ಬೆಂಗಳೂರು: ಪುನೀತ್ ರಾಜ್ ಕುಮಾರ್ ಹೆಸರಾಗಿ ಉಳಿದಿಲ್ಲ, ಕನ್ನಡಿಗರ ಉಸಿರಾಗಿದ್ದಾರೆ. ಪುನೀತ್ ಅಗಲಿಕೆ ನೋವು ಕನ್ನಡಿಗರ ಪ್ರತಿ ಮನೆಯಲ್ಲಿ ಕಾಡುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೌಕರರ ಕನ್ನಡ ಸಂಘದ ವತಿಯಿಂದ ಬಿ.ಬಿ.ಎಂ.ಪಿ. ಕೇಂದ್ರ ಕಛೇರಿಯ ಡಾ.ರಾಜ್ ಕುಮಾರ್ ಗಾಜಿನ ಮನೆ ಆವರಣ, ಡಾ.ರಾಜ್ ಕುಮಾರ್ ಪ್ರತಿಮೆ ಪಕ್ಕದಲ್ಲಿ ಪವರ್ ಸ್ಟಾರ್ ಡಾ.ಪುನೀತ್ ರಾಜ್ ಕುಮಾರ್ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮ ಮತ್ತು ಗಂಧದಗುಡಿ ಉದ್ಯಾನವನ ಉದ್ಘಾಟನೆ ಮತ್ತು ಡಾ.ಪುನೀತ್ ರಾಜ್ ಕುಮಾರ್ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು.
ಸಮಾರಂಭದಲ್ಲಿ ಮಾತಾಡಿದ ಅವರು, ಕರ್ನಾಟಕದ ಎಲ್ಲ ಕಡೆಗಳಲ್ಲಿ ಪುನೀತ್ ರವರ ಭಾವಚಿತ್ರಕ್ಕೆ ಜನರು ಪೂಜೆ ಸಲ್ಲಿಸುತ್ತಿದ್ದಾರೆ. ಪುನೀತ್ ರವರ ಸಮಾಧಿ ಸ್ಥಳಕ್ಕೆ ಲಕ್ಷಾಂತರ ಜನ ಬರುತ್ತಿದ್ದಾರೆ ಇದನ್ನ ನೋಡಿದರೆ ಪುನೀತ್ ರವರನ್ನು ನಾವು ಕಳೆದುಕೊಂಡಿಲ್ಲ. ಪುನೀತ್ ರವರು ನಗು ಮತ್ತು ಎಲ್ಲರ ಪ್ರೀತಿ ವಿಶ್ವಾಸ ಗಳಿಸಿದ್ದಾರೆ ಎಂದರು.
ಬೆಟ್ಟದ ಹೂವು ಚಿತ್ರದ ಅಭಿನಯವನ್ನು ಹೇಗೆ ನಟಿಸಿದೆ ಎಂದು ಅವರು ಹೇಳಿದ್ದಾರೆ. ನನ್ನ ನಟನೆಗೆ ನಮ್ಮ ತಂದೆಯವರೇ ಸ್ಪೂರ್ತಿಯಾಗಿದ್ದಾರೆ ಎಂದು ಪುನೀತ್ ರವರು ಹೇಳಿದರು. ಮುಗ್ದತೆ ಕಾಪಾಡಿಕೊಂಡಿರುವ ಇಬ್ಬರು ನಟರೆಂದರೆ ಡಾ.ರಾಜ್, ಪುನೀತ್ ರವರು. ಕರ್ನಾಟಕ ರತ್ನ ಪ್ರಶಸ್ತಿಯನ್ನು ಅತಿ ಶೀಘ್ರದಲ್ಲಿ ಡಾ.ರಾಜ್ ಕುಟುಂಬದವರ ಜೊತೆ ಚರ್ಚಿಸಿ, ಅದ್ದೂರಿಯಾಗಿ ನೆರವೇರಿಸಲಾಗುವುದು ಎಂದರು.
ರಾಘವೇಂದ್ರ ರಾಜ್ ಕುಮಾರ್ ಮಾತನಾಡಿ ಪುನೀತ್ ರಾಜ್ ಕುಮಾರ್ ಡಾಕ್ಟರೇಟ್ ಪ್ರಶಸ್ತಿ ಲಭಿಸಿದೆ. ಇದೆಲ್ಲ ನೋಡಿದರೆ ಅಭಿಮಾನಿಗಳಿಗೆ ಏನು ಸಂದೇಶ ನೀಡಿದ್ದಾರೆ ಎಂದರು.
