ಗದಗ: ಜಿಲ್ಲೆಯ ರೋಣ ತಾಲ್ಲೂಕು ಇಟಗಿ ಗ್ರಾಮ ಪಂಚಾಯಿತಿಯಲ್ಲಿ ಪ್ರತಿನಿತ್ಯ ಗ್ರಾಮದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಪ್ರತಿ ಮನೆ ಮನೆಯಿಂದ ಹಾಗೂ ಅಂಗಡಿಗಳಿಂದ ಸಂಗ್ರಹಿಸುವ ಮತ್ತು ವಿಲೇವಾರಿ ಮಾಡಲು ಪಂಚಾಯಿತಿ ವ್ಯಾಪ್ತಿಯ ಸಂಜೀವಿನಿ ಮಹಿಳಾ ಒಕ್ಕೂಟದ ಮಹಿಳೆಯರಿಗೆ ಹಸ್ತಾಂತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭೀಮವ್ವ ಕಂಬ್ಳಿ ಮಾತನಾಡಿ, ಗ್ರಾಮದಲ್ಲಿ ತ್ಯಾಜ್ಯವನ್ನು ವೈಜ್ಞಾನಿಕ ರೀತಿ ಸಂಗ್ರಹಿಸಿ ವಿಲೇವಾರಿ ಮಾಡುವ ತುಂಬ ಅವಶ್ಯವಿದೆ. ಈ ನಿಟ್ಟಿನಲ್ಲಿ ಸ್ವಸಹಾಯ ಸಂಘಗಳು ವ್ಯವಸ್ಥಿತವಾಗಿ ಕೆಲಸ ಮಾಡಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಮಾಲೋಚಕರಾದ ಸುರೇಶ ಕಪ್ಪತ್ತನವರ ಮಾತನಾಡಿ, ಸ್ವಸಹಾಯ ಸಂಘಗಳು ಯಾವ ರೀತಿ ಕೆಲಸ ನಿರ್ವಹಿಸಬೇಕು, ತ್ಯಾಜ್ಯ ನಿರ್ವಹಣೆ ಕ್ರಮಗಳ ಕುರಿತು ಸವಿಸ್ತಾರವಾದ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮಂಜುನಾಥ್ ಜಾವೂರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸ್ವಾಗತಿಸಿ ವಂದಿಸಿದರು. ಸಂಜೀವಿನಿ ಮಹಿಳಾ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು ಗ್ರಾಮ ಪಂಚಾಯಿತಿ ಸದಸ್ಯರು ಪಾಲ್ಗೊಂಡಿದ್ದರು.




