ನಾಳೆಯಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ಶುಭಾಶಯ, ಧೈರ್ಯ ಮತ್ತು ಆತ್ಮ ಸ್ಥೈರ್ಯದಿಂದ ಪರೀಕ್ಷೆ ಬರೆಯಿರಿ, ಉತ್ತಮ ಅಂಕಗಳಿಸಿ ಭವಿಷ್ಯ ರೂಪಿಸಿಕೊಳ್ಳಿ.
ರಾಜ್ಯಾದ್ಯಂತ ನಾಳೆಯಿಂದ ವಿದ್ಯಾರ್ಥಿಗಳಿಗೆ ತಮ್ಮ ವಿದ್ಯಾರ್ಥಿ ಜೀವನದ ಅತೀ ಅಮೂಲ್ಯ ಘಟ್ಟದ ಎಸ್.ಎಸ್.ಎಲ್.ಸಿ ಪರೀಕ್ಷೆ ಆರಂಭವಾಗುತ್ತಿದ್ದು ಪ್ರತಿಯೊಬ್ಬ ವಿದ್ಯಾರ್ಥಿಗೂ ಶುಭಾಶಯ ಸಲ್ಲಿಸುತ್ತಿದ್ದೇನೆ. ಧೈರ್ಯ ಮತ್ತು ಆತ್ಮ ಸ್ಥೈರ್ಯದಿಂದ ಪರೀಕ್ಷೆ ಬರೆದು ಉತ್ತಮ ಅಂಕ ಪಡೆದು ತಮ್ಮ ಭವಿಷ್ಯ ರೂಪಿಸಿಕೊಳ್ಳಿ, ಹೆತ್ತವರು ತಮ್ಮ ಮಕ್ಕಳಿಗೆ ಪ್ರೋತ್ಸಾಹ ನೀಡಿ ಸುಗಮವಾಗಿ ಪರೀಕ್ಷೆ ಬರೆಯುವಂತೆ ನೋಡಿಕೊಳ್ಳಿ.
ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಗಮನಕ್ಕೆ
▪️ಸರಕಾರೀ ಶಾಲೆಗಳಿಗೆ ಸಂಬಂಧಿಸಿದ ವಿದ್ಯಾರ್ಥಿಗಳು ಸರಕಾರ ನಿಗದಿಪಡಿಸಿದ ಸಮವಸ್ತ್ರದೊಂದಿಗೆ ಪರೀಕ್ಷೆ ಬರೆಯಬಹುದು.
▪️ಖಾಸಗೀ ವಿದ್ಯಾ ಸಂಸ್ಥೆಗಳು ತಮ್ಮ ತಮ್ಮ ಆಡಳಿತ ಮಂಡಳಿ ನಿಗದಿಪಡಿಸಿದ ವಸ್ತ್ರ ಸಂಹಿತೆಯ ಪ್ರಕಾರ ಪರೀಕ್ಷೆ ಬರೆಯಬಹುದು.
▪️ಖಾಸಗೀ ಶಾಲೆಗಳ ವಿದ್ಯಾರ್ಥಿಗಳು ತಮ್ಮ ಪರೀಕ್ಷೆ ಬರೆಯುವ ಇತರ ಕೇಂದ್ರಗಳಿಗೆ ಹೋಗುವಾಗ ತಾವು ಕಲಿಯುತ್ತಿರುವ ಶಾಲೆಯು ಸೂಚಿಸಿರುವ ವಸ್ತ್ರಗಳನ್ನು ಹಾಕಿ ಪರೀಕ್ಷೆ ಬರೆಯಲು ಅವಕಾಶವಿದೆ. ಅದಕ್ಕಾಗಿ ಖಾಸಗೀ ವಿದ್ಯಾ ಸಂಸ್ಥೆಯ ಶಾಲೆಯ ಮುಖ್ಯಸ್ಥರು ತಮ್ಮ ವಿದ್ಯಾರ್ಥಿಗಳ ಪಟ್ಟಿಯ ಜೊತೆಗೆ ತಮ್ಮ ಸಂಸ್ಥೆಯು ನಿಗದಿಪಡಿಸಿದ ಸಮವಸ್ತ್ರ ಶೈಲಿಯ ವಿವರವನ್ನು ಪರೀಕ್ಷಾ ಕೇಂದ್ರದ ಮುಖ್ಯ ಶಿಕ್ಷಕರಿಗೆ ನೀಡತಕ್ಕದ್ದು.
▪️ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಲ್ಲಿ ಪರೀಕ್ಷೆ ಬರೆಯಲು ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಸಿ.ಆರ್.ಪಿ (ಸಮೂಹ ಸಂಪನ್ಮೂಲ ವ್ಯಕ್ತಿ)ಗಳಿಗೆ ಸೂಚನೆ ನೀಡಲಾಗಿದೆ.
ಈ ನಿಯಮವು ರಾಜ್ಯಾದ್ಯಂತ ಎಲ್ಲಾ ವಿದ್ಯಾರ್ಥಿಗಳಿಗೆ ಅನ್ವಯಿಸುತ್ತಿದ್ದು ಕ್ರಮಬದ್ಧವಾಗಿ ಅನುಷ್ಠಾನಗೊಳಿಸಲು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಶಿಕ್ಷಣಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ರಾಜ್ಯದಾದ್ಯಂತ ಈ ವ್ಯವಸ್ಥೆಗೆ ಅವಕಾಶ ಕಲ್ಪಿಸಿದ ಶಿಕ್ಷಣ ಸಚಿವರಿಗೆ, ಇಲಾಖೆಗೆ ಹಾಗೂ ಪ್ರತೀ ಜಿಲ್ಲೆಯ ಜಿಲ್ಲಾಡಳಿತಕ್ಕೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ.
- ಯು.ಟಿ.ಖಾದರ್, ಮಾಜಿ ಸಚಿವ




