಿಯೇ ಸಾಗಿದ್ದಾರೆ. ಕಾನೂನಾತ್ಮಕವಾದಂತ ಸಲಹೆಗಳನ್ನು ಸ್ವೀಕರಿಸಲು ಈಗಲೂ ಸಹ ಅನೇಕ ಸರ್ಕಾರಗಳು ಇವರ ಸಂಪರ್ಕದಲ್ಲಿದ್ದಾರೆ.

1984ರಲ್ಲಿ ಶ್ರೀ ವಿ ಎಸ್ ಕೃಷ್ಣ ಅಯ್ಯರ್ ಲೋಕಸಭಾ ಸದಸ್ಯರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಇವರು ಪ್ರತಿನಿಧಿಸುತ್ತಿದ್ದ ವಿಧಾನ ಪರಿಷತ್ತಿನ ಪದವೀಧರ ಕ್ಷೇತ್ರ ತೆರವಾಯಿತು. ಈ ಸಂದರ್ಭದಲ್ಲಿ ಶ್ರೀ ರಾಮಕೃಷ್ಣ ಹೆಗಡೆಯವರು ಪ್ರೊಫೆಸರ್ ಬಿಕೆ ಚಂದ್ರಶೇಖರ್ ರವರಿಗೆ ಸ್ಪರ್ಧಿಸಲು ಅವಕಾಶವನ್ನು ಮಾಡಿಕೊಟ್ಟರು. ಇದರಿಂದಾಗಿ ಇವರ ವಿಧಾನಪರಿಷತ್ತಿನ ಪ್ರವೇಶಕ್ಕೆ ಅವಕಾಶವಾಯಿತು. ಎಸ್ಎಂ ಕೃಷ್ಣರವರು ಮುಖ್ಯಮಂತ್ರಿಯಾದಾಗ ಮತ್ತೆ ಇವರಿಗೆ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾಗಲು ಸಾಧ್ಯವಾಯಿತು. 2013ರಲ್ಲಿ ಬಸವನಗುಡಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

ಫೆಬ್ರವರಿ 12 ರಂದು ಜನಿಸಿದ ಇವರು 87ರ ಈ ವಯಸ್ಸಿನಲ್ಲೂ ಸಹ ಸಕ್ರಿಯವಾಗಿ, ಸಾರ್ವಜನಿಕ ಬದುಕಿನಲ್ಲಿ ಜನಪರ ಕಾಳಜಿವಂದಿಗೆ ಸೇವೆ ಸಲ್ಲಿಸುತ್ತಿರುವ ಇವರ ಕ್ರಿಯಾಶೀಲತೆ ಯುವಕರಿಗೆ ಮಾದರಿಯಾಗಿದೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply