ನಿಯಮ ಉಲ್ಲಂಘಿಸುವ ಪಟಾಕಿ ಅಂಗಡಿ ಸೀಜ್ ಮಾಡಿ
ಮಾಲೀಕರ ವಿರುದ್ಧ ಎಪ್.ಐ.ಆರ್.ದಾಖಲಿಸಿ: ಜಿಲ್ಲಾಧಿಕಾರಿ ಖಡಕ್ ಆದೇಶ
ಧಾರವಾಡ: ಸರ್ವೋಚ್ಛ ನಾಯಾಲಯದ ಆದೇಶ ಮತ್ತು ಸರಕಾರದ ನಿರ್ದೇಶನಗಳನ್ನು ಪಾಲಿಸುವ ಮೂಲಕ ಸ್ವಚ್ಛ ಪರಿಸರ, ಸಾರ್ವಜನಿಕ ಆರೋಗ್ಯ ಕಾಪಾಡುವ ನೈತಿಕ ಮತ್ತು ಕಾನೂನಾತ್ಮಕ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಬರುವ ದೀಪಾವಳಿ ಹಬ್ಬವನ್ನು ಮಾಲಿನ್ಯ ಮುಕ್ತ, ಪರಿಸರಯುಕ್ತವಾಗಿ ಆಚರಿಸೋಣ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಕರೆನೀಡಿದರು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ದೀಪಾವಳಿ ಹಬ್ಬವನ್ನು ಮಾಲಿನ್ಯ ಮುಕ್ತ-ಪರಿಸರ ಯುಕ್ತವಾಗಿ, ಸರಕಾರದ ನಿರ್ದೇಶನಗಳನ್ವಯ ಹಬ್ಬದ ಸಂದರ್ಭದಲ್ಲಿ ಪಟಾಕಿ ಮಾರಾಟ, ಪಟಾಕಿ ಸಿಡಿಸುವ ಕುರಿತು, ಅನುಸರಿಸಬೇಕಾದ ಮುಂಜಾಗೃತ ಕ್ರಮಗಳ ಕುರಿತು ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆವಹಿಸಿ, ಮಾತನಾಡಿದರು.
ಹುಬ್ಬಳಿ ಧಾರವಾಡ ಅವಳಿ ನಗರದಲ್ಲಿ 22 ಜನ ಹಾಗೂ ಧಾರವಾಡ ಗ್ರಾಮೀಣ ಜಿಲ್ಲಾ ವ್ಯಾಪ್ತಿಯಲ್ಲಿ 22 ಜನ ಪಟಾಕಿ ಮಾರಾಟಗಾರರಿದ್ದಾರೆ. ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಪ್ರತಿ ಪಟಾಕಿಗಳನ್ನು ದಾಸ್ತಾನು ಮಾಡಿರುವ ಉಗ್ರಾಣಗಳನ್ನು ಖುದ್ದು ಬೇಟಿ ನೀಡಿ, ಪರಿಶೀಲಿಸಬೇಕು. ಉಗ್ರಾಣಗಳು ನಿಯಮಾನುಸಾರ ಇರುವ ಬಗ್ಗೆ ಖಾತ್ರಿ ಮಾಡಿಕೊಳ್ಳಬೇಕು. ಉಗ್ರಾಣ ತೆರೆಯಲು ಹಾಕಿರುವ ಷರತ್ತುಗಳನ್ನು ಪೂರೈಸಿರಬೇಕು. ಅನುಮತಿಗಿಂತ ಹೆಚ್ಚು ಪಟಾಕಿ ಸಂಗ್ರಹ ಮಾಡಿದ್ದರೆ, ಯಾವ ಮುಲಾಜು ಇಲ್ಲದೇ ಅಂಗಡಿ ಸೀಜ್ ಮಾಡಿ, ಅದರ ಮಾಲಿಕನ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಹಸಿರು ಪಟಾಕಿ ಮಾತ್ರ ಮಾರಾಟ ಮಾಡಬೇಕು: ಪರಿಸರ ಸ್ನೇಹಿಯಾಗಿ ದೀಪಾವಳಿ ಹಬ್ಬವನ್ನು ಆಚರಿಸಬೇಕು. ಸಾರ್ವಜನಿಕರು ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು. ಪಟಾಕಿ ಮಾರಾಟಕ್ಕೆ ಅನುಮತಿ ಪಡೆದಿರುವ ಖಾಯಂ ಮತ್ತು ತಾತ್ಕಾಲಿಕ ಮಾರಾಟಗಾರರು ತಾವು ಅನುಮತಿ ಪಡೆದ ಸ್ಥಳದಲ್ಲಿಯೇ ಪಟಾಕಿ ಮಾರಾಟ ಮಾಡಬೇಕು. ಪಟ್ಟಣ, ಜನನಿಬಿಡ ಸ್ಥಳಗಳಲ್ಲಿ ಅಂಗಡಿಗೆ ಅನುಮತಿ ಪಡೆದಿದ್ದರೂ, ಹಬ್ಬದ ಹಾಗೂ ಹೆಚ್ಚು ಜನದಟ್ಟಣೆ ಸಮಯದಲ್ಲಿ ಊರ ಹೊರಗೆ ಅಥವಾ ಜನರ ವಾಸಸ್ಥಾನದಿಂದ ದೂರವಿರುವ ಜಾಗದಲ್ಲಿ ಪಟಾಕಿ ಮಾರಾಟಕ್ಕೆ ನಿಯಮಾನುಸಾರ ಅನುಮತಿ ಪಡೆಯುವುದು ಕಡ್ಡಾಯ ಎಂದು ತಿಳಿಸಿದರು.
ಪಟಾಕಿ ಮಾರಾಟಗಾರರು ಹಸಿರು ಪಟಾಕಿಯನ್ನು ಮಾತ್ರ ಮಾರಾಟ ಮಾಡಬೇಕು. ಹಸಿರು ಪಟಾಕಿಯನ್ನು ಮಾತ್ರ ಉಗ್ರಾಣಗಳಲ್ಲಿ ದಾಸ್ತಾನು ಹೊಂದಿರಬೇಕು. ನಿಗದಿಗಿಂತ ಒಂದು ಕೆ.ಜಿ ಯಷ್ಟು ಸಹ ಹೆಚ್ವುವರಿ ಪಟಾಕಿ ಹೊಂದುವಂತ್ತಿಲ್ಲ. ಅಧಿಕಾರಿಗಳ ಪರಶೀಲನಾ ಸಮಯದಲ್ಲಿ ಹಸಿರು ಪಟಾಕಿ ಹೊರತುಪಡಿಸಿ, ಬೇರೆ ಪಟಾಕಿ ದೊರೆತರೆ ಹಾಗೂ ಅನುಮತಿಗಿಂತ ಹೆಚ್ಚು ದಾಸ್ತಾನು ಕಂಡುಬಂದರೆ, ಆ ಗೋಡಾವನ್ ಮುಟ್ಟುಗೋಲು ಹಾಕಿಕೊಂಡು ಸೀಜ್ ಮಾಡಲಾಗುತ್ತದೆ. ಮತ್ತು ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ. ಪಟಾಕಿ ಮಾರಾಟಗಾರರು ಬಹಳಷ್ಟು ಎಚ್ಚರಿಕೆಯಿಂದ, ನಿಯಮಗಳ ಉಲ್ಲಂಘನೆ ಆಗದಂತೆ ಪಟಾಕಿ ವ್ಯಾಪಾರ ಮಾಡಬೇಕು ಎಂದರು.
ಪಟಾಕಿ ಡಬ್ಬಿ ಮೇಲೆ ಕ್ಯೂಆರ್ ಕೋಡ್ ಇರುತ್ತದೆ. ಅದನ್ನು ಉಪಯೋಗಿಸಿ, ಸ್ಕಾನ್ ಮಾಡಿದರೆ ಅದು ಹಸಿರು ಪಟಾಕಿ ಆಗಿರುವ ಬಗ್ಗೆ ಮತ್ತು ಅದರ ಉತ್ಪಾದನೆಯ ಪೂರ್ಣ ಮಾಹಿತಿ ಸಿಗುತ್ತದೆ. ಕಳಪೆ ಗುಣಮಟ್ಟದ ಪಟಾಕಿಗಳ ಬಗ್ಗೆ, ಅನಧಿಕೃತ ಮಾರಾಟಗಾರರ ಬಗ್ಗೆ, ಹಸಿರು ಪಟಾಕಿ ಹೆಸರಿನ ವಂಚನೆಗಳ ಬಗ್ಗೆ ಸಾರ್ವಜನಿಕರು ಜಾಗೃತರಾಗಿರಬೇಕು ಎಂದರು.
