ಸಮಗ್ರ ಕೈಗಾರಿಕಾ ಬೆಳವಣಿಗೆ ಸಾಧಿಸಲು ವಲಯವಾರು ಕೈಗಾರಿಕಾ ಪಾರ್ಕ್ ಗಳ ಅಭಿವೃದ್ಧಿ: ಎಂ ಬಿ ಪಾಟೀಲ

1 year ago

ಬೆಂಗಳೂರು: ರಾಜ್ಯದಲ್ಲಿ ಸಮಗ್ರ ಕೈಗಾರಿಕಾ ಬೆಳವಣಿಗೆಯನ್ನು ಸಾಧಿಸಲು ವಲಯವಾರು ಕೈಗಾರಿಕಾ ಪಾರ್ಕ್ ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.

ಫೆಬ್ರವರಿ 11ರಿಂದ 14ರವರೆಗೆ ನಡೆಯುತ್ತಿರುವ  ಜಾಗತಿಕ ಹೂಡಿಕೆದಾರರ ಸಮಾವೇಶದ ವಿವರಗಳನ್ನು ಸುದ್ದಿಗಾರರೊಂದಿಗೆ ತಿಳಿಸಿದ ಅವರು, ಈ ಸಮಾವೇಶದ ಮೂಲಕ 10 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆ ಬರುವುದು ಖಾತ್ರಿಯಾಗಿದೆ ಎಂದರು.

ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಆಧುನಿಕ ಫಾರ್ಮಾ ಪಾರ್ಕ್, ವಿಜಯಪುರದಲ್ಲಿ ಸೋಲಾರ್ ಸೆಲ್ ಪಾರ್ಕ್ ಮತ್ತು ಕೃಷಿ ಉತ್ಪನ್ನಗಳನ್ನು ಆಧರಿಸಿದ ಆಗ್ರೋ ಪಾರ್ಕ್, ಚಿತ್ರದುರ್ಗದಲ್ಲಿ ಡ್ರೋನ್ ಪಾರ್ಕ್
ನಿರ್ಮಾಣವಾಗಲಿದೆ ಎಂದರು.

ಕೋಲಾರದ ಜಂಗಮನಕೋಟೆಯಲ್ಲಿ ಸರ್ ಎಂ ವಿಶ್ವೇಶ್ವರಯ್ಯನವರ ಹೆಸರಿನಲ್ಲಿ ಡೀಪ್-ಟೆಕ್ ಪಾರ್ಕ್, ಡಾಬಸಪೇಟೆಗೆ ಸಮೀಪದ ಹನುಮಂತಪುರದಲ್ಲಿ ಮೆಗಾ ಲಾಜಿಸ್ಟಿಕ್ಸ್ ಪಾರ್ಕ್, ಚಿಕ್ಕಬಳ್ಳಾಪುರ ಜಿಲ್ಲೆ ಮತ್ತು ಧಾರವಾಡದಲ್ಲಿ ಇ.ವಿ ಕ್ಲಸ್ಟರ್ಸ್ ಸ್ಥಾಪಿಸಲಾಗುವುದು ಎಂದರು. 

ಹುಬ್ಬಳ್ಳಿ ವಿಮಾನ ನಿಲ್ದಾಣದ ಬಳಿ 400ಕ್ಕೂ ಹೆಚ್ಚು ನವೋದ್ಯಮಗಳಿಗೆ ಆಸರೆ ನೀಡಲಿರುವ 200 ಎಕರೆ ವಿಸ್ತಾರದ ಸ್ಟಾರ್ಟಪ್ ಪಾರ್ಕ್ ಅಸ್ತಿತ್ವಕ್ಕೆ ಬರಲಿದೆ. ಅಲ್ಲದೆ, ವಿಜಯಪುರದ ತಿಡಗುಂದಿಯಲ್ಲಿ 1,200 ಎಕರೆ ವಿಸ್ತೀರ್ಣದಲ್ಲಿ ಸೋಲಾರ್ ಸೆಲ್ ಮತ್ತು ಅಗ್ರೊ ಟೆಕ್ ಪಾರ್ಕ್ ಅಭಿವೃದ್ಧಿ ಪಡಿಸಲಾಗುವುದು ಎಂದರು.

ಸಮಾವೇಶದಲ್ಲಿ ಭವಿಷ್ಯದ ತಯಾರಿಕಾ ವಲಯ, ಸಾರಿಗೆ ಮತ್ತು ಪರಿಸರಸ್ನೇಹಿ ಇಂಧನ ಉತ್ಪಾದನೆ ವಲಯಗಳಿಗೆ ವಿಶೇಷ ಗಮನ ಕೊಡಲಾಗುತ್ತಿದೆ. ಇದರ ಅಂಗವಾಗಿ 60ಕ್ಕೂ ಹೆಚ್ಚು ಸ್ಟಾರ್ಟಪ್ ಕಂಪನಿಗಳು ಅತ್ಯಾಧುನಿಕ ತಂತ್ರಜ್ಞಾನವನ್ನು ಮತ್ತು ಅವುಗಳನ್ನು ಆಧರಿಸಿ ರೂಪಿಸಿರುವ ಪರಿಹಾರೋಪಾಯಗಳನ್ನು ಪ್ರದರ್ಶಿಸಲಿವೆ. ಇವುಗಳಲ್ಲಿ ಕಾರ್ಬನ್ ನ್ಯಾನೋಟ್ಯೂಬ್, ಅಟಾನಮಸ್ ಸಿಸ್ಟಮ್ಸ್, ಮಾನವರಹಿತ ಏರಿಯಲ್ ವೆಹಿಕಲ್ಸ್ ಮತ್ತು ಸುಧಾರಿತ ರೋಬೋಟಿಕ್ಸ್ ಮುಂತಾದವು ಸೇರಿವೆ ಎಂದರು.

ಸಮಾವೇಶದಲ್ಲಿ 19 ರಾಷ್ಟ್ರಗಳು ಪಾಲ್ಗೊಳ್ಳುತ್ತಿದ್ದು, ಈ ಪೈಕಿ 10 ರಾಷ್ಟ್ರಗಳೊಂದಿಗೆ ಸುಸ್ಥಿರ ಆರ್ಥಿಕ ಬೆಳವಣಿಗೆಗೆ, ಹೂಡಿಕೆಗೆ ಇರುವ ಅವಕಾಶಗಳು, ಜಾಗತಿಕ ಪೂರೈಕೆ ಸರಪಳಿಯಲ್ಲಿ ಕರ್ನಾಟಕದ ಸ್ಥಾನಮಾನ, ರಾಜ್ಯದಲ್ಲಿ ಮರುಬಳಕೆ ಇಂಧನ ಕ್ಷೇತ್ರದ ಭವಿಷ್ಯ, ಆರೋಗ್ಯ ಸೇವೆ ಮುಂತಾದ ನಿರ್ಣಾಯಕ ಕ್ಷೇತ್ರಗಳನ್ನು ಕುರಿತು ಚರ್ಚಿಸಲಾಗುವುದು ಎಂದರು.

ಸಮಾವೇಶದಲ್ಲಿ ಮಹತ್ವಾಕಾಂಕ್ಷಿ ಕ್ವಿನ್ ಸಿಟಿ ಯೋಜನೆ ಸಂಬಂಧ ದೇಶ-ವಿದೇಶದ ಕೆಲವು ವಿಶ್ವವಿದ್ಯಾಲಯಗಳ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗುವುದು. ಆರ್ಥಿಕ ಬೆಳವಣಿಗೆ ಕುರಿತು ಮಾಂಟೆಕ್ ಸಿಂಗ್ ಅಹ್ಲುವಾಲಿಯಾ, ಲಾಜಿಸ್ಟಿಕ್ಸ್ ವಲಯದಲ್ಲಿ ನಡೆಯುತ್ತಿರುವ ಆವಿಷ್ಕಾರಗಳನ್ನು ಕುರಿತು ವೋಲ್ವೊ ಸಮೂಹದ ಮುಖ್ಯಸ್ಥ ಮಾರ್ಟಿನ್ ಲುಂಡ್ ಸ್ಟೆಡ್, ಸಂದೀಪ್ ದೇಶಮುಖ್ ಮತ್ತು ಚಾಣಕ್ಯ ಹೃದಯ, ಯುವ ಸಂಶೋಧಕರನ್ನು ಕುರಿತು ಝೆರೋದಾ ಸಂಸ್ಥಾಪಕ ನಿಖಿಲ್ ಕಾಮತ್ ಅವರು ಉದ್ಯಮಿಗಳಾದ ಪಾರ್ಥ ಜಿಂದಾಲ್ ಹಾಗೂ ಸುಝಾನಾ ಮುತ್ತೂಟ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಹಿಂದಿನ ಸಮಾವೇಶಕ್ಕೆ ಹೋಲಿಸಿದರೆ ಎರಡು ಪಟ್ಟು ಹೆಚ್ಚು ಗೋಷ್ಠಿಗಳನ್ನು ಏರ್ಪಡಿಸಲಾಗಿದೆ. ಇವುಗಳಲ್ಲಿ ಗೂಗಲ್ ಎಕ್ಸ್ ಸಂಸ್ಥಾಪಕ ಸೆಬಾಸ್ಟಿಯನ್ ತ್ರನ್, ಲ್ಯಾಮ್ ರೀಸರ್ಚ್ ಮುಖ್ಯಸ್ಥ ಪ್ಯಾಟ್ರಿಕ್ ಲಾರ್ಡ್, ಜನರಲ್ ಅಟಾಮಿಕ್ಸ್ ಗ್ಲೋಬಲ್ ಕಾರ್ಪೊರೇಷನ್ ಸಿಇಒ ವಿವೇಕ್ ಲಾಲ್, ಟಿವಿಎಸ್ ಮೋಟಾರ್ಸ್ ವ್ಯವಸ್ಥಾಪಕ ನಿರ್ದೇಶಕ ಸುದರ್ಶನ್ ವೇಣು, ಬೋಯಿಂಗ್ ಕಂಪನಿಯ ಉನ್ನತಾಧಿಕಾರಿ ರಾಬ್ ಬಾಯ್ಡ್, ನಥಿಂಗ್ ಕಂಪಬಿಯ ಸಹ ಸಂಸ್ಥಾಪಕ ಅಕಿಸ್ ಇವ್ಯಾಂಜಿಲೈಡಿಸ್, ಗ್ರೀಸ್ ದೇಶದ ಮಾಜಿ ಪ್ರಧಾನಿ ಜಾರ್ಜ್ ಪೆಪೆಂಡ್ರಿಯೊ ಮುಂತಾದವರು ಮಾತನಾಡಲಿದ್ದಾರೆ ಎಂದರು.

Leave a Reply