ಈ ಸಂದರ್ಭದಲ್ಲಿ ಮಹಿಳೆಯರ ಸ್ಥಿತಿ ನೆನಪಿಗೆ ಬರಲಿಲ್ಲ

2 years ago

ನಮ್ಮ ಪ್ರಧಾನಮಂತ್ರಿಗಳು ಚುನಾವಣೆಯ ಸಂದರ್ಭದಲ್ಲಿ ಪ್ರತಿಯೊಂದು ವೇದಿಕೆಯ ಮೇಲೆ ನಿಂತು ನಾರಿ ಶಕ್ತಿಯ ಬಗ್ಗೆ ಅದ್ಭುತವಾದ ವಿವರಣೆಯನ್ನು ಕೊಡುತ್ತಾ ಚಪ್ಪಾಳೆಯ ಹೊಡೆಸಿಕೊಳ್ಳುತ್ತಿದ್ದಾರೆ.

ಆದರೆ ಈ ಸಂದರ್ಭದಲ್ಲಿ ಅವರಿಗೆ ನಾರಿ ಶಕ್ತಿಯ ಮತ್ತು ಅವರ ನೋವಿನ ವಿಚಾರಗಳು ಪಾಪ ನೆನಪಿಗೆ ಬರಲಿಲ್ಲವೇನೋ ಅಥವಾ ಇವುಗಳ ಬಗ್ಗೆ ಆಲೋಚನೆ ಮಾಡಲು ಸಮಯ ಸಿಗಲಿಲ್ಲವೇನು?

ಮಣಿಪುರದಲ್ಲಿ ಕಳೆದ ಎರಡು ವರ್ಷದಿಂದ ಎರಡು ಜನಾಂಗದ ನಡುವೆ ಘರ್ಷಣೆಗಳಾಗಿ ಹಲವಾರು ಮಂದಿ ಪ್ರಾಣವನ್ನ ಕಳೆದುಕೊಂಡಿದ್ದಾರೆ. ಇದರಲ್ಲಿ ವಿಶೇಷವಾಗಿ ಮಹಿಳೆಯರು ತುಂಬಾ ಹಿಂಸೆಯನ್ನು ಅನುಭವಿಸಿದ್ದಾರೆ‌. ಹಲವಾರು ಮಹಿಳೆಯರು ಕೊಲೆಯಾಗಿದ್ದಾರೆ. ಅವರ ಮೇಲೆ ಅತ್ಯಾಚಾರಗಳಾಗಿದೆ. ಸಾರ್ವಜನಿಕವಾಗಿ ಅವರನ್ನು ಬೆತ್ತಲೆಗೊಳಿಸಿ ಕ್ರೂರವಾಗಿ ಅವಮಾನಿಸಿದ್ದಾರೆ. ಈ ವಿಚಾರ ನಮ್ಮ ಪ್ರಧಾನಮಂತ್ರಿಗಳಿಗೆ ತಿಳಿದಿದೆಯೋ ಇಲ್ಲವೋ? ನಮಗೆ ಗೊತ್ತಾಗುತ್ತಿಲ್ಲ.

ದೇಶದ ಪ್ರತಿಯೊಂದು ಸಣ್ಣ ಸಣ್ಣ ಸಂಗತಿಯನ್ನೂ ತಿಳಿದುಕೊಳ್ಳುವ ಇವರು ಒಮ್ಮೆಯೂ ಸಹ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಈ ಮಹಿಳೆಯರ ನೋವಿನ ಬಗ್ಗೆ ಪ್ರಸ್ತಾಪವನ್ನೇ ಮಾಡಿಲ್ಲ. ಜೊತೆಗೆ ಚುನಾವಣೆಯ ಪ್ರಚಾರದ ಒತ್ತಡದ ನಡುವೆ ಕಳೆದ ಎರಡು ವರ್ಷದಿಂದ ಮಣಿಪುರಕ್ಕೆ ಭೇಟಿ ಕೊಡಲು ಸಮಯವೇ ಸಿಗುತ್ತಿಲ್ಲ. ಚುನಾವಣೆಯ ಸಂದರ್ಭದಲ್ಲಿ ಮಣಿಪುರಕ್ಕೆ ಹೋಗಿ ನಾರಿ ಶಕ್ತಿಯ ಬಗ್ಗೆ ಮಾತನಾಡಿ ಒಂದಷ್ಟು ಭರವಸೆಗಳನ್ನ ಕೊಟ್ಟು ಚಪ್ಪಾಳೆಯನ್ನು ಗಿಟ್ಟಿಸಿಕೊಂಡು ನೀವು ಸಾಕಿರುವ ಒಂದಷ್ಟು ಮಾಧ್ಯಮದವರು ಈ ಸಂಗತಿಯನ್ನು ವೈಭವೀಕರಿಸಿ ವರದಿಯನ್ನ ಮಾಡಿ ನಿಮ್ಮನ್ನು ಸಂತೋಷಪಡಿಸಲಿ ಹಾಗೂ ಕಡೆಯ ಪಕ್ಷ ಮಣಿಪುರಕ್ಕೆ ಭೇಟಿ ಕೊಟ್ಟ ಸಮಾಧಾನವಾದರೂ ಅಲ್ಲಿನ ನೊಂದವರಿಗೆ ಸಿಗಲಿ ಎಂಬುದು ನಮ್ಮ ಆಸೆಯಾಗಿರುತ್ತದೆ.