ಜೇಮ್ಸ್, ರಾಜರತ್ನ, ರಾಜಕುಮಾರ ಚಲನಚಿತ್ರಗಳು ಸಮಾಜಕ್ಕೆ ಮಾದರಿಯಾಗಿವೆ. ಎಲ್ಲ ಕೆಲಸವು ಬೇಗನೆ ಮಾಡಿ, ದೇವರ ಬಳಿ ತೆರಳಿದ. ಪ್ರಶಸ್ತಿಗಳು ಪುನೀತ್ ಹುಡಕಿಕೊಂಡು ಬರುತ್ತಿವೆ. 46 ವರ್ಷಗಳವರೆಗೆ ಪುನೀತ್ ಅಭಿನಯಿಸಿದ್ದಾರೆ. ಪುನೀತ್ ನನ್ನ ತಂದೆಯಂತೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿರವರು ನಮ್ಮ ಕುಟುಂಬದ ಸದಸ್ಯರಿದ್ದಂತೆ. ಪುನೀತ್ ಸಾಧನೆ ಎಲ್ಲವು ಅಭಿಮಾನಿಗಳಿಗೆ ಸೇರಿದ್ದು ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಡಾ.ಪುನೀತ್ ರಾಜ್ ಕುಮಾರ್ ಪ್ರಶಸ್ತಿಯನ್ನು ಪ್ರಣಯರಾಜ ಶ್ರೀನಾಥ್, ಚಲನಚಿತ್ರ ನಟಿ ತಾರ ಆನುರಾಧ, ನಿರ್ದೇಶಕ ಕೆ.ಎಸ್.ಭಗವಾನ್, ಉಪ ಪೊಲೀಸ್ ಆಯುಕ್ತ ಪರಮೇಶ್ವರ್, ಸಾಹಿತಿ ಡಾ.ಮರುಳಸಿದ್ದಪ್ಪ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಪತ್ರಕರ್ತರಾದ ಆರ್.ಪಿ.ಜಗದೀಶ್, ರಂಗನಾಥ್ ಭಾರದ್ವಜ್, ಜಯಪ್ರಕಾಶ್ ಶೆಟ್ಟಿ, ನಟರಾದ ಹೊನ್ನವಳ್ಳಿ ಕೃಷ್ಣ, ಗಾಯಕಿ ರಮ್ಯ ವಸಿಷ್ಠ, ಡಾ.ರಾಜ್ ಕುಮಾರ್ ಕುಟುಂಬದ ಆಪ್ತರಾದ ಚನ್ನ, ವೈದ್ಯರಾದ ಡಾ.ರಂಗಸ್ವಾಮಿ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು.
ತೋಟಗಾರಿಕೆ ಸಚಿವ ಮುನಿರತ್ನ, ಶಾಸಕ ರಿಜ್ಞಾನ್ ಅರ್ಶದ್, ಲೋಕಸಭಾ ಸದಸ್ಯ ಪಿ.ಸಿ.ಮೋಹನ್, ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ, ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ಗೌರವ್ ಗುಪ್ತಾ, ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ವಿಶೇಷ ಆಯುಕ್ತ ಮನೋಜ್ ಜೈನ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್, ವಿಶೇಷ ಆಯುಕ್ತ ರಂಗಪ್ಪ, ಹಿಂದುಳಿದ ವರ್ಗಗಳ ಇಲಾಖೆ ಆಯುಕ್ತ ಕೆ.ಎ.ದಯಾನಂದ್, ಉಪ ಆಯುಕ್ತ ಟಿ.ಯೋಗೇಶ್, ಮಾಜಿ ಮಹಾಪೌರ, ಕನ್ನಡ ಸಂಘದ ಗೌರವಾಧ್ಯಕ್ಷ ಜೆ.ಹುಚ್ಚಪ್ಪ, ಮಾಜಿ ಮಹಾಪೌರ ಗೌತಮ್ ಕುಮಾರ್, ಬೆಂಗಳೂರು ನಗರ ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ಎನ್.ಆರ್.ರಮೇಶ್, ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ಎ.ಅಮೃತ್ ರಾಜ್ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.




