ಬೆಂಗಳೂರು: ವಾಯು ಮಾಲಿನ್ಯ, ಶಬ್ದ ಮಾಲಿನ್ಯ ತಡೆಯಲು, ಹಿರಿಯ ನಾಗರಿಕರು ಮತ್ತು ಪುಟ್ಟ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಪಟಾಕಿ ತ್ಯಜಿಸಲು ಇಲ್ಲವೇ ಹಸಿರು ಪಟಾಕಿಗಳನ್ನು ಮಾತ್ರ ಬಳಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಮನವಿ ಮಾಡಿದ್ದಾರೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಕತ್ತಲೆಂಬ ಅಜ್ಞಾನವನ್ನು ಕಳೆದು ಸುಜ್ಞಾನವೆಂಬ ದೀಪ ಹಚ್ಚುವ ಬೆಳಕಿನ ಹಬ್ಬಕ್ಕೂ ಪಟಾಕಿಗೂ ಅವಿನಾಭಾವ ಬಾಂಧವ್ಯ ಬೆಸೆದಿದೆ. ಆದರೆ ಈ ಪಟಾಕಿಗಳು ಪರಿಸರಕ್ಕೆ ತೀವ್ರ ಹಾನಿ ಉಂಟು ಮಾಡುತ್ತವೆ. ಈ ನಿಟ್ಟಿನಲ್ಲಿ ಪ್ರಜ್ಞಾವಂತ ನಾಗರಿಕರು ಪರಿಸರಕ್ಕೆ ದಟ್ಟ ಹೊಗೆ ಸೇರಿಸುವ, ರಾಸಾಯನಿಕ, ಭಾರ ಲೋಹಯುಕ್ತ ಪಟಾಕಿ ಬಳಸದಂತೆ ಮನವಿ ಮಾಡಿದರು.
ಹಲವು ಮಕ್ಕಳು ಪಟಾಕಿ ಸಿಡಿಸುವಾಗ ಕಣ್ಣಿಗೆ ಪೆಟ್ಟು ಮಾಡಿಕೊಂಡಿದ್ದನ್ನು ನೋಡುತ್ತೇವೆ, ಹಲವರು ಗಾಯಗೊಳ್ಳುತ್ತಾರೆ. ಹೀಗಾಗಿ ಸಾಧ್ಯವಾದಷ್ಟು ಪಟಾಕಿ ಹಚ್ಚದಿರುವುದೇ ಉತ್ತಮ. ಪಟಾಕಿ ಸಿಡಿಸಲೇಬೇಕು ಎಂದಾದರೆ ಪರಿಸರಕ್ಕೆ ಹಾನಿ ಉಂಟು ಮಾಡದ ಹಸಿರು ಪಟಾಕಿ ಮಾತ್ರವೇ ಸಿಡಿಸಿ ಎಂದಿದ್ದಾರೆ.
125 ಡೆಸಿಬಲ್ ಗಿಂತ ಕಡಿಮೆ ಶಬ್ದದ ಪಟಾಕಿಗೆ ಮಾತ್ರ ಅವಕಾಶ: ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಮತ್ತು ಸುಪ್ರೀಂಕೋರ್ಟ್ ತನ್ನ ಹಲ ತೀರ್ಪುಗಳಲ್ಲಿ 125 ಡೆಸಿಬಲ್ ಗಿಂತ ಹೆಚ್ಚು ಶಬ್ದ ಮಾಡುವ ಮತ್ತು ಹೆಚ್ಚು ಹೊಗೆ ಹೊರಹೊಮ್ಮುವ ರಾಸಾಯನಿಕಯುಕ್ತ ಪಟಾಕಿಗಳನ್ನು ನಿಷೇಧಿಸಿದೆ. ರಾತ್ರಿ 8 ರಿಂದ 10ಗಂಟೆ ವರೆಗೆ ಮಾತ್ರ ಹಸಿರು ಪಟಾಕಿಗಳನ್ನು ಹಚ್ಚಲು ಅವಕಾಶ ಕಲ್ಪಿಸಿದೆ. ಸಾರ್ವಜನಿಕರು ಈ ನಿಯಮಗಳನ್ನು ಪಾಲಿಸಬೇಕು ಎಂದು ತಿಳಿಸಿದ್ದಾರೆ.
