ಮಳೆಗಾಲದ ಅವಘಡಗಳ ಬಗ್ಗೆ ಮುಂಜಾಗ್ರತೆ ವಹಿಸಿ: ಕೃಷ್ಣ ಬೈರೇಗೌಡ

2 years ago

ರಾಜ್ಯದಲ್ಲಿ 82 ಲಕ್ಷ‌ ಹೆಕ್ಟೇರ್ ಭೂಮಿ ಬಿತ್ತನೆ ಗುರಿ

ಪೂರ್ವ ಮಾನ್ಸೂನ್ ಬೆಳೆ ಸಮೀಕ್ಷೆಗೆ ಸೂಚನೆ

ಆರ್‌ಟಿಸಿ ಜೊತೆಗೆ ಆಧಾರ್‌ ಲಿಂಕ್‌ ಕಾಲ ನಿಗದಿ!

2025 ಅಂತ್ಯಕ್ಕೆ ಕಂದಾಯ ಇಲಾಖೆ ಡಿಜಿಟಲೀಕರಣ

ಕಲಬುರಗಿ: ಈ ವರ್ಷದ ಮಾನ್ಸೂನ್‌ನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದ್ದು, ಕೆಲವು ತಾಲೂಕುಗಳಲ್ಲಿ ಅವಘಡಗಳು ಸಂಭವಿಸುವ ಸಾಧ್ಯತೆಗಳಿವೆ. ಪ್ರತಿಯೊಂದು ಜೀವವೂ ಮುಖ್ಯವಾಗಿದ್ದು, ಪಂಚಾಯತ್‌ ಮಟ್ಟದಿಂದಲೂ ಎಲ್ಲಾ ಅಧಿಕಾರಿಗಳೂ ಮುಂಜಾಗ್ರತಾ ಕ್ರಮವಹಿಸಬೇಕು. ಯಾರ ಮೇಲೂ ಬೊಟ್ಟು ತೋರಿಸದೆ ವ್ಯಯಕ್ತಿಕ ಜವಾಬ್ದಾರಿ ಅರಿತು ಕೆಲಸ ನಿರ್ವಹಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದರು.

ಕಲಬುರಗಿ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ನಡೆದ ಕಲಬುರಗಿ ವಿಭಾಗದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕಲಬುರಗಿ ಸೇರಿದಂತೆ ಈ ಕಂದಾಯ ವಿಭಾಗದ ಹಲವು ತಾಲೂಕುಗಳಲ್ಲಿ ಈಗಾಗಲೇ ಉತ್ತಮ ಮಳೆಯಾಗಿದೆ. ಮುಂದಿನ ದಿನಗಳಲ್ಲೂ ಹೆಚ್ಚಿನ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ವರದಿ ನೀಡಿದೆ. ಹೀಗಾಗಿ ನದಿಪಾತ್ರದ ಕೆಲ ಗ್ರಾಮಗಳಲ್ಲಿ ಅವಘಡಗಳು ಸಂಭವಿಸುವ ಸಾಧ್ಯತೆ ಇದ್ದು, ಅಧಿಕಾರಿಗಳು ಅವಘಡ ಸಂಭವಿಸುವ ಮುನ್ನ ಮುಜಾಗ್ರತೆ ವಹಿಸಬೇಕು. ಮಳೆ ಬೀಳುವ ಪ್ರದೇಶಗಳ ಮೇಲೆ ಹೆಚ್ಚಿನ ನಿಗಾ ವಹಿಸಬೇಕು. ಪ್ರತಿಯೊಂದು ಜೀವವೂ ಮುಖ್ಯವಾಗಿದ್ದು, ಎಲ್ಲಾ ಜೀವಗಳನ್ನೂ ಉಳಿಸುವ ನಿಟ್ಟಿನಲ್ಲಿ ಶ್ರಮವಹಿಸಬೇಕು ಎಂದರು.

