ಗದಗ: ರಾಜ್ಯಾದ್ಯಂತ 15 ರಿಂದ 18 ವಯೋಮಾನದ ಮಕ್ಕಳಿಗೆ ಕೋವಿಡ್ ಲಸಿಕೆಯನ್ನು ಇಂದಿನಿಂದ ನೀಡಲಾಗುತ್ತಿದ್ದು ಜಿಲ್ಲೆಯ ಅರ್ಹ ಎಲ್ಲ ಮಕ್ಕಳು ಕೋವಿಡ್ ಲಸಿಕೆಯನ್ನು ಪಡೆಯುವಂತೆ ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ ಮನವಿ ಮಾಡಿದರು.
ನಗರದ ಎ.ಎಸ್.ಎಸ್. ಪದವಿ ಪೂರ್ವ ವಾಣಿಜ್ಯ ಮಹಾವಿದ್ಯಾಲಯದಲ್ಲಿ15 ರಿಂದ 18 ವಯೋಮಾನದ ಮಕ್ಕಳಿಗೆ ಏರ್ಪಡಿಸಲಾದ ಕೋವಿಡ್ ಲಸಿಕಾಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತಾಡಿದ ಅವರು, ಜಿಲ್ಲೆಯ 15 ವರ್ಷ ಮೇಲ್ಪಟ್ಟ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲಾಗುತ್ತಿದೆ. ಲಸಿಕೆ ವಿಶ್ವಾಸಾರ್ಹವಾಗಿದ್ದು ಅಪಪ್ರಚಾರಕ್ಕೆ ಕಿವಿಗೊಡಬೇಡಿ. ಮೊದಲನೇ ಡೋಸ್ ಲಸಿಕೆ ಪಡೆದ ನಂತರ ಪುನಃ 28 ದಿನಕ್ಕೆ ಎರಡನೇ ಡೋಸ್ ಲಸಿಕೆಯನ್ನು ಪಡೆಯಬೇಕು. ಈ ಲಸಿಕಾಕರಣ ಅಭಿಯಾನಕ್ಕೆ ಸಾರ್ವಜನಿಕರ ಸಹಕಾರ ಇರಲಿ ಎಂದರು.
2020 ಮತ್ತು 2021ನೇ ವರ್ಷ ಜಗತ್ತಿಗೆ ಕರಾಳ ವರ್ಷವಾಗಿ ಎದುರಾಗಿದೆ. ಜಗತ್ತನ್ನೇ ತಲ್ಲಣಗೊಳಿಸಿದ ಕೋವಿಡ್ ಸೋಂಕು ಮಹಾಮಾರಿಯಿಂದ ಆರ್ಥಿಕ ನಷ್ಟ ಅನುಭವಿಸುವಂತಾಯಿತಲ್ಲದೆ ದೇಶಕ್ಕೆ ಸೋಂಕು ನಿಯಂತ್ರಣ ಸವಾಲಾಗಿತ್ತು. ಈ ಸವಾಲನ್ನು ಪ್ರಧಾನಿ ನರೇಂದ್ರ ಮೋದಿಯವರು ದಿಟ್ಟವಾಗಿ ಎದುರಿಸುವ ಮೂಲಕ ಸೋಂಕು ನಿಯಂತ್ರಣದಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಜಿಲ್ಲೆಯು ಸಹ ಸೋಂಕಿನ ಎರಡು ಅಲೆಗಳನ್ನು ಸಮರ್ಪಕವಾಗಿ ನಿಯಂತ್ರಿಸುವಲ್ಲಿ ಸಫಲವಾಗಿದ್ದು ಈ ಪ್ರಯತ್ನಕ್ಕೆ ಎಲ್ಲ ಜನಪ್ರತಿನಿಧಿಗಳು ಜಿಲ್ಲಾಡಳಿತಕ್ಕೆ ಸಹಕಾರ ನೀಡಿದ್ದಾರೆ. ಜಿಲ್ಲೆಯ ಸೋಂಕು ನಿಯಂತ್ರಣ ಕಾರ್ಯದಲ್ಲಿ ಅನೇಕ ರೀತಿಯ ದಿಟ್ಟ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸೋಂಕು ನಿಯಂತ್ರಿಸಿ ಎಲ್ಲರಿಗೂ ಲಸಿಕಾಕರಣ ಯಶಸ್ವಿಗೊಳಿಸಿದ್ದಕ್ಕಾಗಿ ಜಿಲ್ಲಾಡಳಿತಕ್ಕೆ ಕೃತಜ್ಞತೆ ಸಲ್ಲಿಸಿದರು.
