ಸಿದ್ದರಾಮಯ್ಯ 5 ವರ್ಷವೂ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ನಾವೆಲ್ಲಾ ಅಂದುಕೊಂಡಿದ್ದೇವೆ: ಪರಮೇಶ್ವರ್

1 year ago

ಬೆಂಗಳೂರು: ಕಾಂಗ್ರೆಸ್‌ನಲ್ಲಿ ಬೂದಿ ಮುಚ್ಚಿದ ಕೆಂಡದಂತಿರುವ ಕೆಲ ನಾಯಕರ ಅಸಮಾಧಾನ ಮತ್ತೆ ಭುಗಿಲೇಳುವ ಲಕ್ಷಣಗಳು ಗೋಚರವಾಗಿದೆ. ದೆಹಲಿ ಚುನಾವಣೆ ನಂತರ ರಾಜ್ಯ ಕಾಂಗ್ರೆಸ್‌ ನಾಯಕರು ಹೈಕಮಾಂಡ್‌ ಭೇಟಿಗಾಗಿ ದಿಲ್ಲಿಯತ್ತ ಪರೇಡ್‌ ಮಾಡಲಿದ್ದಾರೆ.

ಸಿಎಂ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಕೆಲ ಸಚಿವರು, ಪಕ್ಷದ ಪ್ರಮುಖರು ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಹೈಕಮಾಂಡ್‌ ಭೇಟಿಗೆ ಯೋಜನೆ ರೂಪಿಸಿದ್ದು, ದಿಲ್ಲಿ ಚುನಾವಣೆ ಆಗಲಿ ಎಂದು ಕಾಯುತ್ತಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಪರಮೇಶ್ವರ್, ತಾವು ದೆಹಲಿಗೆ ಭೇಟಿ ನೀಡುವುದು ಖಚಿತ. ಆದರೆ ಹೈಕಮಾಂಡ್ ಭೇಟಿಗಾಗಲೀ, ರಾಜಕೀಯದ ಚರ್ಚೆಗಾಗಲೀ ಹೋಗುತ್ತಿಲ್ಲ. ಎಐಸಿಸಿಯ ಅಧ್ಯಕ್ಷರು ಇಲ್ಲಿನವರೇ ಆಗಿರುವುದರಿಂದ ಅವರ ಬಳಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಇಲ್ಲಿಗೆ ಬರುತ್ತಾರೆ. ಅವರ ಜೊತೆ ನಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವ ಅವಕಾಶಗಳಿವೆ ಎಂದರು.

ನವೆಂಬರ್ ನಂತರ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುವುದಿಲ್ಲ ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್, ಅವರು ಯಾವಾಗಿನಿಂದ ಜ್ಯೋತಿಷ್ಯ ಹೇಳಲು ಪ್ರಾರಂಭಿಸಿದರೋ ಗೊತ್ತಿಲ್ಲ. ಸಿದ್ದರಾಮಯ್ಯ 5 ವರ್ಷವೂ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ನಾವೆಲ್ಲಾ ಅಂದುಕೊಂಡಿದ್ದೇವೆ. ಅವರನ್ನು ಆಯ್ಕೆ ಮಾಡಿದಾಗ ಯಾವುದೇ ಸಮಯ ನಿಗದಿಪಡಿಸಿರಲಿಲ್ಲ ಎಂದರು.

ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ಮತ ಹಾಕಿ ಸಿದ್ದರಾಮಯ್ಯ ಅವರನ್ನು ಶಾಸಕಾಂಗ ಪಕ್ಷದ ನಾಯಕರು ಎಂದು ಘೋಷಣೆ ಮಾಡಲಾಗಿದೆ. ಹೈಕಮಾಂಡ್ ತಮ್ಮ ವಿವೇಚನೆ ಆಧರಿಸಿ ಮುಖ್ಯಮಂತ್ರಿ ಆಯ್ಕೆ ಮಾಡಿತ್ತು. ಆ ವೇಳೆ ಎರಡೂವರೆ ವರ್ಷ ಸಿದ್ದರಾಮಯ್ಯ ಇರಲಿ, ಅನಂತರ ಬೇರೆ ಆಲೋಚನೆ ಮಾಡೋಣ ಎಂದು ಹೇಳಿರಲಿಲ್ಲ. ಹೀಗಾಗಿ ಸಿದ್ದರಾಮಯ್ಯ ಮುಂದುವರೆಯುತ್ತಾರೆ ಎಂಬ ವಿಶ್ವಾಸವಿದೆ. ಇದರ ನಡುವೆ ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ ಎಂದರು.

Leave a Reply