ಮುಚ್ಚಳಿಕೆ ಬರೆಸಿಕೊಳ್ಳಲು ಸೂಚನೆ: ಗಣಪತಿ ಹಬ್ಬದ ಸಂದರ್ಭದಲ್ಲಿ ಮುಖ್ಯ ಕಾರ್ಯದರ್ಶಿಗಳೊಂದಿಗೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಪಟಾಕಿ ಮಳಿಗೆಗೆ ಅನುಮತಿ ನೀಡುವಾಗ ಹಸಿರು ಪಟಾಕಿ ಮಾತ್ರ ದಾಸ್ತಾನು, ಸಾಗಾಟ ಹಾಗೂ ಮಾರಾಟ ಮಾಡುವುದಾಗಿ ಮಳಿಗೆ ಮಾಲೀಕರಿಂದ ಮುಚ್ಚಳಿಕೆ ಬರೆಸಿಕೊಳ್ಳಲು ಸೂಚಿಸಲಾಗಿದೆ. ನಿಯಮ ಉಲ್ಲಂಘಿಸುವವರಿಗೆ ಮುಂದಿನ ಸಾಲಿನಿಂದ ಪಟಾಕಿ ಮಳಿಗೆ ಅನುಮತಿ ನೀಡದಂತೆ ತಿಳಿಸಲಾಗಿದೆ. ಜಿಲ್ಲಾಡಳಿತ ಈ ಬಗ್ಗೆ ಕ್ರಮ ವಹಿಸಬೇಕು ಎಂದು ತಿಳಿಸಿದ್ದಾರೆ.
ಜಾಗೃತಿ ಮೂಡಿಸಲು ಮನವಿ: ಸಂಘ ಸಂಸ್ಥೆಗಳು, ಶಿಕ್ಷಕರು, ಬೋಧಕರು, ಉಪನ್ಯಾಸಕರು, ಪರಿಸರ ಪ್ರೇಮಿಗಳು, ಜನಪ್ರತಿನಿಧಿಗಳು ಜನರಲ್ಲಿ ಅದರಲ್ಲೂ ಮಕ್ಕಳಲ್ಲಿ ಪಟಾಕಿಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿ ಪಟಾಕಿ ತ್ಯಜಿಸುವಂತೆ ಇಲ್ಲವೇ ಹಸಿರು ಪಟಾಕಿ ಮಾತ್ರ ಬಳಸಲು ಮನವಿ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಹೆಚ್ಚು ಶಬ್ದ ಮತ್ತು ದಟ್ಟ ಹೊಗೆ ಹೊರಹೊಮ್ಮುವ ರಾಸಾಯನಿಕ ಮತ್ತು ಭಾರ ಲೋಹಯುಕ್ತ ಪಟಾಕಿಗಳಿಂದ ಉಸಿರಾಟಕ್ಕೂ ತೊಂದರೆ ಆಗುತ್ತದೆ. ಭಾರೀ ಶಬ್ದ ಮಾಡುವ ಪಟಾಕಿಗಳಿಂದ ಪಶು, ಪಕ್ಷಿಗಳಿಗೂ ಕಿರಿಕಿರಿ ಉಂಟಾಗುತ್ತದೆ. ಹೀಗಾಗಿ ಪಟಾಕಿಗಳನ್ನು ತ್ಯಜಿಸೋಣ. ದೀಪದಿಂದ ದೀಪ ಹಚ್ಚಿ ಪರಿಸರ ಸ್ನೇಹಿ ದೀಪಾವಳಿ ಆಚರಿಸೋಣ ಎಂದು ಕರೆನೀಡಿದ್ದಾರೆ.