ರಾತ್ರಿ 8 ರಿಂದ 10 ಗಂಟೆ ಮಾತ್ರ ಪಟಾಕಿ ಸಿಡಿಸಿ: ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಪಟಾಕಿಗಳನ್ನು ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಪಟಾಕಿಗಳನ್ನು ಸಿಡಿಸಬೇಕು. ಅದು ಹಸಿರು ಪಟಾಕಿಗಳನ್ನು ಮಾತ್ರ. ವಾಯು ಮಾಲಿನ್ಯ, ಶಬ್ದ ಮಾಲಿನ್ಯ ತಡೆಗಟ್ಟಲು ಮತ್ತು ಪರಿಸರ ನಾಶ ತಪ್ಪಿಸಲು ಸರಕಾರ ಈ ಕ್ರಮ ಪಾಲಿಸಲು ಸರಕಾರ ನಿರ್ದೇಶಿಸಿದ್ದು, ಸಾರ್ವಜನಿಕರು ಇದಕ್ಕೆ ಸಹಕಾರ ನೀಡಿ, ನಿಯಮ ಪಾಲಿಸಬೇಕು ಎಂದರು.
ಪ್ರತಿ ತಾಲೂಕಿನಲ್ಲಿ ಟಾಸ್ಕ ಫೋರ್ಸ್ ತಂಡ: ಪಟಾಕಿ ಮಾರಾಟ ಮತ್ತು ದಾಸ್ತಾನು ಪರಿಶೀಲಿಸಿ, ಸುರಕ್ಷತಾ ಕ್ರಮಗಳನ್ನು ಪಾಲಿಸಿರುವ ಕುರಿತು ಕಣ್ಗಾವಲು ವಹಿಸಲು ಪ್ರತಿ ತಾಲೂಕಿನಲ್ಲಿ ತಹಶಿಲ್ದಾರ ನೇತೃತ್ವದಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಟಾಸ್ಕ್ ಫೋರ್ಸ್ ತಂಡ ರಚಿಸಿ, ಆದೇಶಿಸಲಾಗಿದೆ ಎಂದರು.
ಪಟಾಕಿ ಮಾರಾಟ ಮಳಿಗೆ, ದಾಸ್ತಾನು ಉಗ್ರಾಣ ಹೊಂದುವಲ್ಲಿ ಸರಕಾರಿ ನಿಯಮಗಳ ಪಾಲನೆ ಆಗಿರುವದನ್ನು, ಅಗತ್ಯ ಅನುಮತಿ ಪಡೆದಿರುವದನ್ನು ತಂಡ ಪರಿಶೀಲಿಸಬೇಕು. ನೂನ್ಯತೆ ಕಂಡುಬಂದಲ್ಲಿ, ಸುರಕ್ಷತಾ ಕ್ರಮಗಳನ್ನು ಅನುಸರಿಸದಿದ್ದಲ್ಲಿ ತಕ್ಷಣ ಪರ್ಮಿಷನ್ ರದ್ದುಪಡಿಸಲು ಶಿಫಾರಸ್ಸು ಮಾಡಬೇಕು. ತಪ್ಪಿದಲ್ಲಿ ತಂಡದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲಾಗುವುದು ಎಂದರು.
ತುರ್ತು ಚಿಕಿತ್ಸೆಗೆ ಆರೋಗ್ಯ ತಂಡ: ಹಬ್ಬದ ಖುಷಿಯಲ್ಲಿ ಮುನ್ನೆಚ್ಚರಿಕೆ, ಸುರಕ್ಷತಾ ಕ್ರಮಗಳನ್ನು ಪಾಲಿಸದೆ ಪಟಾಕಿ ಸುಡುವಾಗ ಯಾವುದೇ ತೊಂದರೆ, ಆರೋಗ್ಯ ಸಮಸ್ಯೆ ಉಂಟಾದರೆ ತಕ್ಷಣ ಚಿಕಿತ್ಸೆ ನೀಡಲು ಪ್ರತಿ ತಾಲೂಕಿನಲ್ಲಿ ಆರೋಗ್ಯ ತಂಡ ಹಾಗೂ ಅಗತ್ಯ ಔಷಧಿ ಹೊಂದುವಂತೆ ಜಿಲ್ಕಾಧಿಕಾರಿಗಳು ಆರೋಗ್ಯ ಇಲಾಖೆಗೆ ಸೂಚಿಸಿದರು. ತಾಲೂಕು ಆಸ್ಪತ್ರೆ ಮತ್ತು ಜಿಲ್ಲಾ ಆಸ್ಪತ್ರೆ, ಕಿಮ್ಸ್ ಆಸ್ಪತ್ರೆಗಳಲ್ಲಿ ಅಗತ್ಯವಿದ್ದಲ್ಲಿ ತುರ್ತು ಚಿಕಿತ್ಸೆ ನೀಡಲು ಪ್ರತ್ಯೇಕ ವಾರ್ಡ ಸಿದ್ದಗೊಳಿಸುವಂತೆ ಹೇಳಿದರು.
