ಗಂಜಿಮಠ ‘ಪ್ಲಾಸ್ಟಿಕ್ ಪಾರ್ಕ್’ ಕೈಗಾರಿಕಾ ವಲಯ ಶೀಘ್ರ ಸ್ಥಾಪನೆಗೆ ಒತ್ತಾಯಿಸಿ ಸಿಪಿಐಎಂ ಧರಣಿ

1 year ago

ಮಂಗಳೂರು: ಗಂಜಿಮಠ ‘ಪ್ಲಾಸ್ಟಿಕ್ ಪಾರ್ಕ್’ ಕೈಗಾರಿಕಾ ವಲಯ ಕಾರ್ಯರೂಪಕ್ಕೆ ತರಲು, ಗಂಜಿಮಠ ಇಪಿಐಪಿ ಕೈಗಾರಿಕಾ ವಲಯದ ಖಾಲಿ ಬಿದ್ದಿರುವ ಜಮೀನಿನಲ್ಲಿ ಕೈಗಾರಿಕೆಗಳನ್ನು ತಕ್ಷಣ ಆರಂಭಿಸಲು ಆಗ್ರಹಿಸಿ. ಭಾರತ ಕಮ್ಯುನಿಸ್ಟ್ ಪಕ್ಷ ಮರ್ಕ್ಸ್ ವಾದಿ ಗುರುಪುರ ವಲಯ ಸಮಿತಿ ನೇತ್ರತ್ವದಲ್ಲಿ ಇಂದು ಗಂಜಿಮಟ್ಟ ಕೈಗಾರಿಕಾ ವಲಯದ ಎದುರು ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಯಿತು.

ಧರಣಿಯನ್ನು ಉದ್ದೇಶಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್) ವಾದಿ ಇದರ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಮಾತನಾಡಿ, ಎಂ ಆರ್ ಪಿ ಎಲ್ ನ ಕಚ್ಚಾ ವಸ್ತುಗಳನ್ನು ಬಳಸಿಕೊಂಡು ಗಂಜಿಮಠ ಪ್ರದೇಶದಲ್ಲಿ ಇಪಿಐಪಿ ಕೈಗಾರಿಕಾ ವಲಯದ ಸಮೀಪ ನೂರು ಎಕರೆ ಭೂಮಿ ಸ್ವಾಧೀನ ಪಡಿಸಿ, ಪ್ಲಾಸ್ಟಿಕ್ ಪಾರ್ಕ್  ಸ್ಥಾಪಿಸವುದು, ಆ ಮೂಲಕ ಸ್ಥಳೀಯರಿಗೆ ಉದ್ಯೋಗವನ್ನು ಒದಗಿಸುವುದಾಗಿ ಏಳು ವರ್ಷಕ್ಕೆ  ಮೊದಲು ಕೇಂದ್ರ ಸರಕಾರವು ಯೋಜನೆಯನ್ನು ರೂಪಿಸಿ ಘೋಷಣೆ ಮಾಡಿತ್ತು‌. ಆದರೆ ಇಂದಿಗೂ ಆ ಯೋಜನೆ ಜಾರಿಯಾಗದೆ ಕುಂಟುತ್ತಿದೆ ಎಂದರು.