ಭಾರತದ ಕೀರ್ತಿಯನ್ನು ಕ್ರೀಡಾಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿ, ಚಿನ್ನದ ಪದಕವನ್ನು ತಂದುಕೊಟ್ಟ ಮಹಿಳಾ ಕ್ರೀಡಾಪಟುಗಳ ದುಃಖವನ್ನು ಅವರ ನೋವನ್ನು ಪ್ರಧಾನಮಂತ್ರಿಗಳು ಕೇಳಲು ಮತ್ತೆ ಸಮಯ ದೊರೆತಿರುವುದಿಲ್ಲ. ಅವರುಗಳು ನಮ್ಮ ಮೇಲೆ ಅನೇಕ ರೀತಿಯ ದಬ್ಬಾಳಿಕೆಗಳಾಗಿದೆ. ನ್ಯಾಯ ಕೊಡಿ ಎಂದು ಕೇಳುತ್ತಿದ್ದರು ನಮ್ಮ ಪ್ರಧಾನಮಂತ್ರಿಗಳಿಗೆ ಅವರ ದುಃಖವನ್ನ ಕೇಳಲು ಚುನಾವಣೆಯ ಪ್ರಚಾರದ ಒತ್ತಡದಲ್ಲಿ ಸಾಧ್ಯವಾಗಿರುವುದಿಲ್ಲ‌.

ಈಗಲಾದರೂ ಚುನಾವಣೆ ಬಂದಿದೆ. ಅವರನ್ನು ಕರೆಸಿ ಮಾತನಾಡಿ ಒಂದಷ್ಟು ಭರವಸೆಗಳನ್ನು ಕೊಟ್ಟು ನಿಮ್ಮ ತುತ್ತೂರಿ ಮಾಧ್ಯಮಗಳಲ್ಲಿ ಒಂದಷ್ಟು ಪ್ರಚಾರವನ್ನು ಪಡೆದು ಅಂತೂ ಇಂತೂ ಕುಸ್ತಿಪಟುಗಳನ್ನು ಮಹಿಳಾ ಕುಸ್ತಿಪಟುಗಳನ್ನು ಪ್ರಧಾನಮಂತ್ರಿಗಳು ಭೇಟಿ ಮಾಡಿದರು ಎಂದು ಬರುವಂತಾಗಲಿ ಎಂಬುದು ನಮ್ಮ ಆಶಯ.

ಬಿಲ್ಕಿಶ್ ಬಾನು ಎಂಬ ನತದೃಷ್ಟ ಮಹಿಳೆಯ ಮೇಲೆ ಹನ್ನೊಂದು ಮಂದಿ ಅತ್ಯಾಚಾರವನ್ನು ಮಾಡಿ ಜೈಲಿಗೆ ಹೋದವರು ಅಲ್ಲಿನ ಸರ್ಕಾರದ ಅಂದರೆ ಗುಜರಾತ್ ಸರ್ಕಾರದ ಸನ್ನಡತೆಯ ವರದಿ ಆಧಾರದ ಮೇಲೆ ಬಿಡುಗಡೆಯಾಗಿ ಬರುತ್ತಾರೆ. ಅವರನ್ನು ಶಾಲು ಹೊದಿಸಿ ಹಾರ ಹಾಕಿ ಸಂಭ್ರಮದಿಂದ ಸ್ವಾಗತಿಸುತ್ತಾರೆ.

ನಮ್ಮೆಲ್ಲರ ಪುಣ್ಯಕ್ಕೆ ದೇಶದ ಸರ್ವೋಚ್ಛ ನ್ಯಾಯಾಲಯಕ್ಕೆ ಕಣ್ಣು ಕಿವಿ ಇನ್ನೂ ಸೂಕ್ಷ್ಮತೆಯನ್ನು ಹೊಂದಿರುವುದರಿಂದ ಆ ಮಹಾನ್ ಕಿರಾತಕರ ಕೃತ್ಯಕ್ಕೆ ಆಕ್ರೋಶವನ್ನು ವ್ಯಕ್ತಪಡಿಸಿ ಮತ್ತೆ ಅವರನ್ನು ಸೆರೆಮನೆಗೆ ದಬ್ಬುತ್ತಾರೆ. ಆದರೆ ನಮ್ಮ ಪ್ರಧಾನಮಂತ್ರಿಗಳಿಗೆ ಈ ವಿಚಾರವೇ ತಿಳಿದಿರುವುದಿಲ್ಲ. ತಮ್ಮ ಹತ್ತಾರು ಮಾತುಗಳಲ್ಲಿ ಸಾವಿರಾರು ವೇದಿಕೆಗಳಲ್ಲಿ ಈ ವಿಚಾರವನ್ನು ಪ್ರಸ್ತಾಪಿಸುವುದೇ ಇಲ್ಲ. ನಮ್ಮ ಅನೇಕ ಮಾಧ್ಯಮದವರಿಗೆ ಇದು ದೊಡ್ಡ ಸುದ್ದಿಯೇ ಅಲ್ಲ ಅದಕ್ಕಾಗಿ ಅವರು ಇದನ್ನು ಸುದ್ದಿ ಮಾಡಲೇ ಇಲ್ಲ.