ಬಸವರಾಜ ಬೊಮ್ಮಾಯಿಯವರ ನೇತೃತ್ವದ ಸರ್ಕಾರ ಆಡಳಿತ ಚುರುಕುಗೊಳಿಸುವ ಪ್ರಯತ್ನದಲ್ಲಿದೆ. ಈ ಸಂದರ್ಭದಲ್ಲಿ ಪುನಃ ಸೋಂಕಿನ ಪ್ರಕರಣಗಳು ಅಧಿಕಗೊಳ್ಳುತ್ತಿದ್ದು, ಓಮಿಕ್ರಾನ್ ಸೋಂಕಿನ ಹರಡುವಿಕೆ ಅತಿಯಾಗಿರುವ ಕಾರಣ ಸೋಂಕು ನಿಯಂತ್ರಣಕ್ಕೆ ಸಾರ್ವಜನಿಕರು ಸ್ವಯಂ ನಿಯಂತ್ರಣ ಕ್ರಮಗಳನ್ನು ಅನುಸರಿಸಬೇಕು ಎಂದರು.
ಈಗಾಗಲೇ ಪಕ್ಕದ ಮಹಾರಾಷ್ಟ್ರದಲ್ಲಿ ಸಚಿವ ಸಂಪುಟದ ಸದಸ್ಯರಿಗೆ , ಶಾಸಕರಿಗೆ ಕೋವಿಡ್ ಸೋಂಕು ತಗುಲಿದೆ. ಇದನ್ನು ಗಮನದಲ್ಲಿರಿಸಿಕೊಂಡು ಜಿಲ್ಲೆಯಲ್ಲಿ ಸಾಧ್ಯವಾದಷ್ಟು ಒಳಾಂಗಣ ಸಭೆ ಸಮಾರಂಭಗಳನ್ನು ಕಡಿಮೆಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಸಾಧ್ಯವಾದಷ್ಟು ಒಳಾಂಗಣ ಕಾರ್ಯಕ್ರಮಗಳನ್ನು ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಹೇಳಿದರು.
ಗದಗ ಶಾಸಕ ಎಚ್.ಕೆ.ಪಾಟೀಲ ಮಾತನಾಡಿ, ಜಿಲ್ಲೆಯು ಲಸಿಕಾಕರಣದಲ್ಲಿ ಉತ್ತಮ ಸಾಧನೆ ಮಾಡಿದೆ. ಮೊದಲ ಡೋಸ್ ಪ್ರತಿಶತ 100ರಷ್ಟು ಲಸಿಕಾಕರಣ ಮಾಡುವಲ್ಲಿ ರಾಜ್ಯದಲ್ಲಿ ಜಿಲ್ಲೆಯು 2ನೇ ಸ್ಥಾನದಲ್ಲಿದೆ. ಎರಡನೇ ಡೋಸ್ ಲಸಿಕೆ ನೀಡುವಲ್ಲಿ ಈಗಾಗಲೇ ಶೇ.80ರಷ್ಟು ಪ್ರಗತಿ ಸಾಧಿಸಲಾಗಿದೆ. ಶೀಘ್ರ ಪೂರ್ಣಗೊಳಿಸಬೇಕು ಎಂದರು.
ಈ ಹಿಂದೆ ಸೋಂಕಿನ ಎರಡು ಅಲೆಗಳಲ್ಲಿನ ಅನುಭವ ಹಾಗೂ ವೈಫಲ್ಯಗಳನ್ನು ಗಮನದಲ್ಲಿಟ್ಟುಕೊಂಡು ಮುಂಬರುವ ಅಲೆಯ ನಿಯಂತ್ರಣಕ್ಕೆ ಎಲ್ಲರೂ ಮುಂದಾಗೋಣ. ಚಿಕಿತ್ಸೆಗೆ ಅಗತ್ಯವಿರುವ ಔಷಧಿ, ಸಾಧನೆ ಸಲಕರಣೆಗಳನ್ನು ಸಿದ್ಧವಾಗಿಟ್ಟುಕೊಳ್ಳುವ ಮೂಲಕ ಜೀವ ಹಾನಿಯನ್ನು ತಡೆಯಲು ಮುಂದಾಗೋಣ ಎಂದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು, ಜಿಲ್ಲಾ ಪಂಚಾಯತ್ ಸಿ.ಇ.ಓ. ಭರತ್ ಎಸ್, ಆದರ್ಶ ಶಿಕ್ಷಣ ಸಮಿತಿಯ ಚೇರಮನ್ ಆನಂದ ಪೋತ್ನೀಸ್, ಅಧ್ಯಕ್ಷ ಕೆ.ವಿ. ಕುಷ್ಟಗಿ, ಪ್ರಾಚಾರ್ಯ ಅಕ್ಷತಾ ಏಳೂರ, ನಗರಸಭಾ ಸದಸ್ಯ ಸುರೇಶ್ ಕಟ್ಟಿಮನಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಸವಲಿಂಗಪ್ಪ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಎಂ.ಕಾಂಬಳೆ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಇದ್ದರು.
ಇದೇ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಲಸಿಕೆ ನೀಡಲಾಯಿತು. ಕಾರ್ಯಕ್ರಮದ ಸ್ವಾಗತ ಹಾಗೂ ಪುಷ್ಪಾರ್ಚನೆಯನ್ನು ಬಸವರಾಜ ಟಿ.ಪಿ. ನಡೆಸಿಕೊಟ್ಟರೆ ರವಿ ಡಿ. ನಾಯ್ಕ್ ವಂದಿಸಿದರು.