ಬೀದರ್‌ ಹಾಗೂ ವಿಜಯನಗರ ಜಿಲ್ಲೆಗಳ ಕೆಲ ಪ್ರದೇಶ ಮಳೆಗಾಲದಲ್ಲಿ ಮಾತ್ರ ಹಳ್ಳಗಳಲ್ಲಿ ದಿಢೀರ್‌ ಪ್ರವಾಹ ಕಂಡು ಬರುವ ಸಾಧ್ಯತೆ ಇದೆ. ಇಂತಹ ಪ್ರವಾಹಗಳೂ ದೊಡ್ಡ ಮಟ್ಟದ ಅನಾಹುತಗಳನ್ನು ಸೃಷ್ಟಿಸುವ ಸಾಧ್ಯತೆ ಇದೆ. ಹೀಗಾಗಿ ಎಲ್ಲಾ ಅಧಿಕಾರಿಗಳೂ ಪಂಚಾಯತ್‌ ಮಟ್ಟದಲ್ಲಿ ಕೆಲಸ ಮಾಡಬೇಕು. ಪ್ರವಾಹ ಸಾಧ್ಯತೆಗಳಿರುವ ಪ್ರದೇಶಗಳಿಗೆ ನೋಡಲ್‌ ಅಧಿಕಾರಿಗಳನ್ನು ನೇಮಿಸಬೇಕು. ಪ್ರತಿ ತಾಲೂಕಿನ ಆಡಳಿತದ ಜವಾಬ್ದಾರಿ ತಹಶೀಲ್ದಾರ್‌ ಅವರದ್ದೇ ಆಗಿದ್ದು, ತಹಶೀಲ್ದಾರ್‌ಗಳು ಪ್ರವಾಹ ಸಂದರ್ಭದಲ್ಲಿ ಜವಾಬ್ದಾರಿ ಅರಿತು ಮುಂದು ನಿಂತು ಕೆಲಸ ಮಾಡಬೇಕು, ಅದನ್ನು ಬಿಟ್ಟು ಜವಾಬ್ದಾರಿಯಿಂದು ನುಣುಚಿಕೊಳ್ಳುವ ಅಥವಾ ಮತ್ತೊಬ್ಬರ ಮೇಲೆ ಬೆರಳು ತೋರಿಸುವ ಕೆಲಸ ಮಾಡಬಾರದು ಎಂದು ಕಿವಿಮಾತು ಹೇಳಿದರು.

ಅಲ್ಲದೆ, ಜನರಿಗೆ ಮೊಬೈಲ್‌ ಸಂದೇಶದ ಮೂಲಕ ಮಳೆ ಮುನ್ಸೂಚನೆ ನೀಡಿ ಎಚ್ಚರಿಸುವ ಕೆಲಸವಾಗಬೇಕು. ಇದೇ ಸಂದರ್ಭದಲ್ಲಿ ಭೀಮಾ ನದಿಪಾತ್ರದ ಪ್ರದೇಶದಲ್ಲೂ ಹೆಚ್ಚು ಗಮನ ಇರಲಿ. ಅಲ್ಲದೆ, ಬರಗಾಲ ಸಂದರ್ಭದಲ್ಲಿ ಗೋಶಾಲೆ-ಕುಡಿಯುವ ನೀರಿಗೆ ಸಂಬಂಧಿಸಿದ ಎಲ್ಲಾ ಬಿಲ್‌ಗಳಿಗೂ ಒಂದು ವಾರದೊಳಗಾಗಿ ಹಣ ಪಾವತಿಸಿ. ಯಾವುದನ್ನೂ ಬಾಕಿ ಉಳಿಸಿಕೊಳ್ಳಬೇಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪೂರ್ವ ಮಾನ್ಸೂನ್ ಬೆಳೆ ಸಮೀಕ್ಷೆಗೆ ಸೂಚನೆ: ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಉತ್ತಮ ಮಳೆಯಾಗುತ್ತಿದೆ. ಅಲ್ಲದೆ, ಕಳೆದ ವರ್ಷಕ್ಕಿಂತ ಭಿತ್ತನೆಯೂ ಗಮನಾರ್ಹವಾಗಿ ಹೆಚ್ಚುತ್ತಿದೆ. ಹೀಗಾಗಿ ಪ್ರಸ್ತುತ ವರ್ಷ ಸರಿಯಾದ ಸಮಯಕ್ಕೆ ಪೂರ್ವ ಮಾನ್ಸೂನ್ ಬೆಳೆ ಸಮೀಕ್ಷೆ ನಡೆಯಬೇಕು. ಬೆಳೆ ಸಮೀಕ್ಷೆ ನಡೆದರೆ ಮಾತ್ರ ಅದರ ಆಧಾರದ ಮೇಲೆ ಪರಿಹಾರ ಅಥವಾ ಬೆಳೆ ವಿಮೆ ನೀಡುವುದು ಸಾಧ್ಯವಾಗುತ್ತದೆ. ಅಲ್ಲದೆ, ಸೂಕ್ತ ರೀತಿಯಲ್ಲಿ ಬೆಳೆ ಸಮೀಕ್ಷೆ ನಡೆಸಿದರೆ ಪ್ರವಾಹ-ಬರ ಏನೇಬಂದರೂ ಅಧಿಕಾರಿಗಳಿಗೂ ಕೆಲಸದ ಒತ್ತಡವೂ ಇರುವುದಿಲ್ಲ ಎಂದರು.