ಇದರ ಜೊತೆಗೆ ಇಪಿಐಪಿ ಕೈಗಾರಿಕಾ ವಲಯದ ಅರವತ್ತು ಶೇಕಡಾ ಜಮೀನು ಉದ್ಯಮಗಳ ಸ್ಥಾಪನೆ ಆಗದೆ ಪಾಲು ಬಿದ್ದಿದೆ. ಖರೀದಿ ಮಾಡಿದ ಮೂರು ವರ್ಷದ ಒಳಗಡೆ ಕೈಗಾರಿಕೆಗಳನ್ನು ಸ್ಥಾಪಿಸಬೇಕು ಎಂಬ ನಿಯಮಗಳನ್ನು ಧನಿಕರು ಗಾಳಿಗೆ ತೂರುತ್ತಿದ್ದಾರೆ. ಕೈಗಾರಿಕಾ ವಲಯಗಳಲ್ಲಿ  ಸೈಟುಗಳನ್ನು ಪಡೆದುಕೊಂಡು ರಿಯಲ್ ಎಸ್ಟೇಟ್ ಎಸ್ಟೇಟ್ ಉದ್ದೇಶದಿಂದ ಪಾಳು ಬಿಟ್ಟಿದ್ದಾರೆ. ಹೀಗೆ ಕೈಗಾರಿಕಾ ವಲಯಗಳಲ್ಲಿ ಜಮೀನುಗಳನ್ನು ಪಡೆದು ಕೈಗಾರಿಕೆಗಳನ್ನು ಸ್ಥಾಪಿಸಲಾಗದ ಧನಿಕರ ಹೆಸರುಗಳನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಅವರಿಂದ ಜಮೀನುಗಳನ್ನು ವಾಪಸ್ ಪಡೆದು ಕೈಗಾರಿಕಾ ಸ್ಥಾಪನೆಗಳಲ್ಲಿ ಆಸಕ್ತಿ ಇರುವವರಿಗೆ ಜಮೀನುಗಳನ್ನು ನೀಡಬೇಕು ಎಂದರು.

ಇಪಿಐಪಿ ಕೈಗಾರಿಕಾ ವಲಯದಲ್ಲಿ ಈಗಾಗಲೇ ಸ್ಥಾಪನೆಯಾಗಿರುವ ಬಿಗ್ ಬ್ಯಾಗ್ ನಂತಹ ಕೈಗಾರಿಕೆಗಳಲ್ಲಿ ಕೂಡ ಸ್ಥಳೀಯರಿಗೆ ಉದ್ಯೋಗದಲ್ಲಿ ಅವಕಾಶವನ್ನು ನೀಡಲಾಗುತ್ತಿಲ್ಲ. ಬಿಗ್ ಬ್ಯಾಕ್ ಕಂಪನಿಗಳಲ್ಲಿ ಕನಿಷ್ಠ ಸಂಖ್ಯೆಯಲ್ಲಿ ಸ್ಥಳೀಯ ಯುವಜನರು ದುಡಿಯುತ್ತಿದ್ದು ಅವರನ್ನು ಸೌಲಭ್ಯಗಳಿಂದ ವಂಚಿಸಲಾಗುತ್ತಿದೆ. ಕಾರ್ಮಿಕರ  ಕ್ಷೇಯೋಭಿವೃದ್ಧಿಯ ತನಿಖೆಗಾಗಿ ಅಧಿಕಾರಿಗಳು ಆಗಮಿಸಿದ ಸಂದರ್ಭದಲ್ಲಿ ಕಾರ್ಮಿಕರನ್ನು ಅಡಗಿಸಿ ಇಡುವ ಕೆಲಸಗಳು ನಡೆಯುತ್ತಿವೆ. ಯೂನಿಯನ್ ಕಟ್ಟುವ ಹಕ್ಕುಗಳನ್ನು ವಂಚಿಸಲಾಗುತ್ತಿದೆ ಎಂದರು.

ವಲಸೆ ಕಾರ್ಮಿಕರನ್ನು ಏಜಂಟರ ಮೂಲಕ ಕರೆತಂದು ಕಡಿಮೆ ವೇತನಕ್ಕೆ ದುಡಿಸಲಾಗುತ್ತದೆ. ಸ್ಥಳೀಯ ಜನಪ್ರತಿನಿಧಿಗಳಾದ ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರುಗಳು ಮತ್ತು ಸಂಸದರು ಈ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು‌ ಗಮನಹರಿಸಬೇಕು ಎಂದರು.

ಭಾರತ ಕಮ್ಯೂನಿಸ್ಟ್ ಪಕ್ಷ ಮಾರ್ಕ್ಸ್ ವಾದಿ ಇದರ ಗುರುಪುರ ವಲಯ ಕಾರ್ಯದರ್ಶಿಯಾದ ಸದಾಶಿವ ದಾಸ್ ಮಾತನಾಡಿ, ಮಂಗಳೂರಿನಲ್ಲಿ ನಿರುದ್ಯೋಗದ ಪ್ರಮಾಣ ವಿಪರೀತವಾಗಿ ಏರಿಕೆಯಾಗುತ್ತಿದೆ. ವಿದ್ಯಾವಂತ ಯುವಜನರು ಸರಿಯಾದ ಉದ್ಯೋಗ ಪಡೆಯಲಾಗದ ಅಸಹಾಯಕ ಸ್ಥಿತಿ ತಲುಪಿದ್ದಾರೆ ಎಂದರು.

