ಬೆಂಗಳೂರು: ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವಿನ ಪ್ರಕರಣ ಇದೀಗ ರಾಜ್ಯ ರಾಜಕಾರಣದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ವಿಪಕ್ಷ ಬಿಜೆಪಿ ಇದಕ್ಕೆ ರಾಜ್ಯ ಸರ್ಕಾರದ ಅಸಮರ್ಪಕ ನಿರ್ವಹಣೆ ಕಾರಣ ಎಂದು ಆರೋಪಿಸಿದೆ.
- ಎನ್ಜಿಟಿಯಲ್ಲಿ ವಕೀಲರನ್ನು ನೇಮಿಸಿ ಹೋರಾಟ ಮಾಡಬೇಕು: ಆರ್.ಅಶೋಕ
- ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
- ಮೈಸೂರು ದಸರಾ: ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ
- ಪೌರಕಾರ್ಮಿಕರ ದಿನಾಚರಣೆ ಪ್ರಯುಕ್ತ ಕಸ ಸಂಗ್ರಹಣೆ ಇಲ್ಲ
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
ಇದರ ಬೆನ್ನಲ್ಲೇ ಪ್ರಕರಣದಲ್ಲಿ ತಮ್ಮ ತಪ್ಪಿದ್ದರೆ ರಾಜೀನಾಮೆ ನೀಡಲು ಸಿದ್ಧವಿರುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಘೋಷಿಸಿದ್ದಾರೆ. ಮತ್ತೊಂದೆಡೆ ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಿದ್ದು, ತನಿಖಾ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಘಟನೆ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಾವಿನ ಪ್ರಕರಣದ ಬಗ್ಗೆ ತನಿಖೆಗೆ ಆಗ್ರಹಿಸಿ ಪ್ರತಿಪಕ್ಷ ಬಿಜೆಪಿ ಲೋಕಾಯುಕ್ತಕ್ಕೆ ದೂರು ಕೊಡಲಿ. ಈ ವಿಚಾರದಲ್ಲಿ ವಿಪಕ್ಷಗಳ ಸಹಕಾರವೂ ಅಗತ್ಯ. ಈ ಪ್ರಕರಣದಲ್ಲಿ ತಮ್ಮ ತಪ್ಪಿದ್ದರೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ. ಇದರಲ್ಲಿ ನನ್ನ ಪ್ರತಿಷ್ಠೆ ಇಲ್ಲ ಎಂದರು.
ಇದು ಜೀವದ ವಿಚಾರ. ತಮ್ಮ ರಾಜೀನಾಮೆಯಿಂದ ಸರಿಹೋಗುವುದಾದರೆ ರಾಜೀನಾಮೆಗೆ ಸಿದ್ಧನಿದ್ದೇನೆ. ಆದರೆ, ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗಲೇಬೇಕು. ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ತೀರ್ಮಾನಿಸಿ ಆ ನಿಟ್ಟಿನಲ್ಲಿ ಗಮನ ಹರಿಸಿದ್ದೇವೆ ಎಂದರು.
ಈ ವರ್ಷ ರಾಜ್ಯದಲ್ಲಿ 327 ಬಾಣಂತಿಯರ ಸಾವುಗಳು ಸಂಭವಿಸಿದೆ. ಎಲ್ಲವನ್ನೂ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಇಂತಹ ಪ್ರಕರಣಗಳಲ್ಲಿ ಸಹನೆ ಇರಬಾರದು. ಕಠಿಣ ಕಾನೂನುಕ್ರಮ ಆಗಬೇಕು ಎಂದರು.
ಬಳ್ಳಾರಿಯಲ್ಲಿ 9 ಬಾಣಂತಿಯರಿಗೆ ಸಮಸ್ಯೆಯಾಗಿತ್ತು. ಈ ಪೈಕಿ ನಾಲ್ವರು ಸಾವನ್ನಪ್ಪಿದ್ದರು. ಚಿಕಿತ್ಸೆ ಪಡೆಯುತ್ತಿದ್ದ ಐದನೇ ಮಹಿಳೆಯೂ ಮೃತಪಟ್ಟಿದ್ದಾರೆ. ಈ ಮಹಿಳೆಗೆ ಅದೇ ಬ್ಯಾಚ್ನ ರಿಂಗರ್ ಲ್ಯಾಕ್ಟೇಟ್ ದ್ರಾವಣ ಕೊಡಲಾಗಿತ್ತು. ಈ ಕಂಪನಿ ವಿರುದ್ಧ ಕ್ರಮಕ್ಕೆ ಮುಂದಾಗಿದ್ದೇವೆ. ಆದರೆ, ಮೃತ ಮಹಿಳೆಗೆ ಬೇರೆ ಆರೋಗ್ಯದ ಸಮಸ್ಯೆಯೂ ಇತ್ತು. ಅವರು ಗುಣ ಮುಖರಾಗುತ್ತಾರೆ ಎಂದು ವೈದ್ಯರು ತಿಳಿಸಿದ್ದರು. ಆದರೆ, ಆರೋಗ್ಯದಲ್ಲಿ ನಿನ್ನೆ ಮತ್ತೆ ಏರುಪೇರಾಗಿತ್ತು ಎಂದರು.
ಐವಿ ರಿಂಗರ್ ಲ್ಯಾಕ್ಟೇಟ್ ದ್ರಾವಣ ಬಳಕೆಗೆ ಯೋಗ್ಯವಲ್ಲ ಎಂದು ಕರ್ನಾಟಕ ರಾಜ್ಯ ಡ್ರಗ್ಸ್ ಲಾಜಿಸ್ಟಿಕ್ಸ್ ವರದಿ ನೀಡಿದ್ದರೆ, ಸೆಂಟ್ರಲ್ ಡ್ರಗ್ ಲ್ಯಾಬ್ (CDL) ಪಾಸಿಟಿವ್ ವರದಿ ನೀಡಿದೆ. ಇದನ್ನು ಉಲ್ಲೇಖಿಸಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ)ಗೆ ಪತ್ರ ಬರೆದು ಪ್ರಶ್ನೆ ಮಾಡಿದ್ದೇವೆ ಎಂದರು.
ನಾವು ಯಾವುದೇ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿಲ್ಲ. ನಮ್ಮ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಎಲ್ಲಿ ತಪ್ಪಾಗಿದೆ ಎಂಬುದರ ಕುರಿತು ಪಾರದರ್ಶಕವಾಗಿ ಸಮಗ್ರ ತನಿಖೆ ನಡೆಸುತ್ತೇವೆ ಎಂದರು.
ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಬಾಣಂತಿಯರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಔಷಧ ನಿಯಂತ್ರಕರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಈ ಬಗ್ಗೆ ನಾನು ಸಭೆ ನಡೆಸಿದ್ದೇನೆ ಎಂದರು.
ಬಳ್ಳಾರಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಣಂತಿಯೊಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ ಏರಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆ ಮಾಹಿತಿ ನನಗಿದೆ. ಏಕೆ ಸಾವಾಗಿದೆ ಎಂಬುದನ್ನು ಪರಿಶೀಲನೆ ಮಾಡಲು ಸೂಚನೆ ನೀಡಿದ್ದೇನೆ ಎಂದರು.
ಈ ಪ್ರಕರಣದ ಬಗ್ಗೆ ತನಿಖೆ ನಡೆದಿದೆ. ತನಿಖಾ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವುದಾಗಿ ತಿಳಿಸಿದರು.