ಇದೇ ವೇಳೆ ರಾಜ್ಯದಲ್ಲಿ ಮುಂಗಾರು ಪೂರ್ವ 115 ಮಿ.ಮೀ ಮಳೆಯಾದರೆ ಜೂನ್ ಮಾಹೆಯಲ್ಲಿ ಒಟ್ಟಾರೆ 148 ಮಿ.ಮೀ ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ 95 ಮಿ.ಮೀ. ಮಳೆಯಾಗಿದ್ದು, ಇದು ವಾಡಿಕೆಗ್ಗಿಂತ 40ಮಿ.ಮೀ ಹೆಚ್ಚು. ಅದೇ ರೀತಿ ಉತ್ತರ ಒಳನಾಡಿನಲ್ಲಿ 78 ಮಿ.ಮೀ. ಮಳೆ ವಾಡಿಕೆಯಾದರೆ, ಮಳೆ‌ ಬಿದ್ದಿದ್ದು 134 ಮಿ.ಮೀ. ಇನ್ನು ಮಳೆನಾಡು, ಕರಾವಳಿಯಲ್ಲಿ ವಾಡಿಕೆಯಂತೆ ಮಳೆ ಬೀಳದಿದ್ದರೂ., ಇತ್ತೀಚಿನ 2-3 ದಿನದಲ್ಲಿ ಅಲ್ಲಿ‌ ಮಳೆಯಾಗುತ್ತಿರುವುದರಿಂದ ಅಗತ್ಯಕ್ಕನುಗುಣವಾಗಿ ಅಲ್ಲಿ ಮಳೆಯಾಗಿದೆ ಎಂದರು.

ಆರ್‌ಟಿಸಿಗೆ-ಆಧಾರ್‌ ಜೋಡಿಸಿ ಭೂ ವಂಚನೆ ತಪ್ಪಿಸಿ: ಕಲಬುರಗಿ ವಿಭಾಗದಲ್ಲಿ ಆರ್‌ಟಿಸಿಗೆ-ಆಧಾರ್‌ ಜೋಡಿಸಿ ಭೂ ವಂಚನೆ ತಪ್ಪಿಸಿ ಅಲ್ಲದೆ, ಬರ-ನೆರೆ ಪರಿಹಾರ ರೈತರಿಗೆ ಶೀಘ್ರ ತಲುಪಲು ನೆರವಾಗಿ ಎಂದು ಅಧಿಕಾರಿಗಳನ್ನು ಒತ್ತಾಯಿಸಿದರು.

ಪ್ರಗತಿ ಪರಿಶೀಲನಾ ಸಭೆಯಲ್ಲಿ ಆರ್‌ಟಿಸಿಗೆ-ಆಧಾರ್‌ ಜೋಡಣೆ ಬಗ್ಗೆಯೂ ಗಮನ ಸೆಳೆದ ಅವರು, ರಾಜ್ಯದಾದ್ಯಂತ 4 ಕೋಟಿಗೂ ಅಧಿಕ ಆರ್‌ಟಿಸಿ ಮಾಲೀಕರಿದ್ದಾರೆ. ಈ ಪೈಕಿ 1.75 ಕೋಟಿ ಆರ್‌ಟಿಸಿಗಳನ್ನು ಆಧಾರ್‌ ಜೊತೆಗೆ ಜೋಡಿಸಲಾಗಿದೆ. ಅಲ್ಲದೆ, 1.20 ಕೋಟಿ ಆರ್‌ಟಿಸಿಗಳ್ನು ಒಟಿಪಿ (One Time Password) ಮೂಲಕ ಇಕೆವೈಸಿ ಮಾಡಲಾಗಿದೆ. ಇನ್ನೂ ಕಲಬುರಗಿ ವಿಭಾಗದಲ್ಲಿ 45 ಲಕ್ಷ ಆರ್‌ಟಿಸಿ ಮಾಲೀಕರಿದ್ದು ಈ ಪೈಕಿ 18 ಲಕ್ಷ ಆರ್‌ಟಿಸಿಗಳನ್ನು ಮಾತ್ರ ಆಧಾರ್‌ ಜೊತೆಗೆ ಜೋಡಿಸಲಾಗಿದೆ. ಅಂದರೆ ಶೇ. 40 ರಷ್ಟು ಕೆಲಸ ಮಾತ್ರ ಆಗಿದ್ದು, ಇದು ಸಾಲದು. ಮುಂದಿನ ಜುಲೈ ತಿಂಗಳ ಒಳಗಾಗಿ ಆಧಾರ್‌ ಸೀಡಿಂಗ್‌ ವಿಚಾರದಲ್ಲಿ ಶೇ. 90 ರಷ್ಟು ಪ್ರಗತಿ ಸಾಧಿಸಬೇಕು ಎಂದು ತಾಕೀತು ಮಾಡಿದರು.