ನಿರುದ್ಯೋಗದಿಂದ ಕಂಗೆಟ್ಟು ಅಸಮಾಧಾನಿತರಾದ ಜಿಲ್ಲೆಯ ಯುವಜನರನ್ನು ಸಮಾಧಾನಿಸಲು ಜಿಲ್ಲೆಯ ಸಂಸದರು, ಶಾಸಕರು ಮಂಗಳೂರು ತಾಲೂಕಿನ ಗಂಜಿಮಠದಲ್ಲಿ “ಪ್ಲಾಸ್ಟಿಕ್ ಪಾರ್ಕ್” ಉದ್ಯಮ ಹಬ್ ಸ್ಥಾಪಿಸುವ, ಆ ಮೂಲಕ ಸಾವಿರಾರು ಉದ್ಯೋಗ ಸೃಷ್ಟಿಸುವ ಘೋಷಣೆ ಮಾಡಿ ಐದಾರು ವರ್ಷಗಳು ಕಳೆಯಿತು ಎಂದರು.
 
ಬಿಗ್ ಬ್ಯಾಗ್ ಸಹಿತ ಕೆಲವು ಕೈಗಾರಿಕಾ ಘಟಕಗಳು ಕಾರ್ಯಾಚರಿಸುತ್ತಿದ್ದರೂ, ಸ್ಥಳೀಯರಿಗೆ ಉದ್ಯೋಗ ಒದಗಿಸಲು ಹಿಂಜರಿಯುತ್ತಿವೆ, ಅಥವಾ ಅತಿ ಕಡಿಮೆ ಪ್ರಮಾಣದಲ್ಲಿ ಸ್ಥಳೀಯರನ್ನು ನೇಮಿಸಿಕೊಳ್ಳುತ್ತಿವೆ. ಇದೆಲ್ಲರದರಿಂದಾಗಿ ಸ್ಥಳೀಯ ಯುವಜನತೆಯ ಉದ್ಯೋಗದ ಕನಸಿಗೆ ಪೆಟ್ಟು ಬಿದ್ದಿದೆ. ಬಲವಾಗಿ ಧ್ವನಿ ಎತ್ತದೆ, ಜನಪ್ರತಿನಿಧಿಗಳು, ಆಡಳಿತಗಾರರು ಪ್ಲಾಸ್ಟಿಕ್ ಪಾರ್ಕ್ ಯೋಜನೆಯನ್ನು ತಾವು ಘೋಷಿಸಿದಂತೆ ಕಾರ್ಯಗತಗೊಳಿಸುವುದು ಕನಸಿನ ಮಾತು ಎಂದರು.

ಪ್ರತಿಭಟನೆಯಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ ಮಾರ್ಕ್ಸ್ ವಾದಿ ಇದರ ಜಿಲ್ಲಾ ಮುಖಂಡರಾದ ಮನೋಜ್ ವಾಮಂಜೂರು, ವಸಂತಿ ಕುಪ್ಪೆಪದವು, ವಲಯ ಮುಖಂಡರಾದ ಅಶೋಕ್ ತಾರಿಗುಡ್ಡೆ, ನೋಣಯಗೌಡ ಮಿಜಾರ್, ವಾರಿಜ ಕುಪ್ಪೆಪದವು,ರಾಜೇಶ್ ನಾಯಕ್, ಆನಂದ ಇರುವೖಲು,ಬಾಬು ಸಾಲ್ಯಾನ್, ಸಾಮಾಜಿಕ ಹೋರಾಟಗಾರರಾದ ಭಾವ ಪದರಂಗಿ ಮೊದಲಾದವರು ಭಾಗವಹಿಸಿದ್ದರು.

Leave a Reply