ನಮ್ಮ ಹೆತ್ತವರು ನಮ್ಮ ಮಲಮೂತ್ರಗಳ ಬಾಲ್ಯದಲ್ಲಿ ಬಾಚಿ ತೊಳೆದು, ಶುದ್ಧಗೊಳಿಸಿ, ತಮ್ಮ ಇತಿಮಿತಿಯಲ್ಲಿ, ವಸ್ತ್ರಗಳ ತೊಡಿಸಿ ಸಂಭ್ರಮಿಸಿರುತ್ತಾರೆ.

ನಮ್ಮ ಹೆತ್ತವರು ವಯಸ್ಸಾದ ಕಾಲದಲ್ಲಿ, ಅನಾರೋಗ್ಯ ಪೀಡಿತರಾಗಿ ಹಾಸಿಗೆಯ ಹಿಡಿದು ಮಲಮೂತ್ರಗಳ ಮಾಡಿಕೊಂಡಾಗ, ಅವುಗಳನ್ನ ಸ್ವಚ್ಛಗೊಳಿಸಲು ನಮ್ಮ ಕೈಗಳು ಮುಂದಾಗುವುದಿಲ್ಲ, ಮನಸ್ಸು ಬರುವುದಿಲ್ಲ ,ಆಯಾಗಳಿಗಾಗಿ ಕಾಯುತ್ತೇವೆ.

ಸಾಕಿದ ನಾಯಿಯ ಅಪ್ಪಿ, ಮುದ್ದಾಡಿ, ಆರೈಕೆ ಮಾಡುವ ಅದೆಷ್ಟೋ ಮಂದಿ, ತಮ್ಮ ಮನೆಗಾಗಿ, ಮನೆಯವರಿಗಾಗಿ, ಬೆವರು ಸುರಿಸಿ ದುಡಿಯುವ ಜನರ ಒಮ್ಮೆಯೂ ಮೈಮುಟ್ಟಿ ಮಾತನಾಡಿಸುವುದಿಲ್ಲ, ಅವರನ್ನು ಮನುಷ್ಯರೆಂದು ಭಾವಿಸುವುದೇ ಇಲ್ಲ. ಮನೆಯ ಒಳಗಡೆ ಕರೆದು ಉಪಚರಿಸುವ ಮನಸ್ಸಂತು ಇಲ್ಲವೇ ಇಲ್ಲ ಬಿಡಿ
ಸಾಕಿದ ನಾಯಿ ಕಾರಿನಲ್ಲಿ ಕುಳಿತು ಪ್ರಯಾಣಿಸಬಹುದು, ಆದರೆ ಆರ್ಥಿಕತೆಯ ಕಾರಣಕ್ಕೂ, ಸಾಮಾಜಿಕ ವ್ಯವಸ್ಥೆಯ ಕಾರಣದಿ, ಹಲವರನ್ನು ಕಾರು ಮುಟ್ಟಿಸಲು ಬಿಡದ ಮನಸ್ಸುಗಳಿಗೆ ಕೊರತೆ ಏನಿಲ್ಲ.
ಸಾಕಿದ ನಾಯಿಗೆ ಪೌಷ್ಟಿಕಾಂಶದ ಆಹಾರ, ಮನೆಗಾಗಿ ದುಡಿಯುವ ಶ್ರಮಿಕರ ಹಸಿದ ಹೊಟ್ಟೆಗೆ ತಂಗಳು, ಇಲ್ಲವೇ ತಮಗೆ ಬೇಕಿಲ್ಲದ ಆಹಾರ ಪದಾರ್ಥಗಳ ಕೊಟ್ಟು ಉಪಕಾರ ಮಾಡಿದವರಂತೆ ಮೆರೆಯುವವರಿಗೆ ಕಡಿಮೆ ಇಲ್ಲ.
ಕಾಯಿಲೆ ಬಂದು ಹಾಸಿಗೆ ಮೇಲೆ ನರಳುತ್ತ ಬಿದ್ದಿದ್ದ ಸಮಯದಲ್ಲಿ ಕಣ್ಣಲ್ಲಿ, ಕಣ್ಣಿಟ್ಟು ಕಾದಿದ್ದ ಹೆತ್ತವರು, ಕಾಯಿಲೆ ಬಿದ್ದಾಗ ಹಾಸಿಗೆಯ ಬಳಿಯಲ್ಲಿ ಕುಳಿತು ಸಮಾಧಾನದ ಮಾತುಗಳನ್ನ ಹೇಳುತ್ತಾ ಅವರಲ್ಲಿ ವಿಶ್ವಾಸದ ತುಂಬಲು ಸಮಯವೇ ಇರುವುದಿಲ್ಲ. ಬಿಡುವಾದಾಗ ಬಂದು ಇಣುಕಿ ನೋಡಿ, ಆಸ್ಪತ್ರೆಯ ಬಿಲ್ಲು ಪಾವತಿಸಿದರೆ ಅದುವೇ ದೊಡ್ಡ ಸೇವೆ ಎಂಬ ಭಾವನೆಯಲ್ಲಿ ಬಹಳಷ್ಟು ಮಂದಿ ನಮ್ಮಲ್ಲಿದ್ದಾರೆ.
– ಕೆ ಎಸ್ ನಾಗರಾಜ್, ಬೆಂಗಳೂರು