ಇನ್ನೂ ಉತ್ತರಪ್ರದೇಶದಲ್ಲಿ ಅನೇಕ ರೀತಿಯ ಅತ್ಯಾಚಾರಗಳು ನಡೆಯುತ್ತಲೇ ಇದೆ. ಅತ್ಯಾಚಾರ ಸಂತ್ರಸ್ತರು ದುಃಖದಲ್ಲಿದ್ದಾರೆ. ಅತ್ಯಾಚಾರ ಮಾಡಿದವರು ಯಾವುದೇ ರೀತಿಯ ಭಯವಿಲ್ಲದೆ ಬದುಕುತ್ತಿದ್ದಾರೆ. ಸಾಕ್ಷಿಯನ್ನು ಹೇಳಲು ಮುಂದೆ ಬಂದವರು ಸಾಕ್ಷಿ ಹೇಳಲು ಬಾರದ ಸ್ಥಿತಿಗೆ ಬಂದು ತಲುಪಿರುತ್ತಾರೆ. ಅದೆಷ್ಟು ಮಂದಿ ಜೀವವನ್ನು ಕಳೆದುಕೊಂಡರು?

ಇಂತಹ ವಿಚಾರಗಳ ಬಗ್ಗೆಯೂ ನಮ್ಮ ಪ್ರಧಾನ ಮಂತ್ರಿಗಳು ಎಲ್ಲಿಯೂ ಮಾತನಾಡುವುದಿಲ್ಲ ಇನ್ನು ನಮ್ಮ ಮಾಧ್ಯಮದವರು ಇದೊಂದನ್ನೂ ಎಲ್ಲಿಯೂ ತೋರಿಸುವುದಿಲ್ಲ.

ಹೀಗೆ ಪಟ್ಟಿ ಮಾಡುತ್ತಾ ಹೋದರೆ ಹಲವಾರು ವಿಚಾರಗಳಿಗೆ ನಮ್ಮ ಪ್ರಧಾನಮಂತ್ರಿಗಳು ಪ್ರತಿಕ್ರಿಯೆ ಇರುವುದಿಲ್ಲ ಮತ್ತು ತಮ್ಮ ಮಾತಿನಲ್ಲಿ ಎಲ್ಲಿಯೂ ಪ್ರಸ್ತಾಪ ಮಾಡುವುದಿಲ್ಲ. ಆದರೂ ಇವರಿಗೆ ನಾರಿ ಶಕ್ತಿಯ ಬಗ್ಗೆ ಅಪಾರವಾದಂತಹ ಶ್ರದ್ಧೆ ಇದೆ‌. ಮಹಿಳೆಯರ ರಕ್ಷಣೆಯ ಬಗ್ಗೆ ಅಪಾರವಾದಂತಹ ಬದ್ಧತೆ ಇದೆ ಎಂಬ ರೀತಿಯಲ್ಲಿ ಭಾಷಣವನ್ನು ಮಾತ್ರ ಮಾಡುವುದನ್ನು ಮರೆಯುವುದಿಲ್ಲ.

ಇನ್ನು ಈ ವಿಚಾರಗಳನ್ನು ಮಸಾಲೆ ಹಾಕಿ ತೋರಿಸುವುದರಲ್ಲಿ ನಮ್ಮ ಮಾಧ್ಯಮದವರು ಹಿಂದೆ ಬೀಳುವುದಿಲ್ಲ. ಒಟ್ಟಾರೆಯಾಗಿ ಮಾತಿಗೂ ಕೃತಿಗೂ ಸಂಬಂಧವೇ ಇಲ್ಲ. ಆದರೂ ಇವರು ಹೇಳಿದ್ದೇ ಸತ್ಯ ಎನ್ನುವ ರೀತಿಯಲ್ಲಿ ಜನರನ್ನು ನಂಬಿಸುವಂತಹ ವ್ಯವಸ್ಥಿತವಾದಂತಹ ಪ್ರಚಾರದ ವೈಖರಿ ಯಾವುದೇ ಅಡೆ-ತಡೆಗಳಿಲ್ಲದೆ ಸಾಗಿದೆ.

– ಕೆ.ಎಸ್‌ನಾಗರಾಜ್, ಬೆಂಗಳೂರು

Leave a Reply