ಅನಧಿಕೃತವಾಗಿ ಪಟಾಕಿ ಉತ್ಪಾದಿಸಿದರೆ ಕಠಿಣ ಕ್ರಮ: ಜಿಲ್ಲೆಯಲ್ಲಿ ಪಟಾಕಿ ಉತ್ಪಾದನೆಗೆ ಅವಕಾಶವಿಲ್ಲ. ಯಾವ ಕೈಗಾರಿಕೆಗಳೂ ಅನುಮತಿ ಪಡೆದಿಲ್ಲ. ಆದರೆ ಕೆಲವರು ಅನಧಿಕೃತವಾಗಿ ಪಟಾಕಿ ಉತ್ಪಾದಿಸುವ ಮತ್ತು ಮಾರಾಟ ಮಾಡುವ ಸಾಧ್ಯತೆ ಇರುತ್ತದೆ. ಈ ಕುರಿತು ಕೈಗಾರಿಕೆ ಇಲಾಖೆ ಅಧಿಕಾರಿಗಳು ಜಿಲ್ಲೆಯ ಕೈಗಾರಿಕಾ ಪ್ರದೇಶಗಳನ್ನು ಸಮಗ್ರವಾಗಿ ಪರಿಶೀಲಿಸಬೇಕು. ಅಗ್ನಿಶಾಮಕ ಇಲಾಖೆ ಪರಿಶೀಲಿಸಿ, ಒಪ್ಪಿಗೆ ಸೂಚಿಸುವವರೆಗೆ ಪಟಾಕಿ ಮಾರಾಟ ಮಳಿಗೆ ಮತ್ತು ದಾಸ್ತಾನು ಉಗ್ರಾಣಗಳಿಗೆ ಅನುಮತಿಸಬಾರದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ ಹೇಳಿದರು.
ಹಿರಿಯ ಪರಿಸರ ಅಧಿಕಾರಿ ಜಗದೀಶ ಐ. ಎಚ್. ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಉಪ ಪೊಲೀಸ್ ಆಯುಕ್ತ ಮಾನಿಂಗ ನಂದಗಾವಿ, ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ, ಸಹಾಯಕ ಪೊಲೀಸ್ ಆಯುಕ್ತ ಪ್ರಶಾಂತ ಸಿದ್ದನಗೌಡರ, ಜಿಲ್ಲಾ ನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶಶಿ ಪಾಟೀಲ, ಹೆಸ್ಕಾಂ ಧಾರವಾಡ ಸಹಾಯಕ ಕಾರ್ಯಪಾಲಕ ಅಭಿಯಂತರ ಎಂ.ಟಿ.ದೊಡಮನಿ, ತಹಶಿಲ್ದಾರರಾದ ಡಾ.ಡಿ.ಎಚ್.ಹೂಗಾರ, ಕಲಗೌಡ ಪಾಟೀಲ, ವಿರೇಶ ಮುಳಗುಂದಮಠ, ಬಸವರಾಜ ಬೆಣ್ಣಿಶಿರೂರ, ಎಂ.ಜಿ.ದಾಸಪ್ಪನವರ, ರಾಜು ಮಾವಕರ, ಉಪ ತಹಶಿಲ್ದಾರ ಶಿವಾನಂದ ಹೆಬ್ಬಳ್ಳಿ ಹಾಗೂ ಪೊಲೀಸ್, ಕಂದಾಯ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಹೆಸ್ಕಾಂ, ಮಹಾನಗರ ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಹಾಜರಿದ್ದರು.




