ಜನಾರ್ದನ ರೆಡ್ಡಿ ಮಣ್ಣಿನ ಕಳ್ಳ: ಶಿವರಾಜ್ ತಂಗಡಗಿ

2 years ago

ಕೊಪ್ಪಳ: ಜನಾರ್ದನ ರೆಡ್ಡಿ ಮಣ್ಣಿನ ಕಳ್ಳ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಕಿಡಿಕಾರಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರದ ವಿರುದ್ದ ಅವಹೇಳನಕಾರಿಯಾಗಿ ಮಾತಮಾಡಿದ ಶಾಸಕ ಜನಾರ್ದನ ರೆಡ್ಡಿ ಹೇಳಿಕೆ ವಿರೋಧಿಸಿ ಕಾಂಗ್ರೆಸ್ ನಾಯಕರು ಕೊಪ್ಪಳದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಮ್ಮ ಹೇಳಿಕೆಗಾಗಿ ತಕ್ಷಣವೇ ಜನಾರ್ದನ ರೆಡ್ಡಿ ಬೇಷರತ್ ಕ್ಷಮೆಯಾಚಿಸಬೇಕು. ತಪ್ಪಿದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದರು.

ಜನಾರ್ದನ ರೆಡ್ಡಿ ಬಿಜೆಪಿ ಸೇರಿದ ಹಿನ್ನೆಲೆಯಲ್ಲಿ ಆ ಪಕ್ಷದ ನಾಯಕರ ಓಲೈಕೆಗೆ ಅಬ್ಬರಿಸುತ್ತಿದ್ದಾರೆ. ರೆಡ್ಡಿ ನಮ್ಮ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲಿನ ಧೂಳು ಅಲ್ಲ, ಅವರ ಕಾಲಿನ ಉಗುರಿನಲ್ಲಿನ ಧೂಳಿಗೂ ಸಮ ಇಲ್ಲ ಎಂದರು.

ರೆಡ್ಡಿ ಅವರೇ ಇದು ಬಳ್ಳಾರಿಯಲ್ಲ, ಕೊಪ್ಪಳ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನತೆಗೆ ಸುಳ್ಳು ಆಶ್ವಾಸನೆ ಕೊಟ್ಟು ಶಾಸಕರಾಗಿ ಆಯ್ಕೆಯಾಗಿರುವ ಬಗ್ಗೆ ಜನತೆಗೆ ಗೊತ್ತಾಗಿದೆ. ಪರಿಣಾಮ ಗಂಗಾವತಿಯಲ್ಲಿ ಜನ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ 16,000 ಮತಗಳ ಮುನ್ನಡೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಜನ ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ರೆಡ್ಡಿ ಅವರು ನಮ್ಮ ಬಳಿ ಅನುದಾನಕ್ಕಾಗಿ ಅಲೆದಾಡಿದರು. ಅನುಕೂಲ ಪಡೆದು ನಮ್ಮ ನಾಯಕರ ವಿರುದ್ಧವೇ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಈ ಕೂಡಲೇ ರೆಡ್ಡಿ ಅವರು ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ರೆಡ್ಡಿ ವಿರುದ್ಧ ಹೋರಾಟ ತೀವ್ರಗೊಳಿಸಲಾಗುವುದು ಎಂದರು.

ಲೋಕಸಭಾ ಚುನಾವಣೆಯಲ್ಲಿ ಕೊಪ್ಪಳ ಜನ ಕಾಂಗ್ರೆಸ್ ಪಕ್ಷದ ಪರ ತೀರ್ಪು ನೀಡುವ ಮೂಲಕ ರೆಡ್ಡಿ ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ದೇಶ ಮೆಚ್ಚಿದ ನಾಯಕ. ಗ್ಯಾರಂಟಿ ಯೋಜನೆಗಳ ಮೂಲಕ ಬಡವರ ಬದುಕಿಗೆ ಆಸರೆಯಾಗಿದ್ದಾರೆ. ಇಂತಹ ನಾಯಕನ ಬಗ್ಗೆ ಮಾತನಾಡಲು ಇವರಿಗೆ ಯಾವುದೇ ನೈತಿಕತೆ ಇಲ್ಲ. ನಮಗೂ ಮಾತನಾಡಲು ಬರಲಿದೆ, ಆದರೆ ಆ ರೀತಿ ಮಾತನಾಡುವ ಸಂಸ್ಕಾರವನ್ನು ನಮ್ಮ ಗುರು- ಹಿರಿಯರು ಕಲಿಸಿಲ್ಲ. ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವಾಗ ಎಚ್ಚರದಿಂದ ಮಾತನಾಡಿ. ಇಲ್ಲದಿದ್ದಲ್ಲಿ ಭಾರಿ ಬೆಲೆ ತೆತ್ತಬೇಕಾದಿತ್ತು ಎಂದರು.

Leave a Reply