ಆರ್‌ಟಿಸಿಗಳನ್ನು ಆಧಾರ್‌ಗೆ ಲಿಂಕ್‌ ಮಾಡುವ ಮೂಲಕ ಯಾರದ್ದೋ ಜಮೀನನ್ನು ಮತ್ಯಾರೋ ಮಾರಾಟ ಮಾಡುವಂತಹ ವಂಚನೆಗಳನ್ನು ತಡೆಯಬಹುದು. ಅರ್ಹ ರೈತರಿಗೆ ಸರಿಯಾದ ಸಮಯಕ್ಕೆ ಪರಿಹಾರ ತಲುಪಿಸಲು ಹಾಗೂ ಮ್ಯುಟೇಶನ್‌, ಇನ್ಪುಟ್‌ ಸಬ್ಸಿಡಿ ನೀಡುವುದಕ್ಕೂ ಇದು ಸಹಕಾರಿಯಾಗುತ್ತದೆ. ಹೀಗಾಗಿ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ರೈತರನ್ನು ಒಪ್ಪಿಸಿ ಆಧಾರ್‌ ಜೋಡಣೆ ಮಾಡಬೇಕು. ಆಧಾರ್‌ ಜೋಡಣೆಯಿಂದ ಜನರಿಗೆ ಆಗುವ ಅನುಕೂಲ ಏನು ಎಂಬ ಕುರಿತು ಕ್ಯಾಂಪೇನ್‌ ಮಾಡಿ, ಇದರಿಂದ ಒಳ್ಳೆಯ ಸರಳ ಆಡಳಿತ ನೀಡಬಹುದು, ಅಧಿಕಾರಿಗಳ ಕೆಲಸದ ಒತ್ತಡವೂ ಕಡಿಮೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಅಲ್ಲದೆ, ಆರ್‌ಟಿಸಿ-ಆಧಾರ್‌ ಲಿಂಕ್‌ ಮಾಡುವ ಮೂಲಕ ರಾಜ್ಯದಲ್ಲಿ ಸಣ್ಣ ರೈತರ ಸಂಖ್ಯೆ ಎಷ್ಟು ಎಂಬ ಬಗ್ಗೆ ಕೇಂದ್ರ ಸರ್ಕಾರಕ್ಕೆ ವಾಸ್ತವದ ಅಂಕಿ ನೀಡಬಹುದು. ಕೇಂದ್ರ ಸರ್ಕಾರದ ಲೆಕ್ಕಾಚಾರದ ಪ್ರಕಾರ ರಾಜ್ಯದಲ್ಲಿ ಸಣ್ಣ ರೈತರ ಸಂಖ್ಯೆ ಶೇ.44 ಮಾತ್ರ. ಆದರೆ, ವಾಸ್ತವದಲ್ಲಿ ಈ ಸಂಖ್ಯೆ ಶೇ.65 ರಿಂದ ಶೇ.70 ರಷ್ಟಿದೆ. ಈ ನಿಖರ ಸಂಖ್ಯೆಯನ್ನು ನೀಡುವ ಮೂಲಕ ಕೇಂದ್ರದಿಂದ ಹೆಚ್ಚಿನ ಬರ ಪರಿಹಾರ ಹಣ ಪಡೆಯಲು ಸಹಕಾರಿಯಾಗುತ್ತದೆ ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು.

Leave a Reply